Showing posts with label ಪ್ರಣವ ಪೂರ್ವಕದಿಂದ vijaya vittala ankita suladi ಸಾಧನ ಸುಳಾದಿ PRANAVA POORVAKADINDA SADHANA SULADI. Show all posts
Showing posts with label ಪ್ರಣವ ಪೂರ್ವಕದಿಂದ vijaya vittala ankita suladi ಸಾಧನ ಸುಳಾದಿ PRANAVA POORVAKADINDA SADHANA SULADI. Show all posts

Monday 15 March 2021

ಪ್ರಣವ ಪೂರ್ವಕದಿಂದ vijaya vittala ankita suladi ಸಾಧನ ಸುಳಾದಿ PRANAVA POORVAKADINDA SADHANA SULADI


Audio by Mrs. Nandini Sripad


 ಶ್ರೀವಿಜಯದಾಸಾರ್ಯ ವಿರಚಿತ 

ಆಸನ ಪ್ರಾಣಾಯಾಮಾದಿ ಸಾಧನ ಸುಳಾದಿ 


ರಾಗ ಸಾರಂಗ 


ಧ್ರುವತಾಳ 

ಪ್ರಣವ ಪೂರ್ವಕದಿಂದ ಆಸನವಿಟ್ಟು ಮೂರರೊಳೊಂ -

ದನೆ ತಿಳಿದು ವಾಯುಧಾರಣೆ ಮಾಡು ವಿವೇಕನಾಗಿ

ಬಿನಗು ಇಂದ್ರಿಯಂಗಳು ಮನದಲ್ಲಿ ಕೂಡಿಟ್ಟು

ಅನುನಯದಿಂದ ಸಾಧನಕೆ ಮಾರ್ಗವ ಬಯಸೊ

ಘನೀಭೂತವಾದ ಭಕುತಿಯನು ಸಂಪಾದಿಸಿ ನಿತ್ಯ

ತನುವೆ ನಿರ್ಮಲನಾಗಿ ಜನರಹಿತ ಸ್ಥಳದಲ್ಲಿ

ಅನುದಿನ ದುಷ್ಟಯೋಚನೆಗಳ ತೊರೆದು

ಚಿನುಮಯನಾಗಿಪ್ಪ ವಿಜಯವಿಟ್ಠಲನ್ನ 

ಮನದಣಿಯ ನೀಕ್ಷಿಸುವಾಲೋಚನಿಯ ಮಾಡು ಬಿಡದೆ ॥ 1 ॥ 


 ಮಟ್ಟತಾಳ 


ಹಿರಿಯ ನಾಡಿಯಿಂದ ಮರುತನ ಮೆಲ್ಲನೆ

ಶಿರಸ ಪರಿಯಂತರ ತರಲುಪಾಯವನ್ನು

ಅರಿದು ಎರಡು ಎಂಟು ಪರಿಮಿತವಾದ ಮಾ -

ತುರ ತನಕ ರೇಚಕ ಆ ತರುವಾಯದಲಿ ಮೂವ -

ತ್ತೆರಡು ಮಾತುರ ತನಕ ವರಪೂರಕ ತಿಳಿದು

ಅರವತ್ತು ನಾಲಕು ಮೆರೆವ ಮಾತ್ರಕದನಿತು

ಇರುತಿಪ್ಪ ಕುಂಭಕ ಎರಡು ಅದರ ಅರ್ಧ

ಪರಿಯಾಯವ ನೋಡೀಪರಿಯಲಿ ಸಾಧಿಸುತ್ತ

ನಿರುತರ ಬಿಡದಲೆ ವರಸಮಾಧಿಯಲ್ಲಿ

ಕರಣ ಶುದ್ಧನಾಗೀಪರಿ ಚಿಂತಿಸಬೇಕು

ಪರಮಮೂರ್ತಿ ಧ್ಯಾನ ವಿಜಯವಿಟ್ಠಲ ಹರಿಯ

ಕುರುಹು ನೀಕ್ಷಿಸಿ ಪತಿಕರಿಸಿ ಸಜ್ಜನ ಸಂಗ ॥ 2 ॥ 


 ತ್ರಿವಿಡಿತಾಳ 


ಇದಕಿಂತ ಮೊದಲಿಗೆ ತುರಿಯ ನಾಮಕನ ಶ್ರೀ

ಪದದಲ್ಲಿ ವನಧಿಯ ಸತಿಯನ್ನು ನೆನೆದು

ಒದಗಿ ಹನ್ನೊಂದನೆ ದ್ವಾರದಲ್ಲಿ ಇಳಿಸಿ

ಹೃದಯದಾಕಾಶಕ್ಕೆ ಕೊಂಡು ಒಯ್ದು

ಮುದದಿಂದ ಮಂಗಳ ಸ್ನಾನವನ್ನೆ ಗೈದು

ಉದರದೊಳಗಿದ್ದ ಕಾಮಾದಿಗಳ ಕಳದು

ಗುದಭಾಗವಿಡಿದು ಶಿರದ ಮೂಲ ಪರಿಯಂತ

ತುದಿ ಮೊದಲು ಒಂದೇ ಸಮಾನವಾಗಿಪ್ಪ

ಸದುಮಲ ಪ್ರಧಾನ ನಾಡಿಯ ಮಧ್ಯದಲಿ

ಪದುಮರಾಗಮಯವಾದ ಎಂಟು ದಳದಿ

ಅಧೋಮೊಗವಾಗಿ ಇರುತಿಪ್ಪ ಪದುಮಾನೆತ್ತಿ

ಉದಯ ಭಾಸ್ಕರನೆಂಬೊ ಜ್ಞಾನದಿಂದ

ಚದುರ ಮನಸಿನಿಂದ ವಿಕಸಿತ ಮಾಡೋದು

ಇದೇ ಬಿಂಬಾಮೂರುತಿ ಇಪ್ಪ ಸ್ಥಾನ

ಸದಾಚಾರನಾಗಿ ಶ್ರೀವಿಜಯವಿಟ್ಠಲನ್ನ 

ಅದುಭೂತ ಅಣುರೂಪ ಧ್ಯಾನ ಪಡಿಯಬೇಕು ॥ 3 ॥ 


 ಅಟ್ಟತಾಳ 


ಅರೆಗಣ್ಣು ಮಾಡಿ ಪಲ್ಲುಗಳು ಕೂಡಿಸದಲೆ

ಕೊರಳು ಬಾಗದೆ ಕದಲದಂತೆ ಕುಳಿತು

ಕರಗಳು ತೊಡಿಯ ಮೇಲಿಟ್ಟು ತೀವ್ರದಿಂದ

ಬೆರಳುಗಳು ಸ್ವಲ್ಪು ಮಾತ್ರ ತಗ್ಗಿಸಿ

ನಿರುಪದ್ರವಾಗಿದ್ದ ಭೂಮಿಯನ್ನು ಸೇರಿ

ಸರಿಸದಲ್ಲಿ ತನ್ನ ಮೂರ್ತಿ ಎದುರಿಲಿಟ್ಟು

ಮರಳೆ ನಾಸಿಕ ಕೊನೆಯಲ್ಲಿ ದೃಷ್ಟಿ ಇಟ್ಟು

ಪರಬೊಮ್ಮನಾದ ಶ್ರೀವಿಜಯವಿಟ್ಠಲನ್ನ 

ಚರಣ ಮೊದಲ ಮಾಡಿ ಸ್ಮರಿಸು ನಿನ್ನೊಳಗೆ ॥ 4 ॥ 


 ಆದಿತಾಳ 


ಮಧ್ಯ ಮಧ್ಯದಲ್ಲಿ ಮನ ಎದ್ದು ಪೋಗಲಾಗಿ

ಅರ್ಧೈಯವಿಲ್ಲದೆ ಯಿದ್ದು ವಿನಯದಿಂದಲಿ

ತಿದ್ದಿ ಮನ ಮೆಲ್ಲನೆ ಪೊದ್ದಿಸಿಕೊಂಡು ದುರಾಸಿಯ

ಗೆದ್ದು ಸ್ವಧರ್ಮ ಬಿಡದೆ ಸಿದ್ದನಾಗೋ ಧ್ಯಾನದಲ್ಲಿ

ಶುದ್ಧಮೂರುತಿ ನಮ್ಮ ವಿಜಯವಿಟ್ಠಲರೇಯ ಪೊಳದು

ಉದ್ದರಿಸುವ ತನ್ನ ಚಿದ್ರೂಪವ ತೋರಿಕೊಳುತ ॥ 5 ॥ 


 ಜತೆ 


ಬಹಿರ ಶೂನ್ಯನಾಗಿ ಚರಿಸು ಅಂತರದಲ್ಲಿ

ಮಹದೈವ ವಿಜಯವಿಟ್ಠಲನ್ನ ಪಾದವೆ ಕಾಣು ॥

***********