Showing posts with label ನೀನೇ ಏನೋ ವಿಠಲ gopala vittala ankita suladi ಪ್ರಾರ್ಥನಾ ಸುಳಾದಿ NEENE ENO VITTALA PRARTHANA SULADI. Show all posts
Showing posts with label ನೀನೇ ಏನೋ ವಿಠಲ gopala vittala ankita suladi ಪ್ರಾರ್ಥನಾ ಸುಳಾದಿ NEENE ENO VITTALA PRARTHANA SULADI. Show all posts

Sunday 1 November 2020

ನೀನೇ ಏನೋ ವಿಠಲ gopala vittala ankita suladi ಪ್ರಾರ್ಥನಾ ಸುಳಾದಿ NEENE ENO VITTALA PRARTHANA SULADI

 

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ  ಪ್ರಾರ್ಥನಾ ಸುಳಾದಿ 


 ರಾಗ ಪಂತುವರಾಳಿ 


 ಧ್ರುವತಾಳ 


ನೀನೆ ಏನೋ ವಿಠಲ ನಿಗಮವು ತಂದವನು

ನೀನೆ ಏನೋ ವಿಠಲ ನಗವನ್ನು ಪೊತ್ತವನು

ನೀನೆ ಏನೋ ವಿಠಲ ವರಹ ರೂಪನಾದವ

ನೀನೆ ಏನೋ ವಿಠಲ ನರಮೃಗ ರೂಪಾದದ್ದು

ನೀನೆ ಏನೋ ವಿಠಲ ವಟುರೂಪ ತಾಳಿದವ

ನೀನೆ ಏನೋ ವಿಠಲ ಪರುಶವ ಪಿಡಿದವ

ನೀನೆ ಏನೋ ವಿಠಲ ಶಿಲೆಯನ್ನುದ್ಧರಿಸಿದವ

ನೀನೆ ಏನೋ ವಿಠಲ ಪಾಂಡವರ ಕಾಯ್ದವ

ನೀನೆ ಏನೋ ವಿಠಲ ಬೌದ್ಧ ರೂಪನಾದದ್ದು

ನೀನೆ ಏನೋ ವಿಠಲ ತುರಗವನೇರಿದವ

ನೀನೆ ಏನೋ ವಿಠಲ ಚತುರಮೂರ್ತಿ ಆದವ

ನೀನೆ ಏನೋ ವಿಠಲ ಅಷ್ಟಮೂರ್ತಿ ಆದವ

ನೀನೆ ಏನೋ ವಿಠಲ ಕೇಶವಾದಿ ಆದವ

ನೀನೆ ಏನೋ ವಿಠಲ ಅಜಾದಿ ಮೂರ್ತ್ಯಾದವ

ನೀನೆ ಏನೋ ವಿಠಲ ವಿಶ್ವಮೂರ್ತಿ ಆದವ

ನೀನೆ ಏನೋ ವಿಠಲ ಅನಂತಾನಂತರೂಪ

ನೀನೆ ಏನೋ ವಿಠಲ ಸಿರಿಅಜಭವರಿಂದ

ನಾನಾಕು ಪರಿಯಲ್ಲಿ ಸೇವೆಯ ಕೊಂಬುವನೆ

ನೀನೆ ಏನೋ ವಿಠಲ ಆತ್ಮ ಅಂತರಾತ್ಮ

ಕಾಣಿಸುವೆ ಎನ್ನಲ್ಲಿ ಅನಂತ ಒಂದೇ ಆಗಿ

ಖೂನ ಪಿಡಿದು ಬಿಡೆ ಯೆಂದಿನವನೆ ನಾನು

ಏನೊ ಈಗ ನೋಡಲು ಆರೊ ಅಂಬಂಥ ವಿಧಿ

ಜಾಣ ಚನ್ನಿಗರಾಯ ಗೋಪಾಲವಿಟ್ಠಲ 

ಪ್ರಾಣದೊಲ್ಲಭ ನಿನ್ನ ಕಾಣದೆ ನಿಲ್ಲಲಾರೆ ॥ 1 ॥


 ಮಟ್ಟತಾಳ 


ಆವ ನಿನ್ನ ಶಿರವು ಅಂತಿಯ ತೋರದು

ಆವ ನಿನ್ನ ನಯನ ಅಂತಿಯ ತೋರದು

ಆವ ನಿನ್ನ ಮುಖ ಅಂತಿಯ ತೋರದು

ಆವ ನಿನ್ನ ಕರಗಳಂತಿಯ ತೋರದು

ಆವ ನಿನ್ನ ಅವಯವಂಗಳಿಗೆ ಅಂತ್ಯವಿಲ್ಲ

ಆವ ನಿನ್ನ ಪಾದಂಗಳಿಗೆ ಅಂತೆಯಿಲ್ಲ

ದೇವ ನಿನ್ನ ಆವ ಅವಯವಕೆಲ್ಲ ಪೂರ್ಣ

ಆವ ದಿಕ್ಕು ನೋಡಲಿ ನಿನ್ನ ನೋಟ ವ್ಯಾಪ್ತಿ

ಧಾವತೆಯು ಇಲ್ಲ ಆವಲ್ಲಿ ನಿನಗೆ

ಕಾವು ಬಹಳ ಭಕುತರನ್ನ ಪಾಲಿಪಲ್ಲಿ

ದೇವ ಬಾರೋ ಗೋವಳರಾಯ ನಿನಗೆ

ಆವ ತಂದಿ ಕಾಣೋ ಆವ ತಾಯಿ ನಿನಗೆ

ಜೀವ ಜಡ ಭಿನ್ನ ಗೋಪಾಲವಿಟ್ಠಲ 

ದೇವ ನಿನ್ನ ಚರಿಯ ಕೋವಿದರಿಗೆ ಪ್ರಿಯಾ ॥ 2 ॥


 ರೂಪಕತಾಳ 


ನಿನ್ನ ಕರುಣದಿಂದೆ ಎನ್ನ ಸೃಷ್ಟಿಸಿದದ್ದು

ನಿನ್ನ ಕರುಣದಿಂದೆ ಎನ್ನ ಪಾಲಿಸುವದು

ನಿನ್ನ ಕರುಣದಿಂದೆ ದೇಹ ವಿಯೋಗವು

ನಿನ್ನ ಕರುಣದಿಂದೆ ಎನ್ನ ಬಾಳವಿ ಬದುಕು

ನಿನ್ನ ಕರುಣದಿಂದೆ ಮಾನಾಪಮಾನವು

ನಿನ್ನ ಕರುಣದಿಂದೆ ಲಾಭಾಪಜಯಗಳು

ನಿನ್ನ ಕರುಣದಿಂದೆ ಸಾಧನ ಸಂಪತ್ತು

ನಿನ್ನ ಕರುಣದಿಂದೆ ಬಂಧನ ನಿವೃತ್ತಿ

ನಿನ್ನ ಕರುಣದಿಂದೆ ಆಗುವದೋ ರಂಗ

ಎನ್ನಿಂದ ನಿನಗಿನ್ನು ಲೇಶಾಪೇಕ್ಷೆಯು ಇಲ್ಲ

ನಿನ್ನ ಹಂಗಿನೊಳು ಮುಳುಗಿ ಆಡುವೆನಯ್ಯಾ

ಇನ್ನು ಇಲ್ಲಿಗೆ ಸರಿ ಆಯಿತೆಂಬುವೆನೇ

ಇನ್ನು ಮುನ್ನೆ ಇದೆ ಆಗಲಿ ಆಗಲಿ

ಚಿನ್ನುಮಯ ಮೂರ್ತಿ ಗೋಪಾಲವಿಟ್ಠಲ 

ಜನುಮ ಜನುಮಕ್ಕೆ ನೀನೆ ಎನಗೆ ದಾತಾ ॥ 3 ॥


 ಝಂಪೆತಾಳ 


ಎನಗೆ ಪಶು ಜನ್ಮವು ಬಂದಾಗೆ ನೀನಿದ್ದು

ಎನಗೆ ಸ್ಥಾವರ ಜನುಮವು ಬಂದಾಗೆ ನೀನಿದ್ದು

ಎನಗೆ ಶ್ವಾನ ಸೂಕರ ಜನ್ಮ ಬಂದಾಗೆ ನೀನಿದ್ದು

ಎನಗೆ ಜಲಚರ ಜೀವ ಜನುಮ ಬಂದಾಗಿದ್ದು

ಎನಗೀಗ ಆವಾವ ದೇಹದಲ್ಲನುಭೋಗ

ಅನುವಾಗಿ ನೀನಿದ್ದು ಅಲ್ಲಿ ಉಣಿಸಿ

ಎನಗೆ ಅನುಭೋಗಕ್ಕೆ ಆಗ ತಂದು ಕೊಡದೆ

ದಣಿಸಿ ನೋಡಿದಿ ಅಲ್ಲವೇನೋ ಕೃಪಾಳು

ಎನಗೆ ನಿನ್ನ ಮಹಿಮೆ ಎಣಿಸಲಾಗೋದರವು

ದಣಿದೆ ದಣಿದೆ ನಾನಾ ಜನುಮಗಳಲ್ಲಿ ಬಂದು

ಎನಗೀಗ ಮಾನಿಸ ಜನುಮ ಲಾಭವಿನ್ನು

ಅನುವಾಗಿ ಇತ್ತದಕ್ಕನುಕೂಲವಾಗಿನ್ನು

ಘನವಾದ ಸಾಧನವನ್ನು ಎನ್ನಿಂದಲಿ

ದಿನದಿನದಿ ಮಾಡಿಸಿ ನೂತನವಾಗಿನ್ನು

ಕ್ಷಣಕ್ಷಣಕೆ ನಿನ್ನ ಸ್ಮರಣೆ ಎನಗೆಯಿತ್ತು

ಜನನಿಯ ಜಠರದಿ ಜನಿಸದಂದದಿ ಮಾಡು

ಘನದೇವ ಕೇಳು ಗೋಪಾಲವಿಟ್ಠಲರೇಯ 

ಎನಗೆ ನಿನ್ನರ್ಚಿಸೊ ಗುಣ ಉಪಾಸನೆ ಈಯೋ ॥ 4 ॥


 ತ್ರಿವಿಡಿತಾಳ 


ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ

ಪ್ರಾಕೃತ ಉದಕದಿ ಮಜ್ಜನವೆ

ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ

ಪ್ರಾಕೃತ ಉಡಗಿಯ ವಸನಂಗಳೆ

ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ

ಪ್ರಾಕೃತ ಜಡಗಳು ಆಭರಣವೇ

ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ

ಪ್ರಾಕೃತ ಗಂಧ ತುಲಸಿ ಪುಷ್ಫವೇ

ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ

ಪ್ರಾಕೃತ ಧೂಪ ದೀಪದಾರ್ತಿಯೆ

ಪ್ರಾಕೃತ ರಹಿತನೆ ಎಲೋ ದೇವ ನಿನಗೆ ಈ

ಪ್ರಾಕೃತದನ್ನವು ನೈವೇದ್ಯವೇ

ಪ್ರಾಕೃತ ಬದ್ಧನ ಮಾಡಿ ಎನ್ನಿಂದಲಿ

ಪ್ರಾಕೃತ ಪೂಜಿಯ ಕೈಕೊಂಬಿ

ಪ್ರಾಕೃತದೊಳು ನೀನು ಅಪ್ರಾಕೃತನಾಗಿದ್ದು

ಈ ಪರಿಯಲಿ ನಿತ್ಯ ಪೂಜಿಗೊಂಬೆ 

ಪ್ರಾಕೃತ ರಹಿತನಾಗಿ ನಿನ್ನ ದಾಸರು

ಪ್ರಾಕೃತದೊಳಗಿನ್ನು ಇಪ್ಪುವರು

ಪ್ರಾಕೃತರಹಿತನೆಂದೀಪರಿ ಚಿಂತಿಪರ

ಪ್ರಾಕೃತ ಬದ್ಧದಿ ರಹಿತರ ಮಾಡುವಿ ಅ -

ಪಾರ ಮಹಿಮನೆ ಗೋಪಾಲವಿಟ್ಠಲ 

ಈ ಪರಿಯಲಿ ನಿನ್ನ ಚಿಂತಿಪರೊಡನಿಡಿಸೊ ॥ 5 ॥


 ಅಟ್ಟತಾಳ 


ಧನದ ಅಪೇಕ್ಷಕ್ಕೆ ನಿನ್ನ ಪೂಜೆಯು ಬೇಡ

ವನುತೆ ಅಪೇಕ್ಷಿಸಿ ನಿನ್ನ ಪೂಜೆಯು ಬೇಡ

ಮನೆಯು ಅಪೇಕ್ಷಿಸಿ ನಿನ್ನ ಪೂಜೆಯು ಬೇಡ

ತನುವು ಅಪೇಕ್ಷಿಸಿ ನಿನ್ನ ಪೂಜೆಯು ಬೇಡ

ಘನ ಸುತರಿಗಾಗಿ ನಿನ್ನ ಪೂಜೆಯು ಬೇಡ

ಕನಸಿನೊಳಾದರೂ ಕಾಮ್ಯ ಫಲಕೆ ನಿನ್ನ

ನೆನೆಸದಂತೆ ಮಾಡು ನ್ಯಾಯದಲೆ ಇನ್ನು

ಎನಗೆ ಈ ದೇಹದಲ್ಲೇನೇನು ಅನುಭೋಗ

ಅನುವಾಗಿ ಇದ್ದದ್ದು ಉಣಿಸದೆ ಬಿಡಿ ಇನ್ನು

ಎನಗೇನು ಈ ದೇಹ ಹೇಗೆ ಬಂದೀತೆಂದು

ಕ್ಷಣವು ಆದರು ನಿನ್ನ ಚಿಂತಿಸಿ ಇದ್ದೇನೆ

ತನುವು ಕೊಟ್ಟವಗೆ ತಾಪತ್ರಯದ ಚಿಂತೆ

ಎನಗೆ ಎನಗೇನು ಯೋಚನಿಲ್ಲ

ತನುಮನದೊಡಿಯನೆ ಗೋಪಾಲವಿಟ್ಠಲ 

ಎನಗೆ ನಿಷ್ಕಾಮಕ ನಿನ್ನಾರಾಧನೆ ಈಯೋ ॥ 6 ॥


 ಆದಿತಾಳ 


ಶುಭವೆಂದು ಪಿಡಿಯೆ ಶುಭದೊಳಶುಭವುಂಟು ಅ -

ಶುಭವೆಂದು ಬಿಡಲು ಅಶುಭದೊಳು ಶುಭವುಂಟು

ಶುಭವು ಅಶುಭವು ಎರಡಿಂದು ಎನಗೆ

ವಿಭಾಗ ತಿಳಿಯದು ವಿವರಸಿ ನೋಡಲು

ಶುಭಕೆ ಕಾರಣ ನೀನೆ ಅಶುಭಕೆ ಕಾರಣನೆಂದು

ದ್ವಿಭಾಗವು ವಿವರಣೆ ನಭದವರೆ ಮಾಡಿಹರು

ಇಭರಾಜ ಪಾಲಕ ಗೋಪಾಲವಿಟ್ಠಲ 

ಶುಭ ಅಶುಭವು ನಿನ್ನಾಧೀನ ಇಪ್ಪವು ॥ 7 ॥


 ಜತೆ 


ಎನಗೆ ನೀ ಬೇಕೆಂಬೊ ಆಶೆಯು ಘನವಯ್ಯಾ

ನಿನಗೆ ಬೇಕಿತ್ತೆ ಪೊರಿ ಗೋಪಾಲವಿಟ್ಠಲ ॥


 ಈ ಸುಳಾದಿಯ ರಚನೆಯ ಸಂದರ್ಭ : 

ಆದವಾನಿಯಲ್ಲಿ ಶ್ರೀಗೋಪಾಲದಾಸರು , ತಮ್ಮ ಗುರುಗಳ ಸನ್ನಿಧಾನದಲ್ಲಿ ಇರುವಷ್ಟರಲ್ಲಿ ಒಂದೆರಡು ಬಾರಿ , ಶ್ರೀವಿಜಯದಾಸಾರ್ಯರು , ಶ್ರೀಗೋಪಾಲದಾಸರಿಂದ ತಮ್ಮಲ್ಲಿದ್ದ ಶ್ರೀವಿಜಯವಿಟ್ಠಲನ ಪೂಜೆ ಮಾಡಿಸಿದ್ದರು. ಶ್ರೀಗೋಪಾಲದಾಸರು ಶ್ರೀವಿಟ್ಠಲಸ್ವಾಮಿಯನ್ನು ಅರ್ಚಿಸಿ , ಶ್ರೀದೇವರನ್ನು ಭುಜಂಗಿಸುವ ಮುನ್ನ ಆ ಸ್ವಾಮಿಯ ಸ್ತೋತ್ರವನ್ನು ಪಾಡಿ ನರ್ತಿಸುತ್ತಿದ್ದರು. ಆ ಸಮಯದಲ್ಲಿ ಭಕ್ತಿಯಿಂದ ಮೂಡಿದ ಸುಳಾದಿ ಇದು 

ವಿವರಣೆ : 

ಹರಿದಾಸರತ್ನಂ ಶ್ರೀಗೋಪಾಲದಾಸರು

*******