Audio by Vidwan Sumukh Moudgalya
ಶ್ರೀ ಅಭಿನವ ಪ್ರಾಣೇಶದಾಸಾರ್ಯ ವಿರಚಿತ ದೇವರ ಸ್ತೋತ್ರ ಸುಳಾದಿ
ರಾಗ : ಷಣ್ಮುಖಪ್ರಿಯ
ಧೃವತಾಳ
ರಂಗ ಶ್ರೀರಂಗ ಭವಭಂಗ ವಿಹಂಗವಾಹ
ತುಂಗ ವಿಕ್ರಮ ದಯಾಪಾಂಗ ದೇವ
ಹಿಂಗಿಸಮಾಯಭಯನಂಗಜನಕ ಪಾಂಡು-
ರಂಗ ಭುಜಂಗಶಾಯಿ ಮಂಗಳಾಂಗ
ಮಂಗನಾಮಕ ಭಸ್ಮಾಂಗಾದಿಸುರವಂದ್ಯಾ
ಪಿಂಗಳಾಭಂಗ ನರಸಿಂಗದೇವ
ಗಂಗಾದೇವಿಯ ಪಾದಾಂಗುಟದಿಂದ ಪೆತ್ತ
ಪಂಗನಾಮದ ತಿರುವೆಂಗಳೇಶ
ಮಂಗಲ ಅಭಿನವ ಪ್ರಾಣೇಶ ವಿಠಲನೆ
ಅಂಗಜನುಪಟಳವ ಭಂಗಿಸಿಕಾಯೋ ॥೧॥
ಮಟ್ಟತಾಳ
ಅರಿದರಧರದೇವ ಶರಣಜನರ ಕಾವ
ನರಕಸುರವೈರಿ ಮುರಮರ್ದನಶೌರಿ
ಸಿರಿವರ ಅಭಿನವ ಪ್ರಾಣೇಶವಿಠಲಯ್ಯ
ಶರಣಜನಮಂದಾರ ಪರಿಪಾಲಿಸು ಜೀಯ ॥೨॥
ತ್ರಿವಿಡಿತಾಳ
ಮೂರು ಭ್ರಮೆಗಳಿಂದ ಮೂರು ತಾಪಗಳಿಂದ
ಆರು ವೈರಿಗಳಿಂದ ನೊಂದೆ ಬೆಂದೆ
ನಾರಿಬೋಧನ ವೆಂಬೊ ಘೋರಾರಣ್ಯದಿ ಸಿಲುಕಿ
ದಾರಿಗಾಣದೆ ಬಹು ತೊಳಲುತ ಬಳಲುವೆ
ಧಾರುಣಿಯೊಳು ಭೂವಾರನತೆರ ಮಲ
ಹೀರುತ ಚರಿಸುವೆ ಮಾರನಯ್ಯ
ಸೀರಜಾಧವ ರಘುವೀರನೆ ಕರುಣದಿ
ಪಾರುಗಾಣಿಸು ಭವಾರಿಧಿಯ
ಈರನಿಲಯ ಅಭಿನವ ಪ್ರಾಣೇಶ ವಿಠಲನೆ
ಚಾರುಮಾರ್ಗವ ತೋರು ಭೂರಿಕರುಣವಬೀರು ॥೩॥
ಅಟ್ಟತಾಳ
ಕಸಿವಿಸಿ ಸಂಸಾರ ಕೆಸರಿನೊಳಗೆ ಬಿದ್ದು
ವಿಷಯಕೂಪದಲ್ಲಿ ವ್ಯಸನಬಡುತಲಿಹೆ
ವಸಧಿಯೊಳಗೆನಿನ್ನ ಹೆಸರ್ಹೇಳಿ ಬದುಕುವ
ಕುಸುಮನಾಭನ ವಂಶಜ ನಾನಯ್ಯ
ಆಸಮಯ ಬಂದಿದೆ ತುಸು ತಡಮಾಡದೆ
ರಸಕರುಣವ ಬೀರು ಬಿಸಜ ಚರಣವತೋರು
ಮಿಸುನಿವಾಸಧರ ಶಶಿಕೋಟಿ ಭಾಸ್ಕರ
ಶ್ವಸನಫಣಿಪ ವೀಪ ನೊಸಲಾಕ್ಷದೇವಪ
ಝಷಕೇತುಮುಖ ಸುಮನಸಗುಣ ಸೇವ್ಯನೆ
ಋಷಿಪತಿಶಯಭಿನವ ಪ್ರಾಣೇಶ ವಿಠಲ ಪದ-
ಕುಸುಮ ಷಟ್ಪದನೆನಿಸು ಭಾಸ ಹೃಷೀಕೇಶ ॥೪॥
ಆದಿತಾಳ
ಭೇದಮತದೊಳಿಡು ವೇದಮತಿಯಕೊಡು
ಬಾದಾರಾಯಣದೇವಾನಾದಿ ಮೂರುತಿಶತ
ಮೋದಕುಲಾಚರಣೆ ಸಾಧಿಸುವಂತೆ ಮಾಡು
ಸಾಧುಸಜ್ಜನ ಪಾದಾರಾಧನೆ ಕರುಣಿಸು
ಮೋದದ ಅಭಿನವ ಪ್ರಾಣೇಶ ವಿಠಲನೆ
ಬಾಧೆಭ್ರಾಮಕ ಬಿಡಿಸು ಮೋದ ಕವಚವ ತೊಡಿಸು ॥೫॥
ಜತೆ
ಕರಿವರದನೆ ಭವ ಕರಕರಿ ಹರಿಸಯ್ಯಾ
ಸ್ಮರನಯ್ಯ ಅಭಿನವ ಪ್ರಾಣೇಶ ವಿಠಲ ॥೬॥
*******