kruti by Nidaguruki Jeevubai
ಹೆಜ್ಜೆ ತೋರೆ ಕಾಲಗೆಜ್ಜೆ ತೋರೆ
ಅರ್ಜುನ ಸಾರಥಿ ಪಟ್ಟದ ರಾಣಿ ಹೆಜ್ಜೆ ತೋರೆ ಪ
ಕಾಲಲಂದಿಗೆ ನೂಪುರವಿಟ್ಟ ಹೆಜ್ಜೆ ತೋರೆ
ಕಾಳಿಮರ್ದನ ಕೃಷ್ಣನರಸಿಯೆ ಹೆಜ್ಜೆ ತೋರೆ
ಕಾಲಸರವು ಪಾಡಗನಿಟ್ಟ ಹೆಜ್ಜೆ ತೋರೆ
ಕಾಳಿಂದಿ ರಮಣನ ಸತಿಯೆ ಹೆಜ್ಜೆ ತೋರೆ 1
ಬಡವರ ಮನೆಗೆ ನಡದು ಬರುವ ಹೆಜ್ಜೆ ತೋರೆ
ಬಡನಡು ಬಳುಕುತ ನಡೆಯುವ ಪುಟ್ಟ ಹೆಜ್ಜೆ ತೋರೆ
ಸಡಗರದಲಿ ಹರಿಯೊಡನೆ ಬರುವ ಹೆಜ್ಜೆ ತೋರೆ
ಪೊಡವಿಗೊಡೆಯ ಶ್ರೀ ಕೃಷ್ಣನರಸಿಯೆ ಹೆಜ್ಜೆ ತೋರೆ2
ಮೆಲ್ಲನೆ ಮೆಲ್ಲನೆ ನಡದು ಬರುವ ಹೆಜ್ಜೆ ತೋರೆ
ಲುಲ್ಲುರುಳಿ ಪೈಜನಗಳು ಹೊಳೆವ ಹೆಜ್ಜೆ ತೋರೆ
ಉಲ್ಲಾಸದಿ ಸುರರೆಲ್ಲರು ಸ್ತುತಿಪ ಹೆಜ್ಜೆ ತೋರೆ
ಫುಲ್ಲಾಕ್ಷನ ಒಡಗೂಡುತ ಬರುವ ಹೆಜ್ಜೆ ತೋರೆ3
ಪದ್ಮ ರೇಖೆಗಳಿಂದ ಶೋಭಿಪ ಹೆಜ್ಜೆ ತೋರೆ
ಪದ್ಮನಾಭನ ಕೂಡಿ ಬರುವ ಹೆಜ್ಜೆ ತೋರೆ
ಪದ್ಮದೊಳು ಪುಟ್ಟಿರುವ ಪುಟ್ಟ ಹೆಜ್ಜೆ ತೋರೆ
ಪದ್ಮಮುಖಿಯೆ ಶ್ರದ್ಧೆಲಿ ಭಜಿಪರು ಹೆಜ್ಜೆ ತೋರೆ4
ವಿರೋಧಿಕೃತ ಸಂವತ್ಸರ ಬರುತಿರೆ ಹೆಜ್ಜೆ ತೋರೆ
ವಿರೋಧಿಗಳ ದೂರೋಡಿಪ ದಿವ್ಯ ಹೆಜ್ಜೆ ತೋರೆ
ಸರೋಜದಳದೊಳು ಶೋಭಿಪ ದಿವ್ಯ ಹೆಜ್ಜೆ ತೋರೆ
ಸುರರೆಲ್ಲರು ಕೊಂಡಾಡುತ ಸ್ತುತಿಪ ಹೆಜ್ಜೆ ತೋರೆ5
ನಿಗಮವೇದ್ಯಳೆ ನಿನ್ನ ಪೊಗಳುವೆ ಹೆಜ್ಜೆ ತೋರೆ
ಅಗಣಿತ ಮಹಿಮನ ಗುಣಗಳ ಪೊಗಳುವೆ ಹೆಜ್ಜೆ ತೋರೆ
ಬಗೆ ಬಗೆ ಭಕುತರು ಪೂಜಿಪ ನಿನ್ನ ಹೆಜ್ಜೆ ತೋರೆ
ಖಗವಾಹನನೊಡಗೂಡುತ ಬರುವ ಹೆಜ್ಜೆ ತೋರೆ6
ಕಮಲ ಮುಖಿಯೆ ಕರುಣವ ಮಾಡಿ ಹೆಜ್ಜೆ ತೋರೆ
ಕಮಲನಾಭ ವಿಠ್ಠಲನ್ನ ರಾಣಿ ಹೆಜ್ಜೆ ತೋರೆ
ಕಮಲಾಕ್ಷಿಯರಿಂದ ಪೂಜೆಗೊಳ್ಳುವ ಹೆಜ್ಜೆ ತೋರೆ
ಸುಮನಸವಂದ್ಯನ ಸತಿಯೆ ನಮಿಪೆ ಹೆಜ್ಜೆ ತೋರೆ7
***