Showing posts with label ಈ ಪ್ರಾರಬ್ಧಕರ್ಮ vijaya vittala suladi ಪ್ರಾರಬ್ಧಕರ್ಮ ಬಿಡಿಸುವ ಸುಳಾದಿ EE PRAARABDHA KARMA PRAARABHA KARMA BIDISUVA SULADI. Show all posts
Showing posts with label ಈ ಪ್ರಾರಬ್ಧಕರ್ಮ vijaya vittala suladi ಪ್ರಾರಬ್ಧಕರ್ಮ ಬಿಡಿಸುವ ಸುಳಾದಿ EE PRAARABDHA KARMA PRAARABHA KARMA BIDISUVA SULADI. Show all posts

Sunday, 8 December 2019

ಈ ಪ್ರಾರಬ್ಧಕರ್ಮ vijaya vittala suladi ಪ್ರಾರಬ್ಧಕರ್ಮ ಬಿಡಿಸುವ ಸುಳಾದಿ EE PRAARABDHA KARMA PRAARABHA KARMA BIDISUVA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ಕೃತ 
 ಸಾಧನಾ ಭಾಗದ ಸುಳಾದಿ 

(ಅಪರೋಕ್ಷಜ್ಞಾನಿಗಳಿಗಾದರೂ ಪ್ರಾರಬ್ಧಕರ್ಮ ಬಿಡದು. ಪ್ರಾರಬ್ಧಕರ್ಮ ಹರಿಯ ಹೊರತು ಬಿಡಿಸುವರಿಲ್ಲ. ಇದರಿಂದ ಆವ ಸಾಧನವಿಲ್ಲ . ಪ್ರಾರಬ್ಧಕರ್ಮ ಬಿಡಿಸುವ ಹರಿ ಇಚ್ಛೆ)

 ರಾಗ ಮೋಹನ 

 ಧ್ರುವತಾಳ 

ಈ ಪ್ರಾರಬ್ಧಕರ್ಮವೇಸು ದಿವಸ ಉಂಟೋ
ನೀ ಪ್ರೀತಿಯಿಂದಲಿ ಪೇಳೊ ಜೀಯಾ
ನಾ ಪ್ರಪಂಚದವನಲ್ಲ ನಿರ್ಮಳನಾಗಿ ನುಡಿದೆ
ಹೇ ಪ್ರಾಣನಾಥನೆ ವರದಾಯಕಾ
ಆ ಪ್ರಕೃತಿ ಸಂಬಂಧದಿಂದ ಬಂದ ತ್ರಿಗುಣ
ಸು ಪ್ರಯೋಜನದಲ್ಲಿ ಮಿಳಿತವಯ್ಯಾ
ನಾ ಪ್ರಕೃತಿಕೂಲಕಾಣೆ ನಿನ್ನಿಚ್ಛೆಯಲ್ಲದೇ
ಭೂ ಪ್ರಕರಣದಲ್ಲಿ ಚರಿಸಿದರು 
ಸ್ವ ಪ್ರವೇಶದಿಂದ ಲೇಶ ಮಾತುರ ಪೊಂದಿದ
ಪ್ರತಿಬಂಧಕ ತೊಲಗುವದೇ
ಶ್ರೀ ಪ್ರಿಯನಾದ ರಂಗ ವಿಜಯವಿಠ್ಠಲ ನೀನೆ
ಈ ಪ್ರಕಾರ ಮಾಳ್ಪದು ಬಿಡಿಸಬಲ್ಲವರಿಲ್ಲಾ ॥ 1 ॥

 ಮಟ್ಟತಾಳ 

ಸಾಕು ಸಾಕು ಎನಗೆ ಇಹಲೋಕದ ಸುಖ
ಬೇಕು ಬೇಕು ನಿನ್ನ ಚರಣಕಮಲವನ್ನು
ನೂಕು ನೂಕು ಬಂದ ಭವವಾರಿಧಿಯನ್ನು
ಸಾಕು ಸಾಕುವದು ಭಕ್ತರೊಳೆಣಿಸಿ
ಹಾಕು ಹಾಕದಿರು ಗರ್ಭದ ದುಃಖಕ್ಕೆ
ಜೋಕಿ ಜೋಕಿ ಮಾಡು ಜ್ಞಾನ ಭಕುತಿ ಕೊಟ್ಟು
ಕಾಕುಲತಿ ಬಿಡಿಸು ಕಂಡಲ್ಲಿ ಚರಿಸಿದಂತೆ
ಲೋಕನಾಯಕ ನಮ್ಮ ವಿಜಯವಿಠ್ಠಲ ಕರು -
ಣಾಕರ ಮೂರ್ತಿಯೇ ಈ ವಾಕು ಲಾಲಿಸುವುದು ॥ 2 ॥

 ತ್ರಿವಿಡಿತಾಳ 

ಇದರಿಂದ ಸಾಧನ ಇಪ್ಪದಿಲ್ಲವೊ ದೇವಾ
ಅದುಭೂತವಾಗಿದೆ ನೋಡಿದದಕೋ
ಸದರವಿಲ್ಲದೆ ನಾನು ಅನುಭವಿಸುವ ಕರ್ಮ
ಮುದದಿಂದ ತಿಳಿದರು ನೆಲೆಗಾಣೆನೋ
ಉದರಗೋಸುಗ ಹರಿ ತಿರುಗುವಂತೆ ಮಾ -
ಡಿದನೊ ಎಂಬುದು ಎನಗೆ ತೋರುತಿದೆ
ಇದರ ವಿಚಾರ ವಿಸ್ತಾರವಾಗಿ ನಿನಗೆ
ಮೊದಲಿಂದ ಬಲ್ಲವಿಕೆ ನುಡಿವದೇನು
ಹೆದೆ ಏರಿಸಿ ಬಾಣ ಹೊಡೆದಂತೆ ನಿತ್ಯ ದೇ -
ಶದ ಮೇಲೆ ಚರಿಸುವೆ ನಿನ್ನಿಂದಲಿ
ಮದವುಳ್ಳ ಮನುಜರ ಉನ್ನತ ತಗ್ಗಿಸಿ
ಪದವಿಯ ಕೊಡಿಸುವ ಕೊಡುವವನೆ
ಉದಕ ಓದನವೆಲ್ಲ ಪೂರ್ವೋಕ್ತ ಪ್ರಕಾರ
ಪದೊಪದಿಗೆ ನೀನು ಇತ್ತಂತೆವೇ
ಮೆದೆವುತ್ತ ಶಾರೀರ ಧರಣದಲ್ಲಿ ಬಾಳಿ
ಬದುಕುವೆನಯ್ಯಾ ಬಹು ಮಂದಿ ಕೂಡ
ಅಧಿಕ ಮತ್ತಾವುದು ನಿನ್ನ ಸಂಕಲ್ಪಕ್ಕೆ
ತುದಿಯಷ್ಟು ಬಿಡಿಸಿಕೊಂಬುವನು ಇಲ್ಲಾ
ಬದಿಯಲ್ಲಿ ಇಪ್ಪ ಸಿರಿ ವಿಜಯವಿಠ್ಠಲ ಸರ್ವ
ನಿಧಿ ನದಿಗಳು ನಿನ್ನ ಪದನಖದಲಿ ಉಂಟು ॥ 3 ॥

 ಅಟ್ಟತಾಳ 

ಪುರ ವೈರಿ ಚಂದ್ರಮ ಸುರಪತಿ ಭಾಸ್ಕರ
ಸುರರಾದ್ಯರಿಗೆ ತಪ್ಪಲರಿಯದು ಪ್ರಾರಬ್ಧ
ನರದೇಹ ತೆತ್ತ ಮಂದರಿಗೆ ಬಿಡುವದೆ
ಹರಿ ನಿನ್ನ ಇಚ್ಛೆಯ ಪರಿಹರಿಸುವನಾರು
ಪರಧನ ಪರ ಓದನ ಮಿಗಿಲಾದವು
ಪರಿಪರಿಯಿಂದ ಬಂದರೆ ಉಣಲಿಬೇಕು
ಶಿರವನ್ನು ಬೀಸಿ ಕೊಸರಿಕೊಂಡರೇನಯ್ಯಾ
ಬರಿದೆಯಲ್ಲದೆ ಮನುಜರಿಂದಾಗುವುದೇನು
ಧರಿ ಮೇಲೆ ಇಪ್ಪ ಪರ್ಯಂತ ನೀನಿಟ್ಟ
ತೆರದಲ್ಲಿ ಇರಬೇಕು ಸ್ಮರಣೆಯ ಮಾಡುತ್ತ
ಗುರುದ್ವಾರದಲಿಂದ ದೊರೆತದ್ದು ಕೈಕೊಂಡು
ಹರಿಯ ಧ್ಯಾನದೊಳಿರಬೇಕು ಇರಬೇಕು
ಇರವ ಬಲ್ಲವ ನಮ್ಮ ವಿಜಯವಿಠ್ಠಲ ನಿನ್ನ
ಚರಣವೆ ಪ್ರಧಾನ ಬಲವಾಗಿ ಇರಲಿ ॥ 4 ॥

 ಆದಿತಾಳ 

ಆವಗತಿ ಎನಗೆ ಚಿಂತಿಸಿ ಇದ್ದಿಯಾ
ಶೈವಾದಿ ಮತದವ ನಾನಲ್ಲ ಎಲೊ ನಲ್ಲ
ಲಾವಕರಿಗೊಪ್ಪಿಸಿ ಗತಿಗೆಡಸದಿರು
ಠಾವ ಠಾವಿನಲ್ಲಿ ನಿನ್ನ ನಿಜ ವ್ಯಾಪಾರ ಉಂಟು
ಕಾವ ಪ್ರದಾತ ನೀನೆ ಕಂಡವರನರಿಯೆ
ನೋವ ನೋವಾದರೂ ಪೋಗಲಾಡುವೆ ಶುದ್ದ
ಜೀವಿಗಳಿಗೆ ಪಂಚ ಪ್ರಾಣನಾಗಿ ಇಪ್ಪನೆ
ಗೋವ ಗೋಪೆರ ಕೂಡ ನಲಿದಾಡಿದ ವಾಸು -
ದೇವ ಎನಗೆ ಕೇಳೋ ದೋಷಾ ಎಂಬದು ಪುಸಿ
ಈ ವಾಣಿ ದಯಮಾಡಿ ಇತ್ತದದಕೆ ಮುನ್ನೆ
ಪಾವನ ಮಾಡುವದು ಏಕ ಮನಸು ಕೊಟ್ಟು
ಕೋವಿದ ರಾಯಾ ನಮ್ಮ ವಿಜಯವಿಠ್ಠಲ ನಿನ್ನ
ಸೇವೆ ಒಂದುಳ್ಳರೆ ಯಾವತ್ತು ಸುಖವುಂಟು ॥ 5 ॥

 ಜತೆ 

ನಿನ್ನ ಮನಸು ಬಂದದಲ್ಲದೆ ಜಗದೊಳು
ಅನ್ಯ ಯೋಚನೆಯಿಲ್ಲ ವಿಜಯವಿಠ್ಠಲ ಧೊರಿಯೇ ॥
************