ಶ್ರೀವಿಜಯದಾಸಾರ್ಯ ವಿರಚಿತ ಅನ್ನದಾನ ಮಹಿಮಾ ಪ್ರಕರಣ ಸುಳಾದಿ
ರಾಗ ಅಭೋಗಿ
ಧ್ರುವತಾಳ
ಅನ್ನದಾನ ಪ್ರಧಾನ ನಿಧಾನಿಸಿ ನೋಡಲು
ಅನ್ನಂತ ಕಲ್ಪದಲ್ಲಿ ವಿಚಾರಿಸೇ
ಹೊನ್ನು ಮಿಕ್ಕಾದ ದ್ರವ್ಯ ಇತ್ತಡಾದರೆ ಮನುಜ
ಪೂರ್ಣನಾಗನು ಕಾಣೊ ಗುಣಿಸಿ ಕೇಳೊ
ಮುನ್ನೆ ಅಧ್ಯಾತ್ಮ ಅಧಿಭೂತ ಅಧಿದೈವ
ಚೆನ್ನಾಗಿ ತ್ರಿವಿಧ ತೃಪ್ತಿಕರವೊ ನಿತ್ಯ
ಭಿನ್ನ ಭಿನ್ನ ಜೀವರಲ್ಲಿ ತ್ರಯ ವಿಕಾರ ಉಂಟು ಇವೆ
ಇನ್ನು ಲಾಲಿಸುವದು ಸ್ಥೂಲ ಸೂಕ್ಷ್ಮ
ತನ್ನ ಮೊದಲು ಮಾಡಿ ಅಧ್ಯಾತ್ಮವೆನಿಸುವದು
ಅನ್ಯ ಜನರೆಲ್ಲ ಅಧಿಭೌತಿಕಾ
ಧನ್ಯ ದೇವತೆಗಳೆ ಅಧಿದೈವರೆನಿಸುವರು
ಉಣಿಸಬೇಕು ಈ ಪರಿ ತಿಳಿದೂ
ಘನ್ನ ತಾಪತ್ರಯಗಳು ಹಿಂದಾಗಿ ಪೋಪವು ಪಾ -
ವನ್ನನಾಗುವ ಜ್ಞಾನಭಕುತಿಯಿಂದ
ತನ್ನ ಮನಸು ಅಧ್ಯಾತ್ಮ ಇಂದ್ರಿಯಂಗಳೆ ಅಧಿದೈವ
ಚೆನ್ನ ಶರೀರವೆ ಅಧಿಭೂತವೊ
ಸನ್ನುಮತ ನೋಡಿದರು ಸಕಲಾದಿ ಸಂ -
ಪನ್ನನಾಗುವ ಸಕಲಾಭೀಷ್ಟೆಯಲ್ಲಿ
ಅನ್ನದಾನವೆ ದಾನ ತ್ರಿಕೋಟಿಗೇ
ಪುಣ್ಯ ಮಾತುರ ತತ್ತತ್ಪ್ರಭೇದವಾಗಿಪ್ಪದು
ಇನಿತರೊಳು ನಾನಾ ವಿಧ ಓದನ
ಬಣ್ಣಿಸಲರಿದು ಅನ್ನವಿತ್ತವನ ಕುಲಕೋಟಿ ಸು -
ವರ್ಣ ಗಾತುರಾಗಿ ಸಂಚರಿಪರು
ಪನ್ನಗಶಯನ ನಮ್ಮ ವಿಜಯವಿಟ್ಠಲರೇಯನ
ಉಣಿಸುವದು ಬಹು ಅಧಿಷ್ಠಾನವನ್ನೆ ಚಿಂತಿಸಿ ॥ 1 ॥
ಮಟ್ಟತಾಳ
ಏಳು ಪರಿ ಅನ್ನ ಜಗದೊಳು ತುಂಬಿದೆ
ಏಳಲ ಮಾಡದೆ ಯಥಾರ್ಥ ತಿಳಿವದು
ಕಾಲಕಾಲಕ್ಕೆ ಇದನೆ ಹರಿಗರ್ಪಿತವೆಂದು
ಊಳಿಗದವನಾಗು ಉತ್ತಮರ ಸಹಿತ
ಬಾಲ್ಯ ಯೌವನ ವೃದ್ದಾಪರಿಯಂತ ನೆನೆದು
ಕಾಲಕಾಲದಲ್ಲಿ ಕೊಡುವ ವಿಚಾರ ತಿಳಿ
ಶೀಲಗುಣ ಸಾಂದ್ರ ವಿಜಯವಿಟ್ಠಲರೇಯನ
ನಾಲಿಗೆಯಿಂದಲಿ ಪೊಗಳುವವನ ಮೆಚ್ಚೂ ॥ 2 ॥
ತ್ರಿವಿಡಿತಾಳ
ತುತ್ತನ್ನ ಜ್ಞಾನಿಗೆ ಕರೆದು ಮನ್ನಿಸಿ ತಾನು
ಚಿತ್ತ ಶುದ್ದನಾಗಿ ವೈಷ್ಣವ ಭಕುತಿಲಿ
ಇತ್ತು ತೃಪ್ತಿಯ ಬಡಿಸದನಾದಡೆ ಅವನಲ್ಲಿ
ತತ್ವ ತತ್ವೇಶರು ನಲವತ್ತಾರು ಸಂಖ್ಯೆ
ನಿತ್ಯದಲ್ಲಿ ಒಲಿದು ಶೋಭಿಸುವರು
ಗಾತ್ರದಲ್ಲಿ ಇದ್ದ ತತುತತು ಮಾನಿಗಳು
ಪೂರ್ತರಾಗುವರು ಅನುಭವಕೆ ಮೆಚ್ಚೀ
ಮತ್ತೆ ಪೇಳುವೆನಯ್ಯಾ ಒಬ್ಬೊಬ್ಬ ತಾತ್ವಿಕರ
ಗಾತ್ರದಲ್ಲಿ ಉಂಟು ಸಮಸ್ತರೂ
ಅತ್ತ ಅತ್ತಲಿ ಗುಣಿಸು ಅವರವರ ಅವರೊಳಗೆ
ಅತ್ಯಂತವಾಗಿ ಮನಸಿಗೆ ನಿಲಕಾದೋ
ಸತ್ಯವೆಂಬೊದೆ ಸಿದ್ಧ ಶೃತಿ ಪುರಾಣಗಳಲ್ಲಿ
ಸ್ತೋತ್ರ ಮಾಡುವದಕ್ಕೆ ಅಪರಮಿತವೋ
ಚಿತ್ತಜನಯ್ಯನ ಮೂರ್ತಿಗಳು ಅನೇಕ
ಮೊತ್ತವಾಗಿವೆ ನೋಡು ಒಂದಾನಂತಾ
ತುತ್ತಿಸಿ ಕೊಂಡಾಡಿ ಇದರಾನಂದ ಜ್ಞಾನ
ವಾರ್ತಿಯ ವಿಶೇಷ ಮಹಿಮೆಯನ್ನು
ಇತ್ತ ಎಣಿಸು ಮುಂದೆ ದಕ್ಷಿಣೋತ್ತರ ಎ -
ಪ್ಪತ್ತು ಸಾವಿರ ಮೇಲೆ ಎರಡು ಲೆಖ್ಖಾ
ಸುತ್ತಿ ಕೊಂಡಿಪ್ಪವು ನಾಡಿ ತದ್ಗತವಾಗಿ
ತತ್ವಾಭಿಮಾನಿಗಳು ನಾರಿಯರೊಡನೆ
ಭೃತ್ಯವತ್ಸಲ ಹರಿ ಇಂದಿರಾ ಸಮೇತ
ತತ್ತಳಿಸುತಲಿಹಾ ಅಪ್ರಾಕೃತನೂ
ಇತ್ತಂಡ ಭಾಗದಲ್ಲಿ ಸ್ತ್ರೀ ಪೂಂಸನಾಗಿ ಮೂ -
ವತ್ತಾರು ಸಾವಿರ ರೂಪದ್ವಯದಿ
ವಿಸ್ತರಿಸುವೆ ಬ್ರಹ್ಮಾದಿಗಳು ಈ ಪ್ರಕಾರ
ಪ್ರತ್ಯೇಕ ಪ್ರತ್ಯೇಕ ರೂಪ ಧರಿಸೀ
ಆತ್ಮಕ್ರೀಡೆ ಮಾಡುತಿಪ್ಪರು ತಮಗೆ ತಾವೆ
ಹತ್ತಿಲಿ ಸತಿಗಳು ನೋಡುತಿರೆ
ಉತ್ತಮ ಶ್ಲೋಕನು ಇದರಂತೆ ಕ್ರೀಡಿಸುವಾ
ಪ್ರತ್ಯಕ್ಷ ರೂಪಾಧಿಷ್ಠಾನದಲ್ಲಿ
ತುತ್ತು ತೆಗಿದುಕೊಂಬ ಜ್ಞಾನಿ ಈ ಪರಿಯಲ್ಲಿ
ಮುತ್ತೈದಿ ಬ್ರಾಹ್ಮರನ ಇವರನೇ ಮಾಡಿ
ಚಿತ್ತದಲಿ ಸ್ಮರಿಸಿ ಕವಳ ಮೆಲುವ ಮೆಚ್ಚಿ
ಸುತ್ತ ತಾತ್ವಿಕ ಜನರ ಸರ್ವೇಶನಾ
ನಿತ್ಯಾಯು ಉಳ್ಳನಕಾ ಒಂದೊಂದು ದಿವಸಕ್ಕೆ
ಎತ್ತ ನೋಡಿದರತ್ತ ನೋಡಿದಷ್ಟು
ಹತ್ತು ದಿಕ್ಕಿನಲ್ಲಿ ಪಂಕ್ತಿ ಪಂಕ್ತಿ ಸಾಗಿ ಕು -
ಳಿತು ಭೋಜನ ಮಾಡಿದಧಿಕವಾಗಿ
ಗಾತ್ರದೊಳಗೆ ಇನಿತು ಕುಟುಂಬಿಗಳಿಗೆ ಸ -
ರ್ವತ್ರದೊಳಗೆ ಇವನೆ ತುತ್ತು ಕೊಡುವ
ಮರ್ತ್ಯನಾದರು ಇವನ ನಡತಿ ನುಡತಿ ಬೇರೆ
ಚಿತ್ತವೆ ಹರಿಯಲ್ಲಿ ನಿಲಿಸಿಹನೋ
ಆತ್ಮ ಭೋಗದಲ್ಲಿ ತಾನು ಸುಖ ಪಡುವನು
ರಾತ್ರಿ ಹಗಲು ಪುಣ್ಯ ಸಂಪಾದಿಪಾ
ಎತ್ತಲಾದರು ಕೇಳೆ ಆವನಾದರು ಇಷ್ಟು
ಮಾತ್ರ ಗ್ರಹಿಸಿದರು ಜೀವನ್ಮುಕ್ತಾ
ಭಕ್ತಿ ಮಾತುರಬೇಕು ಕೊಡುವ ಕೊಂಬುವನಲ್ಲಿ
ಹತ್ತು ಕೋಟಿ ಹಣಾ ವೆಚ್ಚಿಸಲಾಗದು
ಕೀರ್ತಿ ಬರಬೇಕೆಂದು ನೂರಾರು ಸಾವಿರಕ್ಕೆ
ಉತ್ತಮಾನ್ನ ಉಣಿಸೇ ಬರಿದೆ ಕಾಣೋ
ಬತ್ತಲೆ ಪುರುಷನ್ನ ಇಂಥ ಮಾನವ ಪೋಗಿ
ಕತ್ತಲೆಯೊಳು ಪೋಗಿ ಅಪ್ಪಿದಂತೆ
ಸತ್ವ ಮೂರುತಿ ನಮ್ಮ ವಿಜಯವಿಟ್ಠಲರೇಯ
ತುತ್ತು ತೆಗಿದುಕೊಂಬಾ ಅಗ್ನಿ ಭೂಸುರರಲ್ಲಿ ॥ 3 ॥
ಅಟ್ಟತಾಳ
ಇದು ಕರ್ಮಾಸಕ್ತ ಮಾನವರಿಗೆ ಕೇವಲ
ಇದಕಿಂತಧಿಕವಾಗಿ ಸುಲಭವಿಪ್ಪದು ಕೇಳಿ
ಮಧುರಾನ್ನ ಉಣಿಸಿ ನಾನಾ ಬಗೆ ಪೂಜಿಸಿ
ವದನದಿಂದಲಿ ಒಳ್ಳೆ ಮಾತಾಡದಿದ್ದರೆ
ಇದರೊಳಗಾವದು ಮುಖ್ಯಾನ್ನವು ಪೇಳೊ
ಒದಗಿ ಬಂದವರಿಗೆ ಆದರವಾದಡೆ
ಹೃದಯ ಸಂತಾಪವು ಪರಿಹಾರವಾಗೋದು
ಇದೆ ಇದೆ ಮುಖ್ಯವೊ ಬಲ್ಲವರಿಗೆ ಪ್ರೀತಿ
ಪದುಮನಾಭಗೆ ಪ್ರಸಿದ್ಧ ಅನ್ನದಿಂದ
ಉದರ ತೃಪ್ತಿ ಏನೊ ಸುರರಿಗೆ ಬೇಕೇನೊ
ಹದುಳ ಬೇಕಾದಡೆ ಜ್ಞಾನ ಸಂಪಾದಿಸಿ
ಪದೊಪದಿಗಿ ಎರಡೊಂದು ಅನ್ನದಿಂದ
ಸದಮಲನಾಗಿ ತಾರತಮ್ಯಾನುಸಾರ
ವಿಧಿ ತಪ್ಪದಲೆ ಮಹಾ ಪ್ರೀತಿ ಗೈಸುವದು
ಇದರ ತರುವಾಯ ಮಿಗಿಲಾದ ಉಪಚಾರ
ಉದಕದಿಂದಲೆ ಸರ್ವ ಸಾಧನವಿದ್ದಂತೆ
ಉದುಭವಿಪುದು ಕಾಣೋ ಜ್ಞಾನವಧಿಕವಾಗಿ
ಇದನೆ ತೊರಿಯದಿರೂ ಧ್ಯಾನಂಗತನಾಗು
ಪದವಿಗೆ ಸೋಪಾನ ಹರಿ ಅನುಕಂಪನು
ಮುದದಿಂದ ಕಡಿಮೆ ಅನ್ನಂಗಳ ಇದರಂತೆ
ಪದುಮಸಂಭವನಯ್ಯಾ ಪ್ರೀತಿಯಾಗನು ಕಾಣೊ
ಯದುಕುಲೋತ್ತಮ ಕೃಷ್ಣ ವಿಜಯವಿಟ್ಠಲರೇಯಾ
ಬದಿಯಲ್ಲಿ ವಾಸವಾಗಿಪ್ಪ ಭಯನಾಶಾ ॥ 4 ॥
ಆದಿತಾಳ
ದಾನದೊಳಗೆ ದಾನ ಮಾನಸದಲಿ ಹರಿಯ
ಧ್ಯಾನ ಮಾಡಿ ಮೆಚ್ಚಿಸುವದು ಇದೆ ಮಹಾ -
ದಾನ ಕಾಣೊ ಏನೇನು ಮಾಡಿದರು ಇದಕೆ ಸರಿಯಿಲ್ಲ
ಅನಂತ ಕಾಲಕ್ಕೂ ಎಣೆ ಎಣಿಕೆ ಮಾಡಿದರೆ
ಕಾಣಿ ಮೊದಲಾದ ದ್ರವ್ಯ ಧಾವತಿ ಇಲ್ಲ
ಸಾನುಕೂಲಕೆ ಪರರ ಅರ್ಜನೆ ಮಾಡಸಲ್ಲಾ
ದೀನನಾಗಿ ದೇಶ ಸಂಚರಿಸುವದಲ್ಲಾ
ಸ್ನಾನಾದಿಗಳು ಮಾಡಿ ಬೈಲಿಗೆ ತರುವದಲ್ಲಾ
ಮಾನವಾ ಕೇಳೆಲೋ ಮಾನಸಾನ್ನದ ದಾನ
ಶ್ರೀನಾಥಗಿಂತ ಇನ್ನು ಸತ್ಪಾತ್ರ ಆವಾವನೊ
ಕ್ಷೋಣಿಯೊಳಗೆ ಇದನೆ ನಂಬು ನೆರೆನಂಬು ಮನುಜ
ಮಾಣಾದೆ ಷಡ್ವಿಧ ಅನ್ನ ಇದರ ತರುವಾಯ
ದಾನಿಗಳರಸ ನಮ್ಮ ವಿಜಯವಿಟ್ಠಲರೇಯಾ
ಜ್ಞಾನವಂತರ ಶುದ್ಧ ಮಾನಸದಲಿ ನಲಿವಾ ॥ 5 ॥
ಜತೆ
ಅನ್ನದಾನವನು ಮಾಡು ಜ್ಞಾನಪೂರ್ವಕದಿಂದ
ಚಿನ್ಮಯ ವಿಜಯವಿಟ್ಠಲನ್ನ ಮೆಚ್ಚಿಸು ನಿತ್ಯ ॥
********