Showing posts with label ಹರಿಯ ಸೇವಿಸುವವ gopala vittala ankita suladi ಹರಿಸ್ವತಂತ್ರ ಸುಳಾದಿ HARIYE SEVISUVAVA HARI SWATANTRA SULADI. Show all posts
Showing posts with label ಹರಿಯ ಸೇವಿಸುವವ gopala vittala ankita suladi ಹರಿಸ್ವತಂತ್ರ ಸುಳಾದಿ HARIYE SEVISUVAVA HARI SWATANTRA SULADI. Show all posts

Wednesday, 27 January 2021

ಹರಿಯ ಸೇವಿಸುವವ gopala vittala ankita suladi ಹರಿಸ್ವತಂತ್ರ ಸುಳಾದಿ HARIYE SEVISUVAVA HARI SWATANTRA SULADI

 

Audio by Mrs. Nandini Sripad


ಶ್ರೀ ಗೋಪಾಲದಾಸಾರ್ಯ ವಿರಚಿತ  ಹರಿಸ್ವತಂತ್ರ ಸುಳಾದಿ 


( ಸಕಲ ಸಾಧನ ಶ್ರೀಹರಿಯ ಆಧೀನ ತಿಳಿವುದೇ ಸಾಧನದಲ್ಲಿಯ ಮುಖ್ಯಾಂಶ. ಇದನ್ನರಿತವರಿಗೆ ಶ್ರೀಹರಿಯು ವೊಲಿವ. ) 


 ರಾಗ ಕಾಂಬೋಧಿ 


 ಧ್ರುವತಾಳ 


ಹರಿಯ ಸೇವಿಸುವವ ಅವ ಪಾಮರನೆ ? ಮರದು

ಹರಿಯ ಸೇವಿಸುವವ ಅವ ಪಾಮರನು ಅಲ್ಲೆ

ಹರಿಯ ತಿಳಿದವನು ಅವನು ಜ್ಞಾನಿಯೆ ನೋಡಾ

ಹರಿಯ ತಿಳಿದವ ಪೂರ್ಣ ಅವನು ಜ್ಞಾನಿಯೆ ನೋಡಾ

ಹರಿಯೇ ಕರ್ತಾ ನಾ ಕರ್ತುನಲ್ಲಾನೆಂದವ ಜ್ಞಾನಿ

ಹರಿ ಕರ್ತು ನಾನು ಕರ್ತುನೆಂದವನು ಜ್ಞಾನಿಯೆ ?

ಹರಿಯೆ ಸ್ವಾತಂತ್ರ ನಾನಲ್ಲವೆಂದವ ಜ್ಞಾನಿಯೆ

ಹರಿಯೆ ಸ್ವತಂತ್ರ ನಾನು ಸ್ವತಂತ್ರನೆಂದವ ಜ್ಞಾನಿಯೆ ?

ಹರಿ ಮಾಡಿಸಲು ಮಾಡಿದೆನೆಂಬೊವ ಜ್ಞಾನಿಯೆ

ಹರಿ ಮಾಡಿ ಮಾಡಿಸಲು ಮಾಡಿದೆಂದವ ಜ್ಞಾನೆ

ಹರಿ ಮಾಡೆನ್ನೆ ಮಾಡಿದೆ ನೆಂದವನು ಜ್ಞಾನಿಯೆ

ಹರಿ ಮಾಡಿದರೆ ನಾ ಮಾಡೇನೆಂದವ ಜ್ಞಾನೆ

ಹರಿಯು ಕೂಡಾ ನಾನು ಮಾಡಿದೆಂಬವ ಜ್ಞಾನೆ

ಹರಿಯೆ ಮಾಳ್ಪವ ನಾನ್ಯಾತಕಲ್ಲೆಂದವ ಜ್ಞಾನೆ

ಹರಿಯನರಿಯದವ ಅವನು ಒಬ್ಬ ಜ್ಞಾನಿಯೆ

ಹರಿಯ ಬಲ್ಲೆನೆಂದವ ಅವನು ಒಬ್ಬ ಜ್ಞಾನಿಯೆ

ಹರಿಯೆ ಸರ್ವ ಚೇಷ್ಟಪ್ರದ ಗೋಪಾಲವಿಟ್ಠಲ ನರ -

ಹರಿ ಎಂದರಿದವನು ನರನೆ ನರನೆ ನೋಡಾ ॥ 1 ॥ 


 ಮಟ್ಟತಾಳ 


ಮಂತ್ರ ಮಾಡಿದರೇನು ತಂತು ತೋರಿದರೇನು

ಎಂತೆಂತು ಕರ್ಮ ನಿರಂತರ ಮಾಡಲೇನು

ಚಿಂತನೆ ಹರಿ ಸ್ವತಂತ್ರ ಪರತಂತ್ರ

ಇಂತು ಜೀವೇಶರ ವಿವೇಕನರಿಯದಾ -

ನಂತ ಜನುಮಗಳು ಆಗಿ ಬಂದಿದ್ದರು

ಸಂತೋಷವು ಕೊಡವು ಸಾಧನ ಕರ್ಮಗಳು

ದಂತಿಮಜ್ಜನ ಕಾಣೋ ಹರಿಯ ತಿಳಿಯದ ಕರ್ಮ

ಗ್ರಂಥಿ ಬಿಡುವದಲ್ಲ ಅಜ್ಞಾನದ ಸರಕು

ನಿಂತು ನಿದ್ರೆ ಮಾಳ್ಪನಂತೆ ಕೊನಿಗೆ ಸೌಖ್ಯ

ಚಿಂತಿತ ಫಲದಾತ ಗೋಪಾಲವಿಟ್ಠಲ -

ನೆಂತೆಂತುಪಾಸ್ಯರಂತಂತೆ ಫಲವೀವ ॥ 2 ॥ 


 ರೂಪಕತಾಳ 


ಚೇತನರೆ ಸರಿ ಜೀವ ಚಲನೆ ಮಾಡಿಸೆ ಹರಿ

ಚೇತನವೆ ಜಡತುಲ್ಯ ಚಲನೆ ಮಾಡಿಸದಿರಲು

ಚೇತನಾಚೇತನಕೆ ಸಾಮ್ಯವೆ ಸರಿ ಹರಿ ವಿನಹ

ಯಾತರಿಂದಲಿ ನೋಡು ಜ್ಞಾನಿಚ್ಛೆ ಪ್ರಯತ್ನವು

ಪಾತಕ ಪುಣ್ಯಕ್ಕು ಹರಿಯೆ ಪ್ರೇರಕನೆಂದು

ತಾ ತಿಳಿದು ಇಪ್ಪವಗೆ ಯಾತನೆಂಬದು ಎಲ್ಲೊ ?

ತಾ ತಿಳಿಯದಲೆ ಪುಣ್ಯಮಾತುರಕೆ ನಾನೆನಲು

ಪಾತಕವವನೆ ಮಾಡಿ ಪುಣ್ಯವಾದರು ನೋಡ

ಪತಿವೃತ ಸ್ತ್ರೀ ತನ್ನ ಪತಿ ಆಜ್ಞದಿಂದ ವಿ -

ಜಾತಿ ಪುರುಷನ್ನ ಅನುಸರಿಸೆಂದು ಆಜ್ಞ ಕೊಡೆ

ಮಾತು ಪತಿಯದು ನಡಿಸೆ ಪಾತಕವಳಿಗೆವುಂಟೆ ?

ಯಾತನಿಗೆ ಸರಿ ಯೋಗ್ಯ ಕರ್ಮ ಮಾಡಿದರಾಗೆ

ಪಾತಕಿಲ್ಲವು ನೋಡು ನೋಡಿ ನೋಡು

ಜ್ಯೋತಿರ್ಮಯ ಮೂರ್ತಿ ಗೋಪಾಲವಿಟ್ಠಲ 

ಯಾತರವ ನಾನಲ್ಲ ಎಲ್ಲ ನಿನ್ನಾಧೀನ ॥ 3 ॥ 


 ಝಂಪೆತಾಳ 


ಹರಿ ಮಾಡೆನಲು ಮಾಡೆ ನೆಂಬುವಗೆ ಸಂಸಾರ

ಹರಿಯೆಂಬುವದು ಲಕ್ಷ ಹರುದಾರಿ ಜಲವುದ್ದ

ಶರದಿಂದ ಕಡೆ ಬೀಳಲರಿಯಾನವನೆಂದಿಗು

ಹರಿಯು ತೋರದು ಅವಗೆ ಎಂದೆಂದಿಗು

ಹರಿ ಕೂಡ ನಾನು ಮಾಡಿದೆನೆಂಬುವಗೆ

ಶರಧಿ ಹರಗೋಲು ಹುಟ್ಟಿಲ್ಲದ್ಹಾಕಿದಂತೆ

ಹರಿ ಮಾಡಿಸಲು ಮಾಡೆ ನೆಂಬುವಗೆ ಭವಶರಧಿ

ಹರಗೋಲಿಟ್ಟು ಹುಟ್ಟು ಹಾಕಿದಂತೆ

ಹರಿ ಮಾಡಿಸಲು ನಾನು ಮಾಡಿದೆಂಬುವನಿಗೆ

ಶರಧಿ ಅರಕಾಲು ಪರಿಮಾಣ ಜಲವು

ಹರಿಯ ಕರ್ತೃತ್ವವು ಅರಿದ ಹಾಗೆಲ್ಲ ಭವ -

ಶರಧಿ ಬತ್ತುವದಿನ್ನು ಅರಿದವರಿಗೆ

ಹರಿ ಮಹಾರಾಜ ಗೋಪಾಲವಿಟ್ಠಲ ತನ್ನ

ಅರಿದಂತೆ ಅರಿವ ಅರಿದಿರುವುವರಿಗೆ ॥ 4 ॥ 


 ತ್ರಿವಿಡಿತಾಳ 


ಮರದು ಮಾಡಿದ ಕರ್ಮ ಮಹಾಮಹತ್ತಾದರು

ಹುರದು ಬೀಜವ ಬಿತ್ತಿ ಫಲ ಅಪೇಕ್ಷಿಸಿದಂತೆ

ದೊರಕಿಸಿ ಕೊಡದಿನ್ನು ಯೋಗ್ಯ ಗತಿಯು ನೋಡಾ

ಮರಳಿ ಸಂಸಾರದಿ ತಂದಿಡುವದು

ಅರಿದು ಮಾಡಿದ ಕರ್ಮ ಅಲ್ಪವಾದರು ನೋಡು

ಪರಮತ್ಯುತ್ತಮವಾದ ಫಲಗಳ ಕೊಡುವದು

ಸರಿ ಬಿಡು ಹರಿ ಅರಿದು ಕುಕರ್ಮವನ್ನೆ ಮಾಡೆ

ಮರದವಾನಂತೆ ಮರಳಿ ಫಲಯೈದ

ಕುರುಡ ಜನ್ಮಾರಭ್ಯ ಕುರಿತು ಅವಗೆ ಒಂದು

ಗುರುತ ಪೇಳೆನ್ನೆ ಅದರ ಕುರುಹನರಿವಾನೆ

ಅರಿದು ಬಹುದಿನ ನಾನಾ ಅರ್ಥವು ಮಧ್ಯ

ಕುರುಡನಂತಿಪ್ಪನ ಕುರಿತು ಅಣಕಿಸಿ ಒಂದು

ಗುರತು ತೋರಿ ಅದರ ಕುರುಹ ಪೇಳೆನ್ನ ಹುಟ್ಟು -

ಗುರುಡನಂದದಿ ತಾನು ಹುಡಿಕ್ಯಾಡುವನೆ ನೋಡ

ಶರಣಜನರಪಾಲಾ ಗೋಪಾಲವಿಟ್ಠಲ ತನ್ನ

ಅರಿದವರ ಹಿಂದೆ ತಿರುಗುವ ಕ್ಷಣಬಿಡದೆ ॥ 5 ॥ 


 ಅಟ್ಟತಾಳ 


ಕರ್ತೃತ್ವವೆಂಬದು ಜೀವ ಸ್ವರೂಪವು

ಹತ್ತಿ ಇಪ್ಪದು ನೋಡು ಅನಾದಿಯಿಂದಲಿ ನಿತ್ಯ

ದತ್ತವಾಗಿದೆ ಈಶನಿಂದವೆಂಬ ಮಾತು

ಅರ್ತು ನೋಡಿ ಹರಿಯ ಹೊರ್ತು ಆಗುವದಲ್ಲ

ಮರ್ತರೆ ಮರೆವುವ ಅರ್ತರೆ ಅರುವುವಾ

ಕರ್ತು ಕಾರ್ಯ ತಾ ಸರ್ವ ಸ್ವಾತಂತ್ರ ಹರಿ ತಾನು

ಸೂತ್ರ ನಾಟಕ ಸರ್ವ ಚೇಷ್ಟಿ ತಾ ಮಾಡಿಸೆ

ಕೀರ್ತಿ ಅಪಕೀರ್ತಿ ಜೀವರ್ಗೆ ತಂದೀವ

ಸ್ವಾರ್ಥಪಾರ ರಹಿತ ಗೋಪಾಲವಿಟ್ಠಲ 

ಆರ್ತಿ ತರಿವ ಅರಿದ ಭಕ್ತರ ಮನದ ॥ 6 ॥ 


 ಆದಿತಾಳ 


ಮಾಡಲಿಬೇಕು ಎಲ್ಲ ಮಾಡಿಲ್ಲವೆನಬೇಕು

ನೋಡಲಿಬೇಕು ಎಲ್ಲ ನೋಡಿಲ್ಲವೆನಬೇಕು

ಬೇಡಲಿಬೇಕು ನಾನೆ ಬೇಡಿಲ್ಲವೆನಬೇಕು

ಓಡಲಿಬೇಕು ನಾನೆ ಓಡಲಿಲ್ಲೆನಬೇಕು

ಆಡಲಿಬೇಕು ನಾನೆ ಆಡಿಲ್ಲವೆನಬೇಕು

ನೀಡಲಿಬೇಕು ನಾನೆ ನೀಡಿಲ್ಲವೆನಬೇಕು

ಕೇಡುಲಾಭಕೆ ಮನವ ಕೆಡಿಸದೆ ಒಂದೇ ರೀತಿ

ನೋಡಿದವರಿಗೆ ಉನ್ಮದನಂತೆ ತೋರುತ್ತ

ಗೂಢನಾಗಿ ಹರಿಯ ಗುಣಗಳ ಕೊಂಡಾಡುತ್ತ

ರೂಢಿಲಿ ಈ ವಪುವನ್ನು ಮಾಡಿದೆಲ್ಲ ಸಾಧನ

ಪಾಡಿದವರ ಪ್ರಾಣ ಗೋಪಾಲವಿಟ್ಠಲ ತಾನು

ನೋಡು ಈ ಪರಿ ಇದ್ದವಗೆ ಮಾಡುವ ಗತಿಗೆ ಹವಣಿ ॥ 7 ॥ 


 ಜತೆ 


ಸಕಲ ಸಾಧನ ಹರಿಯಾಧೀನ ತಿಳಿವದೆ ಸುಖ

ವೃಕೋದರನೊಡಿಯ ಗೋಪಾಲವಿಟ್ಠಲ ವೊಲಿವಾ ॥

******