Showing posts with label ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ uragadrivasa vittala. Show all posts
Showing posts with label ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ uragadrivasa vittala. Show all posts

Monday, 2 August 2021

ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ankita uragadrivasa vittala

ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ

ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ


ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ

ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ


ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ

ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ-

ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ-

ವೆಂಬ ಗುಣಜೀವಸ್ವರೂಪೋಪಾಧಿಯು

ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ

ಇಂಬುಕೊಡುವೆ ಫಲಭೋಗಿಸಲೀವೇ

ಎಂಬನುಡಿ ಶ್ರುತಿಶಾಸ್ತ್ರಸಿದ್ಧವು

ನಂಬಿಹುದು ಜಗವೆಲ್ಲ ಸತ್ಯವು

ಶಂಬರಾಂತಕ ಪಿತನೆ ಎನ್ನ ಹೃದ-

ಯಾಂಬರದಿ ನಿನ್ನ ಬಿಂಬ ತೋರೈ 1


ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ-

ವೆಲ್ಲಜಡಗಳು ಮತ್ತು ಅಚೇತನಂಗಳೈ

ಶೀಲ ಮೂರುತಿ ನೀ ಪರಮ ಚೇತನನಾಗಿ

ಎಲ್ಲ ಕಾಲದಿ ನಿನ್ನ ನಿಯಮನಂಗಳೈ

ಕಾಲಕರ್ಮಗುಣಂಗಳೇನಿಹುದೆಲ್ಲ

ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ

ಕಾಲನಾಮಕ ನೀನೆ ಸರ್ವ

ಕಾಲದಲಿ ಸ್ವಾತಂತ್ರ್ಯ ನಿನ್ನದೋ

ಇಲ್ಲ ಘನ ಸಮರಿಲ್ಲ ಸರ್ವಕರ್ಮ

ಫಲವೆಲ್ಲ ನೀನೆ ದಾತೃವೋ 2


ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ

ಕರ್ಮಫಲಾನುಭವಮಾಡಿ ಬೆಂಡಾದೆನು

ಸ್ವರ್ಣಸ್ತೇಯದ ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ

ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ

ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ

ಪೂರ್ಣಫಲವಿತ್ತು ಸಮನೆಂದೆನಿಸಿರುವೆ

ಕರ್ಮಮೋಚಕ ನೀನೆ ಸಕಲ

ಕರ್ಮಪ್ರದನೆಂದೆನಿಸಿ ಪೂರ್ವ-

ಕರ್ಮಫಲ ಭೋಗಿಸಲು ಜನ್ಮವನಿತ್ತು

ಕರ್ಮಪ್ರವಹದೊಳಿಡುವೇ 3


ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ

ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ

ಕರ್ಮಕಲಾಪದ ಧರ್ಮ ಮರ್ಮವನರಿಯೆ

ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ

ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ

ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ

ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ

ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು

ಸನ್ಮತಿಯ ಕೊಟ್ಟಿನ್ನು 4


ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ

ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು

ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ

ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ

ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ

ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು

ದಿಟ್ಟ ರಕ್ಷಿಸು ಇಷ್ಟಮೂರುತಿಯೆ

ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ

ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5

****