Showing posts with label ಪಾಲಿಸೋ ಸದಾ ಪಾಲಿಸೊ ಪಾಲಿಸೊ ಪಾರ್ವತಿರಮಣ shyamasundara. Show all posts
Showing posts with label ಪಾಲಿಸೋ ಸದಾ ಪಾಲಿಸೊ ಪಾಲಿಸೊ ಪಾರ್ವತಿರಮಣ shyamasundara. Show all posts

Saturday, 1 May 2021

ಪಾಲಿಸೋ ಸದಾ ಪಾಲಿಸೊ ಪಾಲಿಸೊ ಪಾರ್ವತಿರಮಣ ankita shyamasundara

 " ಮಾನ್ವಿ ತಾಲೂಕಿನ ಶಿರಿವಾರ ಕ್ಷೇತ್ರಸ್ಥ ಶ್ರೀ ರಾಮಲಿಂಗದೇವರ ಸ್ತೋತ್ರ "

ರಾಗ : ಶಂಕರಾಭರಣ   ತಾಳ : ಅಟ

ಪಾಲಿಸೊ ಸದಾ ಪಾಲಿಸೊ ।। ಪಲ್ಲವಿ ।।


ಪಾಲಿಸೊ ಪಾರ್ವತಿರಮಣ । ತ್ರಿದ ।

ಶಾಲಯ ಪತಿನುತ ಚರಣ ।। ಆಹಾ ।।

ನಾಲಿಗೆಯಿಂದಲಿ ಶ್ರೀಲಕುಮೀಶನ ।

ಲೀಲೆ ಪಾಡುವ ಸುಖ

ಕಾಲಕಾಲಕೆ ಕೊಟ್ಟು ।। ಅ ಪ ।।


ಭೇಶ ಪಾವಕ ಪತಂಗ - ನಯನ ।

ಭಾಸುರ ಸ್ಫಟಿಕ ನಿಭಾಂಗ - ಹರಿ ।

ದಾಸ ಜನರ ಸುಸಂಗ - ವಿತ್ತು ।

ದೋಷ ಕಳೆಯೋ ರಾಮಲಿಂಗ ।। ಆಹಾ ।।

ವಾಸುಕಿ ಭೂಷ ಶಿರಿವಾಸರನಿಕಟಾಗ ।

ವಾಸ ವಿವರ್ಜಿತ ವಾಸ ದುರ್ವಾಸನೆ ।। ಚರಣ ।।


ಕೇರ ಕುಮಾರ ಕುಮಾರ - ಪಿತ ।

ಕೀರ ನಾಮಕನವತಾರ - ಕೀರ ।

ದೇರನ ಗರ್ವ ಪರಿಹಾರ - ತಾಟ ।

ಕಾರಿ ನಾಮ ಸವಿಗಾರ ।। ಆಹಾ ।।

ಕಾರುಣ್ಯಶರಧಿ ವೈಕಾರಿಕ ತತ್ತ್ವಾಧಿ-

ಕಾರಿ ವಿಕಾರಿ ಕ್ಷಕಾರ ಪದಾರ್ಚಕ ।। ಚರಣ ।।


ನಂದಿವಾಹನ ನಗಶರನೇ - ನೀಲ ।

ಕಂಧರ ಸುರನದಿ ಧರನೆ - ಶ್ಯಾಮ ।

ಸುಂದರ ವಿಠಲನ ಸಖನೆ - ಮಹಿ ।

ಸ್ಯಂದನ ಶಿವ ಶಂಕರನೆ ।। ಆಹಾ ।।

ಒಂದೂರಾರ್ಯರ

ಕರದಿಂದ ಪೂಜಿತನಾಗಿ ।

ನಿಂದು ಭಜಪರಿಗಾನಂದವೀವ

ದೇವ ।। ಚರಣ ।।

***

ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

" ಭೇಶ ಪಾವಕ ಪತಂಗ ನಯನ "

[ ಭೇಶ = ಚಂದ್ರ; ಪಾವಕ = ಅಗ್ನಿ; ಪತಂಗ = ಸೂರ್ಯ ]

ಬಳಗಣ್ಣಿನಲ್ಲಿ ಸೂರ್ಯ; ಎಡಗಣ್ಣಿನಲ್ಲಿ ಚಂದ್ರ ಮತ್ತು ಫಾಲ ನೇತ್ರದಲ್ಲಿ ಅಗ್ನಿ - ಹೀಗೆ ಮುಕ್ಕಣ್ಣನಾದ ಶ್ರೀ ಮಹಾರುದ್ರದೇವರು.

ಭಾಸುರ = ಮನೋಹರವಾದ

ಸ್ಫಟಿಕ = ಬಿಳಿ ಬಣ್ಣಯುಕ್ತ

ನಿಭಾಂಗ = ಪ್ರಕಾಶಮಾನವಾದ ದೇಹ ಕಾಂತಿಯುಳ್ಳ

ಸಿರಿವಾಸರ = ಶ್ರೀದೇವಿಯನ್ನು ತನ್ನ ವಕ್ಷದಲ್ಲಿ ಧರಿಸಿರುವ ಶ್ರೀ ಹರಿ

" ನಿಕಟಾಗ "

ಶ್ರೀ ಹರಿಗೆ ಸಮೀಪ  ವರ್ತಿಯಾದ ಅಂದರೆ ಶ್ರೀ ಹರಿಯ ದ್ವಿತೀಯಾಂಗ ಭೂತರು.

ವಾಸ ವಿವರ್ಜಿತ = ದಿಗಂಬರ

" ಕೇರ ಕುಮಾರ "

ಶ್ರೀ ಚತುರ್ಮುಖ ಬ್ರಹ್ಮದೇವರು ಮತ್ತು ಶ್ರೀ ವಾಯುದೇವರ ಮಕ್ಕಳು

[ ಕ + ಈರ = ಕೇರ; ಕ = ಶ್ರೀ ಬ್ರಹ್ಮದೇವರು, ಈರ = ಶ್ರೀ ವಾಯುದೇವರು ]

ಕೀರ = ಗಿಳಿ

ಕೀರನಾಮಕನವತಾರ = ಶ್ರೀ ಶುಕಾಚಾರ್ಯರು

ಕೀರದೇರನ = ಗಿಳಿಯನ್ನೇ ವಾಹನವನ್ನಾಗಿ ಉಳ್ಳ ಮನ್ಮಥ

" ತಾಟಕಾರಿ ನಾಮ ಸವಿಗಾರ "

ಶ್ರೀ ರಾಮ ತಾರಕ ನಾಮದ ಸವಿಯನ್ನು ಸದಾ ಉಂಡು ಆನಂದಿಸುತ್ತಿರುವ ಶ್ರೀ ಮಹಾರುದ್ರದೇವರು

" ವೈಕಾರಿಕ "

ಶ್ರೀ ಮಹಾರುದ್ರದೇವರು ಅಹಂಕಾರ ತತ್ತ್ವಕ್ಕೆ ಅಭಿಮಾನಿ.

ಅಹಂಕಾರ ತತ್ತ್ವವು ವೈಕಾರಿಕ - ತೈಜಸ - ತಾಮಸ ಎಂದು ಮೂರು ಪ್ರಕಾರ.

" ಕ್ಷಕಾರ ಪದಾರ್ಚಕ "

ಕ್ಷಕಾರ ವಾಚ್ಯನಾದ ಶ್ರೀ ಲಕ್ಷ್ಮೀ ನರಸಿಂಹದೇವರ ಪಾದ ಪದ್ಮಾರ್ಚಕರು ಶ್ರೀ ರುದ್ರದೇವರು.

[ ಶ್ರೀ ರುದ್ರದೇವರ ಬಿಂಬ ಶ್ರೀ ಸಂಕರ್ಷಣಾsಭಿನ್ನ ಶ್ರೀ ಲಕ್ಷ್ಮೀ ನರಸಿಂಹದೇವರು ]

ನೀಲಕಂಧರ = ವಿಷಕಂಠ

ಸುರನದಿಧರನೆ = ಗಂಗಾಧರನೆ

ಮಹಿಶ್ಯಂದನ = ಭೂಮಿಯನ್ನೇ ರಥವನ್ನಾಗಿ ಮಾಡಿಕೊಂಡವನು

ಒಂದೂರಾರ್ಯರ = ಶ್ರೀ ಐಕೂರು ಆಚಾರ್ಯರು

( ಒಂದು + ಊರು = ಐಕೂರು )

***