Showing posts with label ಭಜನೆ ಮಾಡೆಲೊ vijaya vittala ankita suladi ವಿಜಯದಾಸ ಸ್ತೋತ್ರ ಸುಳಾದಿ BHAJANE MAADELO VIJAYADASA STOTRA SULADI. Show all posts
Showing posts with label ಭಜನೆ ಮಾಡೆಲೊ vijaya vittala ankita suladi ವಿಜಯದಾಸ ಸ್ತೋತ್ರ ಸುಳಾದಿ BHAJANE MAADELO VIJAYADASA STOTRA SULADI. Show all posts

Friday, 1 October 2021

ಭಜನೆ ಮಾಡೆಲೊ vijaya vittala ankita suladi ವಿಜಯದಾಸ ಸ್ತೋತ್ರ ಸುಳಾದಿ BHAJANE MAADELO VIJAYADASA STOTRA SULADI

Audio by Mrs. Nandini Sripad


 ಶ್ರೀಗುರುಶ್ರೀಶವಿಟ್ಠಲದಾಸರ ಶಿಷ್ಯರಾದ 

 ಶ್ರೀಲಕ್ಷ್ಮೀಪತಿವಿಟ್ಠಲ ದಾಸಾರ್ಯ ವಿರಚಿತ  ಶ್ರೀವಿಜಯದಾಸರ ಸ್ತೋತ್ರ ಸುಳಾದಿ 


 ರಾಗ ಹಂಸಾನಂದಿ 


 ಧ್ರುವತಾಳ 


ಭಜನೆ ಮಾಡೆಲೊ ಮನವೆ ಭಕುತಿಯಿಂದಲಿ ಸತತ

ವಿಜಯರಾಯರ ಪಾದಪದುಮಂಗಳ

ದ್ವಿಜಕುಲೋತ್ತಮ ಸುರಧೇನು ಸತ್ಕಲ್ಪತರು

ಸುಜನಚಿಂತಾಮಣಿಯು ತಾನೆನಿಸೀ

ತ್ಯಜಿಸಿ ದುರ್ವಿಷಯಗಳ ತತ್ವೋಪದಿಷ್ಟನಾಗಿ

ನಿಜಗುರುಗಳ ಕರುಣವನ್ನೆ ಪಡೆದು

ವೃಜಿನವರ್ಜಿತನಾದ ಹರಿಯ ಸನ್ಮಹಿಮೆಗಳ

ತ್ರಿಜಗದೊಳಗೆ ತುಂಬಿ ತುಳುಕುವಂತೆ

ಯಜಿಸಿ ಪ್ರಾಕೃತದಿಂದ ಎಲ್ಲ ಶಾಸ್ತ್ರಾರ್ಥ ಸಾ -

ಹಜ ಭಕ್ತಿಯಿಂದ ರಚಿಸಿ ಸತ್ಕವನವ

ಋಜುಮಾರ್ಗ ತೋರ್ಪ ಗದ್ಯ ಪದ್ಯ ಪದ ಸುಳಾದಿಗಳ

ಋಣಗಣದರಸಿನ ದಾಸರಾದ

ಪ್ರಜೆಗಳಿಗೆ ಗತಿಸಾಧನವಾಗುವಂತೆ ತೋರಿ

ಕುಜನರ ಸಂಗವನ್ನೇ ದೂರಗೈಸಿ

ಸುಜಗದೊಳಗೆ ಸತ್ಸಂತಾನ ನಿಲಿಸಿ ಸಾ -

ಮಜನಂತೆ ಚರಿಸಿ ಸದ್ಧರ್ಮದಿಂದ

ಅಜನಪಿತನ ಪಾದಾಂಬುಜದಲ್ಲಿ ನಿಲಿಸಿ ಮನ

ಭುಜಗಶಯನನ ಪುರವ ಸಾರಿದರು

ವಿಜಯಸಾರಥಿ ಲಕ್ಷ್ಮೀಪತಿವಿಟ್ಠಲರೇಯನ 

ನಿಜದಾಸರೊಲಿಮಿ ಪಡೆಯೆ ವಿಜಯವೀವನು ಹರಿಯು ॥ 1 ॥ 


 ಮಟ್ಟತಾಳ 


ಭೂಸುರನೆಂದೆನಿಸಿ ಈ ಸಮೀರ ಮತದಿ

ಭಾಸಿಸಿ ಮಾನವೀದೇಶದೊಳಗೆ ಶ್ರೀನೀ -

ವಾಸನ ಸುತನೆನಿಸಿ ಆ ಸುತುಂಗ ತಡಿ ಆ -

ವಾಸಣುಬದರಿಯಲಿ ಕ್ಲೇಶ ಕಳೆದು ಇದ್ದು

ತೋಷಿಸುತಲಿ ಹರಿಯಾದೇಶದಿಂದ ಮತ್ತೆ

ಕಾಶಿಗೈದು ಗಂಗಾ ಆ ಸರಿತದಿ ಮಿಂದು

ಆ ಸಮೀಪದಲ್ಲಿ ಮೀಸಲಿಂದ ಹರಿಯಾ

ಧ್ಯಾಸದಲಿರುತಿರಲು ಶ್ರೀಶನಾಜ್ಞೆಯಿಂದ

ಆ ಸುರಮುನಿ ಪುರಂದರದಾಸರೂ ಬಂದು

ಈ ಸುಮನಸಗುಪದೇಶ ಅಂಕಿತವಿತ್ತು

ವಾಸರೋಸರ ಶ್ರೀನಿವಾಸ ವಿಜಯವಿಟ್ಠ -

ಲೇಶನ ಭಜಿಸೆಂದು ಶಾಸನವ ಮಾಡಿ ಸಂ -

ತೋಷದಿಂದ ಹರಿಯಾ ದಾಸ್ಯವನ್ನೆ ಇತ್ತು -

ಲ್ಹಾಸದಿ ಪೋಗಲು ವಾಸವ ಮೊದಲಾದ

ಆ ಸಮಸ್ತ ಸುರರು ಸೋಸಿಲಿ ಶಿರದೂಗಿ

ಲೇಶ ಕಾಣೆವಿನ್ನು ಈ ಸುಭಾಗ್ಯಕೆನುತಾ

ವಾಸುದೇವನ ಮಹಿಮಿ ವಿಶೇಷಗಳಹುದೆಂದು

ದಾಸವರದ ಲಕ್ಷ್ಮೀಪತಿವಿಟ್ಠಲನಂಘ್ರಿ ಉ -

ಪಾಸಿಸಿದರು ಹರಿದಾಸ್ಯವನ್ನೇ ಪಡೆದು ॥ 2 ॥ 


 ತ್ರಿವಿಡಿತಾಳ 


ಧರೆಯೊಳು ಗುರುಗಳು ನರಹರಿ ಮಹಿಮಿಯಾ

ವರ ಶ್ರುತಿ ಸ್ಮೃತಿ ಸಮ್ಮತಿಯಿಂದ ಬದ್ಧವಾದ

ಪರಿಮಿತಾ ಸಪಾದೀರೆರಡು ಲಕ್ಷವನು ವಿ -

ಸ್ತರಿಸಿದ ತಿಳಿದು ಅವರಾಜ್ಞೆಯಿಂದಾ

ಉರವರೀತ ತ್ರಿಪಾದ ಪೂರ್ತಿಗೈಸಿ ಎಲ್ಲವನ್ನು

ಬೆರಸಿ ಐದುಲಕ್ಷವೆಂದೆನಿಸೀ

ಗುರುಶಿಷ್ಯ ಭಾವಾವು ನರರಿಗೆ ಅರುಹಲು

ಪರಿಪೂರ್ಣಗೈದು ಪಾವನನೆನಿಸಿ

ಗುರುವಂತರ್ಗತನಾದ ಹರಿಗೆ ಅರ್ಪಿಸಿ ಭಕ್ತಿ

ಭರಿತನಾಗಿ ಮತ್ತೆ ಇಳಿಯೊಳಗೆ

ದುರುಳಾ ಜನರಿಗೆ ಗೋಚರಿಸದಂದದಲಿ  ಸಜ್ಜ -

ನರಿಗೆ ಸನ್ಮಾರ್ಗವನ್ನೆ ತೋರಿ

ಹರಿಯೇ ಸರ್ವೋತ್ತಮಾ ಮರುತ ಜಗದ್ಗುರು

ತರತಮ ಪಂಚಭೇದಗಳು ಸಿದ್ಧಾ

ಸರಸಿಜೋದ್ಭವ ಮುಖ್ಯಾ ಸುರಗಣರೆಲ್ಲ ಕಿಂ -

ಕರರು ಶ್ರೀಹರಿಗೆಂಬಾ ಪರಿ ಅರುಹೀ

ಹಿರಿದಾದಾ ಕವನವು ವಿರಚಿಸಿದ್ಯೋ ಎಲ್ಲಾ

ಧರಿಯಾ ಒಳಗೆ ತುಂಬಿ ತುಳುಕುತಿದಕೋ

ಹರಿದಾಸರೊಳಗಾರು ಸರಿಗಾಣೆ ಸರಿಗಾಣೆ

ನರರೆನ್ನಬಹುದೇನೋ ಸುರರಲ್ಲದೆ

ಕರುಣಸಾಗರ ಲಕ್ಷ್ಮೀಪತಿವಿಟ್ಠಲನ ದಿವ್ಯ -

ಚರಣಗಳರ್ಚಿಸಿದ ಪರಮ ಭಾಗ್ಯವಂತ ॥ 3 ॥ 


 ಅಟ್ಟತಾಳ 


ವಿಕಸಿತವಾಗಿವರ ಮುಖಕಮಲದಲಿಂದ

ಸಕಲ ಶಾಸ್ತ್ರಾರ್ಥ ಸುಯುಕುತಿಯಿಂದಲಿ ಪೇಳ್ದೆ

ಸುಕೃತ ಬಣ್ಣಿಪರ ಭಾಗ್ಯಕ್ಕೆ ಎಣೆಗಾಣೆನೊ

ಭಕುತಿಲಿ ಪಠಿಸುವ ಶಕುತರಘವು ಗಜ -

ಭುಕುತ ಕಪಿತ್ಥದೋಲ್ ವ್ಯಕುತವಾಗದಲೆ ಪಾ -

ವಕ ಪೊಕ್ಕ ತೂಲದ ನಿಕಟದಂತಾಗೋದು

ಕಕುಲಾತಿಯಿಂದ ಪ್ರಾಕೃತವೆಂದು ಅವಮ -

ನಕೆ ತರದಿಹ ಜನ್ಮಧಿಕುವೆನಿಸುವದವನ

ಅಕಟ ಅವಗೆ ನರಕಪ್ಪುವದೆ ನಮ್ಮ

ಲಕುಮಿಪತಿಯ ಮಹಿಮಿ ಯುಕುತವಾದ ಪ್ರಾ -

ಯುಕುತ ಸಂಸ್ಕೃತವೆಂಬಾಧಿಕವೇನು ತಿಳಿಯೆ ಶ್ರೀ -

ಸುಖಮುನಿ ಇವರ ಸದ್ಭಕುತಿಗೆ ಮೆಚ್ಚಿ ಪ್ರೇ -

ರಕನಾಗಿ ಸತತ ಸಮ್ಮುಖದಿ ತೋರಿಕೊಂಡು

ಯುಕುತಿ ಸದ್ಭಕುತಿ ವೀರಕುತಿ ಇತ್ತದರಿಂದ

ಪ್ರಕಟಿಸಿದಹುದೆಂದು ಸಚಲರು ತಿಳಿವದು

ಮುಕುತೀಶ ಲಕ್ಷ್ಮೀಪತಿವಿಟ್ಠಲನ ನಿಜ -

ಭಕುತರಿಗೆ ಸರಿ ಏನೋ ಮುಕುತಿವಂತರು ತಿಳಿಯೆ ॥ 4 ॥ 


 ಆದಿತಾಳ 


ಇವರ ಸ್ಮೃತಿಯೆ ಸ್ನಾನ ಇವರ ಸ್ಮೃತಿಯೆ ಮೌನ

ಇವರ ಸಂಸ್ಮೃತಿಯಿಂದ ದೊರೆವದು ಹರಿಧ್ಯಾನ

ಇವರ ಸದ್ಭಕುತಿಯಿಂದ ಅವನಿಯೊಳಗೆ ಅವ

ದಿವಸದೊಳೊಂದು ಕ್ಷಣ ತವಕದಿಂದಲಿ ಭಜಿಸೆ

ಅವನೇವೆ ಜಗದಿ ಪಾವನನೆಂದು ಕರೆಸುವ

ಇವರ ಕರುಣ ಪಡಿಯೆ ಕವಿಯೆಂದೆನಿಸುವನು

ಪವನನೊಡಿಯ ಲಕ್ಷ್ಮೀಪತಿವಿಟ್ಠಲನು ವೊಲಿದು

ಇವರಿಂದ ತನ್ನ ದಾಸ್ಯ ಅವನಿಯೊಳ್ ಕೊಡಿಸುವ ॥ 5 ॥ 


 ಜತೆ 


ವಿಜಯದಾಸರ ಪಾದರಜವ ಸೋಕಿದ ನರನ

ತ್ರಿಜಗದೊಡಿಯ ಲಕ್ಷ್ಮೀಪತಿವಿಟ್ಠಲ ಪೊರೆವನು ॥ 


(ಕ್ರೋಧಿನಾಮ ಸಂವತ್ಸರ , ಮಾಘ ಶುದ್ಧ ಅಷ್ಟಮಿಯಂದು ಶ್ರೀಗುರುಗಳು ಪ್ರೇರಿಸಿದಂತೆ ಬರೆದದ್ದು.)

****