Showing posts with label ಆಲದೆಲೆಯಲ್ಲಿ ಮಲಗಿದಂದು shree krishna ankita suladi ಸುಷುಪ್ತಿ ಸುಳಾದಿ AALADELEYALLI MALAGIDINDU SUSHUPTI SULADI. Show all posts
Showing posts with label ಆಲದೆಲೆಯಲ್ಲಿ ಮಲಗಿದಂದು shree krishna ankita suladi ಸುಷುಪ್ತಿ ಸುಳಾದಿ AALADELEYALLI MALAGIDINDU SUSHUPTI SULADI. Show all posts

Monday 9 December 2019

ಆಲದೆಲೆಯಲ್ಲಿ ಮಲಗಿದಂದು shree krishna ankita suladi ಸುಷುಪ್ತಿ ಸುಳಾದಿ AALADELEYALLI MALAGIDINDU SUSHUPTI SULADI

Audio by Mrs. Nandini Sripad

ಶ್ರೀ ವ್ಯಾಸರಾಯ ವಿರಚಿತ     ಸುಷುಪ್ತಿ ಸುಳಾದಿ 

 ರಾಗ ನೀಲಾಂಬರಿ 

 ಧ್ರುವತಾಳ 

ಆಲದೆಲೆಯಲ್ಲಿ ಮಲಗಿದಂದು ನಿನ್ನ
ಲಾಲಿ ಎಂದು ಲಾಲಿಸಿದರಾರೈ 
ಮತ್ತೆ ಕ್ಷೀರಾಬ್ಧಿಯಲ್ಲೊರಗಿದಂದು ನಿನ್ನ 
ತೃವ್ವಿಯೆಂದು ತೂಗಿದರಾರೈ 
ಆ ಜಲಧಿ ದರ್ಭಶಯನದಲ್ಲಿ ನಿನ್ನ 
ಜೋ ಜೋ ಎಂದು ಪಾಡಿದರಾರೈ
ಆ ರಮೆ ಸ್ತುತಿ ಮಾಡಿ ಪೊಗಳುವಂತೆ
ಶ್ರೀರಮಣ ನಿನ್ನ ಪಾಡಬಲ್ಲೇನೇ
ನಾರದ ಮಹತೀಯ ಮೀಟುವಂತೆ ಸ -
ಮೀರಜ ಸ್ವರವೆತ್ತಿ ಪಾಡುವಂತೆ
ಶ್ರೀರಮಣ ನಿನ್ನ ಪೊಗಳಬಲ್ಲೆನೆ ನಾನು
ಕಣ್ಣ ಮುಚ್ಚು ಪಾಲೂಡುವೆನೆಂತೆನೆ ಗೋಪಿ
ಕಣ್ಣು ಮುಚ್ಚಿ ಕೃಷ್ಣ ಕಿವಿಯಾಂತು ನಗುತಿದ್ದ ॥ 1 ॥

 ಮಠ್ಯತಾಳ 

ತನ್ನುರದ ಮೋಹದರಸಿಯ 
ಚನ್ನ ಚೆಲುವ ಸರಸಗಳಿಂದ
ಇನ್ನು ನಿದ್ರೆ ಬಾರದೆ ನಿನ್ನ ಪೊಕ್ಕಳ ಬೊಮ್ಮನ 
ನಾಲ್ಕು ವದನದ ವೇದ ಘೋಷಣಗಳಿಂದ
ಇನ್ನು ನಿದ್ರೆ ಬಾರದೆ ನಿನ್ನುದರದ
ಜಗದುರುಪಿನಿಂದ ಇನ್ನು ನಿದ್ರೆ ಬಾರದೆ 
ನಿನ್ನ ಭಕುತರು ಕರೆವ ಚೀರಾಟದಿಂದ
ಇನ್ನು ನಿದ್ರೆ ಬಾರದೆ 
ಇನ್ನಿತೆಂಬ ಗೋಪಿದೇವಿಯ ಮಾತಿಗೆ
 ಕೃಷ್ಣ ನಾಚಿ ಕಣ್ಣ ಮುಚ್ಚಿದ ॥ 2 ॥

 ರೂಪಕತಾಳ 

ಶುಭ ಗುಣಂಗಳ ಖಣಿಯೆ ಜೋ ಜೋ
ಭಕುತರ ಚಿಂತಾಮಣಿಯೆ ಜೋ ಜೋ
ಮುನಿ ಹೃದಯಾಂಬುಜ ಹಂಸ ಜೋ ಜೋ
ಸರ್ವ ದೇವೋತ್ತಂಸನೆ ಜೋ ಜೋ
ಮುಕುತಿ ಕಾರಣ ಪುಣ್ಯನಾಮನೆ ಜೋ ಜೋ
 ಶ್ರೀಕೃಷ್ಣ ವೈಕುಂಠಧಾಮನೆ ಜೋ ಜೋ ॥ 3 ॥

 ಝಂಪೆತಾಳ 

ಪರಬೊಮ್ಮನೆ ಎನ್ನ ತಮ್ಮ ಬಾ ಎಂಬ
ಅಜನ ತಂದೆ ಎನ್ನ ಅಪ್ಪ ಬಾ ಎಂಬ
ಹರಿಯೆ ನೋಡೆಲೊ ಎನ್ನ ಮರಿಯೆ ಮುದ್ದು ಎಂಬ
ಗೋಪಿ ದೇವಿಯ ನೋಂಪು ತಾನೆಂತೊ ಇದಕೆ 
ಬಂದಪ್ಪಿ ಮುದ್ದಿಸಿ ಒಲಿವ ಮುದ್ದು ಮೈಯ ಕೃಷ್ಣ 
ನಿನ್ನ ದಯ ತಾನೆಂತೆಂತೊ ॥ 4 ॥

 ತ್ರಿಪುಟತಾಳ 

ಶ್ರೀ ಲೋಲುಪ ಲಾಲಿ ಗೋಪಾಲಕ ಜಾರ
ಲಾಲಿ ಮೂಲಕಾರಣ ಮುಕ್ತರೊಡಿಯನೆ ಲಾಲಿ 
ಗೋಪಾಲ ಬಾಲ ಶ್ರೀಕೃಷ್ಣಯ್ಯನೆ ಲಾಲಿ ॥ 5 ॥

 ಅಟ್ಟತಾಳ 

ಒಮ್ಮೆ ನೆನೆವರ ಋಣದ ಚಿಂತೆ
ಆವಾಗ ಭಕುತರು ಕರೆದಾರೆಂಬ ಚಿಂತೆ
ನಿರುಪಾಧಿಕ ಭಕ್ತರ ಹಂಗಿನ ಚಿಂತೆ
ತನ್ನ ನಿಜವೆಲ್ಲಿ ಅರಿವರೊ ಎಂಬ ಚಿಂತೆ
ಇನ್ನಿತು ಚಿಂತೆಯುಳ್ಳ ನಿನಗೀ ನಿದ್ರೆ -
ಯಿನ್ನೂ ಬಾರದೆ ಎಂದರೆ ಕೃಷ್ಣ ನಗುವ ॥ 6 ॥

 ಆದಿತಾಳ 

ಬಾಲಲೀಲೆಯು ಬೇಕಾದರೆ 
ಮೂಲೋಕ ಬಾಯೊಳು ತೋರುವನೆ
ಮಕ್ಕಳಾಟಿಕೆ ಬಲ್ಲಿದನಾದಡೆ 
ರಕ್ಕಸರಿಗೆಲ್ಲ ಕಕ್ಕಸನಪ್ಪನೆ 
ಚಿಕ್ಕತನವು ನಿನಗಳವಡುವದೆ ಎನ್ನ
ದಿಕ್ಕು ದೆಶೆಯು ಶ್ರೀಕೃಷ್ಣ ರಕ್ಷಿಸೊ ತಂದೆ ॥ 7 ॥

 ಜತೆ 

ಚನ್ನ ಕೃಷ್ಣನ ಮುದ್ದಿಗೆ ಗೋಪ
ಕನ್ನೆಯರೆಲ್ಲರು ತನ್ಮಯವಾಗಿಪ್ಪರು ॥
***********