Showing posts with label ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ uragadrivasa vittala. Show all posts
Showing posts with label ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ uragadrivasa vittala. Show all posts

Monday, 2 August 2021

ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ankita uragadrivasa vittala

ಭಯಕೃದ್ಭಯನಾಶನ ಮಾಯಾರಮಣ

ಭವಭಯಹರಣ ಪ


ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ-

ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ


ನಾನರಿಯೆ ನಿನ್ನಯ ಗುಣಗಣಾದಿಗಳ

ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ

ಜನುಮ ಜನುಮಾಂತರದಿ ಬಂದ ವಾಸನಾದಿಗಳ

ದೀನವತ್ಸಲ ದೂರ ನೋಡುವೆಯ ನೀನರಿಯ

ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ

ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1


ಆ ಕರಿ ಮಕರಿ ಪಿಡಿಯಲು ಬಂದ ಪರಿಯೇನು

ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು

ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು

ನಾನು ಆಸಾಧನವನರಿಯೇನು

ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು

ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು

ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2


ಈಸಲಾರೆನು ಸಾರಿ ಈ ಭವಸಾಗರದೊಳಗೆ

ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ

ದಾಸದಾಸದಾಸರದಾಸ್ಯ ಕೊಡಿಸೆನಗೆ

ಶ್ರೀಶ ಎನ್ನಯ ಮನದ ಕ್ಲೇಶವನೂ

ನಾಶವಗೈಸು-ನಿರಾಶ್ರಯನಾಗಿಹೆನು

ಏಸುಬಲ್ಲೆನು ಕಾಸಿನವನು

ಬೇಸರಿಸದಿರು ಇನ್ನೂ-ಮುನ್ನೂ 3


ತಾಪತ್ರಯಗಳಿಂದನುದಿನದಿ ನಾ ನೊಂದೆ

ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ

ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ

ಕುಪಿತವೇ ನಿನ್ನವನು ನಾನೆಂದೆ

ಭೂಪ ಆಪತ್ತೋದ್ಧಾರಕನೆಂದೆ

ಪಾಪಿಮಾನವಜನುಮದಲಿ ಬಂದೆ

ಕಾಪಾಡುವುದು ಎಂದೇ-ತಂದೇ 4


ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ

ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ

ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ

ಸ್ವಸ್ಥಚಿತ್ತವಿಲ್ಲ ಶ್ರೀಹರೇ

ಈ ಸ್ಥಿತಿಯಲ್ಲಿ ಎನ್ನ ನೋಡುವರೆ

ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5

****