Showing posts with label ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ gopalakrishna vittala. Show all posts
Showing posts with label ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ gopalakrishna vittala. Show all posts

Monday, 2 August 2021

ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ ankita gopalakrishna vittala

ನಿನ್ನ ನೋಡಲಿ ಬಂದೆ ಘನ್ನ ಮಹಿಮನೆ ಕೃಷ್ಣಾ

ಮನ್ನಿಸಿ ಕೃಪೆಯ ಮಾಡೊ ಪ.


ನಿನ್ನ ದರುಶನವಿತ್ತು ಎನ್ನ ಪಾಪವ ಕಳೆದು

ನಿನ್ನ ಪಾದವನೆ ತೊರೋ ಸ್ವಾಮಿ ಅ.ಪ.


ರಜತಪೀಠಾಪುರದಿ ರಮ್ಯ ಮಂದಿರದಲ್ಲಿ

ರಾಜಿಸುತ್ತಿಹ ದೇವನೆ

ಕುಜನಮರ್ಧನ ಎನ್ನ ರಜ ತಮೋಗುಣ ಕಳದು

ನಿಜಭಕ್ತರೊಡನಾಡಿಸಿ

ಸುಜನವಂದಿತ ನಿನ್ನ ಭಜನೆಯಿಂದಲಿ ನಲಿದು

ನಿಜರೂಪ ನೋಡುವಂತೆ

ವಿಜಯಸಾರಥಿಯೆ ನೀ ಈ ತೆರದಿ ಪೊರೆಯದಿರೆ

ಭಜಿಸಲ್ಯಾತಕೆ ನಿನ್ನನು ದೇವ 1

ಶ್ರೀ ತಂದೆ ಮುದ್ದುಮೋಹನದಾಸರೆಂತೆಂಬ

ನೀತ ಗುರುದ್ವಾರದಿಂದ

ನಾ ತಿಳಿದು ಬಂದೆ ನಿನ್ನಯ ಮಹಿಮೆ ಜಾಲಗಳ

ಪ್ರೀತನಾಗಿ ಕಾಯೋ

ನೀತಿಯಲ್ಲವು ನಿನಗೆ ಮಹಿಮೆ ತೋರದೆ ಎನ್ನ

ಘಾತಿಗೊಳಿಸುವರೆ ಹೀಗೆ

ನಾಥ ನಿನ್ನಗಲಿ ನಾನರಘಳಿಗೆ ಇರಲಾರೆ

ಸೋತು ಬಂದಿಹೆನೊ ಭವದಿ ಮನದಿ 2

ಸತ್ಯಸಂಕಲ್ಪ ನೀನಾದಡೆ ಎನಗಿನ್ನು

ಅತ್ಯಧಿಕ ರೂಪ ತೋರೊ

ಮೃತ್ಯು ಬೆನ್ಹತ್ತಿ ಆಯುಷ್ಯವ ಪರಿಹರಿಸುವುದು

ಎತ್ತ ಪೋದರು ಬಿಡದೆಲೊ

ಭೃತ್ಯತನವನೆ ವಹಿಸಿ ನಿನ್ನ ತೋರೆಂದೆನಲು

ಮತ್ತೆ ಕರುಣವಿಲ್ಲವೆ

ಚಿತ್ತಜಾಪಿತ ನಿನ್ನ ಒಲುಮೆ ಮಾರ್ಗವನರಿಯೆ

ಚಿತ್ತಕ್ಕೆ ತಂದು ಕಾಯೊ ಕೃಷ್ಣ 3

ಆನಂದಮುನಿವರದ ಆನಂದ ಕಂದನೆ

ಆನಂದನಿಲಯವಾಸ

ಆನಂದರತ್ನಪ್ರಭಾದಿಂದ ರಾಜಿತನೆ

ಆನಂದಮೂರ್ತಿ ಕೃಷ್ಣ

ಆನಂದಗೋಕುಲದಿ ಆನಂದದಲಿ ಮೆರೆದು

ಆನಂದ ಸುಜನಕಿತ್ತೆ

ನೀನಿಂದು ಎನ್ನ ಮನಕೆ ಆನಂದವನೆ ಇತ್ತು

ಆನಂದರೂಪ ತೋರೊ ಕೃಷ್ಣ 4

ಥರವಲ್ಲ ನಿನಗೆನ್ನ ಕರಕರೆಗೊಳಿಸುವುದು

ಪೊರೆವರಿನ್ಯಾರು ಜಗದಿ

ಮರೆತು ಗರ್ವದಿ ಎನ್ನ ಮರೆವರೆ ನೀನ್ಹೀಗೆ

ಗುರುಗಳಂತರ್ಯಾಮಿಯೆ

ಸರ್ವನಿಯಾಮಕ ಸರ್ವವ್ಯಾಪಕನೆಂಬ

ಬಿರುದು ಪೊತ್ತಿಲ್ಲವೇನೊ

ಕರುಣಾಳು ಗೋಪಾಲಕೃಷ್ಣವಿಠ್ಠಲ ನಿನ್ನ

ಪರಿಪರಿಯ ರೂಪ ತೋರೊ ಕೃಷ್ಣ 5

****