ರಾಗ: ಕಲ್ಯಾಣಿ ತಾಳ: ಆದಿ
ಗುರುವೆ ತವಚರಣಕಮಲ ಷಟ್ಚರಣನೆನಿಸೊ ಎನ್ನ ಪ
ಪರಮಹಂಸಕುಲ ಸುಧಾಬ್ಧಿ ಸುರಚಿರ ಸುಧಾಕರ ಸುಧೀಂದ್ರಯತಿಕರಜ ಅ.ಪ
ಶ್ರೀವರ ಚರಣ ಸರೋರುಹ ಮಧುಕರಪೂತ ಶುಭತಮಚರಿತ
ಭಾವಜಾದಿಷಡ್ವರ್ಗ ಸುನಿಗ್ರಹಶೀಲ ಕವಿಕುಲಲೋಲ
ಕೋವಿದಕುಲ ಸಂಭಾವಿತ ಮಹಿಮ ಸ-
ದಾ ವಿನೋದಿ ಸತ್ಸೇವಕಜನ ಸಂ-
ಜೀವನ ಶುಭಕರ ಪಾವನರೂಪ ಪ-
ರಾವರೇಶ ಪದಸೇವಕ ಯತಿವರ 1
ಸಕಲಶಾಸ್ತ್ರಪಾರಂಗತ ಪರಿಣತ ಖ್ಯಾತ ಗ್ರಂಥಪ್ರಣೀತ
ಸುಖಕರ ಸುಖತೀರ್ಥ ಸಮಯ ಸಂವರ್ಧಕ ಧೀರ ಸುಜನೋದ್ಧಾರ
ಮುಕುತಿಸಾಧನೆಗೆ ಅಕುಟಿಲಮಾರ್ಗವ
ನಿಖಿಲ ನಿಜಾಶ್ರಿತನಿಕರಕೆ ತೋರುತ
ಭಕುತಜನರ ಕೋರಿಕೆಗಳ ನೀಡುತ
ಸುಖವಕರೆವ ಸುಂದರಯತೀಂದ್ರ 2
ಪರಮಪುರುಷ ಶ್ರೀಬದರಿವಾಸ ಭಜಕಾಗ್ರಣಿಯೆ ಗುಣಮಣಿಖಣಿಯೆ
ಸುರವರನುತ ಶ್ರೀರಾಮಚಂದ್ರ ಚರಣಾಬ್ಜಾರಾಧಕ ಸಂಪೂಜ್ಯ
ದುರಿತಕಳೆದು ಭವಶರಧಿಯ ದಾಟುವ
ಸರಿಮಾರ್ಗವ ನಾನರಿಯೆನೊ ಗುರುವರ
ಕರಿಗಿರೀಶ ಶ್ರೀನರಹರಿಚರಣವ
ನೆರೆನಂಬುವಪರಿ ಕರುಣಿಸು ಯತಿವರ 3
***