Showing posts with label ಚಿಂತನೆ ಮಾಡು ಮನವೆ vijaya vittala ankita suladi ಅಜಾದಿ ಸುಳಾದಿ CHINTANE MAADU MANAVE AAZAADI SULADI. Show all posts
Showing posts with label ಚಿಂತನೆ ಮಾಡು ಮನವೆ vijaya vittala ankita suladi ಅಜಾದಿ ಸುಳಾದಿ CHINTANE MAADU MANAVE AAZAADI SULADI. Show all posts

Monday, 1 November 2021

ಚಿಂತನೆ ಮಾಡು ಮನವೆ vijaya vittala ankita suladi ಅಜಾದಿ ಸುಳಾದಿ CHINTANE MAADU MANAVE AAZAADI SULADI

Audio by Mrs. Nandini Sripad


 ಶ್ರೀವಿಜಯದಾಸಾರ್ಯ ವಿರಚಿತ 


 ಅಜಾದಿ ಸುಳಾದಿ 


(51 ಅಕ್ಷರಗಳ ವಿವರ , ಅಲ್ಲಿಪ್ಪ ಹರಿರೂಪಗಳು.) 


 ರಾಗ ಭೌಳಿ 


 ಧ್ರುವತಾಳ 


ಚಿಂತನೆ ಮಾಡು ಮನವೆ ಚಿನ್ಮಯದೇವನ್ನ ಯೇ -

ಕಾಂತದಲಿ ಯಿದ್ದು ಎಲ್ಲ ಕಾಲಾ

ಸಂತರ ವೊಡಗೂಡಿ ಸಾರಿಸಾರಿಗೆ ನಿನ್ನ 

ಅಂತರಂಗದಲ್ಲಿ ಆಲೋಚಿಸಿ 

ನಿಂತಲ್ಲಿ ಕುಳಿತಲ್ಲಿ ನಾನಾ ವ್ಯಾಪಾರದಲ್ಲಿ 

ಚಿಂತಿಸು ಶ್ರೀಹರಿಯಾನಂತ ರೂಪ 

ಎಂತೆಂತು ನೋಡಿದರದರಂತೆ ತೋರುತಲಿಪ್ಪ 

ಮಂತ್ರ ತಂತ್ರಕ್ಕೆ ಶಿಲುಕನು ಭಕ್ತಿಗೊಶನೊ 

ಸಂತತ ನಿರ್ದೋಷ ಭಕ್ತವತ್ಸಲ ಕರುಣಿ 

ಅಂತಕನಂತಕವು ಉಭಯ ಜೀವಿಗಳಿಗೆ 

ಸಂತೋಷದಲಿ ಚರಿಯಾ ಮಾತ್ರ ಲೀಲಾ 

ಕಂತುಕೋಟಿ ಲಾವಣ್ಯ ಮಿಗೆ ಶೋಭಿಸುವ ಆ -

ದ್ಯಂತ ಕಾಲರಹಿತ ತ್ರಿಗುಣಾತೀತ 

ಸಂತಾಪನಾಶ ವೊಂದಾರಂಭಿಸಿಕೊಂಡಾ -

ನಂತ ಸೂರ್ಯಪ್ರಕಾಶ ತರತಮ್ಯದಿ 

ತಂತುನಾಳದಿಂದ ದಿಗ್ದಂತಿ ಬಿಡಿಸಿಕೊಂಡು 

ನಿಂತಂತೆ ನಿಂತುಕೊಂಡಿಪ್ಪ ಮಹಿಮ 

ಎಂತು ಭಾವಿಸಲು ಉಪಾಸ್ತಿಯ ಕೊಡುವ ಶ್ರೀ -

ಕಾಂತನು ಪ್ರಸಿದ್ಧದಿಂದ ತಾನೆ 

ಚಿಂತಾಯಕ ನಮ್ಮ ವಿಜಯವಿಟ್ಠಲರೇಯ 

ಮುಂತಿ(ತೆ) ನಲಿದಾಡುವ ಭಾಗ್ಯವ ಬೇಡು ನೋಡು ॥ 1 ॥ 


 ಮಟ್ಟತಾಳ 


ಕಾ ಮೊದಲು ಕ್ಷಾ ಕಡೆ ಮೂವತ್ತೈದು 

ಈ ಮಹವರ್ಣಗಳು ಯಿದರ ವಿವರ ತಿಳಿವದು 

ಆ ಮರಿಯಾದಿಗಳು ಪದಿನಾರು ಉಂಟು 

ವ್ಯೋಮ ವ್ಯಾಪಿಸಿದಂತೆ ಸರ್ವದ ವರ್ಣಗಳು 

ಸಾಮಸ್ತ ಬಗೆಯಿಂದ ವ್ಯಾಪ್ತವಾಗಿವೆ ನೋಡಿ 

ಸಾಮ ಮಿಗಿಲಾದ ಶಾಸ್ತ್ರ ವೈದಿಕ ಶಬ್ದ 

ಭೂಮಿಯೊಳಗಾಡುವ ಲೌಕಿಕ ಶಬ್ದಗಳು 

ಈ ಮಹವರ್ಣದಲಿ ಪ್ರವರ್ತಕವಲ್ಲದಲೆ 

ಕಾಮಿಸಿದರೆ ವೊಂದು ಪ್ರಯೋಗ(ಜನ)ವಿನ್ನಿಲ್ಲ

ಭೂಮ ಭೂತೇಶ್ವೇರ ವಿಜಯವಿಟ್ಠಲರೇಯನ 

ನಾಮ ಮೂರ್ತಿಗಳೆಂದು ಚಿಂತಿಸು ಪ್ರಣವದಲ್ಲಿ ॥ 2 ॥ 


 ತ್ರಿವಿಡಿತಾಳ 


ಕಾ ವಂದು ಗುಣಿಸಿದರೆ ಹದಿನಾರು ಬಗೆ ವುಂಟು 

ಆವಾವ ಕಾಲಕ್ಕೆ ನೋಡಿದರು 

ಭಾವಿಸು ಕ ಕಿ ಕು ಕೆ ಕೈ ಕೊ ಕೌ ಕಂ 

ಈ ವಿಧ ಹೃಸ್ವ ಯಿದರಂತೆ ದೀರ್ಘ 

ಯಾವತ್ತು ಈ ಪರಿ ಯಿದರಂತೆ ನಿಜವೆಂದು

ಕೋವಿದನಾಗಿ ನೀ ತಿಳಿಯಬೇಕು 

ಕಾ ವರಣದ ರೂಪದಿ ಕಪಿಲಾದಿ ಹದಿನಾರು 

ಈ ವೊಳಗಿನ ಹದಿನಾರು ರೂಪ 

ದೇವನ್ನ ನಾಮಗಳು ಅಜಾದಿಗಳ ಸಂಖ್ಯ 

ಮೂವತ್ತೆರೆಡು ಭಗವದ್ರೂಪಗಳು 

ಪಾವನ ಮೂರುತಿ ವಿಜಯವಿಟ್ಠಲರೇಯ 

ಆವಾಗ ವರ್ಣಾಧಿಷ್ಟಾನದಲ್ಲಿ ಯಿಪ್ಪ ॥ 3 ॥ 


 ಅಟ್ಟತಾಳ 


ಇದರ ವಿಹಿತ ವೊಂದೊಂದು ವರಣಕ್ಕೆ 

ಅದರಂತೆ ಕ ಚ ಟ ತ ಪ ಯ ಶ ವ -

ರ್ಗದಲಿ ಯೆಣಿಸಿ ಕ ಷ ಮಿಳಿತವಾದ 

ಇದನ್ನೆಲ್ಲ ಕೂಡಿಸಿ ಪಂಚತ್ರಿಂಶತಿ ಯಾ -

ದದು ಕಾಣೊ ಯಿದರೊಳು ಅ ಆ ಇ ಉ ವುಂ ಎಂಬ 

ಹದಿನಾರು ಯಿಡಲಾಗಿ ಕ ಅಃ ವಾಹೆದು 

ಇದನ್ನೆಲ್ಲ ವೊಂದೊಂದು ಯೇಕಾಕ್ಷರದಿಂದ 

ಪದುಮನಾಭನು ಕರಸಿಕೊಂಬನು ಕೇಳಿ 

ಅದೆ ಅದೆ ನಾಮ ಮತ್ತದೆ ಅದೆ ರೂಪದಿ 

ಒದಗಿ ಯೆಣಿಸಲಾಗಿ ಮೂವತ್ತೆರೆಡು ನಾಮಗಳು 

ಸದಮಲವಾಗಿವೆ ಅರವತ್ತು ನಾಲಕು 

ಮೊದಲಾರಂಭಿಸಿ ಮೂವತ್ತೈದಕ್ಕೆ ನೋಡು 

ಮುದದಿಂದ ಗುಣಿಸಲು ವೊಂದೊಂದು ವರ್ಣಕ್ಕೆ 

ಅದೆ ಪ್ರಕಾರದಲಿ ಅರವತ್ತು ನಾಲ್ಕು ವುಂಟು 

ಅಧಿಕಾರತನ ಭೇದ ಧ್ಯಾನ ಮಾಡುವದಕ್ಕೆ 

ಪದುಮಗರ್ಭನಯ್ಯ ವಿಜಯವಿಟ್ಠಲರೇಯ 

ಪದವಿಯ ಕೊಡುವನು ಈ ಪರಿ ಕೊಂಡಾಡೆ ॥ 4 ॥ 


 ಆದಿತಾಳ 


ಆವನಾದರು ಹಳಿಯಲಿ ಉಗುಳಲಿ 

ಆವನಾದರು ಬೈಯ್ಯಲಿ ಕಾಯಲಿ 

ಆವನಾದರು ಹೊಡೆಯಲಿ ತಡೆಯಲಿ 

ಆವನಾದರು ಪೊಗಳಲಿ ಅಟ್ಟಲಿ 

ಆವನಾದರು ವುಣಿಸಲಿ ವುಡಿಸಲಿ 

ಆವನಾದರು ಛೀ ಛೀ ಯೆನಲಿ 

ಆವನಾದರು ಥೂ ಥೂ ಅನಲಿ 

ಆವನಾದರು ಭಂಗಿಸಲಿ ಮ -

ತ್ತಾವನಾದರು ಹಂಗಿಸಲಿ 

ಆವನಾದರು ಯೇನೇನನಲಿ 

ಆವದಾದರೀ ವರ್ಣಗಳೆಲ್ಲಾ ಭಗವನ್ನಾಮಗಳೊ 

ಜೀವನ ಮುಕ್ತನು ಈ ವಿಧದಿ ತಿಳಿದವನು 

ನೋವು ನೋವುಗಳಲ್ಲಿ ಪಾವನವಾದ ಭಕುತಿಯಲಿ ಸ್ವ -

ಭಾವಿತ ನೀನಾಗೊ ಜ್ಞಾನಿ ನೀನಾಗೊ 

ಯಾವತ್ತು ಯಿಂದ್ರಿಯಗಳ ವ್ಯಾಪಾರ -

ಸೇವೆ ಶ್ರೀಹರಿಗೆನ್ನು 

ತ್ರೈವಿಧ ಜೀವರು ಯಿದನೆ ತೊರೆದು ಮ -

ತ್ತಾವದು ಆಡುವರೊ ವರ್ಣಗಳಿಲ್ಲದಲೆ 

ದೇವ ದೇವೇಶನ್ನ ವೊಲಿಸಬೇಕಾದರೆ 

ಈ ವುಪಾಯವೇ ಬೇಕು ಎಲ್ಲಿದ್ದರು ಕೇಳು 

ಕಾಮಜನಕ ನಮ್ಮ ವಿಜಯವಿಟ್ಠಲರೇಯ 

ಆವಾವ ವರ್ಣಗಳಂತೆ ವೊಳಗಿದ್ದು 

ಕಾವನು ಶರಣರನು ವೊಡನೊಡನೆ ಬರುವ ॥ 5 ॥ 


 ಜತೆ 


ಅಕ್ಷರಾಕ್ಷರದಿಂದ ಭಗವನ್ನಾಮವೆ ಚಿಂತಿಸು 

ಅಕ್ಷರಾಕ್ಷರಪುರುಷ ವಿಜಯವಿಟ್ಠಲ ಸುಳಿವ ॥

***