Showing posts with label ಮಾಯಗಾರನೆ ನಿನ್ನ guruvijaya vittala ankita suladi ಹರಿ ಸ್ತೋತ್ರ ಸುಳಾದಿ MAAYAGAARANE NINNA HARI STOTRA SULADI. Show all posts
Showing posts with label ಮಾಯಗಾರನೆ ನಿನ್ನ guruvijaya vittala ankita suladi ಹರಿ ಸ್ತೋತ್ರ ಸುಳಾದಿ MAAYAGAARANE NINNA HARI STOTRA SULADI. Show all posts

Monday 28 June 2021

ಮಾಯಗಾರನೆ ನಿನ್ನ guruvijaya vittala ankita suladi ಹರಿ ಸ್ತೋತ್ರ ಸುಳಾದಿ MAAYAGAARANE NINNA HARI STOTRA SULADI

Audio by Mrs. Nandini Sripad


ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ 

 (ಗುರುವಿಜಯವಿಟ್ಠಲ ಅಂಕಿತ) 


 ಶ್ರೀಹರಿ ಸ್ತೋತ್ರ ಸುಳಾದಿ 


(ಭಕ್ತಾಪರಾಧ ಸಹಿಷ್ಣು ಶ್ರೀಹರಿಯೇ , ಎನ್ನ ಅಪರಾಧಗಳನ್ನು ಕ್ಷಮಿಸಿ ಅನುಗ್ರಹಿಸು ಎಂದು ಸ್ತೋತ್ರ. ಐತಿಹಾಸಿಕ , ಅನೇಕ ಪ್ರಮೇಯಗಳನ್ನು ಒಳಗೊಂಡಿದೆ.) 


 ರಾಗ ರೀತಿಗೌಳ 


 ಧ್ರುವತಾಳ 


ಮಾಯಗಾರನೆ ನಿನ್ನ ಮಾಯ ತಿಳಿಯುವದಕ್ಕೆ

ಕಾಯಜಾದ್ಯಾದಿ ಸುರರು ಸಮರ್ಥರೆ

ಕಾಯ ನಿನ್ನದು ಎಂದು ನೆರೆ ನಂಬಿದವನನ್ನ

ಮಾಯಾ ಸಂಸಾರ ಪಾಶದಿಂದ ಬಿಗಿದು

ಹೇಯವಾದ ವಿಷಯ ಜಾಲದೊಳಗೆ ಹಾಕಿ

ನೋಯ ದಣಿಸಿದಯ್ಯಾ ಕೃಪೆ ಇಲ್ಲದೆ

ಮಾಯಾ ರಮಣ ನೀನು ಕಾಣಿಸಿಕೊಳ್ಳದಲೆ

ಆಯಾಸ ಬಡಿಸಿದಿ ಅಪರಿಮಿತಾ

ತಾಯಿ ಮಕ್ಕಳ ಕುರಿತು ವಂಚಿಸೆ ಇಚ್ಛಾ ಮಾಡೆ

ಬಾಯಿ ಅರಿಯದ ಅಣುಗಳಿಂದೇನಹದೋ

ರಾಯನೊಬ್ಬನು ತಾನು ಸ್ವಾತಂತ್ರ ಬಲಾರಾಧಿಪರ

ರಾಯನಾಗಿ ರಾಜ್ಯಲಕ್ಷ್ಮೀ ಅಪಹರಿಸೆ

ದಾಯಿಗಾರರು ಬರಲು ಅಭಿಮಾನದಿ ಸೈನ್ಯಾ

ನಾಯಕರನ್ನ ಕೈಶರೆ ಕೊಡಲು ಅ -

ಪಾಯ ಕೃತ್ಯಗಳಿಂದ ದಂಡಣೆ ಮಾಡುತಿರೆ

ಆ ಯೆಂಬಂಥವರನ್ನ ಲೆಕ್ಕಿಸದೆ ತನ್ನ

ರಾಯನಿಂದಲಿ ಇದು ನಿರ್ಹಣ ಎಂದು ತಿಳಿದು

ಭೂಯೊ ಭೂಯೊ ನಮಿತಿ ಪೇಳಿ ಕೇಳುವದು

ದ್ರೋಹಿ ಆದವನೆಂದು ಅಪರಾಧವನ್ನೇ ಹೊರಿಸಿ ಅ -

ಸೂಯದಿಂದಲಿ ಮನಕೆ ತಾರದಿರಲು

ರಾಯ ಮಾಡಿದ ಕರ್ಮ ಭೃತ್ಯರಿಂದಲಿ ಅದು

ಪರಿಯಾಪ್ತವೆನಿಸುವದೆ ಎಂದಿಗನ್ನ

ಶೌರ್ಯರ ಲಕ್ಷಣವೆ ಒಪ್ಪಿಸಿ ಕೊಡುವದು

ಧೈರ್ಯವೇನೋ ವೀರ ಸಂತತಿಗೆ ಅ -

ಕಾರ್ಯಕನ ಮೇಲೆ ಬರಿದೆ ಈ ಪರಿ ಮುನಿದು

ಕ್ರೂರ್ಯ ಮಾಡುವದಿದು ಘನತಿಯೇನೊ

ರಾಯ ರಾಯರ ಮಧ್ಯ ಮಾನ್ಯವೇನೊ ನಿನಗೆ ಅ -

ನ್ಯಾಯವೆಂದು ನಗರೇ ವಿಬುಧರೆಲ್ಲ

ಕಾಯಜಪಿತ ನಿನ್ನ ಚರಿತೆ ಇನಿತು ಸರಿ

ತೋಯಜಾಕ್ಷನೆ ಈ ನುಡಿದ ಯುಕ್ತಿ

ನ್ಯಾಯವಾಯಿತೆ ನೀ ಎನ್ನ ಮಾತಿಗೆ ಸೋಲು

ರಾಯ ದೃಷ್ಟಿಲಿ ನೋಡೊ ಕರುಣ ಮಾಡೊ

ಛಾಯಕ್ಕೆ ಸಮವಾದ ಯತನದಿಂದಲಿ ಕಡೆ -

ಹಾಯಿಸು ವೇಗದಿಂದ ತಡ ಮಾಡದೇ

ಗಾಯತ್ರಿ ಪ್ರತಿಪಾದ್ಯ ಗುರುವಿಜಯವಿಟ್ಠಲರೇಯ ಉ -

ಪಾಯವಿಲ್ಲವಯ್ಯಾ ನಿನ್ನ ಹೊರ್ತು ॥ 1 ॥ 


 ಮಟ್ಟತಾಳ 


ಹಣಿಯಲ್ಲಿ ಬರದಿದ್ದ ಲಿಪಿಯಂತೊ ತಿಳಿಯೆ

ಅನುಮಾನಿಸಿ ನೋಡೆ ಎನಗಿಂದಧಿಕವಾದ

ಹೀನರೊಬ್ಬರು ಕಾಣೆ ಈ ಪೃಥ್ವಿಯಲ್ಲಿ

ಗುಣನಿಧೆ ನಿನ್ನಿಂದ ಸುಖವೈದುವೆನೆಂದು

ಮನ ನಿರ್ಭರವಾದ ಸಂತೋಷವ ತಾಳಿ

ಅನುದಿನದಲಿ ನಿನ್ನ ಅನುಸರಿಸಿ ಬಿಡದೆ

ತನುಮನ ವೊಪ್ಪಿಸಿ ನಿಯಾಮಿಸಿದ ಕಾರ್ಯ

ಜನಕೆ ಸಮ್ಮತವಾಗೆ ಅಥವಾ ಅಸಮ್ಮತವಾಗೆ

ನಿನ್ನಾಜ್ಞವೆ ಮುಖ್ಯ ಇದರಲಿಂದಲಿ ಎನಗೆ

ಘನ ಪುರುಷಾರ್ಥಗಳು ನಿಜವೆಂದು ತಿಳಿದು

ಬಿನಗು ವಿಷಯದಲ್ಲಿ ಮಮತೆಯ ಮಾಡದಲೆ

ವನಜ ಪಾದಗಳನ್ನು ನೆರೆನಂಬಿದವನ

ಅನಿಮಿತ್ತವಾದ ಅಪರಾಧಕ್ಕೆ ಮುನಿದು

ಮನೆಯಿಂದಲಿ ಹೊರಗೆ ಹಾಕಿದ ತೆರದಂತೆ

ದನುಜ ಮರ್ದನ ನೀನು ಇನಿತು ಮಾಡಿದದಕೆ

ಏನೆಂಬೆನೋ ನಿನ್ನ ಔದಾರ್ಯತನಕಿನ್ನು

ಗುಣಗಣ ಪೂರ್ಣನೆ ಗುರುವಿಜಯವಿಟ್ಠಲರೇಯಾ 

ಮಣಿದು ಬೇಡಿಕೊಳಲು ದಯಬಾರದು ಏಕೆ(ಯಾಕೆ) ॥ 2 ॥ 


 ತ್ರಿವಿಡಿತಾಳ 


ಹೆದರಿದವನ ಮೇಲೆ ಬ್ರಹ್ಮಾಸ್ತ್ರ ಹಾಕಿದಂತೆ

ಮೊದಲೆ ನಿನ್ನಯ ಧೊರೆತನಕೆ ಅಂಜೀ

ಅದುಭೂತ ಕಾರ್ಯದಲ್ಲಿ ನೇಮಿಸಬೇಡವೆಂದು

ಪಾದಕೆ ಬಿದ್ದು ನಿನ್ನ ಬೇಡಿಕೊಂಡೆ

ಪದುಮನಾಭನೆ ನಿನಗೆ ಕರುಣ ಪುಟ್ಟದುದಕೆ

ಪದೋ ಪದಿಗೆ ಈಗ ಬಳಲಿಸುವದು

ಇದು ಘನತಿಯೆ ನಿನ್ನ ಮಾತು ಕೇಳುವವರಿಗೆ

ಆದರ ಇರುವಂತೆ ಮಾಡುವದು

ಉದಯಾರ್ಕ ತೇಜ ಗುರುವಿಜಯವಿಟ್ಠಲರೇಯ 

ಬುಧರ ಸಮ್ಮತ ನಡೆವ ಸ್ವಾತಂತ್ರನೆ ॥ 3 ॥ 


 ಅಟ್ಟತಾಳ 


ರಾಜಾಜ್ಞಾ ನಡೆಸದ ಭೃತ್ಯರಿಗೆ ತತ್ಕಾಲ

ರಾಜನಿಂದಲಿ ಶಿಕ್ಷಿತನಾಗುವ

ಮೂಜಗತ್ಪತಿ ನಿನ್ನ ಶಾಸನದಿಂದಲಿ

ಪ್ರಜ್ವಲನವಾದ ನರಕವೈದುವೆನೆಂದು

ನೈಜವಾಗಿ ಶ್ರುತಿ ಶಾಸ್ತ್ರ ವರಲಿ ಪೇಳಾ 

ರಾಜಾಜ್ಞ ನಡಿಸಿದ ಜನರಿಗೆ ಪೂರ್ವೋಕ್ತ

ವ್ಯಾಜ್ಯವೊದಗಲು ನ್ಯಾಯದ ಸೊಬಗು

ಸೋಜಿಗವಾಗಿ ತೋರುತಿದೆ ನೋಡಲು

ರಾಜೀವ ನೇತ್ರ ಸದ್ಧರ್ಮ ಪರಿಪಾಲ

ಭೋಜ ಕುಲೋತ್ತಮ ಗುರುವಿಜಯವಿಟ್ಠಲರೇಯ 

ಈ ಜೀವಿಗಳ ಮುಖ್ಯ ಪಾಲಿಸುವವ ನೀನೆ ॥ 4 ॥ 


 ಆದಿತಾಳ 


ಪಾಲಿಪ ಇಚ್ಛೆ ಮಾಡೆ ಪಾಪದ ಕರ್ಮಗಳ

ಜಾಲಗಳಿರಲಿ ಪುಣ್ಯವಾಗಿ ಫಲಿಸೋವು

ಸೋಲಿಪ ಇಚ್ಛೆ ಮಾಡೆ ಪುಣ್ಯದ ರಾಶಿಗಳು ಕೇ -

ವಲ ಇರಲಿ ಫಲಕ್ಕವು ವೊದಗವು

ಲೀಲೆ ಇನಿತು ಇದೆ ಹಲವು ಮಾತುಗಳ್ಯಾಕೆ

ಸ್ಥೂಲಕ್ಕೆ ಸ್ಥೂಲ ಗುರುವಿಜಯವಿಟ್ಠಲರೇಯಾ 

ಮೂಲನು ನೀನೆವೆ ಎನ್ನ ಅಪರಾಧಗಳಿಗೆ ॥ 5 ॥ 


 ಜತೆ 


ನಿನ್ನ ಆಜ್ಞವ ನಡಿಸಿದನೆಂಬೊ ಅಭಿಮಾನ

ಮನ್ನದಿ ಮರಿಯದಿರೋ ಗುರುವಿಜಯವಿಟ್ಠಲರೇಯ ॥

***


 ಲಘುಟಿಪ್ಪಣಿ : 

 ದಾಯಿಗಾರರು = ವೈರಿಗಳಾದ (ದಾಯಾದಿಗಳು), ದಾಳಿಗಾರರು ;

 ನಿರ್ಹಣ = ಪರಿಹಾರ್ಯ ;

 ಪರಿಯಾಪ್ತ = ಪೂರ್ಣ ;

 ನಿರ್ಭರವಾದ = ಸಂಪೂರ್ಣ ಭಾರ , ಬಹಳ , ಅತಿಶಯ;

🙏 ಶ್ರೀಕೃಷ್ಣಾರ್ಪಣಮಸ್ತು 🙏

****