Showing posts with label ಸಾಧನವೆಂಬೋದಿದೆ ನರ ಜನ್ಮದಲ್ಲಿ vijaya vittala ankita suladi ಸಾಧನ ಸುಳಾದಿ SAADHANAVEMBODIDE NARA JANMADALLI SADHANA SULADI. Show all posts
Showing posts with label ಸಾಧನವೆಂಬೋದಿದೆ ನರ ಜನ್ಮದಲ್ಲಿ vijaya vittala ankita suladi ಸಾಧನ ಸುಳಾದಿ SAADHANAVEMBODIDE NARA JANMADALLI SADHANA SULADI. Show all posts

Thursday, 23 September 2021

ಸಾಧನವೆಂಬೋದಿದೆ ನರ ಜನ್ಮದಲ್ಲಿ vijaya vittala ankita suladi ಸಾಧನ ಸುಳಾದಿ SAADHANAVEMBODIDE NARA JANMADALLI SADHANA SULADI

Audio by Mrs. Nandini Sripad



ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 


(ಮಾನವ ದೇಹ ದುರ್ಲಭ. ಈ ಶರೀರ ತಪ್ಪಿದರೆ ಮುಂದಾವ ಸಾಧನವಿಲ್ಲ. ಮನುಜ ಶರೀರದಿಂದಲೇ ಸಕಲ ಸಾಧನ. ವೃಥಾ ಕರ್ಮ ಮಾರ್ಗಕ್ಕೆ ಬೀಳದೆ ಶ್ರೀಹರಿ ನಾಮಾಮೃತವನ್ನು ಸವಿಯಿರಿ.) 


 ರಾಗ ಸಾರಂಗ 


 ಧ್ರುವತಾಳ 


ಸಾಧನವೆಂಬೋದಿದೆ ನರ ಜನ್ಮದಲ್ಲಿಯಲ್ಲದೆ

ನಿಧಾನದಿಂದಲಿ ತಿಳಿಯಲೊ ಮನವೆ

ಆದಾನಾದ ಕರ್ತ ನಾರಾಯಣನ ದಿವ್ಯ

ಪಾದ ನಖದಲ್ಲಿದ್ದ ಗುಣವೆ ಕೇಳಿ ಆ -

ರಾಧನೆ ಮಾಳ್ಪ ಉಪಾಯವೆಲ್ಲ

ನೀದಾನ ಮೊದಲಾದ ಕಾಯ ಬಂದಾಗ ಸಂ -

ಪಾದನೆ ಪುಣ್ಯ ಉಂಟೆ ಇನಿತಾದರು

ಓದನಗೋಸುಗ ವಿಚಿತ್ರ ತತ್ವಂಗಳು

ಕ್ರೋಧ ನರರ ಬಳಿಗೆ ಪೋಗಿ ಕೊಂಡಾಡಿ ದುರ -

ರಾ ಧನ ತಂದು ಕಾಲವನ್ನು ಕಳೆವೆ ಇದ -

ನಾದರು ಕೇಳು ಸಿದ್ದ ವಿಚಾರ ಪೂರ್ಣ -

ಬೋಧರ ಮತವ ಸಾರಿ ಭಕುತಿಯಿಂದ

ಭೂ ಧನ ಹೇಮ ರಜತ ಉಂಟಾಗಿದ್ದರೆ ಭೂಮಿ

ಬುಧರ ನೋಡಿ ಸಂತೋಷ ಬಡಿಸು

ನೀ ಧನ ವಿರಹಿತನಾದರೆ ಇಲ್ಲವೆಂದು

ರೋಧ ಹಚ್ಚಿಕೊಂಡು ಕೆಡಲಿಬೇಡ

ಬಾ ಧನವೆಂದರೆ ಮುಂದೆ ಬೀಳೋದೆ ಅಪ -

ರಾಧ ನಡತಿಯಿಂದ ಭಾಗ್ಯನಾಗಿದ್ದ ಸು -

ಯೋಧನ ಸರ್ವರಾಜ್ಯವಾಳಿದ್ದನ್ನ ನೋಡು

ಆದ ನರಕಕ್ಕೆ ತೆರವಿಲ್ಲದೆಂದಿಗವ

ವೇದ ನಾನಾ ಪುರಾಣ ಇತಿಹಾಸ ವಚನ ಪ್ರ -

ಸಾದನಾಗೆಂದು ಪೇಳುತಿವಕೋ ಕೇಳೊ

ಭೂದಾನ ಬೇಡಿದ ವಿಜಯವಿಟ್ಠಲ ಮಧು -

ಸೂದನನಿರುತಿರೆ ಅನ್ಯ ಹಂಬಲವೇ ॥ 1 ॥ 


 ಮಟ್ಟತಾಳ 


ಕಲಿಯುಗದೊಳು ಕರ್ಮಂಗಳು ಬಲು ಪರಿಯುಂಟು

ತಿಳಿದು ಮಾಡುವನ್ಯಾರು ನೆಲೆಯ ಬಲ್ಲೆನೆಂದು

ಹಲವು ಬಗೆಯಿಂದ ಘಳಿಗೆ ಬಿಡದೆ ಕರ್ಮಾ -

ವಳಿಗಳು ಮಾಡಲದರೊಳಗೆ ದುರಿತವಕ್ಕು

ಕಲಕಾಲಾ ವೆಗ್ಗಳೆಯರಿಗೆ ದೂರ 

ಜಲನಿಧಿಯೊಳು ಪೊಕ್ಕು ನೆಲೆಯ ತಂದವರುಂಟೆ 

ಬಳಲದಿರು ವ್ಯರ್ಥ

ಕಲಿತಾಪ ಪರಿಹರ ವಿಜಯವಿಟ್ಠಲರೇಯನ 

ಒಲಿಸಿ ಭಜಿಪದಕ್ಕೆ ಸುಲಭ ಮಾರ್ಗವೆ ಉಂಟು  ॥ 2 ॥ 


 ತ್ರಿವಿಡಿತಾಳ 


ಬಲು ಸುಲಭ ಬಲು ಸುಲಭವಾಗಿದೆ ನೋಳ್ಪರಿಗೆ

ಛಳಿ ಗಾಳಿ ಮಳೆ ಸಿಡಿಲು ಬಂದರೆ ಬಿಡದಲ್ಲ

ಹಳೆಯದಾಯಿತೆಂದು ಉದಾಸೀನ ಮಾಡಿ

ಕಳೆವದಲ್ಲ ತಿರುಗಿ ಕೊಡುವದಲ್ಲ

ಬೆಲೆಗೆ ತರುವದಲ್ಲ ಭಯಕೆ ಹೂಳುವದಲ್ಲ

ಬಲವಂತರಿಗೆ ಕೊಟ್ಟು ಮಾರಿ ಬರುವದಲ್ಲ

ಕೆಲವು ದಿವಸ ಯಿದ್ದು ಓಡಿ ಪೋಗುವದಲ್ಲ

ಬಳಲಿಕೆಯಾಗಿ ಸಾಕೆಂಬೊದಲ್ಲ

ಫಲವಾದರೂ ವೆಗ್ಗಳವಾಗಿ ಬರುತಿದೆ

ಹಲವು ಜನ್ಮದ ಪಾಪ ಪರ್ವತಕೆ

ಕುಲಿಶವಾಗಿಪ್ಪದು ನಂಬಿದ ಭಜಕರ

ಕುಲಕೋಟಿ ಉದ್ಧಾರ ಎಲೊ ಮನವೆ

ಸಲೆ ನಂಬು ವಿಜಯವಿಟ್ಠಲರೇಯನ ನಾಮ

ಘಳಿಗೆ ನೆನೆಯೆ ತನ್ನ ಬಳಿಯಲ್ಲೆ ವೈಕುಂಠ ॥ 3 ॥ 


 ಅಟ್ಟತಾಳ 


ಶತಕೋಟಿ ಜನ್ಮವು ಸತತ ಮಜ್ಜನಾದಿ

ವ್ರತಗಳ ಮಾಡಲು ಗತಿಗೆ ಸಾಧನವಲ್ಲ

ಹಿತವಾಗಿ ಇಪ್ಪದು ಅಮೃತ ಕುಡಿದಂತೆ ಶ್ರೀ -

ಪತಿಯ ಮಂಗಳನಾಮ ಮತಿಯಲ್ಲಿ ಸ್ಮರಿಸಿ ಶಾ -

ಶ್ವತ ವೆಸಗಿದ ಪಾಪ ಪತನವಾಗುವದು ಸಂತತಿ ಸಹಿತಕೆ ವೇಗ 

ಶತಪತ್ರ ನೇತ್ರ ಶ್ರೀವಿಜಯವಿಟ್ಠಲ ಸಾ -

ರಥಿಯಾಗುವನು ತ್ವರಿತದಲ್ಲಿ ಬಂದು ॥ 4 ॥ 


 ಆದಿತಾಳ 


ಹರಿ ನಾಮದ ಮಹಿಮೆಯ ಅರಿದವನಾರು ಮನವೆ

ಮರಳೆ ಸಂಸಾರವೆಂಬೊ ತರುವಿನ ಬೇರು ಸರ್ವ

ಧರೆ ಗಗನ ಪಾತಾಳ ಸುತ್ತಲು ಭೇದಿಸಿದರೆ

ಮರದೊಮ್ಮೆ ನೆನೆದರೆ ಎಲ್ಲಿದ್ದರೂ ಬಂದು

ಭರದಿಂದ ಕಿತ್ತಿ ಭವದ ತರುವಿನ ಪೆಸರನ್ನು

ಇರಗೊಡದಂತೆ ಮಾಡಿ ಮುಂದೆ ಸಾಕುತಿಪ್ಪದು

ಹರಿನಾಮ ಹರಿನಾಮ ದುರಿತರಾಸಿಗೆ ಭೀಮ

ಹರಿನಾಮ ಒಂದಕ್ಕೆ ಅನಂತ ಬಗೆ ಕರ್ಮ

ಸರಿಬಾರವು ಕಾಣೊ ಇದಕೆ ಸಂಶಯವ್ಯಾಕೆ

ಹರಿನಾಮವೆ ತೊರೆದು ಕರ್ಮ ಮಾಡಲು ದೋಷ

ಕರಗದು ಕರಗದು ಹಿಮ್ಮೆಟ್ಟಿ ಪೋಗದು

ಹರಿನಾಮದಲ್ಲಿ ಪ್ರೀತಿ ಇಟ್ಟು ಕರ್ಮವ

ತೊರೆದರೆ ಪಾಪಲೇಶವಿಲ್ಲ ಫಲವಕ್ಕು

ಸುರಗುರು ವಿಜಯವಿಟ್ಠಲರೇಯನ ನಾಮ

ಸ್ಮರಿಸಿದ ಮನಜಂಗೆ ಸ್ಥಿರವೆನ್ನು ಜ್ಞಾನಭಕ್ತಿ ॥ 5 ॥ 


 ಜತೆ 


ಮನವೆ ಈ ಜನುಮ ತಪ್ಪಿದ ಮೇಲೆ ಆವ ಸಾ -

ಧನವು ನಿಶ್ಚಯವಿಲ್ಲ ವಿಜಯವಿಟ್ಠಲನ ಕಾಣೋ ॥

****