ನಮ್ಮ ನಿಮ್ಮಗೊಂದಾದ ಮಾತು ಬ್ರಹ್ಮಾದಿಗಳು ಹೋದರು ಸೋತು ಒಮ್ಮನಾದರೆ ತಿಳಿವದಂತು 1
ಬಿಟ್ಟು ಕೊಡೊ ನಿನ್ನ ಬಾಜಿ ಗಂಟುಹಾಕಿಹೆ ಬಲು ಗಜಿಬಿಜಿ ಮುಟ್ಟಲಾರದು ಮೊನೆ ಸಣ್ಣ ಸೂಜಿ ಗುಟ್ಟು ಹೇಳೊ ಸದ್ಗುರು ದೇವಾಜಿ 2
ನಮ್ಮ ನಿಮ್ಮಳಗ್ಯಾಕೆ ತೊಡಕು ಇಮ್ಮನಾದರೆ ಹುಟ್ಟಿತು ಒಡಕು ಹಮ್ಮು ಎನ್ನೊಳಗಿಲ್ಲ ನೀ ಹುಡುಕು ಸುಮ್ಮನ್ಯಾಕಿದು ಶ್ರಮೆಯ ತಿಡುಕು 3
ಗುರು ಹೇಳಿದ ಮಾತಿಗೆ ಮುಟ್ಟಿ ತೋರಿ ಕೊಡಬೇಕು ನೀನೆ ಗಟ್ಟಿ ಅರಿತ ಮ್ಯಾಲೆ ಮಿಸುಕನು ತುಟ್ಟಿ ಖರೆ ಮಾಡಿಕೊ ಜಗಜಟ್ಟಿ 4
ಒಂದು ಮಾತು ಎಂಬುದು ಬಲ್ಲಿ ಸಂದ ಸಂದೇಹ್ಯಾರಿಸೊ ನೀ ಇಲ್ಲಿ ಕಂದ ಮಹಿಪತಿ ಮನದಲ್ಲಿ ಚಂದವಾಗಿರೊ ನೀನೆವೆ ಅಲ್ಲಿ 5
***