Showing posts with label ರಂಗನೆ ಬಾ ಮನಮಂದಿರಕೆ ಶೃಂಗಾರದ ಶ್ರೀ ಹರಿ ಶೌರೇ kamalanabha vittala. Show all posts
Showing posts with label ರಂಗನೆ ಬಾ ಮನಮಂದಿರಕೆ ಶೃಂಗಾರದ ಶ್ರೀ ಹರಿ ಶೌರೇ kamalanabha vittala. Show all posts

Thursday, 5 August 2021

ರಂಗನೆ ಬಾ ಮನಮಂದಿರಕೆ ಶೃಂಗಾರದ ಶ್ರೀ ಹರಿ ಶೌರೇ ankita kamalanabha vittala

 ..

kruti by Nidaguruki Jeevubai


ರಂಗನೆ ಬಾ ಮನಮಂದಿರಕೆ

ಶೃಂಗಾರದ ಶ್ರೀ ಹರಿ ಶೌರೇ ಪ


ನಗುತ ನಗುತ ಬಾ ಖಗವಾಹನ ಹರಿ

ಬಗೆ ಬಗೆ ಕ್ರೀಡೆಗಳ ತೋರುತಲಿ

ಝಗ ಝಗಿಸುವ ಪೀತಾಂಬರಧಾರಿಯೆ

ಅಗಣಿತ ಗುಣನಿಧಿ ಬಾ ಹರಿಯೆ 1


ಪಕ್ಷಿವಾಹನ ಪುರುಷೋತ್ತಮ ಶ್ರೀಹರಿ

ರಕ್ಷಿಸಿ ಕಾಪಾಡುವ ಜಗವ

ಕುಕ್ಷಿಯೊಳಡಗಿಸಿ ಸಲಹುವ ಸುಜನರ

ರಕ್ಷಿಸಿ ಪೊರೆಯಲು ಬಾ ಹರಿಯೆ 2


ಪೊಂಗೊಳಲೂದುತ ಮಂಗಳ ಚರಿತ ಹೃ-

ದಂಗಳದೊಳು ನಲಿದಾಡುತಲಿ

ಅಂಗಜಜನಕ ಗೋಪಾಂಗನೆ ಲೋಲ ಶ್ರೀ-

ಮಂಗಳ ಮೂರುತಿ ಬಾ ಹರಿಯೆ 3


ಗಂಗಾಜನಕಗೆ ಭೃಂಗಕುಂತಳೆಯರು

ರಂಗು ಮಾಣಿಕದಾರತಿ ಬೆಳಗೆ

ಪೈಂಗಳನಾಮ ಸಂವತ್ಸರದಲಿ ಭವ

ಭಂಗವ ಮಾಡಲು ಬಾ ಹರಿಯೆ 4


ಸುಮನಸರೊಡೆಯಗೆ ಭ್ರಮರ ಕುಂತಳೆಯರು

ಘಮಘಮಿಸುವ ಸುಮಮಾಲೆಗಳ

ಕಮಲನಾಭ ವಿಠ್ಠಲಗರ್ಪಿಸುವರು

ಶ್ರಮ ಪರಿಹರಿಸಲು ಬಾ ಹರಿಯೆ 5

***