Showing posts with label ಆರು ನಿನಗಿದಿರಧಿಕ ಧಾರುಣಿಯೊಳಗೆ ankita shreekrishna madhwacharya stutih. Show all posts
Showing posts with label ಆರು ನಿನಗಿದಿರಧಿಕ ಧಾರುಣಿಯೊಳಗೆ ankita shreekrishna madhwacharya stutih. Show all posts

Thursday 18 February 2021

ಆರು ನಿನಗಿದಿರಧಿಕ ಧಾರುಣಿಯೊಳಗೆ ankita shreekrishna madhwacharya stutih

 ಶ್ರೀಮಚ್ಚಂದ್ರಿಕಾಚಾರ್ಯರ ಅದ್ಭುತ ಕೃತಿ....

ಶ್ರೀಮದಾಚಾರ್ಯರ ಸ್ಮರಣೆಯ ಪದ....


ಆರು ನಿನಗಿದಿರಧಿಕ ಧಾರುಣಿಯೊಳಗೆ 

ಸಾರಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ....


ಆರೊಂದು ವೈರಿಗಳ ತರಿದು ವೈಷ್ಣವರಿಗೆ 

ಆರೆರಡು ಊರ್ಧ್ವಪುಂಢ್ರಗಳನಿಡಿಸಿ

ಆರುಮೂರರ ಮೇಲೆ ಮೂರಧಿಕ ಕುಮತಗಳ

ಬೇರೊರಸೆ ಕಿತ್ತೊಮ್ಮೆ ಬಿಸುಟಿದಂಥ ಧೀರ 


ಆರುನಾಲ್ಕು ತತ್ವದಭಿಮಾನಿಗಳಿಗೊಡೆಯ

ಮಾರುತನ ಮೂರನೆಯ ಅವತಾರನೆ 

ಆರೈದು ಮೇಲೆರಡು ಅಧಿಕ ಲಕ್ಷಣವುಳ್ಳ

ಮೂರುತಿಯೊಳೊಪ್ಪುತಿಹ ಮುನಿವರೇಣ್ಯ....


ಆರಾರುಮೇಲೊಂದು ಅಧಿಕಲೆಕ್ಕದ ಗ್ರಂಥ-

ಸಾರವನು ರಚಿಸಿ ಸಜ್ಜನಿರಿಗಿತ್ತು 

ಪಾರಮಾರ್ಥಿಕಭೇದಪಂಚಕವ ಸ್ಥಾಪಿಸಿದೆ 

ಧೀರ ಶ್ರೀಕೃಷ್ಣನ ದಾಸರೊಳು ದೊರೆಯೆ...

***


ವ್ಯಾಖ್ಯಾನ : ಶ್ರೀಮತಿ. ಪದ್ಮ ಶಿರೀಷ

ಶ್ರೀ ಹರಿವಾಯುಗುರುಗಳ ಅನುಗ್ರಹದಿಂದ ಅರ್ಥಾನುಸಂಧಾನದ ಸಣ್ಣ ಪ್ರಯತ್ನ 👇🏽👇🏽👇🏽👇🏽👇🏽


ಆರು ನಿನಗಿದಿರಧಿಕ ಧಾರುಣಿಯೊಳಗೆ


   ಶ್ರೀಮಚ್ಚಂದ್ರಿಕಾಚಾರ್ಯರು   ಈ ಪಲ್ಲವಿಯಲ್ಲಿ ಮೊದಲು ಭಗವಂತನನ್ನು ಸ್ತೋತ್ರ ಮಾಡಿ ನಂತರ ಜೀವೋತ್ತಮರಾದ ಶ್ರೀಮದಾಚಾರ್ಯರನ್ನ ಸ್ತೋತ್ರಮಾಡಿದ್ದಾರೆ - 


   ಶ್ರೀಮದ್ಭಾಗವತದಲ್ಲಿ ತತ್ತ್ವ ಎಂಬ ಶಬ್ದಕ್ಕೆ ಅರ್ಥವನ್ನು ಹೇಳುವ ಸಂದರ್ಭದಲ್ಲಿ -----


   ವದಂತಿ ತತ್ತತ್ತ್ವವಿದಸ್ತತ್ವಂ ಯಜ್ಞಾನಮದ್ವಯಮ್ /

ಬ್ರಹ್ಮೇತಿ ಪರಮಾತ್ಮೇತಿ ಭಗವಾನಿತಿ ಶಬ್ದ್ಯತೇ //


ತತ್ತ್ವವನ್ನು ತಿಳಿದ ಕಪಿಲಾದಿಗಳು ಸಮಾಧಿಕರಹಿತವಾದ ಯಾವದು ಜ್ಞಾನರೂಪವೋ, ಯಾವುದು ಸರ್ವದಾ ಏಕಪ್ರಕಾರವಾಗಿ ಇರುವುದೋ ಅದು ತತ್ತ್ವವೆಂದು ಕರೆಯಲ್ಪಡುತ್ತದೆ. ಶ್ರುತಿಗಳಲ್ಲಿ ಈ ತತ್ತ್ವವೆಂದು ಕರೆಸಿಕೊಳ್ಳಲ್ಪಡುವ, ಪರಮಾತ್ಮನನ್ನು ಜಿಜ್ಞಾಸೆ ಮಾಡು ಎಂದು ಹೇಳಲಾಗಿದೆ.( ಓಂ ಅಥಾತೋ ಬ್ರಹ್ಮಜಿಜ್ಞಾಸಾ ಓಂ) ಎನ್ನುವುದರ ಮುಖಾಂತರ...


ಈ ತತ್ತ್ವವೇ ಬ್ರಹ್ಮ,  ಪರಮಾತ್ಮ, ಭಗವಂತ ಎಂಬ ಶಬ್ದಗಳಿಂದ ಕರೆಸಿಕೊಳ್ಳಲ್ಪಡುವದರಿಂದ ಪರಮಾತ್ಮನು ಅದ್ವಯ ಎನಿಸಿಕೊಳ್ಳುವನು . ಶ್ರೀಹರಿಗೆ ಸಮರು ಅಧಿಕರು ಯಾರೂ ಇಲ್ಲ ಹಾಗೂ ಕಾಲತ್ರಯಗಳಲ್ಲಿ ಯಾವುದೇ ಕಾರಣದಿಂದ ವ್ಯತ್ಯಾಸವಾಗದಿರುವದರಿಂದ, ಪರಮಾತ್ಮನಿಗೆ ಸಮರು ಹಾಗೂ ಅಧಿಕರು ಯಾರೂ ಇಲ್ಲವಾದ್ದರಿಂದ ಭಗವಂತನನ್ನು ತತ್ತ್ವ ಎಂದು ಕರೆಯುತ್ತಾರೆ...


( ಸೋsದ್ವಯಃ ಪುರುಷಸ್ತಸ್ಮಾನ್ ಸಮೋ ನಾಧಿಕೋ ಹ್ಯತಃ ಇತಿ ಮಹಾಸಂಹಿತಾಯಾಮ್)


 ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರು ಶ್ರೀಮದಾಚಾರ್ಯರ ಸ್ತೋತ್ರವನ್ನು ಮಾಡಬೇಕಾದರೇ ಮೊದಲು ಶ್ರೀ ಆಚಾರ್ಯರನ್ನ ಪರಮ ಪ್ರೀತ್ಯಾಸ್ಪದನಾದ ಪರಮಾತ್ಮನನ್ನು ಸ್ತೋತ್ರ ಮಾಡುವದರಿಂದ ಶ್ರೀಮದಾಚಾರ್ಯರ ಪರಮಾನುಗ್ರಹ ಆಗುವುದು ಎನ್ನುವ ಸಿದ್ಧಾಂತವನ್ನು ಹೇಳುವದಕ್ಕಾಗಿ ಇಲ್ಲಿ ಪಲ್ಲವಿಯಲ್ಲಿ ಆರು ನಿನಗಿದಿರಧಿಕ ಧಾರುಣಿಯೊಳಗೆ  

ಆರು - ಯಾರು, 

ನಿನಗಿದಿರಧಿಕ = ನಿನಗೆ ಸಮ ಮತ್ತು ಉತ್ತಮರು ? ಯಾರೂ ಇಲ್ಲ, ಹೀಗಾಗಿ ನೀನು ಸಮಾಧಿರಧಿಕರಹಿತನು ಎನ್ನುವ ಶ್ರೀಮದ್ಭಾಗವತದ ಉಕ್ತಿಯ ಅರ್ಥವನ್ನೇ ಈ ಪಲ್ಲವಿಯ ಮುಖಾಂತರ ತಿಳಿಸಿ ಹಾಗೆಯೇ ಜೀವೋತ್ತಮರಾದ ಶ್ರೀಮದಾಚಾರ್ಯರಿಗೆ ವಾಯುದೇವರ ನಂತರ ಬರುವ ಸಕಲ ಜೀವರಾಶಿಗಳಿಂದ ವಾಯುದೇವರು ಸಮಾಧಿಕರಹಿತರು ಎಂದು ಶ್ರೀಮದಾಚಾರ್ಯರ ಸ್ತುತಿಯನ್ನೂ ಈ ಪಲ್ಲವಿಯ ಮುಖಾಂತರ ಮಾಡಿದ್ದಾರೇ......


 ಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ..... 


    ಸಾರಃ ಸರತಿ ಮೋಕ್ಷಂ ಗಚ್ಛತೀತಿ ಸಾರಃ / "ಸೃ ಸರಗತ್ಯೋರಿತ್ಯಸ್ಮಾದ್ಧಾತೋಃ //

 ಸಾರ -  ಸರ - ಗತಿ  ಅರ್ಥಗಳಲ್ಲಿರುವ ಸೃ ಧಾತುವಿನಿಂದ ಹುಟ್ಟಿರುವದರಿಂದ, ದುರ್ಲಭವಾದ ಮೋಕ್ಷಕ್ಕೆ ಕಾರಣವಾದ ಶ್ರೀಹರಿಯ ಪ್ರಸನ್ನತೆಯನ್ನು ದೊರಕಿಸಿಕೊಡುವ ವೇದಾದಿ ಸಚ್ಛಾಸ್ತ್ರಗಳ ತಾತ್ಪರ್ಯಗ್ರಂಥಗಳನ್ನು ರಚಿಸಿ ಕರುಣಿಸಿರುವ ಸರ್ವಜ್ಞರೆಂದು ಪ್ರಸಿದ್ಧರಾದ ಜ್ಞಾನ-ಭಕ್ತ್ಯಾದಿಗಳೆಂಬ ಸಂಪದಗಳಿಂದ ಪೂರ್ಣರಾದವರು ನೀವು ಎಂದು ಈ ಅನುಪಲ್ಲವಿಯ ಮುಖಾಂತರ ಶ್ರೀಮಚ್ಚಂದ್ರಿಕಾಚಾರ್ಯರು, ಶ್ರೀಮದಾಚಾರ್ಯರನ್ನು ಸ್ತುತಿಸಿದ್ದಾರೆ....


ಆರೊಂದು ವೈರಿಗಳ = ಏಳು ಶತ್ರುಗಳನ್ನು (6+1=7) ಕುಲ, ಯೌವನ, ಸ್ತ್ರೀ, ಅನ್ನ, ವಿದ್ಯಾ, ಉದ್ಯೋಗವೆಂಬ ಮದಗಳೇ ವೈರಿಗಳು. ಇವು ಮೋಕ್ಷಮಾರ್ಗದ ವಿರೋಧಿಗಳಾಗಿರುವದರಿಂದ ಆರೊಂದು ವೈರಿಗಳು ಅಂದಿದ್ದಾರೆ...


ವೈಷ್ಣವರಿಗೆ ಆರೆರಡು ಊರ್ಧ್ವಪುಂಡ್ರಗಳಿನಿಡಿಸಿ-- ಊರ್ಧ್ವಪುಂಢ್ರಗಳನ್ನು ಧರಿಸುವದರಿಂದ ಸುಷುಮ್ನಾನಾಡಿಯ ಚಲನೆಗೆ ಚಾಲನೆ ದೊರೆತು ಕೊನೆಗೆ ನಮ್ಮ ಪ್ರಾಣವು ಬ್ರಹ್ಮರಂಧ್ರದಿಂದಲೇ ಹೋಗವಂತೆ ಪರಮಾತ್ಮನು ಅನುಗ್ರಹಿಸುವದರಿಂದ ಭಗವದ್ರೂಪಗಳ ಸನ್ನಿಧಾನವಿರುವ ಹನ್ನೆರಡು ಊರ್ಧ್ವಪುಂಢ್ರಗಳನ್ನು ವಿಷ್ಣುಭಕ್ತರಿಗೆ ಅಂದರೆ ಮುಕ್ತಿಯೋಗ್ಯ ಜೀವರಿಗೆ  ದ್ವಾದಶ ನಾಮಧಾರಣೆಯ ದೀಕ್ಷೆಯನ್ನಿತ್ತು ,


ಆರುಮೂರರಮೇಲೆ ಮೂರಧಿಕ -- (6×3=18+3=21 ) 21 ಕುಮತಗಳು.... 1)ಭಾರತೀವಿಜಯ. 2)ಸಂವಿದಾನಂದ .3)

 ಬ್ರಹ್ಮಘೋಷ. 4)

 ಶತಾನಂದ. 5 ಉದ್ಧತ. 6)

 ವಿಜಯ. 7) ರುದ್ರಭಟ್ಟ. 8) ವಾಮನ. 9) ಯಾದವ ಪ್ರಕಾಶ. 10) ರಾಮಾನುಜ. 11) ಭತೃಪ್ರಪಂಚ. 12) ದ್ರವಿಡ. 13) ಬ್ರಹ್ಮದತ್ತ. 14) ಭಾಸ್ಕರ. 15) ಪಿಶಾಚ. 16) ವೃತ್ತಿಕಾರಕ. 17) ವಿಜಯಭಟ್ಟ. 18) ವಿಷ್ಣುಕ್ರಾಂತ. 19) ವಾದೀಂದ್ರ. 20) ಮಾಧವದಾಸ. 21) ಸಂಕರ... 


ಬೇರೊರಸೆ ಕಿತ್ತೊಮ್ಮೆ ಬಿಸುಟಿದಂಥ ಧೀರ ಅಂದರೇ ಮೂಲ ಸಹಿತ ಪ್ರಮಾಣ ಪುರಃಸರವಾಗಿ ಖಂಡಿಸಿದಂತಹ ಜ್ಞಾನಿ ಮತ್ತು ಧೈರ್ಯವಂತರು ನೀವು ಅಂತ ಸ್ತುತಿ ಮಾಡ್ತಾರೆ ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರು ...


ಇದನ್ನೇ ನಮ್ಮ ಮಾನವೀ ಪ್ರಭುಗಳು ....

ಕ್ಷಿತಿಯೊಳಗೆ ಮಣಿಮಂತ ಮೊದಲಾ-

ದತಿದುರಾತ್ಮರು ಒಂದಧಿಕವಿಂ-

ಶತಿಕುಭಾಷ್ಯವ ರಚಿಸೆ ನಡುಮನೆ ಎಂಬ ಬ್ರಾಹ್ಮಣನ |

ಸತಿಯ ಜಠರದೊಳವತರಿಸಿ ಭಾ-

ರತಿರಮಣ ಮಧ್ವಾಭಿಧಾನದಿ

ಚತುರದಶಲೋಕದಲಿ ಮೆರೆದಪ್ರತಿಮ ಗೊಂದಿಸುವೆ // ಎಂದು ಸ್ತುತಿಸಿದ್ದಾರೆ...


ಇದನ್ನು ಶ್ರೀ ಪ್ರಾಣೇಶವಿಠಲರು ತಮ್ಮ ಪದದಲ್ಲಿ 

ಕಲಿಯುಗದಿ ಮುನಿಯಾಗಿ ಪ್ರಾಣೇಶವಿಠಲ

ನೊಲುಮೆಯನು ಚೆನ್ನಾಗಿ ಗಳಿಸುತಲಿ ಸೂತ್ರಗ

ಳೊಲಿಸಿ ಬಹು ಸ್ಪಷ್ಟವಾಗಿ ಗ್ರಂಥಗಳ ವಿರಚಿಸಿ

ಹಲವು ಮತಗಳ ನೀಗಿದಂಥ ಸುನಿಯೋಗಿ ಅಂತಾರೆ.. ಹಾಗೇ .... ಮತ್ತೆ  ಶ್ರೀ 


 ಗುರುರಾಮವಿಠಲರು

ಇಪ್ಪತ್ತೊಂದು ಭಾಷ್ಯಗಳಾ ಖಂಡಿಸೀ

ಸರ್ಪಶಯನ ಸರ್ವೋತ್ತಮನೆಂದು ಸಾರಿಸಿ

ಅಪ್ಪ ಗುರುರಾಮವಿಠಲನ

ತಪ್ಪಾದೆ ಪೂಜಿಸುತಿರ್ಪ ಅಂತಾರೆ


ಆರು ನಾಲ್ಕು ತತ್ವದಭಿಮಾನಿಗಳಿಗೆ ಒಡೆಯ .....


   1) ಆದ್ಯಮವ್ಯಕ್ತಂ - ತದಭಿಮಾನಿನ್ಯೌ ಅಮುಖ್ಯತಯಾ ಸರಸ್ವತಿ ಭಾರತ್ಯೌ / ನನು ಅವ್ಯಕ್ತತತ್ವಾತ್ಮಾ ದೇವೀ ಲಕ್ಷ್ಮೀರುದಾಹೃತೇತಿ ಶಾಂಡಿಲ್ಯ ಶ್ರುತ್ಯುಕ್ತತ್ವಾದವ್ಯಕ್ತಸ್ಯ ರಮಯಾಃ ಮುಖ್ಯಾಭಿಮಾನಿತ್ವಾತ್ತಾಂ ವಿಹಾಯ //


ಮೊದಲನೆಯದು ಅವ್ಯಕ್ತತತ್ವ, ಈ ಅವ್ಯಕ್ತ ತತ್ವಕ್ಕೆ ಅಮುಖ್ಯವಾಗಿ ಅಭಿಮಾನಿಗಳು ಭಾರತಿ ಹಾಗೂ ಸರಸ್ವತಿಯರು. ಶ್ರೀಲಕ್ಷ್ಮಿಯು ಅವ್ಯಕ್ತ ತತ್ವಕ್ಕೆ ಮುಖ್ಯ ಅಭಿಮಾನಿ ಎಂದು ಶಾಂಡಿಲ್ಯ ತತ್ವದಲ್ಲಿ ಹೇಳಿದ್ದಾರೆ...


 ೨) ಎರಡನೆಯದು ಮಹತ್ತತ್ವ .


 ದ್ವಿತೀಯಂ ತು  ಮಹತ್ತತ್ವಂ / ತದಭಿಮಾನಿನೌ ಬ್ರಹ್ಮ ವಾಯು ತದುಕ್ತಂ / ಬ್ರಹ್ಮ ವಾಯೂ ಮಹಾತ್ಮನೌ ಮಹತ್ತತ್ವ ನಿಯಾಮಕಾವೀತಿ ಶಾಂಡಿಲ್ಯೇ ---- 

ಮಹತ್ತತ್ವಕ್ಕೆ ಬ್ರಹ್ಮ- ವಾಯು ಇವರು ಅಭಿಮಾನಿಗಳು. ಮಹಾತ್ಮರಾದ ಬ್ರಹ್ಮವಾಯುಗಳು ಮಹತ್ತತ್ವಾಭಿಮಾನಿಗಳು ಎಂದು ಶಾಂಡಿಲ್ಯ ತತ್ವದ ವಚನವಿದೆ....


3) ತೃತೀಯಮಹಂಕಾರಮಿತಿ / ತದಭಿಮಾನಿನಃ ಗರುಡಶೇಷ ರುದ್ರಾ ಇತಿ / ತದುಕ್ತಂ / "ಶೇಷವೀಂದ್ರ ಮೃಡಾಹ್ಯೇತೇ ಹ್ಯಹಂತತ್ವಾಭಿಮಾನಿನ ಇತಿ ಶಾಂಡಿಲ್ಯೇ // ..... ಮೂರನೆಯದ ಅಹಂಕಾರ ತತ್ವ --- ಗರುಡ ಶೇಷ ರುದ್ರರು ಅಹಂಕಾರ ತತ್ವಾಭಿಮಾನಿಗಳು ಎಂಬ ಶಾಂಡಿಲ್ಯ ವಚನದಂತೆ ಗರುಡ -ಶೇಷ - ರುದ್ರರು ಅಹಂಕಾರ ತತ್ವಾಭಿಮಾನಿಗಳಾಗಿದ್ದಾರೆ....


 4) ಚತುರ್ಥಂತು ಮನಸ್ತತ್ವಂ ತದಭಿಮಾನಿನೌ ಇಂದ್ರಕಾಮೌ //ತದುಕ್ತಂ// ಮನಸ್ತತ್ವ ಸ್ವರೂಪೌ ತೌ ಶಚೀಪತಿಮನೋಭವೌ ಇತಿ ಶಾಂಡಿಲ್ಯೇ // - ನಾಲ್ಕನೆಯದು ಮನಸ್ತತ್ವ. ಶಾಂಡಿಲ್ಯ ವಚನದಂತೆ ಇಂದ್ರ- ಕಾಮರು ಮನಸ್ತತ್ವಾಭಿಮಾನಿಗಳು.


 5) ಪಂಚಮಮ್ - ಶ್ರೋತ್ರತ್ವಂ // ತದಭಿಮಾನಿನ್ಯಃ ದಿಗ್ದೇವತಾ ಇಂದ್ರಾದಯಃ ಚಂದ್ರಮಾಶ್ಚ / ತದುಕ್ತಂ / ದಿಗ್ದೇವತಾಃ ಚಂದ್ರಮಾಶ್ಚ ಶ್ರೋತೃ ತತ್ವಾಭಿಮಾನಿನ ಇತಿ ಶಾಂಡಿಲ್ಯೇ //- ಐದನೇಯದು ಶ್ರೋತೃತತ್ವ --- ಶಾಂಡಿಲ್ಯ ವಚನದಂತೆ ದಿಗ್ದೇವತೆಗಳಾದ ಇಂದ್ರಾದಿಗಳೂ ಹಾಗೂ ಚಂದ್ರಮನೂ ಶ್ರೋತೃತತ್ವಾಭಿಮಾನಿಗಳು.

6) ಮತ್ತು 7) ಷಷ್ಠಂ ತು ತ್ವಕ್ ತತ್ವಂ |ಸಪ್ತಮಂ ಚಕ್ಷುಸ್ತತ್ವಂ / ತದಭಿಮಾನಿನ್ಯೌ ದೇವತೇ ಅಹಂಕಾರಿಕಪ್ರಾಣಃ ಸೂರ್ಯಶ್ಚ / ತದುಕ್ತಂ / ಪ್ರಾಣಸ್ತ್ವಗಾತ್ಮಾ ಸೂರ್ಯಶ್ಚ ಚಕ್ಷುರಿಂದ್ರಿಯ ದೇವತೇ ಇತಿ ಶಾಂಡಿಲ್ಯೇ //

ಆರನೇಯದು ತ್ವಕ್ ತತ್ವ ಇದಕ್ಕೆ ಅಭಿಮಾನಿ ಅಹಂಕಾರಿಕ ಪ್ರಾಣನು. ಮತ್ತು ಏಳನೇಯದು ಚಕ್ಷುಸ್ತತ್ವ ಇದಕ್ಕೆ ಅಭಿಮಾನಿ ಸೂರ್ಯದೇವರು.....


8 ಮತ್ತು 9) ಅಷ್ಟಮಂ ತು ಜಿಹ್ವಾ ತತ್ವಂ , ನವಮಂ ಘ್ರಾಣ ತತ್ವಂ / ತದಭಿಮಾನಿನ್ಯೌ ದೇವತೇ ವರುಣಶ್ಚಾಶ್ವಿನೌ ತಥೇತಿ ಶಾಂಡಿಲ್ಯೇ /- ಎಂಟನೇಯದು ಜಿಹ್ವಾ ತತ್ವ ಇದಕ್ಕೆ ವರುಣನು ಅಭಿಮಾನಿ, ಒಂಭತ್ತನೇಯದು ಘ್ರಾಣ, ಇದಕ್ಕೆ ಅಭಿಮಾನಿಗಳು ಅಶ್ವಿನಿ ದೇವತೆಗಳು...


 10) ದಶಮಂ ವಾಕ್ ತತ್ವಂ / ತದಭಿಮಾನಿದೇವತಾ ವನ್ಹಿಃ / ತದುಕ್ತಂ / ವಾಗಾತ್ಮಾ ಚ ತಥಾ ವನ್ಹಿರಿತಿ ಶಾಂಡಿಲ್ಯೇ //--- ಹತ್ತನೇಯದು ವಾಕ್ ತತ್ವ ಇದಕ್ಕೆ ಅಭಿಮಾನಿ ಅಗ್ನಿ. 

11) ಏಕಾದಶ ತತ್ವಂ ಪಾಣಿತತ್ವಂ / ತದಭಿಮಾನಿನ್ಯೋ ದೇವತಾಃ - ಶಚೀರತ್ಯನಿರುದ್ಧ ಸ್ವಾಯಂಭುವ ಬ್ರಹಸ್ಪತಿ ದಕ್ಷಾಃ / ತದುಕ್ತಂ/ ಶಚೀರತಿಶ್ಚಾನಿರುದ್ಧಸ್ತಥಾಸ್ವಾಯಂಭುವೋ ಮನುಃ / ಬೃಹಸ್ಪತಿಸ್ತಥಾ ದಕ್ಷಃ ಏತೇ ಪಾಣ್ಯಾತ್ಮಕಾಃ ಸ್ಮೃತಾಃ ಇತಿ ಗಾರುಡೇ /.... ಹನ್ನೊಂದನೆಯದು ಪಾಣಿ ತತ್ವ. ಇದಕ್ಕೆ ಶಚಿ ,ರತಿ,ಅನಿರುದ್ಧ, ಸ್ವಾಯಂಭುವ ಮನು, ದಕ್ಷ, ಬೃಹಸ್ಪತಿಗಳು ಅಭಿಮಾನಿಗಳು ಎಂದು ಗರುಡ ಪುರಾಣದ ವಚನದ ಪ್ರಮಾಣವಿದೆ....


12 ಮತ್ತು 13) ದ್ವಾದಶಂ ತು ಪಾದತತ್ವಂ / ತ್ರಯೋದಶಂ ಪಾಯುತತ್ವಂ / ತದಭಿಮಾನಿನೌ ದೇವತೇಜಯಂತೋಮಿತ್ರಶ್ಚ / ತದುಕ್ತಂ / ಪಾದಾತ್ಮಾ ಚ ಜಯಂತಶ್ಚ - ಪಾಯ್ವಾತ್ಮಾ ಮಿತ್ರ ಸಂಜ್ಞಕಃ ಇತಿ ಶಾಂಡಿಲ್ಯ ವಚನಾತ್ / ..... ಹನ್ನೆರಡನೆಯದು ಪಾದ ತತ್ವ ಇದಕ್ಕೆ ಅಭಿಮಾನಿ ಜಯಂತನು. ಹದಿಮೂರನೆಯದು ಪಾಯು ತತ್ವ ಇದಕ್ಕೆ ಅಭಿಮಾನಿ ಮಿತ್ರನು...


 14) ಚತುರ್ದಶಂ ಉಪಸ್ಥತತ್ವಂ / ವಿಶ್ವಾಮಿತ್ರಃ ವಶಿಷ್ಠಃ ಅತ್ರಿಃ ಮರೀಚಿಃ ಪುಲಹಃ ಕೃತುಃ ಪುಲಸ್ತ್ಯಃ ಅಭಿಮಾನಿನಃ / ತದುಕ್ತಂ / ಉಪಸ್ಥಾಮಾನಿನೌ ವೀಂದ್ರ ಬಭೂವುಸ್ತದನಂತರಮ್ / ವಿಶ್ವಾಮಿತ್ರೋವಶಿಷ್ಠೋತ್ರಿಃ ಮರೀಚಿಃ ಪುಲಹಃ ಕೃತುಃ / ಪುಲಸ್ತ್ಯಂಗಿರಸೌಚೈವ ತಥಾ ವೈವಸ್ವತೋಮನುಃ ಮನ್ವಾದ್ಯಾಃ ನವಸಂಖ್ಯಾಕಾಃ ಉಪಸ್ಥಾತ್ಮಾನ ಈರಿತಾ ಇತಿ ಗಾರುಡೇ /...

14)ಹದಿನಾಲ್ಕನೆಯದು ಉಪಸ್ಥ. ಇದಕ್ಕೆ ವಿಶ್ವಾಮಿತ್ರ, ವಶಿಷ್ಠ, ಅತ್ರಿ , ಮರೀಚಿ , ಪುಲಸ್ತ್ಯ, ಪುಲಹ, ಅಂಗಿರಾ, ವೈವಸ್ವತ ಮನು. ಇವರು ಅಭಿಮಾನಿಗಳು . ಎಂದು ಗರುಡ ಪುರಾಣದ ವಚನದ ಆಧಾರವಿದೆ....


15) ಪಂಚದಶ ತತ್ವಂ ಶಬ್ದ ತತ್ವಂ / ತದಭಿಮಾನಿ ಬೃಹಸ್ಪತಿಃ / ಶಬ್ದಾತ್ಮಾsಥ ಬೃಹಸ್ಪತಿರಿತಿ ಶಾಂಡಿಲ್ಯ ಶ್ರುತೇಃ /.... ಶಬ್ದ ತತ್ವ ಇದಕ್ಕೆ ಅಭಿಮಾನಿ ಬೃಹಸ್ಪತಿ....


16ಮತ್ತು 17) ಷೋಡಶಂ ಸ್ಪರ್ಶತತ್ವಂ / ಸಪ್ತದಶಂ ರೂಪತತ್ವಂ / ತದಭಿಮಾನಿನೌ ಅಪಾನವ್ಯಾನೌ ವಾಯು / ತದುಕ್ತಂ / ಅಪಾನಸ್ಪರ್ಶ ತತ್ವಾತ್ಮಾ ರೂಪತ್ಮಾ ವ್ಯಾನನಾಮಕಃ ಇತಿ ಗಾರುಡೇ / ..... ಹದಿನಾರನೆಯದು ಸ್ಪರ್ಶ ಇದಕ್ಕೆ ಅಪಾನನು ಅಭಿಮಾನಿಯು... ಹದಿನೇಳನೆಯದು ರೂಪ. ಇದಕ್ಕೆ ವ್ಯಾನನು ಅಭಿಮಾನಿ ದೇವತೆಯು...


18 ಮತ್ತು 19) ಅಷ್ಟಾದಶಂ ರಸ ತತ್ವಂ / ಏಕೋನವಿಂಶತಿ ತತ್ವಂ ಗಂಧ ತತ್ವಂ / ತದಭಿಮಾನಿನೌ ಉದಾನಃ ಸಮಾನಶ್ಚ / ತದುಕ್ತಂ / ರಸಾತ್ಮಕಃ ಉದಾನಶ್ಚ ಸಮಾನೋ ಗಂಧ ಉಚ್ಚತ ಇತಿ ಗಾರುಡೇ /..... ಹದಿನೆಂಟನೇಯದು ರಸ  ಇದಕ್ಕೆ ಉದಾನನು ಅಭಿಮಾನಿಯು... ಹತ್ತೊಂಭತ್ತನೇಯದು ಗಂಧ ಇದಕ್ಕೆ ಸಮಾನನು ಅಭಿಮಾನಿಯು....


20 ಮತ್ತು 21) ವಿಂಶತಿ ತತ್ವಂ ಆಕಾಶ ತತ್ವಂ, ಏಕವಿಂಶತಿ ತತ್ವಂ ವಾಯು ತತ್ವಂ/ ತದಭಿಮಾನಿನೌ ಗಣೇಶಜಡವಾಯು / ತದುಕ್ತಂ / ವ್ಯೋಮಾತ್ಮಾ ಗಜವಕ್ತ್ರಶ್ಚ ವಾಯುರ್ವಾಯುಸ್ವರೂಪವಾನಿತಿ /-ಇಪ್ಪತ್ತನೆಯದು ಆಕಾಶ ಇದಕ್ಕೆ ಗಣಪತಿಯು ಅಭಿಮಾನಿಯು... ಇಪ್ಪತ್ತೊಂದನೆಯದು ವಾಯು . ಇದಕ್ಕೆ ಜಡವಾಯುವು ಅಭಿಮಾನಿಯು.


22 ಮತ್ತು 23) ದ್ವಾವಿಂಶತಿ ತತ್ವಂ ತೈಜಸಂ / ತ್ರಯೋವಿಂಶತಿ ತತ್ವಂ ಅಪ್ ತತ್ವಂ / ತದಭಿಮಾನಿನೌ ಅಗ್ನಿ ವರುಣಶ್ಚ / ತದುಕ್ತಂ / ತೇಜಸ್ತತ್ವಾತ್ಮಕೋ ವನ್ಹಿಃ ಜಲಾತ್ಮಾ ವರುಣೋಮಹಾನ್ / .... ಇಪ್ಪತ್ತೆರಡನೆಯದು ತೇಜ ಇದಕ್ಕೆ ಅಗ್ನಿಯು ಅಭಿಮಾನಿಯು... ಇಪ್ಪತ್ಮೂರನೇಯದು ಜಲ ಇದಕ್ಕೆ ವರುಣನು ಅಭಿಮಾನಿಯು...


 24) ಚತುರ್ವಿಂಶತಿ ತತ್ವಂ ಪೃಥಿವೀ ತತ್ವಂ / ತದಭಿಮಾನಿ ಧರಾ / ಧರೇತಿಕಾಚನದೇವತಾ / ಪೃಥಿವ್ಯಾತ್ಮಾ ಧರಾ ಚೈವ ದೇವೀವಿಷ್ಣೋರಧೀನಗಾ ಇತಿ ಶಾಂಡಿಲ್ಯ ಶ್ರುತೇಃ /- ಇಪ್ಪತ್ತನಾಲ್ಕನೆಯದು ಪೃಥ್ವೀ ಇದಕ್ಕೆ ಧರಾದೇವಿಯು ಅಭಿಮಾನಿಯು..

ಹೀಗೆ ಈ ಇಪ್ಪತ್ತನಾಲ್ಕು ತತ್ವಾಭಿಮಾನಿದೇವತೆಗಳಿಗೆ ಒಡೆಯರಾದವರು ಶ್ರೀ ಮುಖ್ಯಪ್ರಾಣದೇವರು . ಇದೆಲ್ಲದರ ಸಂಗ್ರಹರೂಪವಾಗಿ ಶ್ರೀಮಚ್ಚಂದ್ರಿಕಾಚಾರ್ಯರು ಇಲ್ಲಿ - ಆರು ನಾಲ್ಕು ತತ್ವದಭಿಮಾನಿಗಳಿಗೊಡೆಯ ಎಂಬ ಒಂದು ಸಾಲಿನಲ್ಲಿ ತಿಳಿಸಿದ್ದಾರೆ.... ಈ ಒಟ್ಟು ವಿವಯಣೆ  ಶ್ರೀ ಹಂಪಿಹೊಳಿ ಆಚಾರ್ಯರು ಮಾಡಿದ  ಹರಿಕಥಾಮೃತಸಾರ ಪಾಠ ದಲ್ಲಿ ನಾವು ಕೇಳಿದ್ದೇವು....


ಆರೈದು ಮೇಲೆರಡು ಅಧಿಕ ಲಕ್ಷಣವುಳ್ಳ

ಮೂರುತಿಯೊಳೊಪ್ಪುತಿಹ ಮುನವರೇಣ್ಯ

    (6×5 = 30+2)=32  ಸಲ್ಲಕ್ಷಣಗಳುಳ್ಳ ....

ಷಣ್ಣವತ್ಯಂಗುಲೋ ಯಸ್ತು ನ್ಯಗ್ರೋಧಪರಿಮಂಡಲಃ /

ಸಪ್ತಪಾದಃ ಚತುರ್ಹಸ್ತೋ ದ್ವಾತ್ರಿಂಶಲ್ಲಕ್ಷಣೈರ್ಯುತಃ //...(ಭಾಗವತ ತಾತ್ಪರ್ಯ)... ನೋಡಿ...

     ಗುರುಗಳು ಎನಿಸಿಕೊಂಡವರು ತಾವು ಸ್ವತಃ ನಿಸ್ಸಂಶಯ ಜ್ಞಾನವುಳ್ಳವರಾಗಿ, ಶಿಷ್ಯರ ಸರ್ವಸಂಶಯಗಳನ್ನು ಪರಿಹರಿಸಬಲ್ಲವಾರಾಗಿದ್ದು ,, 32 ಸಲ್ಲಕ್ಷಣಗಳಿಂದ ಯುಕ್ತವಾದ ದೇಹವುಳ್ಳವರಾಗಿರಬೇಕು . ಪಾದದಿಂದ ಕೇಶದವರೆಗೆ 96 ಅಂಗುಲ ಎತ್ತರವಾದ ಮತ್ತು 48 ಅಂಗುಲ ( ನ್ಯಗ್ರೋಧ=48ಅಂಗುಲ) ಸುತ್ತಳತೆಯುಳ್ಳ ದೇಹವಿರಬೇಕು .  7 ಅಂಗುಲ ಪಾದಗಳ ಅಳತೆಯು , 4 ಅಂಗುಲ ಹಸ್ತಗಳ ಅಳತೆಯೂ ಸಮವಾಗಿರಬೇಕು . ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವದಾದರೇ....

     ಭುಜ, ನೇತ್ರ, ಹನು, ಜಾನು, ನಖಗಳು, ಈ ಐದು ಅಂಗಗಳು ದೀರ್ಘವಾಗಿಯೂ... , ಚರ್ಮ, ಕೇಶ , ಅಂಗುಲಿ, ದಂತ, ಪರ್ವಗಳು ಈ ಐದು ಅಂಗಗಳು ಸೂಕ್ಷ್ಮವಾಗಿಯೂ,  ಅಂಗೈ,ಅಂಗಾಲು, ಕಣ್ಣಿನ ಕುಡಿ, ತಾಲು, ನಾಲಿಗೆ, ಕೆಳದುಟಿ, ಕೈಯುಗುರು ಈ ಏಳು ಅಂಗಗಳು ಕೆಂಪಾಗಿಯೂ, ಎದೆ, ಕುಕ್ಷಿ , ಆಲಿಕ(ಹಣೆ), ಸ್ಕಂಧ(ಹೆಗಲು), ಕರ(ಮುಂಗೈ), ಮುಖ ಈ ಆರು ಅಂಗಗಳು ಉನ್ನತವಾಗಿಯೂ,  ಮೊಳಕಾಲು, ಕುತ್ತಿಗೆ, ಶಿಶ್ನ ಈ ಮೂರು ಅಂಗಗಳು ಹೃಸ್ವವಾಗಿಯೂ, ಕಂಠ, ಸತ್ವ(ಸ್ವಭಾವ), ನಾಭಿ ಈ ಮೂರು ಗಂಭೀರವಾಗಿಯೂ ಇರಬೇಕು ಎಂದು ಲಕ್ಷಣ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಈ ಎಲ್ಲ 32 ಸಲ್ಲಕ್ಷಣಗಳನ್ನು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ಹೊಂದಿದ್ದರಾದ್ದರಿಂದ ಶ್ರೀಮದ್ವ್ಯಾಸರಾಜರು ಇಲ್ಲಿ ಆರೈದುಮೇಲೆರಡು ಸಲ್ಲಕ್ಷಣಗಳುಳ್ಳ ಎಂದು ಸ್ತುತಿಸಿದ್ದಾರೆ.  ಅರ್ಥಾತ್...

ಮೂರುತಿಯೊಳು ಅಂದರೇ ದೇಹದಲ್ಲಿ, ಅಂದರೇ ಮೂವತ್ತೆರಡು ಸಲ್ಲಕ್ಷಣಗಳುಳ್ಳ ದೇಹದಲ್ಲಿ... ಒಪ್ಪುತಿಹ ಮುನಿವರೇಣ್ಯ - ವಿರಾಜಿಸುವ ಯತಿಶ್ರೇಷ್ಠರು ನೀವು ಎಂದು ಸ್ತುತಿಸಿದ್ದಾರೆ...


ಇದನ್ನೇ ಶ್ರೀ ಪ್ರಾಣೇಶದಾಸಾರ್ಯರು...


ಶ್ರೀವಾಯುದೇವರಿಗೆ ನೀತವಾದ

ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ /

ತಾಲು ಜಾನುಗಳು ಸ್ತನ ತುದಿಯು ನಾಸಿಕ ಚಕ್ಷು /

ನಾಲಕ್ಕೊಂದು ದೀರ್ಘ ಜಂಘಗ್ರೀವ /

ಆಲಿಂಗ ಪೃಷ್ಟ ನಾಲ್ಕು ಹೃಸ್ವ ಕೇಶರದ /

ಮೇಲಾದ ತ್ವಕು ಬೆರಳು ನಖ ಪಂಚ ಸೂಕ್ಷ್ಮ /

ಕಕ್ಷಿ ಕುಕ್ಷಿಯು ವಕ್ಷ ಕರ್ಣ ನಖ ಸ್ಕಂದಾರು /

ರಕ್ಷಘ್ನನಿಗೆ ಶೋಭಿಪವು ಉನ್ನತ /

ಅಕ್ಷಿ ಚರಣ ಕರ ನಖ ಅಧರ ಜಿಹ್ವೇಣು ಜಿಹ್ವೆ /

ಮೋಕ್ಷದನ ಈ ಏಳು ಅವಯವವು ರಕ್ತ /

ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ /

ಉತ್ತಮ ಲಲಾಟ ಉರದ್ವಯ ವಿಸ್ತಾರಾ /

ಸತ್ಯ ಸಂಕಲ್ಪ ಶ್ರೀ ಪ್ರಾಣೇಶ ವಿಠಲನ 

ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ//...


ಪಂಚದೀರ್ಘ: ಪಂಚಸೂಕ್ಷ್ಮ: ಸಪ್ತರಕ್ತ: ಷಡುನ್ನತ: !

ತ್ರಿಪೃಥುಸ್ತ್ರಿಷು ಗಂಭೀರೋ ದ್ವಾತ್ರಿಂಶಲ್ಲಕ್ಷಣಸ್ತ್ವಿತಿ ... ಅಂತ


ಆರಾರುಮೇಲೊಂದು ಅಧಿಕಲೆಕ್ಕದ ಗ್ರಂಥ

ಸಾರವನು ರಚಿಸಿ ಸಜ್ಜನರಿಗಿತ್ತು 

  

     (6×6=36+1)=37... ಶ್ರೀಜಗನ್ನಾಥದಾಸಾರ್ಯರು ತಮ್ಮ ತತ್ವಸುವ್ವಾಲಿ ಎಂಬ ಕೃತಿಯಲ್ಲಿ ....


     ಯತ್ಯಾಶ್ರಮವ ವಹಿಸಿ ಶ್ರುತ್ಯರ್ಥಗ್ರಂಥಮೂ-

     ವತ್ತೇಳು ರಚಿಸಿ ದಯದಿಂದ / ದಯದಿಂದ ನಿನ್ನವರಿ-

     ಗಿತ್ತು ಪಾಲಿಸಿದಿ ಪರಮಕರುಣಾಳು // ಎಂದು ಸ್ತೋತ್ರ ಮಾಡಿದಂತೇ... ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರು ರಚಿಸಿದ ಗ್ರಂಥಗಳು 37. ಅವು ಯಾವುವೆಂದರೆ - 1) ಗೀತಾಭಾಷ್ಯ 2) ಗೀತಾತಾತ್ಪರ್ಯ 3)ಸೂತ್ರಭಾಷ್ಯ 4)ಅಣುಭಾಷ್ಯ 5) ಅನುವ್ಯಾಖ್ಯಾನ 6) ಪ್ರಮಾಣ ಲಕ್ಷಣ 7) ಕಥಾಲಕ್ಷಣ 8) ಉಪಾಧಿ ಖಂಡನ 9) ಮಾಯಾವಾದ ಖಂಡನ 10) ಪ್ರಪಂಚಮಿಥ್ಯಾತ್ವಾನುಮಾನ ಖಂಡನ 11) ತತ್ವಸಂಖ್ಯಾನ 12) ತತ್ವವಿವೇಕ 13) ತತ್ವದ್ಯೋತ 14) ಕರ್ಮನಿರ್ಣಯ 15) ವಿಷ್ಣುತತ್ವನಿರ್ಣಯ 16) ಋಗ್ಭಾಷ್ಯ 17) ಐತರೇಯ ಉಪನಿಷದ್ಭಾಷ್ಯ 18) ಈಶಾವಾಸ್ಯ ಉಪನಿಷದ್ಭಾಷ್ಯ 19) ಬೃಹದಾರಣ್ಯ ಉಪನಿಷದ್ಭಾಷ್ಯ 20) ಕಾಠಕ ಉಪನಿಷದ್ಭಾಷ್ಯ 21) ತೈತ್ತಿರೀಯ ಉಪನಿಷದ್ಭಾಷ್ಯ 22) ಛಾಂದೋಗ್ಯ ಉಪನಿಷದ್ಭಾಷ್ಯ 23) ತಲವಕಾರ ಉಪನಿಷದ್ಭಾಷ್ಯ 24) ಷಟ್ಪ್ರಶ್ನ ಉಪನಿಷದ್ಭಾಷ್ಯ 25) ಮಾಂಡೂಕ ಉಪನಿಷದ್ಭಾಷ್ಯ 26) ಅಥರ್ವಣ ಉಪನಿಷದ್ಭಾಷ್ಯ 27) ನ್ಯಾಯವಿವರಣ 28) ಮಹಾಭಾರತ ತಾತ್ಪರ್ಯ ನಿರ್ಣಯ 28) ಭಾಗವತ ತಾತ್ಪರ್ಯ ನಿರ್ಣಯ 30) ಯಮಕ ಭಾರತ 31) ದ್ವಾದಶ ಸ್ತೋತ್ರ 32) ಕೃಷ್ಣಾಮೃತಮಹಾರ್ಣವ 33) ತಂತ್ರಸಾರ ಸಂಗ್ರಹ  34) ನರಸಿಂಹನಖಸ್ತುತಿ 35) ಸದಾಚಾರಸ್ಮೃತಿ 36) ಯತಿಪ್ರಣವ ಕಲ್ಪ 37) ಜಯಂತೀನಿರ್ಣಯ. 

 ಈ ಮೂವತ್ತೇಳು ಗ್ರಂಥಗಳಲ್ಲಿ ಶಾಸ್ತ್ರಗಳ ಸಾರವನ್ನು ನಿರ್ಮಿಸಿ, ಪಾರಮಾರ್ಥಿಕ ಪಂಚಭೇದಗಳನ್ನು ಅಂದರೆ  ತ್ರಿಕಾಲಸತ್ಯವಾದ (ಕೇವಲ ವ್ಯಾವಹಾರಿಕವಲ್ಲದ) ,    ಜಡ-ಜಡ , ಜಡ-ಜೀವ , ಜಡ-ಈಶ , ಜೀವ-ಜೀವ ಮತ್ತು ಜೀವ-ಈಶರ ಭೇದಗಳನ್ನು ತಿಳಿಸಿದ ಧೀರ ಅಂದರೆ ಜ್ಞಾನಿಶ್ರೇಷ್ಠರು ನೀವು . ಎಂಬುದಾಗಿ ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರು ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಕಾರುಣ್ಯವನ್ನು ಪರಮಾದ್ಭುತವಾಗಿ ಸ್ತುತಿಸಿದ್ದಾರೆ....ಇನ್ನೂ ಒಂದು ವಿಷಯ ಅಂದರೇ ನಾವು ಎಷ್ಟೇ ಮಹಾನ್ ಸಾಧಕರಾಗಿರಬಹುದು ಆದರೇ ನಮ್ಮ ಗುರುಗಳಸ್ಮರಣೆ ಮಾತ್ರ ಬಿಡದೇ ಮಾಡುವರಂತಾಗಬೇಕು. ಅವರ ಕುರಿತು ಅಪರೋಕ್ಷ ಜ್ಞಾನಿಗಳು ಬರೆದ ಪದ,ಪದ್ಯಗಳನ್ನು ಹಾಡುವರಂತಾಗಬೇಕು.. 

ನನ್ನ ಗುರುಗಳು ಶ್ರೀ ವಿಷ್ಣುದಾಸ ನಾಗೇಂದ್ರಾಚಾರ್ಯರು ಅಂತಾರೆ ಮಹಾತ್ಮರ ಸ್ಮರಣೆ ಮಾಡಬೇಕಾದರೇ ಅವರ ಮಹಿಮೆಗಳನ್ನು ನೆನೆಯುವುದಕ್ಕಿಂದಾ ಆ ಮಹಾನುಭಾವರ ಆಕೃತಿಯಂತಿರುವ ಅವರ ಕೃತಿಗಳ, ಗ್ರಂಥಗಳ ಸ್ಮರಣಾವಲೋಕನವಾಗಬೇಕು ಅಂತ... ಶ್ರೀಮದಾಚಾರ್ಯರ ಗ್ರಂಥಗಳೇ ಸ್ವಯಂ ಶ್ರೀಮದಾಚಾರ್ಯರು ಎನ್ನುವುದನ್ನು  ಅವರ ಗ್ರಂಥಗಳ, ಗುಣಗಳ ಚಿಂತನೆ ಮಾಡುವುದರ ಮುಖಾಂತರ ಈ ವಿಷಯವನ್ನು ಶ್ರೀಮದ್ವ್ಯಾಸರಾಜ ಗುರುಸಾರ್ವಭೌಮರು ಈ ಕೃತಿಯ ತಿಳಿಸಿಕೊಟ್ಟಿದ್ದಾರೆ...


ಇಂಥಹಾ ಮಹಾನ್ ಗುರುಗಳನ್ನ ಪಡೆದ ನಾವೇ ಧನ್ಯರು.. ಮಧ್ವಮತದಲ್ಲಿ ಹುಟ್ಟಿ ಬಂದಿದ್ರೂ ಸಹಾ ಆ ಮಧ್ವಮತದ ತತ್ವವನ್ನರಿಯದೇ ಇತರ ತತ್ವಗಳನ್ನು ಇನ್ನೂ ಪಾಲನೆ ಮಾಡುತ್ತಿರುವ ನಮ್ಮ ಮೂಢಮತಿಯನ್ನು ಈಗಿಂದಾದಲೂ ಶುದ್ಧಮಾಡಿ ಸರಿಯಾದ ಹಾದಿಯಲ್ಲಿ ಸಾಧನಾ ಮಾರ್ಗದಲ್ಲಿ ಬರುವಂತೆ ಮನೋನಿಯಾಮಕರಾದ ರುದ್ರದೇವರನ್ನು ಪ್ರಾರ್ಥನೆ ಮಾಡುತ್ತಾ... ಪ್ರಮಾಣದ ಶ್ಲೋಕಗಳನ್ನು ನೀಡಿದ ಶ್ರೀ  ಹಂಪಿಹೋಳಿ ಆಚಾರ್ಯರವರಿಗೆ ಅನಂತಾನಂತ ವಂದನೆಗಳು ಮಾಡುತ್ತಾ... ಶ್ರೀಮದಾಚಾರ್ಯರ ಪರಮ ಕಾರುಣ್ಯವನ್ನು ನಮ್ಮ ಮೇಲೆ ಸದಾ ಇದ್ದು ಪರಮಾತ್ಮನ ಪಾದದೆಡೆ ನಮ್ಮ ಜೀವನವನ್ನಿರಸಲೆಂದು ಪರಮಾತ್ಮನ ಪರಮ ಪರಮ ಭಕ್ತರಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರಲ್ಲಿ ಶರಣು ಹೋಗುತ್ತಾ...


ಅಸ್ಮದ್ ಪತ್ಯಂತರ್ಗತ

ಭಾರತೀರಮಣ ಮುಖ್ಯಪ್ರಾಣಾಂತರ್ಗತ

ಶ್ರೀ ಲಕ್ಷ್ಮೀ ನರಸಿಂಹನ  ಅಡಿದಾವರೆಗಳಲ್ಲಿ ಈ ಪುಟ್ಟ ಸೇವೆಯನ್ನು ಸಮರ್ಪಣೆ ಮಾಡುತ್ತಾ........ 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

***