Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ವೆಂಕಟೇಶನ ಯಾತ್ರಿ ಸುಳಾದಿ
ರಾಗ ಸಿಂಧುಭೈರವಿ
ಧ್ರುವತಾಳ
ವೆಂಕಟೇಶನ ಯಾತ್ರಿ ಎಂಥಾದೊ ವರ್ಣಿಸಲೊ
ಮಂಕು ಜನರಿಗೆ ದೊರಿಯಾದಿದು
ಪಂಕಜೋದ್ಭವ ಮೃಗಾಂಕಧಾರಾದಿಗಳು
ಕಿಂಕರರಾಗಿ ಕೊಂಡಾಡುವರು
ಡೊಂಕ ಮಾನವ ಗದೆ ಭುಜದಲ್ಲಿ ತಪುತ ಮು -
ದ್ರಾಂಕಿತ ಧರಿಸಿದ ಮನುಜ ಬಂದು
ಓಂಕಾರ ಪೂರ್ವಕದಿಂದ ಸ್ಮರಿಸೆ ಭವದ
ಸಂಕೋಲೆ ಕಡಿವದು ಒಮ್ಮೆ ಸಾರೀ
ಸಂಕಟ ಇಲ್ಲದ ಲೋಕದಲ್ಲಿ ಸರ್ವಾ -
ಲಂಕಾರಧರರಾಗಿ ಸುಖಿಸುವರೋ
ಶಂಕಿಸೆ ಇದರಲ್ಲಿ ಅಪವಾದ ನುಡಿದರೆ
ಶಂಕು ತಲೆಯ ಮ್ಯಾಲೆ ಹೊಡೆವ ಯಮನು
ಅಂಕುಶವೊ ಮಹಾ ದುರಿತವೆಂಬೊ ಕರಿಗೆ
ಪಂಕಜನಾಭನ ದಾಸರಿಗೆ ನಿತ್ಯಾ
ಶಂಕರ ಭರಣಾ ಶಾಯಿ ವಿಜಯವಿಠಲ ಬಿರಿ -
ದಂಕನ ಧ್ಯಾನ ನಿಲ್ಲಿಸಿದವಗೆ ॥ 1 ॥
ಮಟ್ಟತಾಳ
ಕನಕಗಿರಿ ದರುಶನ ಕಂಡ ಕಂಡ
ಮನುಜರಿಗಾಗದು ಕಾಣೊ
ಅನಿಮಿಷ ಗಂಗಾ ಯಮುನೆ ಗೋದಾವರಿ
ಮಣಿಕರ್ಣಿಕೆ ಕೃಷ್ಣ ತನುಜ ಸಂಭವೆ ವರಹ
ತನುಜ ಕಾವೇರನ್ನ ತನಯ ಗೌತುಮ ರೇವಾ
ಮಿನಗುವ ಸರಸ್ವತೀ ಮಣಿಮುಕ್ತಿ ನಂದನಿ
ತಪತಿ ಕಪಿಲಾ ಗಣಪತೀ ಭೀಮರಥೀ
ಕನಕವತೀ ಸಿಂಧು ಕನಿಕಿ ವೇದಾವತಿ
ಘನಗೌಮತಿ ಕಾಗಿಣಿ ವಂಝರಿ ವರದ
ಪುನಹ ಪುನಹ ಕುಂತಿನಯು ನಾಮಾವತಿ
ನರಸಿಂಹ ತನುಜ ಶ್ರೋಣೀ ಭದ್ರ
ಇನಿತು ನಾನಾ ತರಂಗಿಣಿ ಮೊದಲಾಗಿ ಮ -
ಜ್ಜನಗೈದು ಮತ್ತೆ ವನಧಿ ಬಂಧನ ಕಾಶಿ
ಹನುಮನೊಡಿಯ ನಗರಿ ಪ್ರಣವ ವಿಮಾನ ಭೂಮಿ -
ಯನು ತಂದ ಕ್ಷೇತ್ರ ವನಜನಾಭನು ನೀ -
ರಿನಗಿರಿ ಜಗಕೆ ಭೂಷಣ ಪಾಂಡುರಂಗ
ಕನಕ ಮುನಿವರದ ಚಿನುಮಯ ಜಗನ್ನಾಥ
ಮನ ಮೆಚ್ಚಿಪ ಮದ್ಧ್ಯಾರ್ಜುನಾ ದ್ವಾರಕಿ
ಜನಾರ್ಧನ ಹರಿಹರ ನಾರಾಯಣ ನಿಧಿ
ಮನ್ನಾರಿ ವನಜಾಕ್ಷನು ಹಸ್ತಿನಪುರ ಗಜಶೈಲ
ತೃಣ ಶೈನಾನು ವಾಮನ ನವ ತಿರುಪತಿ
ಗುಣನಿಧಿ ಸರಸಿಜ ಮುನಿವಂದ್ಯಕಾಗಿ
ಕನಕವಾದ ಕ್ಷೇತ್ರ ಮುನಿಗಳು ಇದ್ದ ಭೂಮಿ
ರಣಮಂಡಲ ಧರಣಿ ಧನುಪಣಿ ಕುಲದರಣ
ಋಣವ ತಿದ್ದುವಕ್ಷೇತ್ರ ವಿಭೂತಿ ಕ್ಷೇತ್ರ
ಮಣಿಕುಲ ವೃಂದಾವನ ಮಥುರಾ ಪ -
ಟ್ಟಣ ಗಂಡಿಕೆ ಮಾಯಾವತಿ ಪುಷ್ಕರಕ್ಷೇತ್ರ
ಫಣಿಶಾಯಿ ಶ್ರೀರಂಗಪಟ್ಟಣ ಗೌತುಮ
ಮುನಿವರದ ವನಿತೇರಿಗೆ ಮೋಹನವಾದ ಉಡುಪಿ
ಉಣಬಡಿಸಿದ ನಾರಾಯಣಿ ಕ್ಷೇತ್ರ
ಅನು ಬದರಿನಾರಾಯಣ ಕ್ಷೇತ್ರ ಪಾ -
ವನ ಪ್ರಯಾಗ ಕೂರ್ಮನಹೋಬಲ ಧ -
ರಣಿ ಧರ ವಿಷ್ಣುವರ್ಧನಗೊಲಿದ ಚನ್ನ
ಮಣಿಮಯ ಮಕುಟಾನು ವಂದಿನ ಧರಿಸುವ ಚಲ್ವ
ಮನ್ಮಥಕೋಟಿ ಕಿರಣ ಪೊಳೆವ ಗೋಪಾ -
ಲನು ಸುಮಂಗಳ ಗಿರಿ ಷಣುಮೊಗ ಪಂಚಮೂರ್ತಿ
ಗಣನೆ ಇಲ್ಲದ ಕ್ಷೇತ್ರವನು ನಾನಾವರ್ತಿ
ಎಣಿಕೆ ಇಲ್ಲದಲೆ ಆವ ಮನುಜನು
ಅನಂತಾನಂತ ಜನ್ಮವೊಂದು ಕ್ಷಣಬಿಡದಲೆ ಮಾಡಿ
ಫಣಿಶೈಲದ ಯಾತ್ರೆ
ಆಣುಮಾತರವನಿಗೆ ದೊರಕುವದು
ಭಣಗು ಮಾನವಗೆ ಸಾಧನ ಬಾರದು ಕಾಣೊ
ಗುಣಗಣ ನಿರ್ದೋಷ ವಿಜಯವಿಠಲ
ತನ್ನನೆ ಸ್ಮರಿಸಲು ಕಾವನು ಶ್ರೀನಿವಾಸ ॥ 2 ॥
ರೂಪಕತಾಳ
ಗಿರಿಯ ತಪ್ಪಲಲ್ಲಿ ಮೆರೆವ ಕಪಿಲತೀರ್ಥ
ಎರಡೊಂಭತ್ತು ತೀರ್ಥ ನಿರುತ ವಾಸವುಂಟು
ನರರು ಮಿಂದು ಗೋತುರಗಳ ಉದ್ಧರಿಸಿ
ಹಿರಿದಾಗಿ ಧಾರುಣಿ ಸುರರ ತೃಪ್ತಿಯ ಬಡಿಸಿ
ಪರಮ ಹರುಷದಲ್ಲಿ ಗಿರಿಯ ಸೋಪಾನವ
ಭರದಿಂದಲೇರುತ್ತ ಎರಡೈವತ್ತು ಮೆಟ್ಟು
ಪರಿಮೀರದೆ ಕುಳಿತು ಹರಿಕಥಾಶ್ರವಣವ
ತಿರುವೆಂಗಳೇಶನ ಚರಿತೆ ಕೊಂಡಾಡುತ್ತ
ಬರುತ ನರಸಿಂಹನ ದರುಶನ ಕೈಕೊಂಡು
ತೆರಳಿ ಗುಡಿಗೋಪುರ ಶಿಖರವನ್ನೆ ಕಂಡು ನಿಂ -
ದಿರದೆ ಪ್ರದಕ್ಷಿಣೆ ತಿರುಗಿ ಗುಡಿ ಪೌಳಿಯಲ್ಲಿ
ಧರವರಹ ದೇವಗೆ ಎರಗಿ ಪುಷ್ಕರಣಿಗೆ
ಸರಸದಲ್ಲಿ ನಮಿಸಿ ಪರಿಶುದ್ಧನಾಗಿ ದೇವ
ದ್ವಾರವನ್ನೆ ಪೊಕ್ಕು ಗರುಡಗಂಬದ ಬಳಿಯಲ್ಲಿ
ಪರಿಠವಿಸಿ ಪೂರ್ವೋತ್ತರ ಪೂಜಿಯನ್ನು ತಿಳಿದು ಶ್ರೀ -
ಹರಿಯ ಚಿಂತಿಸಿ ಅಲ್ಲಿ ಮರುತಾಂತರ್ಗತನೆಂದು
ಪರಮಾತ್ಮನಾದ ಸುಂದರ ಶ್ರೀನಿವಾಸನ್ನ
ನಿರೀಕ್ಷಿಸಿ ತನ್ನೊಳಗಿರತಕ್ಕ ಮೂರ್ತಿಯ
ಅರಿದು ಆತನ ಗುಣೋತ್ಕರಷಣಿಯನು ಮಾಡಿ
ಸ್ಮರಿಸಲು ಬೇಗ ದುಸ್ತರವನ್ನು ದಾಟಿಸುವ
ಪರಮ ಮಂಗಳರೂಪ ವಿಜಯವಿಠಲ ತಿಮ್ಮ
ಕರೆದರೆ ಕರವಿಡಿದು ಕರದೊಯ್ವ ಮುಕುತಿಗೆ ॥ 3 ॥
ಝಂಪೆತಾಳ
ಸ್ವಾಮಿ ಪುಷ್ಕರಿಣಿಯ ಸ್ನಾನವನ್ನು ಮಾಡಿ ಸು -
ತ್ರಾಮಾದಿ ತೀರ್ಥಗಳ ಇರುಹು ತಿಳಿದೂ
ನಾಮದ ವಿಚಾರ ಧರಿಸಿ ಕೇಳು ಉತ್ತುಮೋ -
ತ್ತಮರೊಡನೆ ಹಾರಿ ಹರಿದಾಡುತ್ತ
ಕಾಮಕ್ರೋಧಂಗಳ ಬೇರರಿಸಿ ಕೀಳಿ
ಹೇಮ ರಜಿತವಸನ ನಾನಾವರ್ಣ ಸಾಲಿ -
ಗ್ರಾಮ ಮೊದಲಾದವು ದಾನವನಿತ್ತು
ನೇಮ ನೈಮಿತ್ಯಂಗಳ ಚೆನ್ನಾಗಿ ಮಾಡಿ ಹರಿ -
ನಾಮಂಗಳಡಿಗಡಿಗೆ ಉಚ್ಚರಿಸುತ್ತ
ಕೋಮಲಾಂಗ ತಿಮ್ಮ ವಿಜಯವಿಠಲ ನಿತ್ಯ
ಸಾಮಗಾಯನಲೋಲ ಭಕ್ತ ಪರಿಪಾಲ ॥ 4 ॥
ತ್ರಿವಿಡಿತಾಳ
ಅಪರಾಧಿ ನಾನೆಂದು ತನ್ನವಗುಣಂಗಳ
ಸ್ವಪನದಲಿ ಬಿಡದೆ ಮಾಡಿದವು
ಕಪಟದಲಿ ನಡದು ಪರರ ವಂಚಿಸಿ ದ್ರವ್ಯ
ಅಪಹರಿಸಿ ನಾನ ಮಾಯಗಳ ತೋರಿ
ಕೃಪಣನಾಗಿದ್ದು ಇರಳು ಹಗಲು ಕಾಮ
ಕುಪಿತ ಪುಂಜದಲ್ಲಿ ಕಾಲವನ್ನೇ ಕಳದು
ಜಪಗಳ ಜರಿದು ಜಗದೊಳು ನಿತ್ಯದಲ್ಲಿ
ತಪಸಿಗಳ ನಿಂದಿಸಿದ ತರುವಾಯವು
ಉಪಕಾರ ಅರಿಯದೆ ಉಚಿತಾರ್ಥ ತಿಳಿಯದೆ
ಅಪಹಾಸದಲಿ ನಿರಂತರ ತಿರುಗೀ
ಅಪರಮಿತವಾಗಿ(ದ) ದೋಷಕಾರಿ ನಾನು
ಕೃಪಣವತ್ಸಲ ತಿರುವೆಂಗಳೇಶಾ
ಕೃಪೆ ಮಾಡುವದೆಂದು ಈ ಪರಿ ನಮಿಸಲು
ಗುಪಿತ ಮಹಿಮನೀತ ಪರಿಪಾಲಿಪ
ಚಪಲನಯನ ತಿಮ್ಮ ವಿಜಯವಿಠಲ ಸದಾ
ದಿಪುತನಾಗಿ ತನ್ನ ಭಕ್ತರ್ಗೆ (ಭಜಕರಿಗೆ) ಪೊಳೆವನು ॥ 5 ॥
ಅಟ್ಟತಾಳ
ಶಿವನ ಬ್ರಹ್ಮಹತ್ಯ ಚಂದ್ರನ ಗುರುತಲ್ಪ
ಕವಿಯ ಸುರಾಪಾನ ಬಲಿಯ ಸ್ವರ್ಣಸ್ತೇಯಾ
ದಿವಿಜಪತಿಯ ಪರಯುವತಿ (ಸತಿಯ) ಗಮನದೋಷ
ಅವರಿವರ್ಯಾಕಿನ್ನು ಬಲಭಧ್ರನ ಪಾ -
ಪವನು ಪರಿಹಾರ ಜವನು ಮೊದಲಾದ
ದೇವತೆಗಳ ಪಾಪನಿವಹ ಬಿಟ್ಟು ಪೋಯಿತೀ ಗಿರಿಯಲ್ಲಿ
ಭವಗಿರಿಗೆ ವಜ್ರಾ ವಿಜಯವಿಠಲ ಬಾರ -
ದವಗೆ ದಯಮಾಡಾನೆಂದಿಗೂ ॥ 6 ॥
ಆದಿತಾಳ
ಮುಕುತಿ ಬೇಕಾದವಗೆ ಮುಕುತಾರ್ಥ ಕೇಳುವದು
ಭಕುತಿ ಪೂರ್ವಕದಿಂದ ಸಕಲ ಸಂಪದವಿ ಗ -
ಧಿಕವೆಂದು ತಿಳಿದು ಅಹಿಕವನ್ನು ಬಯಸದೆ
ತ್ವಕು ಇಂದ್ರಿಯಾದಿ ಹರಿಪಾದಕೆ ಸಮರ್ಪಿಸುತಲಿ
ಸುಖವ ಸುರಿದು ಬಾಷ್ಪೋದಕದಲ್ಲಿ ನೆನೆನೆನದು
ಅಖಿಲದಾಸರ ಕೂಡ ಅಕಟಾ ನಲಿದಾಡಿ ಕುಣಿದು
ಸಕಲ ಸುರರೊಡೆಯ ವಿಜಯವಿಠಲ ಸ್ವರ್ಣ -
ಮುಖರಿ ನಿವಾಸನ ಯಾತ್ರೆ ಗೈಯ್ಯುವದು ॥ 7 ॥
ಜತೆ
ಮತ್ಸರವನು ಅಳಿದ ಶ್ರೀ ವೆಂಕಟೇಶನ ಯಾತ್ರೆ
ಉತ್ಸಹದಲಿ ಮಾಡೆ ವಿಜಯವಿಠಲ ವೊಲಿವಾ (ಕಾಯ್ವಾ) ॥
************