Audio by Mrs. Nandini Sripad
ಶ್ರೀ ಜಗನ್ನಾಥದಾಸರ ಕೃತಿ
ರಾಗ ಆನಂದಭೈರವಿ ರೂಪಕತಾಳ
ಜಯಮಂಗಳಂ ನಿತ್ಯ ಶುಭಮಂಗಳಂ ।
ದಯದಿ ಭಕ್ತರ ಕಾವ ದಾಶರಥಿಗೆ ॥ ಪ ॥
ಅವನಿಜಾ ವಲ್ಲಭಗೆ ಪವನಾತ್ಮಜನ ಸಖಗೆ ।
ಪ್ಲವಗನಾಯಕರಾಳ್ದ ರವಿಜನುತಗೆ ॥
ಶಿವನ ವರ ಪಡದಕ್ಷಕುವರ ಮುಖ ರಕ್ಕಸರ ।
ಬವರ ಮುಖದಲಿ ಸದೆದ ಪ್ರವಿತತನಿಗೆ ॥ 1 ॥
ಪಾವಮಾನಿಯ ಹೆಗಲನೇರಿ ಅತಿ ಹರುಷದಲಿ ।
ರಾವಣಾದ್ಯರ ಸದೆದ ರಘುರಾಮಗೆ ॥
ಭಾವಿಬ್ರಹ್ಮನಿಗೆ ಭಕ್ತಿಯನಿತ್ತು ಮಿಕ್ಕ ಸು - ।
ಗ್ರೀವಾದಿಗಳಿಗೆ ಮುಕ್ತಿಯ ನೀಡ್ದಗೆ ॥ 2 ॥
ತ್ರಿಗುಣ ವರ್ಜಿತ ತ್ರಿವಿಕ್ರಮ ತೀರ್ಥಪಾದನಿಗೆ ।
ಭೃಗು ಕುಲೋದ್ಭವ ಭಕ್ತಜನಪಾಲಗೇ ॥
ಸ್ವಗತ ನಾಮಗಳ ಸರ್ವರಿಗಿತ್ತು ಸಂತೈಪ ।
ಅಗಣಿತ ಜಗನ್ನಾಥವಿಠಲಯ್ಯಗೆ ॥ 3 ॥
**********