ರಾಗ - : ತಾಳ -
ನೋಡಯ್ಯಾ ಹರಿಯೆ ll ಪ ll
ಪಂಡರಪುರ ನಿಲಯನೆ ಕುಂಡಲಿಶಯನನೆ ll ಅ ಪ ll
ಪುಂಡರೀಕಗೊಲಿದವನೆ l ಅಂದು
ಶುಂಡಾಲವ ಪೊರೆದವನೆ
ಅಂಡಜ ವರ ವಾಹನನೆ l ಎನ್ನ
ಮಂಡೆಯ ಮೇಲ್ಕರವಿಡುತಲಿ ll 1 ll
ವಿಜಯಗೆ ಸಾರಥಿಯಾದಿ l ಅವನ
ಭುಜಗ ಶರದಿಂದ ಪೊರೆದಿ
ನಿಜ ಭಕುತಗೆ ನೀ ಒಲಿದ l ದೇವ
ಕುಜನಮರ್ದನ ಹರಿ ಮುದದಿ ll 2 ll
ಪಟುತರ ದೇಹ ಪ್ರಕಾಶ l ದಿಂದ
ವಟುವಂತೆ ಮೆರೆವ ಶ್ರೀಶ
ಕುಟಿಲ ರಹಿತ ರಂಗೇಶ l ವಿಟ್ಠಲ
ಹಟಮಾಡದೆ ಕಣ್ತೆರದು ll 3 ll
***