ಶ್ರೀ ತುಪಾಕಿ ವೆಂಕಟರಮಣಾಚಾರ್ಯರ ಕೃತಿ
ರಾಗ - : ತಾಳ -
ಸ್ಮರಿಸಿರೊ ನಮ್ಮ ನರನ ಸಾರಥಿಯ
ಪರಿಹರಿಸುವನು ತಾಪತ್ರಯ ವ್ಯಥೆಯ ll ಪ ll
ರಣಮಂಡಲದಲ್ಲಿ ಗುಣುಗುವ ಕುಂತಿಯ
ತನುಜನ ನೋಡುತ ವಿನಯದಿಂದ
ಘನತತ್ವವನು ಪೇಳಿ ಅಣುಮಹದ್ಗತ
ವಿಶ್ವ-
ತನುವ ತೋರಿದ ಸತ್ಯ ವಿನಯ ಶ್ರೀ ಕೃಷ್ಣನ ll 1 ll
ಸುರನದೀ ತನುಜನ ಶರದಿಂದ ರಕ್ತದ
ಸುರಿವಂದ ತೋರಿ ಶ್ರೀಕರ ಚಕ್ರವ
ಧರಿಸಿ ಓಡುತ ತನ್ನ ಚರಣ ಸೇವಕನೆಂಬ
ಹರುಷ ತಾಳಿ ಬೇಗ ತಿರುಗಿ ಬಂದವನ ll 2 ll
ವಿಜಯ ಸಾರಥಿಯೆಂದು ಭಜಿಸುವ ದಾಸರ
ವಿಜಯ ಪೊಂದಿಸುವನಂಡಜ ರಾಜಗಮನ
ಅಜ ಭವವರದ ಕಂಬುಜನಾಭ ಕಮಲೇಶ
ಭುಜಗ ಧರಾಧೀಶ ಭಜನೀಯಪಾದನ ll 3 ll
***