ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ಯನ್ನ ಸಲಹುತಿಹೆ ಜನುಮ ಜನುಮಗಳಲ್ಲಿ| ದಾನವಾರಿಯೆ ಉರಗಶಯನ ಸಿರಿರಂಗರೇಯಾ ಪ
ಮುದದಿಂದ ತನ್ನ ಮಕ್ಕಳನು ತಾ ನೆನಿಯಲಿಕೆ| ಅದರಿಂದ ಪದಳಿಸುವ ಕಮಠದಂತೆ| ಉದರದಲಿ ನವಮಾಸ ವಾಸಾಗಿ ಬೆಳೆಯುತಿರೆ| ಪದುನಾಭನೆ ನಿಮ್ಮದಯದಿ ವರ್ಧಿಸಿದೆನಯ್ಯಾ 1
ಜಲಧಿಯೊಳಗ ತನ್ನ ನೋಟದಿ ನೋಡಲಾಕ್ಷಣ ದಿ| ಎಳೆಮೀನಗಳು ಬಹಳ ಸುಖಿಸುವಂತೆ| ಇಳೆಯೊಳಗ ಜನಿಸಿದ ಬಳಿಕ ಕರುಣ ನೋಟದಾ| ಒಲುಮಿಂದ ಸಕಲ ಸೌಖ್ಯದಲಿರುತಿಹೆನಯ್ಯಾ 2
ನಂದನನು ಪೋಷಿಸುವ ಮಾತೆಯಂದದದಿ ದುರಿತ| ಬಂದಡರೆ ಅಡಿಗಡಿಗೆ ಪರಿಹರಿಸುತಾ| ಕುಂದ ದಾವಾಗ ರಕ್ಷಿಪೆ ತಂದೆ ಮಹಿಪತಿ ಕಂದ ನೊಡಿಯನೇ ಚಿದಾನಂದ ಮೂರುತಿ ದೇವಾ3
***