Showing posts with label ಹರಿಯೇ ಸ್ವತಂತ್ರ ನಿರ್ದೋಷ vijaya vittala ankita suladi ಹರಿ ಸ್ವತಂತ್ರ ಸುಳಾದಿ HARIYA SWATANTRA NIRDOSHA HARI SWATANTRA SULADI. Show all posts
Showing posts with label ಹರಿಯೇ ಸ್ವತಂತ್ರ ನಿರ್ದೋಷ vijaya vittala ankita suladi ಹರಿ ಸ್ವತಂತ್ರ ಸುಳಾದಿ HARIYA SWATANTRA NIRDOSHA HARI SWATANTRA SULADI. Show all posts

Sunday, 5 September 2021

ಹರಿಯೇ ಸ್ವತಂತ್ರ ನಿರ್ದೋಷ vijaya vittala ankita suladi ಹರಿ ಸ್ವತಂತ್ರ ಸುಳಾದಿ HARIYA SWATANTRA NIRDOSHA HARI SWATANTRA SULADI

 

Audio by Mrs. Nandini Sripad


..ಶ್ರೀವಿಜಯದಾಸಾರ್ಯ ವಿರಚಿತ 


 ಶ್ರೀಹರಿ ಸ್ವತಂತ್ರ ಸುಳಾದಿ 


 ರಾಗ ಮಧ್ಯಮಾವತಿ 


 ಧ್ರುವತಾಳ 


ಹರಿಯೇ ಸ್ವತಂತ್ರ ನಿರ್ದೋಷ ಶಿಖಾಮಣಿ

ಪರದೈವ ಸರ್ವವ್ಯಾಪ್ತ ಬಲು ಸುಂದರಾ

ವರ ಸತ್ಯ ಸಂಕಲ್ಪ ಅಪ್ರಾಕೃತ ಶರೀರಾ

ಪರಮ ಸ್ವರೂಪಾಲಂಕಾರ ಕರುಣಾಜಲಧಿ

ನಿರವಿಶೇಷ ನಿರ್ಭಿನ್ನ ಮೂಲಾವತಾರದಲ್ಲಿ

ಸರಸಿಜಜಾಂಡ ಪ್ರೇರಕ ಸರ್ವಧಾರಾ

ಸಿರಿ ಸಮೇತ ಪ್ರಳಯರಹಿತ ಸಂಪೂರ್ಣ ವಿಚಿ -

ತ್ತರ ವಿಜ್ಞಾನರಾಶಿ ವಿಶ್ವಮೂರ್ತಿ

ಸುರ ನರೋರಗ ದಾನವ ತೃಣಾದಿ ಜೀವಕ್ಕೆ

ನಿರುತ ಪ್ರೇರಣೆ ಮಾಡಿ ಅವರವರಾ

ಪರಿಯಂತೆ ಅನಾದಿಯಿಂದ ಉಳ್ಳ ಕರ್ಮ ವಿ -

ಸ್ತರಮಾಡಿ ಜೀವರಿಂದ ಮಾಳ್ಪ ಶಕ್ತಾ

ಅರರೆ ಈತನ ಯುಕ್ತಿಗ್ಯಾರು ಪ್ರತಿಕೂಲವು

ಸರಿಬಂದ ತೆರದಲ್ಲಿ ಶೋಭಿಸುವಾ

ಮೆರೆವ ನಿಜಾನಂದಾ ನಿತ್ಯತೃಪ್ತ ತ್ರಿಗುಣ -

ವಿರಹಿತ ಭಕ್ತಾರಾಧೀನ ದೇವಾ

ಹರಿ ಪರಸ್ಪರ ಹಚ್ಚಿ ಒಬ್ಬರಿಂದೊಬ್ಬರಿಗೆ

ಕರುಣತ್ವ ವೈರತನ ಮಾಡಿಸುವಾ

ಹೊರ ವೊಳಗೆ ತಾನಲ್ಲದೆ ಅನ್ಯಾನಿಲ್ಲ

ಸ್ಥಿರವಹುದು ಚರಿಸುವ ಅಣ ಜಾಣನೂ

ಚಿರಕಾಲ ಎಲ್ಲಿದ್ದರು ನಿರ್ಲೇಪ ಚಿದ್ರೂಪ

ಶಿರದೂಗಿದರೆ ಮಾಳ್ಪದು ಬಿಡುವನೆ

ಹರಿ ಇಚ್ಛೆ ಅಂಥಾದೆ ಲಕುಮಿದೇವಿಗಾದರು

ಮರಳು ಕವಿಸಾದಲೆ ಸುಮ್ಮನಿರನೋ

ಪರಮೇಷ್ಟಿಯಾರಿಗೆ ನೆಲೆಯಾಗುವದು ಕಾಣೆ

ನರಗುರಿ ಮರುಗಿದರೆ ಏನಾಹದೂ

ಉರವಣಿಸಿ ಮಾತಾ ನುಡಿದ ಮಾತ್ರವಲ್ಲದೆ

ಬರಿದಾಗಿ ಪೋಗುವಾದು ದಿವಸವೆಲ್ಲಾ

ಧರಣಿಯೊಳಗೆ ಪುಣ್ಯ ಪಾಪಗಳೆರಡಕ್ಕೆ

ಗುರಿಯಾಗಿ ನಮ್ಮಿಂದ ಮಾಡಿಸುವಾ

ಅರಿಯಾಗೊಡದಂತಿಪ್ಪ ಮಾಯವ ಕಲ್ಪಿಸಿ

ಮರಳೆ ಯೋಚಿಸದಿರು ಹರಿಯಲ್ಲಾದೆ

ಪರರಿಂದಾಗುವದೇನು ಆರಾರಾ ಪ್ರೇರಣೆಗೆ

ಸಿರಿ ಅರಸನೆ ಮುಖ್ಯಾ ಅಲ್ಲಿದ್ದಂತೆ

ಮರಿಯಾದೆ ಯಾಗಿಪ್ಪದು ಸರ್ವ ಬಗೆಯಿಂದ

ಅರಸಿದರೆ ಆತನೆ ಆತನೋ

ತರುವಾಯ ಜ್ಞಾನಿಗಳ ಉತ್ತರ ಮತ್ತಾವದೂ

ಇರದೆ ಯೋಚಿಸಿ ನೋಡಿ ಮೂಲಾಮುಟ್ಟಿ

ಕರಣಾ ಶುದ್ಧಿಯಲ್ಲಿ ಕೇವಲ ರಹಸ್ಯ ವಿ -

ವರಗಳ ತಿಳಿವದು ದುರ್ಲಭವೋ

ಪುರದಲ್ಲಿ ಅಂಗಡಿಟ್ಟು ತನ್ನಲಿಯಿದ್ದ ನಾನಾ

ಸರಕು ತಿಳಿಯದಂತೆ ಯಾಗದಿರಿ

ದರುಶನ ಗ್ರಂಥವನ್ನು ಓದಿದ ಮೇಲೆ ಅವಾಂ -

ತರದಿಂದ ನುಡಿದು ಬೇಕೆಂದು ತಮ್ಮ

ಗುರುತು ತೋರಿದಂತೆ ಸ್ವಾತಂತ್ರ ಪಚ್ಚಿಕೊಂಡು

ಹಿರಿದಾಗಿ ಜನ್ಮಂಗಳು ಧರಿಸುವರೂ

ಥರವಲ್ಲ ಈ ಮಾತು ಪೇಳಿಕೊಂಡದರಿಂದ

ಧುರದೊಳು ಪಾರ್ಥಂಗೆ ಹರಿ ಏನು ಪೇಳಿದಾ

ಸುರರಾದಿಗಳಿಗೆ ಜ್ಞಾನ ಅಜ್ಞಾನವೆರಡು

ಹರಿ ಪ್ರೇರಿಸದಲೆ ವ್ಯಕ್ತವಾಗೋವೇ

ಗುರು ದ್ರೋಣಾಚಾರ್ಯನು ಮಾಡಿದ ಪ್ರತಿಜ್ಞ ನಿಂ -

ದಿರದೆ ಪೋಯಿತು ನೋಡೆ ಸ್ವಾತಂತ್ರನೆ

ತರತಮ್ಯ ಭಾವದಿಂದ ಅವರವರ ಯೋಗ್ಯತಾ

ಹರಿ ನಡಿಸಿದರುಂಟು ಸರ್ವರಿಗೆ

ಗರುವಿಕೆ ಸಲ್ಲಾ ನಾವು ನೀವೆಂಬೊ ಮಾತನು

ಧರಿಸದಿರು ಕಡೆ ಬೀಳುವದೇ

ವರ ಶ್ರುತಿ ಸ್ಮೃತಿಯಲ್ಲಿ ಜೀವಕ್ಕೆ ಕರ್ತವ್ಯ

ವರದೊರದು ಪೇಳಿವೆ ಎಂಬ

ಪರಮ ಸತ್ಯವೆ ಸರಿ ಪಾಪ ಪುಣ್ಯಗಳೆರೆಡು

ಹರಿ ಮಾಡಿಸಿ ಉಣಿಸಲು ಉಣ್ಣಿರೊ

ಅರೆಮರೆ ನಿಮಗ್ಯಾಕೆ ತಾಯಿ ತನ್ನ ಮಕ್ಕಳಿಗೆ

ಗರಳವಾಗಲಿ ಪೀಯೂಷವಾಗೆ

ಎರದರೆ ಉಂಬ ಕರ್ತೃತ್ವ ಇದ್ದ ತೆರದಿ

ಸರುವ ಜೀವಿಗಳಿಗೆ ಇಪ್ಪದದಕೋ

ಹರಿ ಜೀವನದ ಕೂಡಾ ಒಳಗೆ ಹೊರಗೆ ಇದ್ದು

ಪರಿಪರಿ ಚೇಷ್ಟಿಯ ಮಾಡಿಪನೊ

ಸರುವಂತರ್ಯಾಮಿ ನಮ್ಮ ವಿಜಯವಿಟ್ಠಲರೇಯಾ 

ನರಕದಲ್ಲಿದ್ದರು ನಿರ್ಲೇಪನೆಂಬೊದೇನೊ  ॥ 1 ॥ 


 ಮಟ್ಟತಾಳ 


ಹರಿ ನಾನಾ ಅವತಾರಾ ಧರಿಸಿ ಧರಣಿಯೊಳಗೆ

ಪರಿಪರಿ ವಿಧ ತಸ್ಕರ ಜಾರತ್ವ ಸೋ -

ದರಮಾವನ ಕೊಂದ ಸುರರ ವಂಚಿಸಿ ಕಲ್ಪತರುವನ್ನೆ ತಂದಾ

ಪರಶು ಪಿಡಿದು ಸೋದರರ ಮಾತೆಯನ್ನು

ಶಿರವ ಕಡಿದನಂದು ಎರಡೊಂದು ಪಾದವನು

ಧರಿಯ ಬೇಡಿ ಬಲಿಯಾ ಹರಣವ ತುಳಿದಾ ಸಂ -

ಗರವಿಲ್ಲದೆ ಕಪಿಯಾ ಶರದಲಿ ಕೊಂದಾ ಅಂ -

ಬರ ತೊರೆದು ನಾರಿಯರ ವ್ರತಗೆಡಿಸಿದನು

ಕುರುಬಲ ಸಂಹರಿಸಿದಾ ಕಪಟದಲಿ

ಪರಿಮಿತಿಯಿಲ್ಲದೆ ವರ ಪ್ರಳಯದಲ್ಲಿ

ಸರಸಿಜಭವ ಗಂಗಾಧರ ಮಿಕ್ಕಾದವರ

ಹರಣವಳಿದು ನಿರ್ಭರದಲಿ ಕುಣಿದಾಡಿದಾ

ನಿರಯಾ ಕರ್ಮಗಳೆಲ್ಲ ಹರಿನೆಸಗಿದರಾತಾ

ಪರದೈವಾ ನೀತಾ ಪರಶಕ್ತಿರನಂತಾ

ದುರಿತ ವಿದೂರ ವಿಸ್ತರ ಅದ್ಭುತ ಚರಿತಾ

ಸರಿ ಬಂದಂತೆ ಸಂಚರಿಸುವಾ ಧಿಟನೆಂದು

ಸಿರಿ ಪೊಗಳಿ ಮೈಮರೆದು ನಿಲ್ಲುತಿರೆ

ಸುರರು ಮಿಕ್ಕಾದ ಜೀವರ ಒಳಗೆ ನಿತ್ಯಾ

ಹರಿ ಪ್ರೇರಿಸಿ ಕರ್ಮಾಚರಣೆ ಮಾಡಿಸಲು

ಪರಮಾತ್ಮಗೆ ದೋಷ ವರಕೊಂಬೋದೆನೊ

ಹರಿ ಹರಿ ರೂಪಕ್ಕೆ ತರತಮ್ಯವೇ ಇಲ್ಲ

ಅರುಹುವೆನು ಬಾಹಿರದ ರೂಪಗಳಂಥ

ಚರಿತೆ ಮಾಡಿದರೇನು ಮರಳೆ ಜೀವರ ಒಳಗೆ

ಸ್ಥಿರವಾದ ಮೂರ್ತಿ ಎರಡು ಬಗೆ ಕರ್ಮ -

ವಿರದೆ ಮಾಡಿಸಲೇನು ನಿರ್ಮಲಾತ್ಮಗೆ ಇದರ

ಕರಕರೆಗಳುಂಟೆ ನರನು ಶಂಕಿಸಿ ಏನೆಂ -

ದರೆ ಏನಾಗುವದೋ ಹುರುಳುಗೊಳುತ

ಹರಿಗೆ ಅರೆ ಮಾಳ್ಪರೆ ಗುಣವಾ

ಪರಿಪೂರ್ಣ ಜ್ಞಾನ ವಿಜಯವಿಟ್ಠಲರೇಯನ 

ಧೊರೆತನಕ್ಕಾವಲ್ಲೆದರುಗಾಣೆನು ನಿತ್ಯ ॥ 2 ॥ 


 ರೂಪಕತಾಳ 


ನಿತ್ಯಾನಂದನಾದ ಜ್ಞಾನ ಶರೀರದಿ

ಅತ್ಯಧಿಕ ಬಲಧೈರ್ಯ ಉಳ್ಳ ನಾರಾಯಣಾ

ಸತ್ಯ ಸಂಕಲ್ಪ ತಾ ಮಾಡಿದದೆ ಮಾಟಾ

ಮೃತ್ಯು ಆತನ ತಡೆದು ಜಯಸುವದೆ

ಭೃತ್ಯಾಭೃತ್ಯರ ವೊಳಗೆ ಇದ್ದು ಅವರವರಿಂದ

ಕೃತ್ಯಗಳ ಮಾಡಿಸಿ ತಿಳಿಸುವ ಬಗೆ ಬಗೆ

ಹತ್ಯಾದಿಗಳು ಮತ್ತೆ ಪುಣ್ಯಗಳೆಲ್ಲವು

ಮರ್ತ್ಯ ಜನಕೆ ಕಟ್ಟಿ ಅನುಭವ ಮಾಡಿಸುವ

ಅತ್ಯಂತವಾಗಿ ಸರ್ವಕೆ ಕರ್ತ ತಾನೆನಿಸಿ

ಶ್ರುತ್ಯರ್ಥಗಳಲ್ಲಿ ಪೇಳಿಪ್ಪವೂ

ಕೃತ್ತಿವಾಸ ವಂದ್ಯ ವಿಜಯವಿಟ್ಠಲರೇಯಾ 

ಸ್ತೌತ್ಯನಹುದು ಸರ್ವರಿಂದ ನಿರಂತರಾ ॥ 3 ॥ 


 ಝಂಪೆತಾಳ 


ನೀಚ ಕರ್ತವ್ಯ ದೈತ್ಯರು ಮಾಡಿಸುವರೆಂದು

ಯೋಚನೆ ಮಾಡುವದು ಸಿದ್ಧವೆನ್ನಿ

ವಾಚದಲಿ ಕೇಳು ಅವರಿಗೆ ಪ್ರೇರಕಾಮರರು

ಈ ಚತುರ್ದಶ ಭುವನದೊಡಿಯ ರಂಗ

ಊಚ ವೃತ್ತಿಗಳು ದೇವತಿಗಳು ಮಾಡಿಪರು

ಆ ಚತುರರು ತಾವು ನಿರ್ಮಳರೂ

ನೀಚೋಚ್ಯಭಾವಕ್ಕೆ ಸುರರಿಗಧಿಕಾರ ಆ -

ಲೋಚನೆ ಮಾಡುವದು ಹರಿ ಇತ್ತದೂ

ಸೂಚನೆ ತಿಳಿವದು ಮನುಜಗಾಗುವ ಕರ್ಮ

ಪ್ರಾಚೀನವಿಡಿದು ದುಃಖ ಸುಖಗಳು

ಲೋಚನ ಮೊದಲಾದ ಇಂದ್ರಿಯಂಗಳಲಿ ವಿ -

ರೋಚನಾದ್ಯರು ವಾಸವಾಗಿಪ್ಪರು

ಮೋಚಕವು ಇವರಿಂದ ಭವವೆಂಬ ಪಾಶ ಪ -

ರಿಚಾರಾರಾಗಬೇಕವು ವೊಲಿಸಿ

ಕೀಚಕಾರಿಯ ಕರುಣ ಪಡೆದರೆ ಸರ್ವರೂ

ಚಾಚುವರು ಬಯಸಿದ ಮಂಗಳಪ್ರದಾ

ಸುಚಾರಿತ್ರ ನಮ್ಮ ವಿಜಯವಿಟ್ಠಲರೇಯನ 

ನೀಚ ಜನರು ಭಾವಿಸಿ ಗತಿ ಪಡಿಯಲರಿಯರು ॥ 4 ॥ 


 ತ್ರಿವಿಡಿತಾಳ 


ಮನುಜನೊಳಗೆ ಭೂತ ಆವಿಷ್ಟನಾಗಿ ಅ -

ವನ ಶರೀರದಲ್ಲಿದ್ದು ನಾನಾ ಚೇಷ್ಟೆ

ತನ್ನ ಇಚ್ಛೆ ಬಂದಂತೆ ಮಾಡುವದು ಯ -

ಳ್ಳನಿತಾದರು ನರಗೆ ಸ್ವಾತಂತ್ರವೇ

ಮನ ಮುಂತಾದ ಕರಣವಿಪ್ಪವು ಸತತ ಚೇ -

ತನವಕ್ಕು ಜಡವಲ್ಲ ಆದರಾಗೆ

ದಿನ ದಿನ ಭೂತದಾಧೀನವಾಗಿ ಇದ್ದಂತೆ

ಮನುಜರು ಶ್ರೀಹರಿಯ ಅಧೀನವೋ

ಕ್ಷಣಕಾತನು ದೇವತಿಗಳ ಕೂಡ

ಗುಣತ್ರಯ ಮನೆ ಮಾಡಿ ನಡಿಸೂವನು

ನೆನಸಿ ಈ ಪರಿಯಿಂದ ನಡೆದ ಮಾನವನಿಗೆ

ಗಣನೆ ಇಲ್ಲವೊ ಮೂರು ಲೋಕದಲ್ಲಿ

ಜನುಮಾ ಜನುಮಾದಲ್ಲಿ ಕರ್ಮಾಕರ್ಮವ ಗೈಸೆ

ಘನವಾಗಿ ಹರಿ ಒಲಿದು ಕಾವುತಿಪ್ಪಾ

ಅನುದಿನದಲ್ಲಿ ಪುಣ್ಯ ಅನಿಮಿಷರಿಗೆ ಇತ್ತು

ದನುಜ ಗಣಕೆ ಪಾಪವನೀವುತಾ

ಮುನಿಯನಿವನ ಮೇಲೆ ತಕ್ಕಷ್ಟು ಫಲದಿಂದ

ಅನುಭವ ಮಾಡಿಸುವ ಬಳಿಯಲ್ಲಿದ್ದು

ಭಣಗು ದೈವಗಳಿಂದ ಇನಿತಾಗುವದೇನು

ಎಣಿಸಿ ನೋಡಿದರು ಅನ್ನಂತ ಕಲ್ಪ

ಮನದಿಚ್ಛಾ ಕ್ರೀಡನೋ ನಿರ್ಭೀತ ನಿರ್ಮೋಹ

ಚಿನುಮಯ ಮೂರುತಿ ಚಿನ್ನಾಂಬರಾ

ಅಣು ಮಹತ್ತು ರೂಪಾ ಆದ್ಯಂತ ರಹಿತಾ

ಮನದೇವ ಜಗದೊಳು ಸುತ್ತುವನು

ದ್ವ್ಯಣುಕ ಮೊದಲಾದ ಕಾಲ ವಿಡಿದು

ತನ್ನನೆ ಬಿಟ್ಟು ಇದರಂತೆ ನಿರ್ಮಿಸುವಾ

ಎಣೆಗಾಣೆ ಈತನ್ನ ಸ್ವಾತಂತ್ರತನಕೆ ಲೋ -

ಚನಾ ಮುಚ್ಚುವ ಲೀಲೆ ಮತ್ತಾರದೊ

ತನಮೇಲೆ ಹೊರೆ ಹಾಕಿಕೊಳದಲೆ ನಿಮಿತ್ಯ

ಅನಿಮಿಷಾದಿಗಳನ್ನು ಮಧ್ಯದಲ್ಲಿ

ಮೊನೆ ಮಾಡಿ ಕರ್ಮಗಳು ಅವರೆ ಮಾಡುವರೆಂದು

ಮನುಜರಿಂದಲಿ ಪೇಳಿಸುವ ಕಾಣಿರೊ

ಮಿನಗುವ ಜ್ಞಾನದಲಿ ದಿಟ್ಟಿಸಿ ನೋಡಿದರೆ

ಗುಣವಂತ ಹರಿಯಲ್ಲಾದನ್ಯರಿಲ್ಲಾ

ವನಧಿಸಂಭವ ಮತ್ತೆ ತಾತ್ವಿಕರು ಸರ್ವ

ಜನರು ಕಾಷ್ಟದಂತೆಯಾದ ಮೇಲೆ

ನನಗೆ ತನಗೆ ಬಿಡದೆ ಸ್ವತಂತ್ರ ಉಂಟೆಂಬ

ನೆನಹೆ ಇಲ್ಲದೆ ಸರ್ವ ವೋದಿನಲೀ

ಮುನಿಗಳ ಸಮ್ಮತಾ ಕುರುಬಲದೊಳು ಮಹಾ ಕಾ -

ರಣ ಕೃಷ್ಣ ಭಾರತ ಮಲ್ಲ ಹರಿಯೋ

ತನಗೆ ತಾನೆ ಐಕ್ಯಾ ವಿಜಯವಿಟ್ಠಲರೇಯಾ 

ಅನುಗ್ರಹ ಮಾಡುವಾ ವ್ಯಾಪಾರ ಮಾಡಿಸಿ ॥ 5 ॥ 


 ಅಟ್ಟತಾಳ 


ಅಸಗ ಮಲಿನ ವಸ್ತ್ರ ಹಸನ ಮಾಡುವದಕ್ಕೆ

ಕೊಸರಿ ಬಂಡಿಗೆ ಬೀಸಿ ಮಿಸಕದೆ ಬಡಿಯಲು

ವಸನಕೆ ಪೆಟ್ಟು ತಾಕಿಸಲು ಮಲಿನ ಬಿಟ್ಟು

ಅಸಿತ ಹಿಂದಾಗಿ ರಂಜಿಸುವದು ಬಿಳಪಿಲಿ

ವಸನಕ್ಕೆ ನೀರು ವ್ಯಾಪಿಸಿಕೊಂಡಿಪ್ಪುದು ಹಾ -

ರಿಸಿ ವಗದರೆ ಪೆಟ್ಟು ವಸನಕಲ್ಲದೆ ಕಾಣಿಸುವದೇ ನೀರಿಗೆ

ಬಿಸಜನಾಭನು ನಿಮಿಷ ತೊಲಗದೆ ವ್ಯಾ -

ಪಿಸಿಕೊಂಡು ಇಪ್ಪದು ಪುಸಿಯಲ್ಲ ಎಂದಿಗೂ

ಕುಶಲವೆ ಸರಿ ಜೀವ ಪ್ರಸರಕ್ಕೆ ಬಾಧೆ ವೆ -

ಕ್ಕಸವಾದರೆ ಆ ವಸನದ ತೆರದಿ ಘಾಶಿಸುವದು ಕೇಳಿರೋ

ಅಸುರ ವಿರೋಧಿಗೆ ಘಸಣೆ ಎಂಬೋದು ಎತ್ತ

ಶಿಶುವಾಗಿ ಅಸುರೆಯ ವಿಷ ಮಲಿಯನುಂಡ

ವಿಷಯಂಗಳು ನೇಮಿಸಲಾಗದು ನಿತ್ಯ

ವಸುಧಿ ಭೂಭಾರ ತಗ್ಗಿಸಿದಾ ವಿಜಯವಿಟ್ಠ - 

 ಲಸಮ ದೈವಕೆ ಧಿಕ್ಕರಿಸುವನೆ ಮೂರ್ಖಾ ॥ 6 ॥ 


 ಆದಿತಾಳ 


ಇಂಬಾಗಿ ಈ ಪರಿ ಅಂತರ ನಿಷ್ಠಿಯಲ್ಲಿ

ನಂಬಿಕೊಂಡಿದ್ದ ತನ್ನ ಶರಣನ್ನ ದುರಿತ ಪಥಕೆ

ಹಂಬಾಲಾ ಮಾಡಗೊಡ ತಿರಗಿ ತಿರಗಿ ಒಲಿದು

ಬೆಂಬಲವಾಗಿ ಇಪ್ಪ ಬಹು ಪುಣ್ಯ ಮಾಡಿಸುತ್ತ

ತುಂಬಿದ ಭಕ್ತಿಯನ್ನು ಕೊಡುವ ಕರ ಪಿಡಿವಾ

ಕೊಂಬನು ಕೊಡಿಸುವ ಇವನಿಂದಾದ ಸತ್ಕರ್ಮ

ಇಂಬು ಮಾಡಿ ಕೊಡುವ ತನ್ನ ಪುರದ ವೊಳಗೆ

ಉಂಬ ನಿಮಿತ್ಯದಲ್ಲಿ ಜೀವಕ್ಕೆ ಕರ್ತೃತ್ವ -

ವೆಂಬೊದೆ ಸಿದ್ಧ ಹರಿ ಮಾಡಿದ ಮರಿಯಾದೆ

ಬೊಂಬೆ ಕುಣಿಸಿದಂತೆ ಸರ್ವರ ಸೂತ್ರ ಧರಿಸಿ

ಬೆಂಬಿಡದಾಡಿಸುವ ಬಹುಲೀಲಾ ವಿಶ್ವ ಕು -

ಟುಂಬಿ ಪಾಲಕ ಪರಮಪುರುಷ ಅನಾಥಬಂಧು

ರಂಬಿಸಿ ಶರಣರಿಂದ ಸಾಧನ ಮಾಡಿಸುವಾ

ಹುಂಬೆಗಾರರಿಗೆ ಸದ್ಗತಿಯ ಕರ್ಮಂಗಳು

ಎಂಬೊದೆ ಮಾಡಗೊಡ ದುಃಖಕ್ಕೆ ಪ್ರೇರಿಸುವಾ

ಕಂಬು ಚಕ್ರಪಾಣಿ ವಿಜಯವಿಟ್ಠಲರೇಯಾ 

ಅಂಬುಧಿಯೊಳಗಿಪ್ಪ ಅನಂತಾನಂತರೂಪ ॥ 7 ॥ 


 ಜತೆ 


ಸ್ವಾಮಿ ಭೃತ್ಯನೆಂದು ಕಾಲಕಾಲಕೆ ನುಡಿದು

ಕಾಮಿಸು ವಿಜಯವಿಟ್ಠಲರೇಯನ ಪಾದ ॥

***