ಪಾಲಿಸೋ ದಾಸರಾಯ ಗುರುವೆ ನೀ
ಪಾಲಿಸೋ ಗುರುವೆ ಪ
ಪಾಲಿಸು ನಾಗರಾಯಾಖ್ಯ ದಾಸ
ಶೀಲವರ್ಯನೆ ನೀ ಮುಖ್ಯ ||ಅಹಾ||
ಶ್ರೀಲೋಲನ ಗುಣ ಲೀಲಾಜಾಲದಿ ಆ
ಬಾಲವೃದ್ಧÀ್ದರಿಗರುಹಿ ಮೆರೆದ ಗುರು ಅ.ಪ
ಬಂದೆ ದಯಾಂಬುಧೆ ಎನ್ನ ಮನದ
ಕುಂದು ಕೊರತೆಗಳನ್ನ ಇನ್ನು
ಬಂದ ಸಂಶಯಗಳನ್ನ ಹರಿಸಿ
ಇಂದು ತೋರಿದೆ ನಂದವನ್ನ ||ಅಹಾ||
ತಂದೆ ಮುದ್ದುಮೋಹನ್ನವಿಠ್ಠಲನ್ನ ಹೃದಯಾರ
ವಿಂದದಿ ಮುದದಿ ನೋಡುವ ಗುರು 1
ಮಾರ್ಗ ಮಾರ್ಗವನೆ ಚರಿಸುತ್ತಾ ದು
ರ್ಮಾರ್ಗರ ಎದೆ ಗೆಡಿಸುತ್ತಾ ಸ
ನ್ಮಾರ್ಗಕ್ಕೆ ನೀನವರ ತರುತ್ತಾ ಸಾರ್ದೆ
ದುರ್ಗದೊಳ್ ನೀ ಚರಿಸುತ್ತಾ ||ಅಹಾ||
ದುರ್ಗಮರಾದ ದುರಾಗ್ರಹ ನಿಗ್ರಹ
ಭೋರ್ಗರೆದು ಸುಖ ಸಂಸರ್ಗವ ತೋರ್ದ ಗುರು 2
ಪರಮ ಕರುಣದಿ ಇಂದೆನ್ನಾ
ಪೊರೆದೆ ಶ್ರೀ ವೆಂಕಟೇಶಾಭಿನ್ನಾ
ಉರಗಾದ್ರಿವಾಸವಿಠ್ಠಲಾಖ್ಯನ್ನಾ
ತೋರಿಕೊಟ್ಟೆ ನೀನಂಕಿತವನ್ನಾ ||ಅಹಾ||
ಗುರು ನಿನ್ನ ಕರುಣಕ್ಕೆಣೆಯುಂಟೆ ಧರೆಯೊಳು
ಉರಗಾದ್ರಿವಾಸವಿಠ್ಠಲನ ನಿಜದಾಸ 3
****