ಮಂಗಳಂ ಶ್ರೀ ಮಾಯಾ ಜಯಕೃತಿಗೆ
ಮಂಗಳಂ ಶಾಂತಿ ಸ್ವರೂಪಳಿಗೆ
ಮಂಗಳಂ ಭಕ್ತರ ಕಂಗಳಿಂದಲಿ ನೋಡಿ
ರಂಗನ ಪಾದವ ತೋರ್ವಳಿಗೆ ಪ.
ಮಂಗಳಂ ಜಯ ಮಂಗಳಂ ಅ.ಪ.
ಅಲ್ಲಿ ವೈಕುಂಠದೊಳಗೆ ಇರಲು
ಬಲ್ಲಿದ ಭೃಗು ಋಷಿ ತಾ ಬರಲು
ವಲ್ಲಭನ ವಕ್ಷಸ್ಥಳ ಒದೆಯಲು ಹರಿ
ಸೊಲ್ಲು ಕೇಳದೆ ಓಡಿ ಬಂದಳಿಗೆ 1
ಕೊಲ್ಲಾಪುರದಲಿ ನಿಂದಳಿಗೆ
ಎಲ್ಲರಭೀಷ್ಟವ ಸಲಿಪಳಿಗೆ
ಖುಲ್ಲರ ಮರ್ಧಿಪ ಹರಿಯ ವಕ್ಷಸ್ಥಳ
ದಲ್ಲಿ ಸದಾ ನೆಲಸಿರ್ಪಳಿಗೆ 2
ಶ್ರೀ ಜಯದೇವಿಗೆ ಶ್ರೀ ಲಕ್ಷ್ಮಿಗೆ
ಶ್ರೀ ರುಕ್ಮಿಣೀ ಸತ್ಯಭಾಮಳಿಗೆ
ಶ್ರೀ ಪದ್ಮಾವತಿ ನಾಮಕ
ನಾನಾರೂಪ ಗುಣಾನ್ವಿತೆಗೆ 3
ಮುಕ್ತಾಮುಕ್ತರಿಗೊಡೆಯಳಿಗೆ
ಮುಕ್ತಿಯ ಭಕ್ತರಿಗೀವಳಿಗೆ
ಮುಕ್ತಳೆನಿಸಿ ಮುಕ್ತಾಶ್ರಯನಿಗೆ ಆ-
ಸಕ್ತಿಯಿಂದ ಸೇವೆ ಮಾಳ್ಪಳಿಗೆ 4
ಗೋಪಾಲಕೃಷ್ಣವಿಠ್ಠಲನ
ಆಪಾದ ಮೌಳಿಯ ಗುಣಗಳನು
ತಾ ಪರಿಪರಿಯಿಂದ ವರ್ಣಿಸುತ್ತಿದ್ದರು
ಅಪಾರವಾಗಿಯೆ ಕಾಂಬಳಿಗೆ 5
***