Showing posts with label ತಂದೆ ಮುದ್ದುಮೋಹನ ದಾಸರಾಯರ ಪದವ ankita gopalakrishna tandemuddumohana dasa stutih. Show all posts
Showing posts with label ತಂದೆ ಮುದ್ದುಮೋಹನ ದಾಸರಾಯರ ಪದವ ankita gopalakrishna tandemuddumohana dasa stutih. Show all posts

Sunday, 1 August 2021

ತಂದೆ ಮುದ್ದುಮೋಹನ ದಾಸರಾಯರ ಪದವ ankita gopalakrishna vittala tandemuddumohana dasa stutih

ತಂದೆ ಮುದ್ದುಮೋಹನ ದಾಸರಾಯರ ಪದವ

ಪೊಂದಿದವರಿಗೆ ಕಷ್ಟವೆ ಪ.


ಬಂಧನವ ಪರಿಹರಿಸಿ ಸಿಂಧುಶಯನನ ಮೂರ್ತಿ

ತಂದು ತೋರುವರು ಮನದಿ | ಮುದದಿ ಅ.ಪ.


ಅತಿಶಯದ ತಪದಿಂದ ಪತಿತ ಪಾವನನಂಘ್ರಿ

ಮತಿವಂತರಾಗಿ ಭಜಿಸಿ

ಪೃಥುವಿಯೊಳಗವತರಿಸಿ ಯತನವಿಲ್ಲದೆ ಕರ್ಮ

ಪಥವನ್ನೆ ಕೊನೆಗಾಣಿಸಿ

ಪತಿತರಿಗೆ ಅಂಕಿತವ ಹಿತದಿಂದ ಬೋಧಿಸಿ

ಅತಿ ಅದ್ಭುತವ ತೋರಿಸಿ

ಸುತರಂತೆ ಶಿಷ್ಯರನು ಹಿತದಿಂದನುಗ್ರಹಿಸಿ

ಗತಿಯ ಮಾರ್ಗವ ತೋರ್ವರು | ಇವರು 1

ದೇವತೆಗಳೊಡೆಯರು ಪಾವಮಾನಿಗೆ ಪ್ರಿಯರು

ಭೂವಲಯದೊಳು ಮೆರೆವರು

ಆವಕಾಲದಲಿ ಸುಖಾನಂದಭೋಗಿಗಳು

ಪಾವನ ಸುಚರಿತ್ರರು

ದೇವ ನರಹರಿ ಕರುಣ ಪೂರ್ಣವಾಗಿ ಪಡೆದು

ಭಾವಶುದ್ಧಿಯಲಿಪ್ಪರು

ಈ ವಿಧದ ಇವರ ಚರ್ಯೆಯನರಿಯುವರನರಿಯೆ

ಕಾವ ಭಕ್ತರ ಕರುಣಿಯ | ದೊರೆಯ 2

`ತ' ಎನಲು ತಪಸಿಯಹ `ದೇ' ಎನಲು ದೇಹ ಶುದ್ಧಿ

`ಮು' ಎನಲು ಮುಕ್ತನಾಗ್ವ

`ದು' ಎನ್ನಲು ದುರ್ಜನರು ದೂರವಾಗಿರುತಿಹರು

`ಮೋ' ಎನಲು ಮೋಕ್ಷದಾರಿ

`ಹ' ಎನಲು ಹರಿಬಂದು `ನ' ಎನಲು ನರ್ತಿಸುವ

`ದಾ' ಎನಲು ದಾರಿದ್ರನಾಶ

`ಸ' ಎನಲು ಸತ್ವಗುಣಿ `ರಾಯ' ಎನೆ ಪದವಾಳ್ವ

`ರು' ಎನಲು ಋಜುಮಾರ್ಗಿಯು | ಸುಖಿಯು 3

ಈ ರೀತಿಯಿಂ ತಂದೆ ಮುದ್ದುಮೋಹನದಾಸ ರಾ -

ಯರೆಂತೆಂದು ಜಪಿಸೆ

ಪಾರುಗಾಣಿಸಿ ಭವದ ಬಂಧನವ ಬಿಡಿಸುವರು

ದೇವಾಂಶ ಸಂಭೂತರು

ಕಾರುಣ್ಯ ನಿಧಿಗಳು ತೋರುವರು ಹರಿಮಾರ್ಗ

ಸಾರಿ ಭಜಿಪರಿಗೆ ಸತತ

ನಾರಸಿಂಹನ ಚರಣ ಸೇರಿಸಿ ಹೃದಯದಲಿ

ಸೂರೆಗೊಂಡಿಹರು ಮುಕ್ತಿ | ಸುಕೀರ್ತಿ 4

ಅಪಾರ ಅದ್ಭುತದ ಕರ್ಮಗಳ ನಡೆಸಿಹರು

ಪಾಪಿ ಜನಗಳ ಪೊರೆವರು

ರೂಪ ರೂಪಾಂತರದಿ ತೋರ್ಪರು ಸುಜನರಿಗೆ

ಶ್ರೀಪತಿಯ ವರ ಭಕ್ತರು

ಕೋಪತಾಪಗಳಿಂದ ನಿರ್ಲೇಪರಾಗಿಹರು

ತಾಪತ್ರಯಗಳ ಕಡಿವರು

ಗೋಪಾಲಕೃಷ್ಣವಿಠ್ಠಲನ ಪದಧ್ಯಾನವನು

ಗೋಪ್ಯದಿಂದಲಿ ಇತ್ತರು | ಇವರು5

****