Showing posts with label ಹನುಮ ಭೀಮಾನಂದ ಮುನಿರಾಯ ಎನ್ನ jagannatha vittala ತತ್ತ್ವಸುವ್ವಾಲಿ HANUMA BHEEMAANANDA MUNIRAYA ENNA TATVA SUVVAALI. Show all posts
Showing posts with label ಹನುಮ ಭೀಮಾನಂದ ಮುನಿರಾಯ ಎನ್ನ jagannatha vittala ತತ್ತ್ವಸುವ್ವಾಲಿ HANUMA BHEEMAANANDA MUNIRAYA ENNA TATVA SUVVAALI. Show all posts

Saturday, 14 December 2019

ಹನುಮ ಭೀಮಾನಂದ ಮುನಿರಾಯ ಎನ್ನ ankita jagannatha vittala ತತ್ತ್ವಸುವ್ವಾಲಿ HANUMA BHEEMAANANDA MUNIRAYA ENNA TATVA SUVVAALI

Audio by Mrs. Nandini Sripad



ಶ್ರೀ ಜಗನ್ನಾಥದಾಸಾರ್ಯ ವಿರಚಿತ




ತತ್ತ್ವಸುವ್ವಾಲಿ




ಶ್ರೀ ಪ್ರಾಣದೇವರ ಸ್ತುತಿ




ಹನುಮಭೀಮಾನಂದಮುನಿರಾಯ ಎನ್ನ ದು -

ರ್ಗುಣಗಳೆಣಿಸದಲೆ ಸಲಹೆಂದು । ಸಲಹೆಂದು ಬಿನ್ನೈಪೆ ವಿ-
ಜ್ಞಾನ ರೂಪ ವಿಜಿತಾತ್ಮ ॥ 1 ॥



ಪ್ರಾಣನಾಯಕ ನಿನ್ನ ಕಾಣಬೇಕೆಂದೆನುತ

ಸಾನುರಾಗದಲಿ ನಮಿಸುವೆ । ನಮಿಸುವೆನು ಮೂಜಗ -
ತ್ರಾಣ ಪಂಚಾಸ್ಯ ಪರಮೇಷ್ಠಿ ॥ 2 ॥



ಚತುರವಿಂಶತಿ ತತ್ತ್ವಪತಿಗಳಾಳುವ ಶಕ್ತ

ನತಿಸುವೆನು ನಿನ್ನ ಚರಣಕ್ಕೆ । ಚರಣಕಮಲವ ತೋರಿ
ಕೃತಕೃತ್ಯನೆನಿಸೋ ಕೃಪೆಯಿಂದ ॥ 3 ॥



ತ್ರಿದಶತ್ರಿಂಶತಿ ರೂಪ ಸುದತಿಯಿಂದೊಡಗೊಡಿ 

ಪದುಮಜಾಂಡದೊಳು ಸರ್ವತ್ರ । ಸರ್ವತ್ರ ಭಕುತರ
ಬದಿಗನಾಗಿದ್ದು ಸಲಹುವಿ ॥ 4 ॥



ಕೋಟಿತ್ರಯಸ್ವರೂಪ ದಾಟಿಸು ಭವಾಬ್ಧಿಯ ನಿ -

ಶಾಟಕುಲವೈರಿ ಭಯಹಾರಿ । ಭಯಹಾರಿ ರಣದೊಳು ಕಿ -
ರೀಟಿಯನು ಕಾಯ್ದಿ ಧ್ವಜನಾಗಿ ॥ 5 ॥



ಮೂರೇಳು ಸಾವಿರದ ಆರ್ನೂರುಮಂತ್ರ

ಈರೇಳು ಜಗದಿ ಜನರೊಳು । ಜನರೊಳು ಮಾಡಿ ಉ -
ದ್ಧಾರಗೈಸುವಿಯೊ ಸುಜನರ ॥ 6 ॥



ಪವಮಾನರಾಯ ನೀ ತ್ರಿವಿಧಜೀವರೊಳಿದ್ದು

ವಿವಿಧವ್ಯಾಪಾರ ನೀ ಮಾಡಿ । ನೀ ಮಾಡಿ ಮಾಡಿಸಿ
ಅವರವರ ಗತಿಯ ಕೊಡುತಿಪ್ಪಿ ॥ 7 ॥



ಪವಮಾನಗುರುವೆ ನಿನ್ನವರ ಸೇವಕ ನಾನು

ಶ್ರವಣಮನನಾದಿ ಭಕುತಿಯ । ಭಕುತಿ ನಿನ್ನಲ್ಲಿ ಮಾ -
ಧವನಲ್ಲಿ ಕೊಟ್ಟು ಸಲಹಯ್ಯ ॥ 8 ॥



ಮಿಶ್ರಜೀವರೊಳಗಿದ್ದು ಮಿಶ್ರಜ್ಞಾನವನಿತ್ತು

ಮಿಶ್ರಸಾಧನವ ನೀ ಮಾಡಿ । ನೀ ಮಾಡಿ ಮಾಡಿಸಿ
ಮಿಶ್ರಗತಿಗಳನೇ ಕೊಡುತಿಪ್ಪಿ ॥ 9 ॥



ಅನಿಲದೇವನೆ ದೈತ್ಯದನುಜಗಣದೊಳಗಿದ್ದು

ಅನುಚಿತಕರ್ಮಗಳ ನೀ ಮಾಡಿ । ನೀ ಮಾಡಿ ಮಾಡಿಸಿ
ದಣಿಸುವಿಯೊ ಅವರ ದಿವಿಜೇಶ ॥ 10 ॥



ಕಾಲನಿಯಾಮಕನೆ ಕಾಲತ್ರಯಂಗಳಲಿ

ಕಾಲಗುಣಕರ್ಮ ಅನುಸಾರ । ಅನುಸಾರವಿತ್ತು ಪರಿ -
ಪಾಲಿಸುವಿ ಜಗವ ಪವಮಾನ ॥ 11 ॥



ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ

ಶ್ರೀಕಂಠಮುಖ್ಯ ಸುರರಿಗೆ । ಸುರರಿಗಿಲ್ಲವೊ ಭಾರ -
ತೀಕಾಂತ ನಿನಗೆ ಬಹದೆಂತೋ ॥ 12 ॥



ಕಲ್ಯಾದಿದೈತ್ಯಕುಲದಲ್ಲಣ ದಯಾಸಾಂದ್ರ

ಬಲ್ಲಿದನು ಜಗಕೆ ಭಯದೂರ । ಭಯದೂರ ಭಕ್ತರನು
ಎಲ್ಲ ಕಾಲದಲಿ ಸಲಹಯ್ಯ ॥ 13 ॥



ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ -

ದ್ಧಾರ ಮಾಡದಿರೆ ಭಕತರ । ಭಕತರನು ಕಾವರಿ -
ನ್ನಾರು ಲೋಕದಲಿ ಜಯವಂತ ॥ 14 ॥



ತ್ರಿಜಗದ್ಗುರುವರೇಣ್ಯ ಋಜುಗಣಾಧಿಪ ಪದಾಂ -

ಬುಜಯುಗ್ಮಕೆರಗಿ ಬಿನ್ನೈಪೆ । ಬಿನ್ನೈಪೆ ಮನ್ಮನದಿ
ನಿಜರೂಪ ತೋರಿ ಸಂತೈಸು ॥ 15 ॥



ಅನಿಲದೇವನೆ ನಿನ್ನ ಜನುಮಜನುಮಗಳಲ್ಲಿ

ಇನಿತು ಬೇಡುವೆನು ಎಂದೆಂದು । ಎಂದೆಂದು ವಿಷಯ ಚಿಂ -
ತನೆಯ ಕೊಡದೆನ್ನ ಸಲಹೆಂದು ॥ 16 ॥



ತಾರತಮ್ಯಜ್ಞಾನ ವೈರಾಗ್ಯಸದ್ಭಕ್ತಿ

ದಾರಢ್ಯವಾಗಿ ಇರಲೆಂದು । ಇರಲೆಂದು ಬಿನ್ನೈಪೆ
ಭಾರತೀರಮಣ ನಿನಗಾನು ॥ 17 ॥



ಮರಣಜನನಗಳು ಬಂದರೆ ಬರಲಿ ಪ್ರದ್ವೇಷ

ಗುರುಹಿರಿಯರಲ್ಲಿ ಹರಿಯಲ್ಲಿ । ಹರಿಯಲ್ಲಿ ಕೊಡದೆ ಉ -
ದ್ಧರಿಸಬೇಕೆನ್ನ ಪರಮಾಪ್ತ ॥ 18 ॥



ವಿಷಯದಾಶೆಯ ಬಿಡಿಸಿ ಅಸುನಾಥ ಎನ್ನ ಪಾ -

ಲಿಸಬೇಕು ಮನಸು ನಿನ್ನಲ್ಲಿ । ನಿನ್ನಲ್ಲಿ ನಿಲಿಸಿ ಸಂ -
ತಸದಿ ಕಾಯೆನ್ನ ಮರುದೀಶ ॥ 19 ॥



ಅಂಜಿದವರಿಗೆ ವಜ್ರಪಂಜರನು ನೀನೆ ಪ್ರ-

ಭಂಜನಪ್ರಭುವೆ ಪ್ರತಿದಿನ । ಪ್ರತಿದಿನದಿ ನಮ್ಮ ಭಯ
ಭಂಜಿಸಿ ಕಾಯೋ ಬಹುರೂಪ ॥ 20 ॥



ಕಲಿಮುಖ್ಯದೈತ್ಯರುಪಟಳವ ಪರಿಹರಿಸಿ ಮ -

ತ್ಕುಲಗುರುವೆ ಸಲಹೋ ಕಾರುಣ್ಯ । ಕಾರುಣ್ಯಸಿಂಧು ನಿ -
ನ್ನೊಲುಮೆಯೊಂದಿರಲು ಹರಿಕಾಯ್ವ ॥ 21 ॥



ಭಾರತೀರಮಣ ಮದ್ಭಾರ ನಿನ್ನದು ಎನ್ನ -

ಪಾರ ದೋಷಗಳ ಎಣಿಸದೆ । ಎಣಿಸದೆ ಸಂತೈಸೊ
ಕಾರುಣ್ಯಸಿಂಧು ಎಂದೆಂದು ॥ 22 ॥



ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ -

ವಿಂಶತಿಸಹಸ್ರದಾರ್ನೂರು । ಆರ್ನೂರು ಹಗಲಿರುಳು
ಶ್ವಾಸಜಪಗಳಮಾಡಿ ಹರಿಗೀವಿ ॥ 23 ॥



ಭವಿಷ್ಯದ್ವಿಧಾತ ತವ ಚರಣ ಸೇವಿಪೆ ನಾ

ಶ್ರವಣಮನನಾದಿ ಭಕುತಿಯ । ಭಕುತಿ ನಿನ್ನಲ್ಲಿ ಮಾ -
ಧವನಲ್ಲಿ ಕೊಟ್ಟು ಸಲಹಯ್ಯ ॥ 24 ॥



ತಾಸಿಗೊಂಬೈನೂರು ಶ್ವಾಸಜಪಗಳ ಮಾಡಿ

ಬೇಸರದೆ ನಮ್ಮ ಸಲಹುವಿ । ಸಲಹುವಿ ಶ್ರೀಭಾರ -
ತೀಶ ನಿನ್ನಡಿಗೆ ಶರಣೆಂಬೆ ॥ 25 ॥



ಬಲದೇವ ನೀನೆ ಬೆಂಬಲನಾಗಿ ಇರಲು ದು -

ರ್ಬಲಕಾಲಕರ್ಮ ಕೆಡಿಸೋದೆ । ಕೆಡಿಸೋದೆ ನಿನ್ನ ಹಂ -
ಬಲು ಉಳ್ಳ ಜನರ ಜಗದೊಳು ॥ 26 ॥



ಹಾಲಾಹಲವನುಂಡು ಪಾಲಿಸಿದೆ ಜಗವ ಕರು-

ಣಾಳು ಪವಮಾನ ವಿಜ್ಞಾನ । ವಿಜ್ಞಾನಭಕುತಿ ಶ್ರೀ -
ಲೋಲನಲಿ ಕೊಟ್ಟು ಸಲಹಯ್ಯ ॥ 27 ॥



ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖ -

ದ್ಯೋತನಂದನನ ಪೊರೆದಂತೆ । ಪೊರೆದಂತೆ ಪೊರೆಯೆನ್ನ ನೀ - 
ನಿಂತು ಕ್ಷಣದಿ ಕೃಪೆಯಿಂದ ॥ 28 ॥



ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ

ಅಪವರ್ಗದಲ್ಲಿ ಸುಖವೀಯೋ । ಸುಖವೀಯೋ ನೀ ಭಾವಿ ಲೋ -
ಕಪಿತಮಹನೆ ದಯವಾಗೊ ॥ 29 ॥



ಬುದ್ಧಿಬಲಕೀರ್ತಿಪರಿಶುದ್ದಭಕ್ತಿಜ್ಞಾನ

ಸದ್ಧೈರ್ಯಾಜಾಡ್ಯ ಆಯುಷ್ಯ । ಆಯುಷ್ಯವಿತ್ತಭಿ -
ವೃದ್ಧಿಯೈದಿಸುವಿ ಪವಮಾನ ॥ 30 ॥



ದ್ರೌಪದೀರಮಣ ವಿಜ್ಞಾಪಿಸುವೆ ನಿನ್ನಡಿಗೆ

ತಾಪತ್ರಯಗಳ ಭಯಶೋಕ । ಭಯಶೋಕ ಪರಿಹರಿಸಿ
ಶ್ರೀಪತಿಯ ಧ್ಯಾನಸುಖವೀಯೋ ॥ 31 ॥



ಪಾಲ್ಗಡಲಮಗಳಾಳ್ದನಾಳ್ಗಳೊಳಗಪ್ರತಿಮ

ಓಲೈಪ ಜನರ ಸಲಹೆಂದು । ಸಲಹೆಂದು ಬಿನ್ನೈಪೆ
ಫಲ್ಗುಣಾಗ್ರಜನೆ ಪ್ರತಿದಿನ ॥ 32 ॥



ಅದ್ವೈತಮತವಿಪಿನಪ್ರಧ್ವಂಸಕಾನಲನೆ

ಮಧ್ಯಗೇಹಾಖ್ಯದ್ವಿಜಪತ್ನಿ । ದ್ವಿಜಪತ್ನಿ ಜಠರದೊಳು
ಉದ್ಭವಿಸಿ ಮೆರೆದೆ ಜಗದೊಳು ॥ 33 ॥



ಮಧ್ವಾಖ್ಯವೆಂಬ ಪ್ರಸಿದ್ಧಶ್ರುತಿಪ್ರತಿಪಾದ್ಯ

ಮಧ್ವಮುನಿರಾಯ ತವ ಕೀರ್ತಿ । ತವ ಕೀರ್ತಿ ವಾಣಿ -
ರುದ್ರಾದಿಗಳಿಗರಿದು ತುತಿಸಲ್ಕೆ ॥ 34 ॥



ಹುಣಸೆಬೀಜದಿ ಪಿತನ ಋಣವ ತಿದ್ದಿದ ಪೂರ್ಣ-

ಗುಣವಂತ ಗುರುವೆ ದಯವಾಗೊ । ದಯವಾಗಿ ನೀನೆನ್ನ
ಋಣಮೂರರಿಂದ ಗೆಲಿಸಯ್ಯ ॥ 35 ॥



ಯತ್ಯಾಶ್ರಮ ವಹಿಸಿ ಶ್ರುತ್ಯರ್ಥಗ್ರಂಥ ಮೂ -

ವತ್ತೇಳು ರಚಿಸಿ ದಯದಿಂದ । ದಯದಿಂದ ನಿನ್ನವರಿ -
ಗಿತ್ತು ಪಾಲಿಸಿದಿ ಕರುಣಾಳು ॥ 36 ॥



ನಾಮತ್ರಯಾಂಕಿತ ಸುಧೀಮಂತಕುಲಗುರುವೆ

ಶ್ರೀಮದಾಚಾರ್ಯ ಗುರುವರ್ಯ । ಗುರುವರ್ಯ
ಧರ್ಮಾರ್ಥಕಾಮಮೋಕ್ಷದನೆ ದಯವಾಗೋ ॥ 37 ॥



ಮೂರೇಳುಕುಮತಘೋರಾರಣ್ಯಪಾವಕ ಸ -

ಮೀರಾವತಾರ ಗಂಭೀರ । ಗಂಭೀರ ತ್ವತ್ಪದಾಂ -
ಭೋರುಹಧ್ಯಾನ ಕರುಣಿಸೋ ॥ 38 ॥



ಈ ಚರಾಚರದೊಳು ಅನಾಚಾರದಲಿ ನಡೆವ

ನೀಚಮಾಯಿಗಳ ಗೆಲಿದಿರ್ಪ । ಗೆಲಿದಿರ್ಪ ಶ್ರೀಮ -
ದಾಚಾರ್ಯರಡಿಗಳಿಗೆ ಶರಣೆಂಬೆ ॥ 39 ॥



ನಿನಗಿಂದಧಿಕರಾದ ಅನಿಮಿತ್ತ ಬಾಂಧವರು

ಎನಗಿಲ್ಲ ಶ್ರೀಮಧ್ವಮುನಿರಾಯ । ಮುನಿರಾಯನಿರಲು ಯೋ -
ಚನೆ ಯಾಕೆ ಜಗದಿ ನಮಗಿನ್ನು ॥ 40 ॥



ಶ್ರೀಮತ್ಸಮಸ್ತಗುಣಧಾಮ ವಿಷ್ಣೋರಂಘ್ರಿ-

ತಾಮರಸಮಧುಪ ಭವತಾಪ । ಭವತಾಪ ಗುರುಸಾರ್ವ -
ಭೌಮ ಪರಿಹರಿಸಿ ಸಲಹಯ್ಯ ॥ 41 ॥



ಉದ್ಧರಿಪುದೆಮ್ಮ ಹನುಮದ್ಭೀಮಸೇನಗುರು -

ಮಧ್ವಮುನಿರಾಯ ಕವಿಗೇಯ । ಕವಿಗೇಯ ಎನ್ನ ದು -
ರ್ಬುದ್ಧಿಗಳ ಬಿಡಿಸೋ ದಯದಿಂದ ॥ 42 ॥



ನಮೋ ನಮೋ ಭಾರತೀರಮಣ ಹನುಮದ್ಭೀಮ -

ಯಮಿಕುಲೋತ್ತಂಸಗುರುಮಧ್ವ । ಗುರುಮಧ್ವ ದುರ್ವಾದಿ -
ತಿಮಿರಮಾರ್ತಾಂಡ ಸುರಶೌಂಡ ॥ 43 ॥



ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಜನ್ಮ -

ಜನ್ಮಕೃತಪಾಪ ಪರಿಹಾರ । ಪರಿಹಾರವಾಗಿ ಸ -
ದ್ಬ್ರಹ್ಮಪದದಲ್ಲಿ ಸುಖಿಸೋರು ॥ 44 ॥



ವಾಯುಹನುಮದ್ಭೀಮರಾಯಮಧ್ವರ ಸ್ತೋತ್ರ

ಬಾಯೊಳುಳ್ಳವಗೆ ಜನ್ಮಾದಿ । ಜನ್ಮಾದಿರೋಗಭಯ -
ವೀಯನೆಂದೆಂದೂ ಭಗವಂತ ॥ 45 ॥



ಮಾತರಿಶ್ವನೆ ಎನ್ನ ಮಾತ ಲಾಲಿಸಿ ಜಗ - 

 ನ್ನಾಥವಿಠ್ಠಲನ ಮನದಲ್ಲಿ । ಮನದಲ್ಲಿ ತೋರಿ ಭವ -
ಭೀತಿ ಬಿಡಿಸಯ್ಯ ಭವ್ಯಾತ್ಮ ॥ 46 ॥
*************

ಶ್ರೀಜಗನ್ನಾಥದಾಸಾರ್ಯ ವಿರಚಿತ 

ತತ್ತ್ವಸುವ್ವಾಲಿ

ಶ್ರೀ ಪ್ರಾಣದೇವರ ಸ್ತುತಿ

ಹನುಮಭೀಮಾನಂದಮುನಿರಾಯ ಎನ್ನ ದು-
ರ್ಗುಣಗಳೆಣಿಸದಲೆ ಸಲಹೆಂದು । ಸಲಹೆಂದು ಬಿನ್ನೈಪೆ ವಿ -
ಜ್ಞಾನರೂಪ ವಿಜಿತಾತ್ಮ ॥ 1 ॥

ಅರ್ಥ :- ವಿಜ್ಞಾನರೂಪ = ನಿತ್ಯಾಪರೋಕ್ಷಿಯೂ (ವಿಜ್ಞಾನತತ್ತ್ವದ ಅಭಿಮಾನಿಯೂ) , ವಿಜಿತಾತ್ಮ = ಪೂರ್ಣ ಮನೋಜಯವುಳ್ಳವನೂ , (ಭಕ್ತಿಯಿಂದ ಶ್ರೀಹರಿಯನ್ನು ವಶಪಡಿಸಿಕೊಂಡಿರುವವನೂ, ಜೀವೋತ್ತಮನೂ , ಮನ ಮೊದಲಾದ ಸರ್ವೇಂದ್ರಿಯಗಳ ಹಾಗೂ ಜೀವಸ್ವರೂಪದ ನಿಯಾಮಕನೂ ಆದ) , ಹನುಮಭೀಮಾನಂದಮುನಿರಾಯ = ಹನುಮ , ಭೀಮ , ಆನಂದತೀರ್ಥ(ಮಧ್ವ)ರೆಂಬ ಮೂರು ರೂಪಗಳಿಂದ ವಿರಾಜಿಸುವ ಹೇ ವಾಯುದೇವ ! ಎನ್ನ = ನನ್ನ , ದುರ್ಗುಣಗಳ = ದೋಷಗಳನ್ನು , ಎಣಿಸದಲೆ = ಲೆಕ್ಕಿಸದೆ , ಸಲಹೆಂದು = ರಕ್ಷಿಸೆಂದು , ಬಿನ್ನೈಪೆ = ಪ್ರಾರ್ಥಿಸುತ್ತೇನೆ.

ವಿಶೇಷಾಂಶ : (1) ಹನುಮ , ಭೀಮ , ಮಧ್ವ ಎಂಬ ಅನ್ವರ್ಥನಾಮಗಳುಳ್ಳ ಶ್ರೀವಾಯುದೇವರ ಮೂರು ಅವತಾರಗಳು ವೇದಗಳಲ್ಲಿ ಪ್ರಸಿದ್ಧವಾಗಿವೆ.
(2) ವಿಜ್ಞಾನತತ್ತ್ವವು ಮಹತತ್ತ್ವದ ಪ್ರಭೇದ ಮಾತ್ರ. ಅದಕ್ಕೆ ಅಭಿಮಾನಿಗಳು ವಾಯುದೇವರು. ಅವರು ನಿತ್ಯಾಪರೋಕ್ಷಿಗಳು. ಪ್ರಾಕೃತ ದೇಹವಿದ್ದರೂ ಆ ಪ್ರಯುಕ್ತವಾದ ಬಂಧ , ಅಜ್ಞಾನಾದಿಗಳಿಲ್ಲದವರಾದ ಕಾರಣ ' ಶಾರೀರೋಪ್ಯಶರೀರವಾನ್' (ಬ್ರಹ್ಮವಾಯುಗಳು) ಶರೀರವಿದ್ದರೂ , ಇಲ್ಲದವರೆಂದೂ ಹೇಳುವ ಪ್ರಮಾಣದಿಂದ , ಜ್ಞಾನಸ್ವರೂಪರೆಂದೇ ಭಾವಿಸಲ್ಪಡತಕ್ಕವರು . ಆದ್ದರಿಂದ ' ವಿಜ್ಞಾನರೂಪ 'ರೆಂದು ಹೇಳಿದುದು.
(3) ಮನ ಮೊದಲಾದ ಎಲ್ಲ ಇಂದ್ರಿಯಗಳೂ , ಇಂದ್ರಿಯಾಭಿಮಾನಿಗಳೂ ವಾಯುದೇವರ ವಶರು. ಇಂದ್ರಿಯಗಳಲ್ಲಿಯೂ , ಇಂದ್ರಿಯಾಭಿಮಾನಿಗಳಲ್ಲಿಯೂ ಅಂತರ್ನಿಯಾಮಕರಾಗಿದ್ದಾರೆ. 'ವಿಜಿತಾತ್ಮ' ಎಂಬ ವಿಶೇಷಣವು ಈ ಮಹಾತ್ಮ್ಯೆಯನ್ನೂ ಸೂಚಿಸುತ್ತದೆ.

ಪ್ರಾಣನಾಯಕ ನಿನ್ನ ಕಾಣಬೇಕೆಂದೆನುತ
ಸಾನುರಾಗದಲಿ ನಮಿಸುವೆ । ನಮಿಸುವೆನು ಮೂಜಗ-
ತ್ತ್ರಾಣ ಪಂಚಾಸ್ಯ ಪರಮೇಷ್ಠಿ ॥ 2 ॥

ಅರ್ಥ :- ಮೂಜಗತ್ತ್ರಾಣ = ಮೂರು ಲೋಕಗಳ ರಕ್ಷಕನೂ , ಪಂಚಾಸ್ಯ = ಐದು ಮುಖಗಳಿಂದ ವಿರಾಜಿಸುವ , ಪರಮೇಷ್ಠಿ = (ಬ್ರಹ್ಮಪದವನ್ನು ಹೊಂದುವವನಾದ) ಬ್ರಹ್ಮಸಮನೂ ಆದ , ಪ್ರಾಣನಾಯಕ = ಹೇ ಪ್ರಾಣೇಶ! ನಿನ್ನ = ನಿನ್ನನ್ನು , ಕಾಣಬೇಕೆಂದೆನುತ = ಸಾಕ್ಷಾತ್ತಾಗಿ ನೋಡಬೇಕೆಂಬ ಹಂಬಲದಿಂದ , ಸಾನುರಾಗದಲಿ = ಭಕ್ತಿಪೂರ್ವಕವಾಗಿ , ನಮಿಸುವೆ = ನಮಸ್ಕರಿಸುತ್ತೇನೆ.

ವಿಶೇಷಾಂಶ :- (1) ಪ್ರಾಣ , ಅಪಾನ , ವ್ಯಾನ , ಉದಾನ , ಸಮಾನರೆಂಬ ಪಂಚಪ್ರಾಣರು ದೇಹಗತಪ್ರಾಣಶಕ್ತಿಗಳ ನಿಯಾಮಕರು. ಇವರೆಲ್ಲರಿಗೆ ನಿಯಾಮಕರಾದ ವಾಯುದೇವರು ದೇಹದಲ್ಲಿದ್ದು (ಅಧ್ಯಾತ್ಮದಲ್ಲಿ) ಮುಖ್ಯಪ್ರಾಣರೆಂದು ಕರೆಯಲ್ಪಡುವರು. ಮುಖ್ಯಪ್ರಾಣರೇ ಪ್ರಾಣನಾಯಕರು. ಪಂಚಪ್ರಾಣರು ಮುಖ್ಯಪ್ರಾಣರ ಅಧೀನರು - ದಾಸಪ್ರಾಣರೆಂದು ಕರೆಯಲ್ಪಡುವರು. ಈ ಪ್ರಾಣಾದಿನಾಮಗಳುಳ್ಳ , ಮುಖ್ಯಪ್ರಾಣರ ರೂಪಗಳೂ (ಅದೇ ಕ್ರಮದಿಂದ ) ಅವರಲ್ಲಿವೆ.
(2) ಮೂರು ಲೋಕಗಳು ಎಂಬುದು ಇಡೀ ವಿಶ್ವವನ್ನೇ (೧೪ ಲೋಕಗಳಿಂದ ಸಹಿತವಾದ ಬ್ರಹ್ಮಾಂಡವನ್ನೇ) ಸೂಚಿಸುತ್ತದೆ. ಹದಿನಾಲ್ಕು ಲೋಕಗಳ ರಕ್ಷಕರೂ , ಸಕಲ ಜೀವರಿಗೆ ಜೀವನಪ್ರದರೂ ಆದ್ದರಿಂದ ಮುಖ್ಯಪ್ರಾಣರು 'ಜಗತ್ತ್ರಾಣರು' . ಭಾವಿ ಬ್ರಹ್ಮರಾದ್ದರಿಂದ 'ಪರಮೇಷ್ಠಿ' ಎಂದು ಕರೆಯಲ್ಪಟ್ಟಿರುವರು.
(3) ಬ್ರಹ್ಮದೇವನು ಮೊದಲಿಗೆ ಪಂಚಮುಖನಾಗಿದ್ದು , ಭಗವದಿಚ್ಛೆಯಂತೆ ಒಂದು ಮುಖವು ರುದ್ರದೇವರಿಂದ ಕತ್ತರಿಸಲ್ಪಡಲು ಚತುರ್ಮುಖನೆಂದು ಪ್ರಸಿದ್ಧನಾದನು.
(4) ಹೃದಯಸ್ಥಿತನಾದ 'ಮೂಲೇಶ'ನ (ಬಿಂಬರೂಪ ಶ್ರೀಹರಿಯ) ಪಾದಸೇವಕರಾಗಿ ನಿಂತಿರುವ ಶ್ರೀಮುಖ್ಯಪ್ರಾಣದೇವರ ದರ್ಶನವೂ ದೊರೆತು , ನಂತರ ಬಿಂಬಾಪರೋಕ್ಷವಾಗುತ್ತದೆ. ಅದಕ್ಕಾಗಿ ಅವರನ್ನು ಕಾಣಬೇಕೆಂಬ ಹಂಬಲ.

ಚತುರವಿಂಶತಿ ತತ್ತ್ವಪತಿಗಳಾಳುವ ಶಕ್ತ
ನತಿಸುವೆನು ನಿನ್ನ ಚರಣಕ್ಕೆ । ಚರಣಕಮಲವ ತೋರಿ
ಕೃತಕೃತ್ಯನೆನಿಸೋ ಕೃಪೆಯಿಂದ ॥ 3 ॥

ಅರ್ಥ :- ಚತುರವಿಂಶತಿ ತತ್ತ್ವಪತಿಗಳ = ೨೪ ತತ್ತ್ವಗಳಿಗೆ ಅಭಿಮಾನಿಗಳಾದ ದೇವತೆಗಳನ್ನು , ಆಳುವ ಶಕ್ತ = ನಿಯಮಿಸುವ ಸಾಮರ್ಥ್ಯವುಳ್ಳ ಹೇ ಮುಖ್ಯಪ್ರಾಣದೇವ ! ನಿನ್ನ ಚರಣಕ್ಕೆ = ನಿನ್ನ ಪಾದಗಳಿಗೆ , ನತಿಸುವೆನು = ನಮಸ್ಕರಿಸುವೆನು , ಕೃಪೆಯಿಂದ = ಕೃಪೆದೋರಿ , ಚರಣಕಮಲವ = (ನಿನ್ನ) ಪಾದಪದ್ಮಗಳನ್ನು , ತೋರಿ = ತೋರಿಸಿ , ಕೃತಕೃತ್ಯನು ಎನಿಸೋ = ಧನ್ಯನನ್ನಾಗಿ ಮಾಡು.

ವಿಶೇಷಾಂಶ :- (1) ೨೪ ತತ್ತ್ವಗಳ ಪೈಕಿ ಪೃಥಿವ್ಯಾದಿ ಪಂಚಭೂತಗಳಿಗೆ ಕ್ರಮದಿಂದ ಧರಾದೇವಿ , ವರುಣ , ಅಗ್ನಿ , ಪ್ರವಹವಾಯು , ಗಣಪತಿ ಇವರುಗಳೂ , ಗಂಧ ಮೊದಲಾದ ಪಂಚತನ್ಮಾತ್ರೆಗಳಿಗೆ ಸೌಪರ್ಣೀ (ಗರುಡನ ಪತ್ನಿ) , ವಾರುಣೀ (ಶೇಷದೇವರ ಭಾರ್ಯಳು ) ಮತ್ತು ಉಮಾ (ರುದ್ರಪತ್ನಿ) ಈ ಮೂವರೂ ಅಭಿಮಾನಿಗಳು; ವಾಗಾದಿ ಪಂಚಕರ್ಮೇಂದ್ರಿಯಗಳಿಗೆ ಅಗ್ನಿ , ಇಂದ್ರ , ಜಯಂತ , ಯಮ ಮತ್ತು ದಕ್ಷ ಇವರು ಅಭಿಮಾನಿಗಳು ; ಪಂಚಜ್ಞಾನೇಂದ್ರಿಯಗಳಿಗೆ ಕ್ರಮವಾಗಿ ಸೂರ್ಯ , ಚಂದ್ರ , ಕುಬೇರ , ವರುಣ , ಅಶ್ವಿನೀದೇವತೆಗಳು ಅಭಿಮಾನಿಗಳು ; ಮನಸ್ಸಿಗೆ ಹಾಗೂ ಅಹಂಕಾರತತ್ತ್ವಕ್ಕೆ ಗರುಡ , ಶೇಷ , ರುದ್ರರೂ ; ಬುದ್ಧಿತತ್ತ್ವಕ್ಕೆ ಸರಸ್ವತಿಯೂ , ಮಹತತ್ತ್ವಕ್ಕೆ ಚತುರ್ಮುಖನೂ ಅಭಿಮಾನಿಗಳು . ಮನಸ್ಸು , ಬುದ್ಧಿ , ಅಹಂಕಾರ , ಚಿತ್ತ , ಚೇತನ (ಸಂಕಲ್ಪಾದಿಗಳು , ವಿವೇಚನಶಕ್ತಿ , ಕರ್ತೃತ್ತ್ವಾಭಿಮಾನ , ಸ್ಮರಣಶಕ್ತಿ , ಬಹುಸ್ಮರಣಶಕ್ತಿ) ಗಳೆಂಬುವು ಮನಸ್ಸಿನ ವೃತ್ತಿ (ವ್ಯಾಪಾರ) ವಿಶೇಷಗಳು. ಇವುಗಳಲ್ಲಿರುವ ಬುದ್ಧಿ-ಅಹಂಕಾರಗಳು ಮೇಲೆ ನಿರೂಪಿಸಿದ ಬುದ್ಧಿ ಮತ್ತು ಅಹಂಕಾರತತ್ತ್ವಗಳಲ್ಲ. ಬುದ್ಧಿ ತತ್ತ್ವವು ಮಹತ್ತತ್ತ್ವದ ಪ್ರಭೇದವಾದ ವಿಜ್ಞಾನತತ್ತ್ವವೆಂದೂ ಕರೆಯಲ್ಪಡುತ್ತದೆ. ಇವುಗಳಿಗೆ ಅಭಿಮಾನಿಗಳೆಂದೂ ಹೇಳಲಾದ ಸರಸ್ವತಿ ಮತ್ತು ಚತುರ್ಮುಖರೊಂದಿಗೆ ಭಾರತೀ ಮತ್ತು ವಾಯುದೇವರನ್ನೂ ಗ್ರಹಿಸಬೇಕು. ಅವ್ಯಕ್ತತತ್ತ್ವಕ್ಕೆ ರಮಾದೇವಿಯು ಅಭಿಮಾನಿಯು. ತತ್ತ್ವಗಳಿಗೆ ಅವಾಂತರ ಅಭಿಮಾನಿಗಳೂ ಇರುವರು. ಮುಖ್ಯಾಭಿಮಾನಿಗಳೊಂದಿಗೆ ಅವರ ಅಧೀನರಾಗಿ ತತ್ತ್ವನಿಯಾಮಕರಾಗಿರುತ್ತಾರೆ. ಕರ್ಮೇಂದ್ರಿಯ , ಜ್ಞಾನಾಂದ್ರಿಯಗಳ ಅಭಿಮಾನಿಗಳೆಲ್ಲರೂ ಉತ್ತಮ ದೇವತೆಗಳು. ಇವರಿಗಿಂತ ಇಂದ್ರಿಯಾರ್ಥಗಳಿಗೆ (ಗಂಧಾದಿ ತನ್ಮಾತ್ರೆಗಳುಳ್ಳ ವಿಷಯಗಳಿಗೆ) ಅಭಿಮಾನಿಗಳಾದ ಸೌಪರ್ಣೀ , ವಾರುಣೀ , ಉಮಾ ಇವರು ಶ್ರೇಷ್ಠರು. ಇವರಿಗಿಂತ ಅಹಂಕಾರ ತತ್ತ್ವಕ್ಕೆ ಅಭಿಮಾನಿಗಳಾದ , ಗರುಡ-ಶೇಷ-ರುದ್ರರು ಉತ್ತಮರು. ಇವರಿಗಿಂತ ಬುದ್ಧಿತತ್ತ್ವಕ್ಕೆ ನಿಯಾಮಕಳಾದ ಸರಸ್ವತಿಯೂ , ಆಕೆಗಿಂತ ಮಹತತ್ತ್ವಾಭಿಮಾನಿಯಾದ ಚತುರ್ಮುಖನೂ ಶ್ರೇಷ್ಠರು.

(2) ಕೃತಕೃತ್ಯ = ಅವಶ್ಯಕವಾಗಿ ಮಾಡಬೇಕಾದ ಕೃತ್ಯಗಳುಳಿಯದವನು , ಧನ್ಯ = ಮುಖ್ಯಫಲಪಾತ್ರನು.

(3) ಛಾಂದೋಗ್ಯ , ಬೃಹದಾರಣ್ಯ ಮತ್ತು ಐತರೇಯ ಉಪನಿಷತ್ತುಗಳಲ್ಲಿ ಅವ್ಯಕ್ತತತ್ತ್ವಾಭಿಮಾನಿನಿ ರಮಾದೇವಿಯನ್ನುಳಿದು , ಇತರ ತತ್ತ್ವಾಭಿಮಾನಿಗಳಲ್ಲಿ ಯಾರು ಶ್ರೇಷ್ಠರೆಂಬುದನ್ನು ನಿರ್ಣಯಿಸಲು ನಡೆದ ಪರೀಕ್ಷೆಗಳ ನಿರೂಪಣೆಗಳಿವೆ. ವಿರಾಟ್ ಪುರುಷದೇಹದಲ್ಲಿ ಪರಬ್ರಹ್ಮ ಚತುರ್ಮುಖಬ್ರಹ್ಮರಿಬ್ಬರೂ ಉದಾಸೀನರಾಗಿದ್ದು ವಾಯುದೇವ ಮೊದಲಾದ ದೇವತೆಗಳಲ್ಲಿ ಯಾರ ಪ್ರವೇಶದಿಂದ ದೇಹವು ಚೇಷ್ಟಿಸುವುದೋ (ವ್ಯಾಪಾರ ಸಮರ್ಥವಾಗುವುದೋ) ಅಥವಾ ಯಾರು ದೇಹವನ್ನು ಬಿಟ್ಟು ಹೋಗುವುದರಿಂದ ದೇಹವು ನಿಶ್ಚೇಷ್ಟಿತವಾಗಿ ಬೀಳುವುದೋ ಅವರೇ ಶ್ರೇಷ್ಠರೆಂಬ ಪಣತೊಟ್ಟು ಸ್ವಸಾಮರ್ಥ್ಯಗಳನ್ನು ಪರೀಕ್ಷೆಮಾಡಿಕೊಂಡ ಕಥೆಯು (ವೃತ್ತಾಂತವು) ವರ್ಣಿತವಾಗಿದೆ. 
ಸೂರ್ಯ , ಚಂದ್ರ ಮೊದಲಾದ ದೇವತೆಗಳು ಒಬ್ಬೊಬ್ಬರಾಗಿ ದೇಹದಿಂದ ಹೊರಬೀಳಲು ಕಣ್ಣು , ಕಿವಿ ಮೊದಲಾದ ಇಂದ್ರಿಯಗಳ ವ್ಯಾಪಾರಗಳು ನಿಂತವೇ ವಿನಾ , ದೇಹವು ಮೃತಶರೀರವಾಗಲಿಲ್ಲ. ವಾಯುದೇವರು ಹೊರ ಹೊರಟನಂತರ ದೇಹವು ಬಿದ್ದಿತಲ್ಲದೇ , ಉಬ್ಬಿಕೊಳ್ಳುವುದು ಮೊದಲಾದ ವಿಕಾರಗಳು (ಶವಸಾದೃಶ್ಯವು) ಕಂಡುಬಂದವು. ಇದರಿಂದ ವಾಯುದೇವರೇ ಶ್ರೇಷ್ಠರೆಂದು ಸಿದ್ಧವಾದರೂ , ಆ ದೇವತೆಗಳು ಪುನಃ ಪರೀಕ್ಷೆಗೆ ಸಿದ್ಧರಾಗಿ , ವಾಯುದೇವರೇ ಮೊದಲು ದೇಹಬಿಟ್ಟು ಹೊರಡಬೇಕೆಂದರು. ಹಾಗೆ ವಾಯುದೇವರು ಬಿಟ್ಟು ಹೊರಡಲು , ಆ ದೇಹದಲ್ಲಿ ಅವರು ಯಾರೊಬ್ಬರೂ ನಿಲ್ಲಲು ಸಮರ್ಥರಾಗಲಿಲ್ಲ ; ವಾಯುದೇವರಿಂದ ಹೊರಗೆ ಸೆಳೆಯಲ್ಪಟ್ಟರು. ಆಗ ತಮ್ಮ ವ್ಯಾಪಾರಗಳೆಲ್ಲವೂ , ಅಷ್ಟೇಕೆ! ದೇಹದಲ್ಲಿ ತಾವು ಸ್ಥಿತರಾಗುವುದೂ ಸಹ , ವಾಯುದೇವರ ಅಧೀನವೆಂದು ತಿಳಿದರು. ಅಲ್ಲದೇ , ಇತರ ಯಾವ ತತ್ತ್ವಾಭಿಮಾನಿಗಳೂ ಇಲ್ಲದೇ , ಸ್ವಯಂ ವಾಯುದೇವರೊಬ್ಬರೇ ಸರ್ವೇಂದ್ರಿಯ ವ್ಯಾಪಾರಗಳನ್ನೂ ನಿರ್ವಹಿಸಲು ಸಮರ್ಥರೆಂಬುದನ್ನು ಸಹ ಕಂಡು , ಎಲ್ಲ ದೇವತೆಗಳೂ ವಾಯುದೇವರನ್ನು ಶರಣುಹೊಂದಿ ಸ್ತುತಿಸಿದರು. ' ಅನುಪ್ರಾಣಂತಿ ಯಂ ಪ್ರಾಣಾಃ ಪ್ರಾಣಂ ತಂ ಸರ್ವಜಂತುಷು ' (ಭಾಗವತ) ಎಂದು ರಾಜನನ್ನು ಪ್ರಜೆಗಳು ಹಿಂಬಾಲಿಸುವಂತೆ ತತ್ತ್ವಾಭಿಮಾನಿಗಳೆಲ್ಲರೂ ಮುಖ್ಯಪ್ರಾಣರನ್ನು ಅನುಸರಿಸಿ ಅವರಂತೆ ಚೇಷ್ಟಿಸುವರೆಂದು , ಇದೇ ನಿರ್ಣಯವು ಪ್ರತಿಪಾದಿಸಲಾಗಿದೆ.

ತ್ರಿದಶತ್ರಿಂಶತಿರೂಪ ಸುದತಿಯಿಂದೊಡಗೂಡಿ
ಪದುಮಜಾಂಡದೊಳು ಸರ್ವತ್ರ । ಸರ್ವತ್ರ ಭಕುತರ
ಬದಿಗನಾಗಿದ್ದು ಸಲಹುವಿ ॥ 4 ॥

ಅರ್ಥ :- ತ್ರಿದಶತ್ರಿಂಶತಿರೂಪ = (ಪ್ರತಿ ಜೀವಶರೀರದಲ್ಲಿ) ಮೂವ್ವತ್ತು ಮೂವ್ವತ್ತು (ತ್ರಿದಶ - ೩೦ ; ತ್ರಿಂಶತಿ - ೩೦) ರೂಪಗಳಿಂದಿರುವ ಹೇ ಪ್ರಾಣನಾಥ! ಸುದತಿಯಿಂದ = ಭಾರ್ಯಳಿಂದ (ಭಾರತೀದೇವಿಯಿಂದ) , ಒಡಗೂಡಿ = ಕೂಡಿಕೊಂಡು , ಪದುಮಜಾಂಡದೊಳು = ಬ್ರಹ್ಮಾಂಡದಲ್ಲಿ , ಸರ್ವತ್ರ = ಎಲ್ಲೆಲ್ಲಿಯೂ ಇರುವ , ಭಕುತರ = ಭಕ್ತರ , ಬದಿಗನಾಗಿದ್ದು = ಸಮೀಪದಲ್ಲಿದ್ದು , ಸಲಹುವಿ = ರಕ್ಷಿಸುವಿ.

ವಿಶೇಷಾಂಶ : ಜೀವಶರೀರವು ಅಧ್ಯಾತ್ಮ , ಅಧಿಭೂತ , ಅಧಿದೈವಗಳಿಂದ ಯುಕ್ತವಾದುದು. 'ಸ್ವಭಾವೋ ಅಧ್ಯಾತ್ಮ ಉಚ್ಯತೇ ' ಎಂದರೆ (ಸ್ವಸ್ಯ + ಭವತಿ) ಜೀವನಿಗೆ ಉಪಕಾರಕಗಳಾಗಿ ಅವನೊಂದಿಗೆ ದೇಹದಲ್ಲಿರುವ ಮನಸ್ಸು ಮೊದಲಾದ ಇಂದ್ರಿಯಗಳ ಸಮೂಹವು ಅಧ್ಯಾತ್ಮವೆನಿಸುತ್ತದೆ. ' ಅಧಿಭೂತಂ ಕ್ಷರೋ ಭಾವಃ ' ಎಂದರೆ ಪೃಥಿವ್ಯಾದಿ ಪಂಚಭೂತಗಳ ಕಾರ್ಯವಾದ ವಿನಾಶವುಳ್ಳ ದೇಹವು ಅಧಿಭೂತವು. ' ಪುರುಷಶ್ಚಾಧಿದೈವತಂ' ಎಂದರೆ ಇಂದ್ರಿಯಾಭಿಮಾನಿಗಳು ಮತ್ತು ಅವರಲ್ಲಿ ಸ್ವಾಮಿತ್ವೇನ ಸ್ಥಿತನಾದ 'ಪುರುಷ ' ಶಬ್ದವಾಚ್ರನಾದ ಶ್ರೀಹರಿಯು ಅಧಿದೈವವು. ಹೀಗೆ ಭಗವದ್ಗೀತೆಯ ವಾಕ್ಯಗಳು ಹೇಳುತ್ತವೆ. ' ಅಧಿಭೂತಂ ಶರೀರಂ ' ' ಅಧ್ಯಾತ್ಮಮಿಂದ್ರಿಯಂ , ಅಧಿದೈವಂ ಅಭಿಮಾನಿನಃ ' ಇತ್ಯಾದಿ ಇತರ ಪ್ರಮಾಣವಾಕ್ಯಗಳಿಂದಲೂ, ಅಧ್ಯಾತ್ಮ ಮೊದಲಾದ ಶಬ್ದಗಳ ಅರ್ಥವು ಸಿದ್ಧವಾಗುತ್ತದೆ. 
ಪ್ರಾಣಾದಿಪಂಚಕಂ ಚೈವ ತಥಾ ನಾಗಾದಿಪಂಚಕಮ್
ಸನಾಗಕೂರ್ಮಕೃಕಲದೇವದತ್ತ ಧನಂಜಯಾಃ ।
ಏವಂ ತು ದಶಧಾ ಪ್ರಾಣ ಅಧ್ಯಾತ್ಮಾದಿತ್ರಾಧಾऽಖಿಲಾಃ ॥
- ಎಂಬ ಭಾಗವತ ತಾತ್ವರ್ಯದಲ್ಲಿ ಶ್ರೀಮದಾಚಾರ್ಯರಿಂದ ಉದಾಹೃತವಾದ ವ್ಯೋಮಸಂಹಿತೆಯ ವಾಕ್ಯವು
ಸಾಧ್ಯಾತ್ಮಂ ಸಾಧಿದೈವಂ ಚ ಸಾಧಿಭೂತಮಿತಿ ತ್ರಿಧಾ
ವಿರಾಟ್ ಪ್ರಾಣೋ ದಶವಿಧ ಏಕದಾ ಹೃದಯೇನ ಚ ।
ಎಂಬ ಭಾಗವತ ಮೂಲಶ್ಲೋಕದ ವ್ಯಾಖ್ಯಾನರೂಪವಾಗಿದೆ. ಈ ವಾಕ್ಯಗಳಿಂದ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನಗಳೆಂಬ ಐದು ; ನಾಗ, ಕೂರ್ಮ, ಕೃಕಲ, ದೇವದತ್ತ, ಧನಂಜಯಗಳೆಂಬ ಐದು; ಹೀಗೆ ಒಟ್ಟು ದಶಪ್ರಾಣರಲ್ಲಿ ದಶರೂಪಗಳಿಂದ ಮುಖ್ಯಪ್ರಾಣರು ಇರುವರೆಂದೂ; ಈ ಹತ್ತು ರೂಪಗಳು ಅಧ್ಯಾತ್ಮ , ಅಧಿಭೂತ , ಅಧಿದೈವಗಳಲ್ಲಿ ಪ್ರತಿಯೊಂದರಲ್ಲಿಯೂ ಇರುತ್ತಿದ್ದು , ಇಡೀ ದೇಹದಲ್ಲಿ ೩೦ ರೂಪಗಳಿಂದ ಮುಖ್ಯಪ್ರಾಣನು ಇರುವನೆಂದು ಸಿದ್ಧವಾಗುತ್ತದೆ. ಭಾಗವತವಾಕ್ಯವು ಹೇಳುವ ಹೃದಯಸ್ಥಿತವಾದ ಇನ್ನೊಂದು ರೂಪವು , ಮೂಲೇಶನ ಅಡಿದಾವರೆಗಳಲ್ಲಿರುವ ರೂಪವು. ಅಧ್ಯಾತ್ಮಾದಿಗಳಲ್ಲಿರುವ ೩೦ ರೂಪಗಳು ಹರಿಭಕ್ತರ ಸಕಲ ಕರ್ಮಗಳನ್ನು ಭಗವತ್ಪರವಾಗುವಂತೆ ಮಾಡಿ ಅನುಗ್ರಹಿಸುವುವು ; ಹೃದಯಸ್ಥಿತರೂಪವು ಅಪರೋಕ್ಷಸಾಧಕವಾದ ಶ್ರೀಹರಿಧ್ಯಾನಕ್ಕೆ ಕಾರಣವಾಗಿ , ಅಪರೋಕ್ಷಕಾಲದಲ್ಲಿ ಭಕ್ತರಿಂದ ಸಂದರ್ಶಿಸಲ್ಪಡುವುದು.

ಕೋಟಿತ್ರಯಸ್ವರೂಪ ದಾಟಿಸು ಭವಾಬ್ಧಿಯ ನಿ-
ಶಾಟಕುಲವೈರಿ ಭಯಹಾರಿ । ಭಯಹಾರಿ ರಣದೊಳು ಕಿ-
ರೀಟಿಯನು ಕಾಯ್ದಿ ಧ್ವಜನಾಗಿ ॥ 5 ॥

ಅರ್ಥ :- ಕೋಟಿತ್ರಯಸ್ವರೂಪ = ಮೂರುಕೋಟಿ ರೂಪಗಳುಳ್ಳ, ನಿಶಾಟಕುಲವೈರಿ = ರಾತ್ರಿಚರಕುಲನಾಶಕನಾದ , ಭಯಹಾರಿ = ಸರ್ವಭಯ ಪರಿಹಾರಕನಾದ ಹೇ ಪ್ರಾಣದೇವ! ರಣದೊಳು = (ಕುರುಕ್ಷೇತ್ರದಲ್ಲಿ ನಡೆದ) ಮಹಾಯುದ್ಧದಲ್ಲಿ , ಧ್ವಜನಾಗಿ = (ಅರ್ಜುನನ ರಥದ) ಧ್ವಜದಲ್ಲಿದ್ದು , ಕಿರೀಟಿಯನು ಕಾಯ್ದಿ = ಅರ್ಜುನನನ್ನು ರಕ್ಷಿಸಿದಿ ; ಭವಾಬ್ಧಿಯ = ಸಂಸಾರಸಮುದ್ರವನ್ನು , ದಾಟಿಸು = (ನಾನು) ದಾಟುವಂತೆ ಅನುಗ್ರಹಿಸು.

ವಿಶೇಷಾಂಶ :- ವಾಯುದೇವರು ಅನಂತರೂಪವುಳ್ಳವರು. ಅವುಗಳಲ್ಲಿ ಮೂರು ಕೋಟಿ ರೂಪಗಳು ವಿಶೇಷವಾದುವು. ' ಅನಂತಾನ್ಯಸ್ಯ ರೂಪಾಣಿ ತ್ರಿಕೋಟೀನಿ ವಿಶೇಷತಃ ' (ಸ.ರ.ಮಾ) ನಿಶಾಟರೆಂದರೆ ರಾತ್ರಿಂಚರರಾದ ರಾಕ್ಷಸರು . ರಕ್ಷಸ ಸಮೂಹಕ್ಕೆ ವೈರಿಯು - ಶತೃವು.

ಮೂರೇಳು ಸಾವಿರದ ಆರ್ನೂರುಮಂತ್ರ
ಈರೇಳು ಜಗದಿ ಜನರೊಳು । ಜನರೊಳು ಮಾಡಿ ಉ -
ದ್ಧಾರಗೈಸುವಿಯೋ ಸುಜನರ ॥ 6 ॥

ಅರ್ಥ :- ಮೂರೇಳುಸಾವಿರ ಆರ್ನೂರು = ೨೧,೬೦೦ , ಮಂತ್ರ = ಹಂಸಮಂತ್ರಗಳನ್ನು , ಈರೇಳು ಜಗದಿ = ಹದಿನಾಲ್ಕು ಲೋಕಗಳ , ಜನರೊಳು = ಜನರಲ್ಲಿದ್ದು , ಮಾಡಿ = ಜಪಮಾಡಿ , ಸುಜನರ = ಸುಜೀವಿಗಳನ್ನು , ಉದ್ಧಾರಗೈಸುವಿಯೋ = ಉದ್ಧಾರಮಾಡುವಿ ದೇವ.

ಪವಮಾನರಾಯ ನೀ ತ್ರಿವಿಧಜೀವರೊಳಿದ್ದು
ವಿವಿಧವ್ಯಾಪಾರ ನೀ ಮಾಡಿ । ನೀ ಮಾಡಿ ಮಾಡಿಸಿ
ಅವರವರ ಗತಿಯ ಕೊಡುತಿಪ್ಪಿ ॥ 7 ॥

ಅರ್ಥ :- ಪವಮಾನರಾಯ = ಹೇ ಪವಮಾನದೇವ! ನೀ = ನೀನು , ತ್ರಿವಿಧಜೀವರೊಳಿದ್ದು = (ಮುಕ್ತಿಯೋಗ್ಯ , ನಿತ್ಯಸಂಸಾರಿ , ತಮೋಯೋಗ್ಯರೆಂಬ) ಮೂರುವಿಧ ಜೀವರಲ್ಲಿದ್ದು , ವಿವಿಧವ್ಯಾಪಾರ = ನಾನಾಪ್ರಕಾರದ ಕರ್ಮಗಳನ್ನು , ನೀ ಮಾಡಿ = ನೀನು ಮಾಡಿ , ಮಾಡಿಸಿ = ಅವರಿಂದ ಮಾಡಿಸಿ , ಅವರವರ ಗತಿಯ = ಸ್ವಯೋಗ್ಯ ಗತಿಗಳನ್ನು , ಕೊಡುತಿಪ್ಪಿ = ಕೊಡುತ್ತಿರುವಿ.

ವಿಶೇಷಾಂಶ : (1) ಉಕ್ತವಾದ ಜೀವತ್ರೈವಿಧ್ಯವು , ಲೋಕಾನುಭವದಿಂದ ಸಹ ಸಾಮಾನ್ಯವಾಗಿ ಸಿದ್ಧವಾಗುತ್ತದೆ. ಶ್ರುತಿಸ್ಮೃತಿಗಳು ನಿರವಕಾಶ ವಾಕ್ಯಗಳಿಂದ (ಅರ್ಥಾಂತರಕ್ಕೆ ಅವಕಾಶವಿಲ್ಲದ ಸ್ಪಷ್ಟೋಕ್ತಿಗಳಿಂದ) ಜೀವರು ಸ್ವರೂಪದಿಂದಲೇ ತ್ರಿವಿಧರೆಂದು ಸಾರುತ್ತವೆ. 
' ನಾಸುರಾಣಾಂ ದೈವಂ ರೂಪಂ ನ ದೇವಾನಾಮಾಸುರಂ ನ ಚೋಭಯಂ ಮನುಷ್ಯಾಣಾಂ । ಯೋ ಯದ್ರೂಪಃ ಸ ತದ್ರೂಪೋ ನಿಸರ್ಗೋ ಹ್ಯೇಷ ಭವತಿ ' - (ಶ್ರುತಿ)
' ದೈವೀಮೇವ ಸಂಪತ್ತಿಂ ದೇವಾ ಅಭಿಗಚ್ಛಂತಿ ಅಸುರೀಮೇವ ಚಾಸುರಾಃ ನೈತಯೋರಭಿಭವಃ ಕದಾಚಿತ್ ಸ್ವಭಾವ ಏವ ಹ್ಯವತಿಷ್ಠತೇ ' - (ಶ್ರುತಿ)
' ಶೃಣ್ವೇ ವೀರ ಉಗ್ರಮುಗ್ರಂ ದಮಾಯನ್ನನ್ಯಮನ್ಯಮತಿನೇನೀಮಾನಃ ಏಧಮಾನ-ದ್ವಿಳುಭಯಸ್ಯ ರಾಜಾ ಚೋಷ್ಕೋಯತೇ ವಿಶ ಇಂದ್ರೋ ಮನುಷ್ಯಾನ್ ' - (ಋಗ್ವೇದ)
ಅಸುರಾ ಅಸುರೇಣೈವ ಸ್ವಭಾವೇನ ಚ ಕರ್ಮಣಾ ।
ಜ್ಞಾನೇನ ವಿಪರೀತೇನ ತಮೋ ಯಾಂತಿ ವಿನಿಶ್ಚಯಾತ್ ।
ದೇವ ದೈವಸ್ವಭಾವೇನ ಕರ್ಮಣಾ ಚಾಪ್ಯಸಂಶಯಮ್ ।
ಸಮ್ಯಕ್ ಜ್ಞಾನೇನ ಪರಮಾಂ ಗತಿಂ ಗಚ್ಛಂತಿ ವೈಷ್ಣವೀಮ್ ।
ನಾನಯೋರನ್ಯಥಾ ಭಾವಃ ಕದಾಚಿತ್ ಕ್ವಾಪಿ ವಿದ್ಯತೇ ।
ಮಾನುಷಾ ಮಿಶ್ರಮತಯೋ ವಿಮಿಶ್ರಗತಯೋऽಪಿ ಚ ॥ 
-(ಸ್ಕಾಂದಪುರಾಣ)
ಇವುಗಳ ಅರ್ಥ : ಅಸುರರಿಗೆ ದೇವಸ್ವರೂಪವೂ , ದೇವತೆಗಳಿಗೆ ಅಸುರ ಸ್ವರೂಪವೂ , ಮನುಷ್ಯರಿಗೆ ಈ ಎರಡರಲ್ಲಿ ಯಾವುದೊಂದೂ ಪ್ರಾಪ್ತವಾಗುವುದಿಲ್ಲ. ಯಾರು ಯಾವ ಸ್ವರೂಪದವನೋ ಅವನು ತನ್ನ ಸ್ವಭಾವವನ್ನೇ ಹೊಂದುತ್ತಾನೆ. ದೇವತೆಗಳು ದೇವ ಸ್ವಭಾವವವನ್ನೂ , ಅಸುರರರು ಅಸುರ ಸ್ವಭಾವವನ್ನೂ ಹೊಂದುತ್ತಾರೆ. ಈ ನಿಯಮಕ್ಕೆ ಎಂದೂ ಅಪೋಹವಿಲ್ಲ(ವ್ಯತ್ಯಾಸವಾಗುವುದಿಲ್ಲ). ಅವರವರ ಸ್ವಭಾವಗಳೇ ಶಾಶ್ವತವಾಗಿ ನಿಲ್ಲುತ್ತವೆ. ವೀರಃ = ಸರ್ವಶಕ್ತನಾದ , ಇಂದ್ರಃ = ಮಹಾಐಶ್ವರ್ಯವಂತನಾದ ಪರಮಾತ್ಮನು , ಉಗ್ರಂ ಉಗ್ರಂ = ಅಸುರಸ್ವಭಾವದ ಪ್ರತಿಯೊಬ್ಬನನ್ನೂ , ದಮಯನ್ = ಶಿಕ್ಷಿಸುವವನಾಗಿ , ಅನ್ಯಂ ಅನ್ಯಂ = ಅಸುರಭಿನ್ನಸ್ವಭಾವದ (ದೇವಸ್ವಭಾವದ) ಪ್ರತಿಯೊಬ್ಬನನ್ನೂ , ಅತಿನೇನೀಯಮಾನಃ = ಸಂಸಾರದಿಂದ ದಾಟಿಸುವನೆಂದು , ಶೃಣ್ವೇ = ಶ್ರುತಿಗಳಲ್ಲಿ ಕೇಳಲ್ಪಡುತ್ತಾನೆ (ಪ್ರತಿಪಾದಿಸಲ್ಪಡುತ್ತಾನೆ) . ಏಧಮಾನ್ ದ್ವಿಟ್ = ಸ್ವಯೋಗ್ಯತೆಯನ್ನು ಅತಿಕ್ರಮಿಸುವವರನ್ನು ಸಹಿಸದವನು , ಉಭಯಸ್ಯ ರಾಜಾ = ದೇವಾಸುರಸ್ವಭಾವದವರಿಗೆಲ್ಲ ಸ್ವಾಮಿಯು , ಮನುಷ್ಯಾನ್ ವಿಶಃ = ಮಧ್ಯವರ್ತಿಗಳಾದ (ಮನುಷ್ಯಮಧ್ಯಮರಾದ) ರಾಜಸರನ್ನು , ಚೋಷ್ಕೂಯತೇ = ನಿತ್ಯವೂ ಸ್ತುತಿಸುತ್ತಾನೆ.
ಅಸುರರು ತಾಮಸಕರ್ಮಗಳಿಂದಲೂ ಮಿಥ್ಯಾಜ್ಞಾನದಿಂದಲೂ ನಿಶ್ಚಯವಾಗಿ ತಮಸ್ಸನ್ನು ಹೊಂದುತ್ತಾರೆ. ದೇವತೆಗಳು ಸತ್ಕರ್ಮಗಳಿಂದಲೂ ಸಮೀಚೀನ ಜ್ಞಾನದಿಂದಲೂ ಉತ್ತಮವಾದ ವಿಷ್ಣುಲೋಕವನ್ನು ಹೊಂದುತ್ತಾರೆ. ಈ ಕ್ಲುಪ್ತನಿಯಮಕ್ಕೆ ಎಂದೂ , ಎಲ್ಲಿಯೂ ವ್ಯತಿರೇಕ ಉಂಟಾಗುವುದಿಲ್ಲ . (ಮನುಷ್ಯೋತ್ತಮರು ಮುಕ್ತಿಯೋಗ್ಯರು - ದೇವಸ್ವಭಾವದ ಗುಂಪಿಗೆ ಸೇರುತ್ತಾರೆ) , ಮಿಶ್ರಜ್ಞಾನವುಳ್ಳ ಮನುಷ್ಯರು ಸುಖದುಃಖಮಿಶ್ರವಾದ ಗತಿಯನ್ನೇ ಹೊಂದುತ್ತಾರೆ.
(2) ದೇವ , ಮನುಷ್ಯ , ಅಸುರರೆಂಬ ತ್ರಿವಿಧ ಜೀವರಲ್ಲಿಯೂ ಮುಖ್ಯಪ್ರಾಣದೇವರು 'ಹಂಸಃ ಸೋಹಂ ಸ್ವಾಹಾ' ಎಂಬ ಹಂಸಮಂತ್ರವನ್ನು ಉಚ್ಛ್ವಾಸ , ನಿಶ್ವಾಸರೂಪದಿಂದ , ದಿನ ಒಂದಕ್ಕೆ ೨೧,೬೦೦ ಸಾರಿ ಜಪಿಸುವರು. ಪ್ರತಿನಿಮಿಷಕ್ಕೆ ೧೫ ಉಚ್ಛ್ವಾಸ ನಿಶ್ವಾಸಗಳಾಗುವುವು. ಹಂಸಃ - ವಿರಾಮ ಕಾಲ , ಸೋಹಂ - ಉಚ್ಛ್ವಾಸಕಾಲ , ಸ್ವಾಹಾ - ನಿಶ್ವಾಸಕಾಲ. ದೋಷರಹಿತನೂ , ಭಕ್ತರ ದುಃಖಾದಿ ದೋಷನಾಶಕನೂ ಆದ್ದರಿಂದ ಪರಮಾತ್ಮನು ' ಹಂಸ ' ಎನಿಸುವನು ; ' ಸೋಹಂ ' ಎಂದರೆ ಆ ಹಂಸನೇ ನನ್ನ ಅಂತರ್ಯಾಮಿ ಎಂದರ್ಥ. ' ಸ್ವಾಹಾ ' ಎಂಬುದು ಆತ್ಮಸಮರ್ಪಣೆರೂಪದ ನಮಸ್ಕಾರವನ್ನು ಹೇಳುತ್ತದೆ. ಸಾತ್ತ್ವಿಕರು (ದೇವಸ್ವಭಾವದವರು) ಈ ಅರ್ಥಾನುಸಂಧಾನವುಳ್ಳವರು. ಈ ಅರ್ಥವಿಷಯಕ್ಕೆ ಉದಾಸೀನರೂ , ಸಂಶಯಗ್ರಸ್ತರೂ ಆದವರು ರಾಜಸರು. ' ಸೋಹಂ ' ಎಂಬುದಕ್ಕೆ ನಾನೇ ಹಂಸನೆಂಬ ಅಭೇದವನ್ನು ತಿಳಿಯುವವರು ಅಸುರರು. 

ಪವಮಾನಗುರುವೆ ನಿನ್ನವರ ಸೇವಕ ನಾನು
ಶ್ರವಣಮನನಾದಿ ಭಕುತಿಯ । ಭಕುತಿ ನಿನ್ನಲ್ಲಿ ಮಾ -
ಧವನಲ್ಲಿ ಕೊಟ್ಟು ಸಲಹಯ್ಯ ॥ 8 ॥

ಅರ್ಥ :- ಪವಮಾನಗುರುವೆ = ಹೇ ಗುರುಪವಮಾನ ! ನಾನು , ನಿನ್ನವರ = ನಿನ್ನ ಭಕ್ತರ , ಸೇವಕ = ಭೃತ್ಯನು (ಆಗಿರುವೆನು) ; ಶ್ರವಣಮನನಾದಿ ಭಕುತಿಯ = (ಸಚ್ಛಾಸ್ತ್ರಗಳ) ಶ್ರವಣ , (ಶ್ರವಣಮಾಡಿದ ಭಗವನ್ಮಹಿಮೆಗಳ) ಮನನ , (ಗುಣೋಪಸಂಹಾರರೂಪ ) ಧ್ಯಾನಗಳಲ್ಲಿ ಆದರವನ್ನೂ , ನಿನ್ನಲ್ಲಿ = ನಿನ್ನಲ್ಲಿಯೂ , ಮಾಧವನಲ್ಲಿ = ಲಕ್ಷ್ಮೀಪತಿಯಾದ ಶ್ರೀಹರಿಯಲ್ಲಿಯೂ , ಭಕುತಿ = ಭಕ್ತಿಯನ್ನೂ , ಕೊಟ್ಟು = ನೀಡಿ , ಸಲಹಯ್ಯ = ರಕ್ಷಿಸು.

ವಿಶೇಷಾಂಶ :- ಶ್ರವಣ , ಮನನ , ಧ್ಯಾನಗಳು ಭಗವಂತನ ಸಾಕ್ಷಾತ್ಕಾರಕ್ಕೆ ಪ್ರಧಾನ ಸಾಧನಗಳು. ಮನ ಮೊದಲಾದ ಸಕಲೇಂದ್ರಿಯ ಮುಖ್ಯಪ್ರೇರಕರಾದ ವಾಯುದೇವರ ಅನುಗ್ರಹದಿಂದಲೇ ಈ ಸಾಧನಗಳು ಲಭಿಸುವುವು. ತತ್ತ್ವಜ್ಞಾನವು ಅವರ ಪರಮಪ್ರಸಾದದಿಂದ ಮಾತ್ರ ಲಭ್ಯವು . ಸರ್ವರಿಗೂ ಅವರೇ ಜ್ಞಾನದಾತರು. ಜ್ಞಾನದಿಂದಲೇ ಭಕ್ತಿ. ಅದರಿಂದ ಶ್ರೀಹರಿಪ್ರಸಾದ.

ಮಿಶ್ರಜೀವರೊಳಗಿದ್ದು ಮಿಶ್ರಜ್ಞಾನವನಿತ್ತು
ಮಿಶ್ರಸಾಧನವ ನೀ ಮಾಡಿ । ನೀ ಮಾಡಿ ಮಾಡಿಸಿ
ಮಿಶ್ರಗತಿಗಳನೇ ಕೊಡುತಿಪ್ಪಿ ॥ 9 ॥

ಅರ್ಥ :- ಮಿಶ್ರಜೀವರೊಳಿದ್ದು = ನಿತ್ಯಸಂಸಾರಿ ಜೀವರಲ್ಲಿದ್ದು , ಮಿಶ್ರಜ್ಞಾನವನಿತ್ತು = ಸಂಶಯಜ್ಞಾನವನ್ನುಂಟುಮಾಡಿ , ಮಿಶ್ರಸಾಧನವ = ಸುಖದುಃಖಗಳಿಗೆ ಕಾರಣವಾಗುವ ಕರ್ಮಗಳನ್ನು , ನೀ ಮಾಡಿ ಮಾಡಿಸಿ = ನೀನು ಮಾಡಿ , ಅವರಿಂದ ಮಾಡಿಸಿ , ಮಿಶ್ರಗತಿಗಳನೇ = (ಆ ಮೂಲಕ) ನಿತ್ಯಸುಖದುಃಖ ಮಿಶ್ರಾನುಭವದ ಸ್ಥಿತಿಗಳನ್ನು , ಕೊಡುತಿಪ್ಪಿ = ಕೊಡುತ್ತಿರುವಿ (ಹೊಂದಿಸುವಿ).

ವಿಶೇಷಾಂಶ :- ನಿತ್ಯಸಂಸಾರಿಜೀವರಲ್ಲಿದ್ದು ಶ್ರೀಮುಖ್ಯಪ್ರಾಣರು ಅವರ ಗತಿಯನ್ನು ಸಾಧಿಸಿಕೊಡುವ ಪ್ರಕಾರವನ್ನು ನಿರೂಪಿಸುತ್ತಾರೆ.

ಅನಿಲದೇವನೆ ದೈತ್ಯದನುಜಗಣದೊಳಗಿದ್ದು
ಅನುಚಿತಕರ್ಮಗಳ ನೀ ಮಾಡಿ । ನೀ ಮಾಡಿ ಮಾಡಿಸಿ
ದಣಿಸುವಿಯೊ ಅವರ ದಿವಿಜೇಶ ॥ 10 ॥

ಅರ್ಥ :- ದಿವಿಜೇಶ = ದೇವಶ್ರೇಷ್ಠನಾದ (ಸಕಲ ತತ್ತ್ವಾಭಿಮಾನಿ ದೇವತೆಗಳಲ್ಲಿದ್ದು ಅವರಿಗೂ ನಿಯಾಮಕನಾದ) , ಅನಿಲದೇವನೆ = ಹೇ ವಾಯುದೇವ! ದೈತ್ಯದನುಜಗಣದೊಳಗಿದ್ದು = ದೈತ್ಯದಾನವ ಜೀವಸಮೂಹದಲ್ಲಿದ್ದು (ತಮೋಯೋಗ್ಯಜೀವರಲ್ಲಿದ್ದು) , ಅನುಚಿತಕರ್ಮಗಳ = ಅಯೋಗ್ಯಕರ್ಮಗಳನ್ನು , ನೀ ಮಾಡಿ = ನೀನು ಮಾಡಿ , ಮಾಡಿಸಿ = ಅವರಿಂದ ಮಾಡಿಸಿ , ಅವರ = ಅವರನ್ನು , ದಣಿಸುವಿಯೋ = ಶ್ರಮಪಡಿಸುವಿ (ದುಃಖಗೊಳಿಸುವಿ).

ವಿಶೇಷಾಂಶ :- ತಮೋಯೋಗ್ಯರಿಂದ ವಾಯುದೇವರು ಮಾಡಿಸುವ ಸಾಧನ ಪ್ರಕಾರವನ್ನು ನಿರೂಪಿಸುತ್ತಾರೆ . ' ದೇವಶ್ರೇಷ್ಠಶ್ಚ ಮಾರುತಿಃ ' ಇತ್ಯಾದಿ ಪ್ರಮಾಣಗಳು ವಾಯುದೇವರ ಜೀವೋತ್ತಮತ್ವವನ್ನು ಸಾರುತ್ತವೆ. ' ಓಂ ಇಯದಾಮನನಾತ್ ಓಂ ' , ' ಓಂ ಶ್ರೇಷ್ಠಶ್ಚ ಓಂ ' ಇತ್ಯಾದಿ ಬ್ರಹ್ಮಸೂತ್ರಗಳಲ್ಲಿ ಇವರ ಜೀವೋತ್ತಮತ್ವವು ನಿರ್ಣಯಿಸಲ್ಪಟ್ಟಿರುತ್ತದೆ. 

ಕಾಲನಿಯಾಮಕನೆ ಕಾಲತ್ರಯಂಗಳಲಿ
ಕಾಲಗುಣಕರ್ಮ ಅನುಸಾರ । ಅನುಸಾರವಿತ್ತು ಪರಿ-
ಪಾಲಿಸುವಿ ಜಗವ ಪವಮಾನ ॥ 11 ॥

ಅರ್ಥ :- ಪವಮಾನ = ಹೇ ಪ್ರಾಣದೇವ , ಕಾಲನಿಯಾಮಕನೆ = ಕಾಲಾಭಿಮಾನಿಯಾದ ನೀನು , ಕಾಲತ್ರಯಂಗಳಲಿ = ಸರ್ವದಾ (ಭೂತ , ಭವಿಷ್ಯತ್ , ವರ್ತಮಾನಗಳೆಂಬ ಮೂರು ಕಾಲಗಳಲ್ಲಿ) , ಕಾಲಗುಣಕರ್ಮ = ಕಾಲ , ಗುಣ ಕರ್ಮಗಳಿಗೆ , ಅನುಸಾರವಿತ್ತು = ಅನುಸಾರವಾದ ಫಲಗಳನ್ನಿತ್ತು , ಜಗವ = ಸಜ್ಜನ ಲೋಕವನ್ನು , ಪರಿಪಾಲಿಸುವಿ = ರಕ್ಷಿಸುವಿ.

ವಿಶೇಷಾಂಶ :- 
ಪ್ರಧಾನೋ ಜ್ಞಾನಿನಾಂ ಬ್ರಹ್ಮಾ ಜ್ಞಾನಮಾನೀ ಹೃದಿಸ್ಥಿತಃ ।
ಸ ಏವ ಕಾಲಮಾನೀ ಚ ಸಂಹರ್ತೃಣಾಂ ಪತಿಃಸ್ಮೃತಃ ॥
(ಭಾಗ.ತಾ)
ಮತ್ತು
ವೇದಾನಾಂ ಚೈವ ಲೋಕಾನಾಂ ವ್ಯೋಮಕಾಲಾದಿಕಸ್ಯ ಚ ।
ಸರ್ವತತ್ತ್ವಾಭಿಮಾನಿನೀ ಚ ಸರ್ವಪ್ರಾಣಗಣಾಧಿಪಃ ॥
(ಸ.ರ.ಮಾ).
- ಎಂಬ ವಾಕ್ಯಗಳು ವೇದಗಳು , ಲೋಕಗಳು ,ಆಕಾಶ , ಕಾಲ ಮೊದಲಾದುವುಗಳಿಗೂ , ಸರ್ವತತ್ತ್ವಗಳಿಗೂ , ಸಕಲ ಜೀವಗಣಗಳಿಗೂ ನಿಯಾಮಕರೆಂದು , ಜ್ಞಾನಿಶ್ರೇಷ್ಠರೆಂದು , ಸಕಲರ ಹೃದಯದಲ್ಲಿದ್ದು ಜ್ಞಾನನಿಯಾಮಕರಾಗಿರುವರೆಂದು ಮತ್ತು ಸರ್ವಸಂಹಾರಕರ್ತರೆಂದೂ ಬ್ರಹ್ಮವಾಯುಗಳ ಮಹಿಮೆಗಳನ್ನು ನಿರೂಪಿಸುತ್ತವೆ.

ಆಖಣಾಶ್ಮನೆ ನಿನ್ನ ಸೋಕಲರಿಯವು ದೋಷ
ಶ್ರೀಕಂಠಮುಖ್ಯಸುರರಿಗೆ । ಸುರರಿಗಿಲ್ಲವೋ ಭಾರ -
ತೀಕಾಂತ ನಿನಗೆ ಬಹದೆಂತೋ ॥ 12 ॥

ಅರ್ಥ:- ಆಖಣಾಶ್ಮನೆ = ವಜ್ರಶಿಲೆಯಂತಿರುವ , ಭಾರತೀಕಾಂತ = ಭಾರತೀಪತಿಯಾದ ಹೇ ಮುಖ್ರಪ್ರಾಣ! ನಿನ್ನ = ನಿನ್ನನ್ನು , ದೋಷ = ಯಾವ ದೋಷವೂ (ದೋಷಗಳೂ) , ಸೋಕಲರಿಯವು = ಮುಟ್ಟಲು ಸಹ ಶಕ್ತಗಳಲ್ಲ; ಶ್ರೀಕಂಠಮುಖ್ಯಸುರರಿಗೆ = ರುದ್ರನೇ ಮೊದಲಾದ ದೇವತೆಗಳಿಗೆ , ಇಲ್ಲವೋ = ದೋಷಗಳಿಲ್ಲದಿರಲು , ನಿನಗೆ = ಅವರೆಲ್ಲರ ಪ್ರಭುವಾದ ನಿನಗೆ , ಬಹದು = ಬರುವುದು , ಎಂತೋ = ಹೇಗೆ ? (ಅಸಂಭವವೇ ಸರಿ) . (ಸರ್ವಥಾ ದೋಷರಹಿತನು ನೀನು).

ವಿಶೇಷಾಂಶ :- ' ತೇ ಹ ನಾಸಿಕ್ಯಂ ಪ್ರಾಣಮುದ್ಗೀಥಂ ಉಪಾಸಾಂ - ಚಕ್ರಿರೇ ತಂ ಹಾಸುರಾಃಪಾಪ್ಮನಾ ವಿದಧುಃ ' ಮೊದಲಾದುವನ್ನು ಹೇಳಿ , ಕೊನೆಯಲ್ಲಿ , 'ಅಥ ಹ ಯ ಏವಾಯಂ ಮುಖ್ಯಃ ಪ್ರಾಣಸ್ತಮುದ್ಗೀಥಂ ಉಪಾಸಾಂ ಚಕ್ರಿರೇ ತಂ ಹಾಸುರಾ ಋತ್ವಾ ವಿದಧ್ವಸುಃ ಯಥಾ ಅಶ್ಮಾನಂ ಆಖಣಂ ಋತ್ವಾ ವಿಧ್ವಂಸೇತ್ಯೇವಂ ' ಎಂದು , ಮುಖ್ಯಪ್ರಾಣನನ್ನು ' ಆಖಣಾಶ್ಮ ' ನೆಂದು ಛಾಂದೋಗ್ಯೋಪನಿಷತ್ತು ನಿರೂಪಿಸುತ್ತದೆ. ದೇವಾಸುರರಲ್ಲಿ ಯುದ್ಧವಾಯಿತು. ಅಸುರರು ಬಹುಸಂಖ್ಯೆಯವರಾಗಿದ್ದುದರಿಂದಲೂ , ರುದ್ರದೇವರ ವರಬಲವಿದ್ದ ಪ್ರಯುಕ್ತವೂ , ದೇವತೆಗಳು ಪರಾಜಿತರಾದರು. ಉದ್ಗೀಥನಾಮಕ ಶ್ರೀಹರಿಯನ್ನುಪಾಸಿಸಿ ಆತನ ವಿಶೇಷಾನುಗ್ರಹಬಲದಿಂದ ಅಸುರರನ್ನು ಗೆಲ್ಲಲು ಯತ್ನಿಸಿದರು. ಮೊದಲಿಗೆ ನಾಸಿಕ್ಯವಾಯುವನ್ನು ಪ್ರತಿಮೆಯನ್ನಾಗಿ ಕಲ್ಪಿಸಿ , ಅವನಲ್ಲಿ ಉದ್ಗೀಥನನ್ನು ಉಪಾಸಿಸಲಿಕ್ಕೆ ಆರಂಭಿಸಿದರು. ಉದ್ಗೀಥನನ್ನು ಮೆಚ್ಚಿಸಿಕೊಂಡರೆ ನಮ್ಮನ್ನು ಗೆಲ್ಲುವರೆಂದು ತಿಳಿದ ಅಸುರರು , ನಾಸಿಕ್ಯವಾಯುವಿನ ಮೇಲೆರಗಿ ದೋಷಿಯನ್ನಾಗಿ ಮಾಡಿದರು. ಪ್ರತಿಮೆಯು ಅಪವಿತ್ರವಾದುದರಿಂದ ಉಪಾಸನೆಯು ಭಂಗವಾಯಿತು. ದೇವತೆಗಳು ನಂತರ ಕ್ರಮವಾಗಿ ಅಗ್ನಿ , ಸೂರ್ಯ , ಚಂದ್ರ , ರುದ್ರ ,ಶೇಷ , ಗರುಡರನ್ನು ಪ್ರತಿಮೆಗಳನ್ನಾಗಿಟ್ಟುಕೊಂಡು ಉದ್ಗೀಥನನ್ನು ಉಪಾಸಿಸಲು ಯತ್ನಿಸಿದರು. ಅಸುರರರು ಆ ಎಲ್ಲಾ ಪ್ರತಿಮೆಗಳನ್ನೂ ಕೆಡಿಸಿದರು. ಕೊನೆಯದಾಗಿ ಮುಖ್ಯಪ್ರಾಣನನ್ನು ಪ್ರತಿಮೆಯಾಗಿಟ್ಟುಕೊಂಡು ಉದ್ಗೀಥನ ಉಪಾಸನೆಯನ್ನು ಕೈಗೊಂಡರು. ಅಸುರರು ಆ ಪ್ರತಿಮೆಯ ಮೇಲೆ ಬೀಳಲು , ಮಣ್ಣು ಹೆಂಟೆಯು , ವಜ್ರದಂತಿರುವ ಕಲ್ಲುಬಂಡೆಯ ಮೇಲೆರಗಿದರೆ ಹೇಗೆ ತಾನೇ ಪುಡಿಪುಡಿಯಾಗುವುದೋ ಹಾಗೆ , ಅಸುರರರು ಆ ಪ್ರತಿಮೆಯನ್ನು ಕೆಡಿಸಲಾರದೆ ಚೆದುರಿ ನಷ್ಟರಾದರು. ಶ್ರೀಹರಿಗೆ ವಾಯುದೇವರು ಶ್ರೇಷ್ಠಪ್ರತಿಮೆ. ನಿರ್ದುಷ್ಟವಾದ ಈ ಶುದ್ಧಪ್ರತಿಮೆಯಲ್ಲಿ (ವಾಯ್ವಂತರ್ಗತ) ಶ್ರೀಹರಿಯನ್ನು ಉಪಾಸಿಸುವ ಭಕ್ತನೂ 'ಆಖಣಾಶ್ಮ'ನಾಗುವನು. ಎಂದರೆ , ಈ ಭಕ್ತನಿಗೆ ಕೇಡುಬಗೆಯುವವರೂ , ಕೊಲ್ಲಬಯಸುವವರೂ ಅಸುರರಂತೆ ತಾವೇ ನಷ್ಟವಾಗುವರು. ಭಕ್ತನು ಸುರಕ್ಷಿತನಾಗಿರುವನು. ದೇವತೆಗಳು ಉದ್ಗೀಥನನ್ನು (ವಾಯ್ವಂತರ್ಗತನನ್ನು) ಮೆಚ್ಚಿಸಿ ತಮ್ಮ ಅಭೀಷ್ಟವನ್ನು (ಜಯವನ್ನು) ಹೊಂದಿದರು. ಛಾಂದೋಗ್ಯದಲ್ಲಿ ಹೇಳಲಾದ ಈ ವಾಯದೇವರ ಮಹಿಮೆಯನ್ನು ಇಲ್ಲಿ ಸಂಗ್ರಹವಾಗಿ ನಿರೂಪಿಸಿದ್ದಾರೆ ದಾಸವರ್ಯರು. ರುದ್ರಾದಿಗಳು ಕ್ವಚಿತ್ ಅಸುರಸ್ಪರ್ಶವುಳ್ಳವರು ; ತನ್ನಿಮಿತ್ತಕವಲ್ಲದ ದೋಷಗಳುಳ್ಳವರಲ್ಲ. 

ಕಲ್ಯಾದಿದೈತ್ಯಕುಲದಲ್ಲಣ ದಯಾಸಾಂದ್ರ
ಬಲ್ಲಿದನು ಜಗಕೆ ಭಯದೂರ । ಭಯದೂರ ಭಕ್ತರನು
ಎಲ್ಲ ಕಾಲದಲಿ ಸಲಹಯ್ಯ ॥ 13 ॥

ಅರ್ಥ :- ಕಲ್ಯಾದಿದೈತ್ಯಕುಲದಲ್ಲಣ = ಕಲಿ ಮೊದಲಾದ ದೈತ್ಯಸಮೂಹವನ್ನು ಸೀಳಿ ಒಗೆಯುವ , ಭಯದೂರ = ನಿರ್ಭಯನಾದ ಹೇ ಪ್ರಾಣದೇವ! ಜಗಕೆ = ಜಗತ್ತಿನಲ್ಲಿಯೇ , ಬಲ್ಲಿದನು = ಬಲಿಷ್ಠನಾದ ನೀನು , ದಯಾಸಾಂದ್ರ = ಕೃಪಾಪೂರ್ಣನು (ಆಗಿರುವಿ) ; ಭಕ್ತರ = ಭಕ್ತರನ್ನು , ಎಲ್ಲ ಕಾಲದಿ = ಸರ್ವಕಾಲದಲ್ಲಿ (ಮುಕ್ತಿಪರ್ಯಂತ) , ಸಲಹಯ್ಯ = (ಎಲ್ಲ ಪ್ರಕಾರದ ಭಯ ಬಿಡಿಸಿ) ರಕ್ಷಿಸು.

ವಿಶೇಷಾಂಶ :- ಆಖಣಾಶ್ಮನಾದ ಮುಖ್ಯಪ್ರಾಣನಲ್ಲದೆ ಭಯಪರಿಹಾರಕರಾದ ಅನ್ಯರಿಲ್ಲದ್ದರಿಂದ ಈ ಪ್ರಾರ್ಥನೆಯು ಅತ್ಯವಶ್ಯಕವೇ ಸರಿ.

ಕಾರುಣ್ಯನಿಧಿ ಜಗದ ಉದ್ಧಾರಕನು ನೀನೆ ಉ-
ದ್ಧಾರ ಮಾಡದಿರೆ ಭಕುತರ । ಭಕುತರನು ಕಾವರಿ-
ನ್ನಾರು ಲೋಕದಲಿ ಜಯವಂತ ॥ 14 ॥

ಅರ್ಥ :- ಕಾರುಣ್ಯನಿಧಿ = ಹೇ ಕೃಪಾಸಮುದ್ರ , ಜಗದ ಉದ್ಧಾರಕನು = ಜಗತ್ತನ್ನು ಉದ್ಧರಿಸುವವನು , ನೀನೆ = ನೀನೆ ಆಗಿರುವಿ , ಭಕುತರ = ಭಕ್ತರನ್ನು , ಉದ್ಧಾರ ಮಾಡದಿರೆ = ಉದ್ಧಾರ ಮಾಡದಿದ್ದರೆ (ಕೈಹಿಡಿದೆತ್ತಿ ರಕ್ಷಿಸದಿದ್ದರೆ) , ಜಯವಂತ = ನಿತ್ಯಜಯಶಾಲಿಯಾದ ಹೇ ಪ್ರಾಣದೇವ ! ಲೋಕದಲಿ = ಜಗತ್ತಿನಲ್ಲಿ , ಇನ್ನಾರು = ಬೇರೆ ಯಾರು , ಕಾವರು = ರಕ್ಷಣೆ ಮಾಡುವರು ? (ನಿನ್ನ ಹೊರತು ಅನ್ಯರಿಲ್ಲ). 

ವಿಶೇಷಾಂಶ :- ಸ್ವತಂತ್ರನಾದ ಶ್ರೀಹರಿಯನ್ನುಳಿದು ಅನ್ಯ ಉದ್ಧಾರಕರಿಲ್ಲವೆಂದರ್ಥ ; ಶ್ರೀಹರಿಯೂ ಮುಖ್ಯಪ್ರಾಣನ ದ್ವಾರವೇ ಉದ್ಧರಿಸುವನು . 
ಯಾನಿ ಯಾನೀಹ ಕರ್ಮಾಣಿ ಜಗತಿ ಸ್ಯೂ ರಮಾಪತೇಃ ।
ಪಾಯಃ ಪ್ರಾಣಾಧಿಪೇ ತಾನಿ ಸಮಸ್ತಾನಿ ನ ಸಂಶಯಃ ॥ - ( ಸ.ರ.ಮಾ)
ಜಗದ್ವಿಷಯದಲ್ಲಿ ಸ್ವತಂತ್ರಕರ್ತನಾದ ನಾರಾಯಣನು ನಿರ್ವಹಿಸುವ ಎಲ್ಲ ಕರ್ಮಗಳನ್ನು ಪ್ರಾಣನಾಯಕನು ಆತನೊಬ್ಬನ ಅಧೀನನಾಗಿ ತಾನೂ ನಿರ್ವಹಿಸುತ್ತಾನೆಂದು ಹೇಳಲಾಗಿರುವ ಮುಖ್ಯಪ್ರಾಣನ ಮಹಿಮೆಯು ಈ ವಿಷಯದಲ್ಲಿ ಪ್ರಮಾಣವಾಗಿದೆ. ಶ್ರೀಹರಿಯಂತೆ ಮುಖ್ಯಪ್ರಾಣನೂ ಜಗನ್ನಿಯಾಮಕನು ; ಆದರೆ ಶ್ರೀಹರಿಯೊಬ್ಬನ ಅಧೀನವಾಗಿ ; ಸ್ವತಂತ್ರನಾಗಿ ಅಲ್ಲ.

ತ್ರಿಜಗದ್ಗುರುವರೇಣ್ಯ ಋಜುಗಣಾಧಿಪ ಪದಾಂ -
ಬುಜಯುಗ್ಮಕೆರಗಿ ಬಿನ್ನೈಪೆ । ಬಿನ್ನೈಪೆ ಮನ್ಮನದಿ
ನಿಜರೂಪ ತೋರಿ ಸಂತೈಸು ॥ 15 ॥

ಅರ್ಥ :- ಋಜುಗಣಾಧಿಪ = ಋಜುಗಣಜೀವರ ಮಧ್ಯದಲ್ಲಿ ಮುಖ್ಯ ಅಧಿಕಾರಸ್ಥಾನದಲ್ಲಿರುವ , ತ್ರಿಜಗದ್ಗುರುವರೇಣ್ಯ = ಮೂರು (ಸರ್ವ) ಲೋಕಗಳ ಸಜ್ಜನರಿಗೆ ಮುಖ್ಯಗುರುವಾದ ಹೇ ಮುಖ್ಯಪ್ರಾಣದೇವ! ಪದಾಂಬುಜಯುಗ್ಮಕೆ = ನಿನ್ನ ಎರಡು ಪಾದಕಮಲಗಳಿಗೆ , ಎರಗಿ = ನಮಸ್ಕರಿಸಿ , ಬಿನ್ನೈಪೆ = ವಿಜ್ಞಾಪಿಸಿಕೊಳ್ಳುತ್ತೇನೆ ; ಮನ್ಮನದಿ = ನನ್ನ ಮನಸ್ಸಿನಲ್ಲಿ , ನಿಜರೂಪ = ನಿನ್ನ ಸ್ವರೂಪವನ್ನು , ತೋರಿ = ತೋರಿಸಿ , ಸಂತೈಸು = ಪರಮಶಾಂತಿಯನ್ನು ಕೊಡು.

ವಿಶೇಷಾಂಶ :- ಋಜುಗಣದ ಜೀವರು ಬ್ರಹ್ಮಪದವಿಯನ್ನು ಹೊಂದಿ ಅಲ್ಲಿಂದ ಮುಕ್ತರಾಗತಕ್ಕವರು . ಆ ಪದವು ಬೇರಾವ ಜೀವರಿಗೂ ಲಭ್ಯವಲ್ಲ . ಋಜುಜೀವರ ೨೦೦ ಜನ್ಮಗಳ ಸಾಧನೆಯಲ್ಲಿ ೧೯೯ನೆಯ ಜನ್ಮದಲ್ಲಿ ವಾಯುಪದವನ್ನು ಹೊಂದುವರು. ಆ ಪದವಿಯಲ್ಲಿರುವ ಋಜುಗಣದ ಜೀವನೊಬ್ಬನೇ ವಾಯುದೇವನೆಂಬ ನಾಮವುಳ್ಳವನು. ಆತನೇ ಮುಖ್ಯಪ್ರಾಣನು . ಶ್ರೀಹರಿಯು ಆತನ ದ್ವಾರಾ ಸಕಲ ಜಗತ್ತನ್ನು ನಿಯಮಿಸುವನು . ಋಜುಗಣದ ಜೀವರು ಅನಾದಿಕಾಲದಿಂದ ಪರೋಕ್ಷಜ್ಞಾನಪೂರ್ಣರು - ಅಪರೋಕ್ಷಜ್ಞಾನಿಗಳೂ ಅಹುದು . ಆದರೆ , ಅವರು ಪ್ರತಿಜನ್ಮದಲ್ಲಿ ಅಪರೋಕ್ಷಜ್ಞಾನಸ್ಪುಟತ್ವವನ್ನು , ಅಧಿಕವಾಗಿ ಭಗವದ್ರೂಪಗಳ ಸಾಕ್ಷಾತ್ಕಾರವನ್ನೂ ಹೊಂದುತ್ತ , ಅತ್ಯಂತ ಅತಿಶಯವಾದ ಮೋಕ್ಷಾನಂದಕ್ಕೆ ಭಾಗಿಗಳಾಗುತ್ತಾರೆ. ಇವರಿಗೆ ಸದೃಶವಾದ ಆನಂದವನ್ನು ಯಾವ ಜೀವನೂ ಎಂದೂ ಹೊಂದುವುದಿಲ್ಲ.

ಅನಿಲದೇವನೆ ನಿನ್ನ ಜನುಮಜನುಮಗಳಲ್ಲಿ
ಇನಿತು ಬೇಡುವೆನು ಎಂದೆಂದು । ಎಂದೆಂದು ವಿಷಯ ಚಿಂ -
ತನೆಯ ಕೊಡದೆನ್ನ ಸಲಹೆಂದು ॥ 16 ॥

ಅರ್ಥ :- ಅನಿಲದೇವನೆ = ಹೇ ವಾಯುದೇವ ! ಜನುಮಜನುಮಗಳಲ್ಲಿ = ಪ್ರತಿಜನ್ಮದಲ್ಲಿಯೂ , ನಿನ್ನ = ನಿನ್ನನ್ನು , ಇನಿತು = ಇಷ್ಟುಮಾತ್ರ , ಬೇಡುವೆನು = ಬೇಡುತ್ತೇನೆ ; ಎಂದೆಂದು = ಯಾವ ಕಾಲಕ್ಕೂ , ವಿಷಯಚಿಂತನೆಯ = ವಿಷಯಭೋಗದ ಯೋಚನೆಯನ್ನು (ವಿಷಯಗಳನ್ನು ಭೋಗಿಸುವ ಇಚ್ಛೆಯನ್ನು) , ಕೊಡದೆ = ಉಂಟುಮಾಡದೆ , ಎನ್ನ = ನನ್ನನ್ನು , ಸಲಹೆಂದು = ರಕ್ಷಿಸೆಂದು (ಬೇಡುವೆನು).

ತಾರತಮ್ಯಜ್ಞಾನ ವೈರಾಗ್ಯಸದ್ಭಕ್ತಿ
ದಾರಢ್ಯವಾಗಿ ಇರಲೆಂದು । ಇರಲೆಂದು ಬಿನ್ನೈಪೆ 
ಭಾರತೀರಮಣ ನಿನಗಾನು ॥ 17 ॥

ಅರ್ಥ :- ಭಾರತೀರಮಣ = ಹೇ ಭಾರತೀಪತಿಯಾದ ಮುಖ್ಯಪ್ರಾಣದೇವ ! ತಾರತಮ್ಯಜ್ಞಾನ = ತಾರತಮ್ಯಸಹಿತವಾದ (ನಿನ್ನ ಜೀವೋತ್ತಮತ್ವ ಮತ್ತು ಶ್ರೀಹರಿಯ ಸರ್ವೋತ್ತಮತ್ವ) ಜ್ಞಾನವೂ , ವೈರಾಗ್ಯ = ವೈರಾಗ್ಯವೂ , ಸದ್ಭಕ್ತಿ = (ನವವಿಧ ದ್ವೇಷಗಳಿಂದ ರಹಿತವಾದ) ಶ್ರೇಷ್ಠಭಕ್ತಿಯೂ , ದಾರಢ್ಯವಾಗಿ = ದೃಢವಾಗಿ , ಇರಲೆಂದು = (ನಿನ್ನಲ್ಲಿ ಮತ್ತು ಶ್ರೀಹರಿಯಲ್ಲಿ ) ಉಭಯರಲ್ಲಿ ನನಗುಂಟಾಗಲೆಂದು , ಆನು = ನಾನು , ನಿನಗೆ = ನಿನ್ನಲ್ಲಿ , ಬಿನ್ನೈಪೆ = ಪ್ರಾರ್ಥಿಸುತ್ತೇನೆ.

ಮರಣಜನನಗಳು ಬಂದರೆ ಬರಲಿ ಪ್ರದ್ವೇಷ
ಗುರುಹಿರಿಯರಲ್ಲಿ ಹರಿಯಲ್ಲಿ । ಹರಿಯಲ್ಲಿ ಕೊಡದೆ ಉ -
ದ್ಧರಿಸಬೇಕೆನ್ನ ಪರಮಾಪ್ತ ॥ 18 ॥

ಅರ್ಥ :- ಪರಮಾಪ್ತ = (ತಾಯಿ , ತಂದೆ , ಬಂಧು ಎಲ್ಲರಿಗಿಂತಲೂ ಅಧಿಕನಾಗಿ ಸರ್ವಪ್ರಕಾರದಿಂದ ರಕ್ಷಿಸುವ) ಹೇ ಆಪ್ರತಮನಾದ ಭಾರತೀಶ ! ಮರಣಜನನಗಳು = ಸಾವುಹುಟ್ಟುಗಳು , ಬಂದರೆ = ಬರುತ್ತಿರುವುದಾದರೆ , ಬರಲಿ = ಬರಲಿ (ಅದರಿಂದ ನಾನಂಜುವುದಿಲ್ಲ) ಆದರೆ , ಗುರುಹಿರಿಯರಲ್ಲಿ = ಗುರುಗಳು ಮತ್ತು ಸ್ವೋತ್ತಮರಲ್ಲಿ , ಹರಿಯಲ್ಲಿ = (ವಿಶೇಷವಾಗಿ) ಶ್ರೀಹರಿಯಲ್ಲಿ , ಪ್ರದ್ವೇಷ = (ನಾನೇ ಬ್ರಹ್ಮ - ಸ್ವತಂತ್ರಕರ್ತ ಇತ್ಯಾದಿ) ಪ್ರಸಿದ್ಧವಾದ , ನವದ್ವೇಷಗಳಲ್ಲಿ ಒಂದು ದ್ವೇಷವನ್ನೂ , ಕೊಡದೆ = ಉಂಟಾಗದಂತೆ ಮಾಡಿ , ಎನ್ನ = ನನ್ನನ್ನು , ಉದ್ಧರಿಸಬೇಕು = ಉದ್ಧಾರ ಮಾಡಬೇಕು , ದೇವ!

ವಿಷಯದಾಶೆಯ ಬಿಡಿಸಿ ಅಸುನಾಥ ಎನ್ನ ಪಾ -
ಲಿಸಬೇಕು ಮನಸು ನಿನ್ನಲ್ಲಿ । ನಿನ್ನಲ್ಲಿ ನಿಲಿಸಿ ಸಂ -
ತಸದಿ ಕಾಯೆನ್ನ ಮರುದೀಶ ॥ 19 ॥

ಅರ್ಥ :- ಅಸುನಾಥ = ಹೇ ಪ್ರಾಣನಾಥ ! ವಿಷಯದಾಶೆಯ = ವಿಷಯಭೋಗಲಾಲಸೆಯನ್ನು , ಬಿಡಿಸಿ = ಕಳೆದು , ಎನ್ನ = ನನ್ನನ್ನು , ಪಾಲಿಸಬೇಕು = ರಕ್ಷಿಸಬೇಕು ; ಮನಸು = ನನ್ನ ಮನಸ್ಸನ್ನು , ನಿನ್ನಲ್ಲಿ ನಿಲಿಸಿ = ನಿನ್ನಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡಿ , ಸಂತಸದಿ = ಪ್ರಸನ್ನನಾಗಿ , ಮರುದೀಶ = ಹೇ ಮರುದ್ಗಣ ನಾಯಕ ! ಎನ್ನ = ನನ್ನನ್ನು , ಕಾಯಿ = ರಕ್ಷಿಸು.

ವಿಶೇಷಾಂಶ :- (ಶಾಸ್ತ್ರ ಸಮ್ಮತಿಯಿಲ್ಲದ) ವಿಷಯದಾಶೆಯನ್ನು ತೊರೆಯುವುದೇ ವೈರಾಗ್ಯ. ವೈರಾಗ್ಯವಿಲ್ಲದೆ ಜ್ಞಾನವಿಲ್ಲ - ಭಕ್ತಿಯಿಲ್ಲ . ಜ್ಞಾನಭಕ್ತಿ ವೈರಾಗ್ಯಗಳಿಲ್ಲದೆ ಶ್ರೀಹರಿಯು ಎಂದೂ ಪ್ರಸನ್ನನಾಗುವುದಿಲ್ಲ . ಹರಿಪ್ರಸಾದವಿಲ್ಲದೆ ಅಪರೋಕ್ಷವಿಲ್ಲ ; ಅದಿಲ್ಲದೆ ಮೋಕ್ಷವಿಲ್ಲ . ಈ ಎಲ್ಲ ಮುಖ್ಯಸಾಧನಗಳನ್ನೂ ಅವುಗಳಿಂದ ದೊರೆಯಬೇಕಾದ ಶ್ರೀಹರಿಪ್ರಸಾದವನ್ನೂ , ಯೋಗ್ಯಜೀವರಿಗೆ ದೊರಕಿಸಿಕೊಡಲು ಶ್ರೀವಾಯುದೇವರೇ ಸಮರ್ಥರು ; ಭಕ್ತಿ ವೈರಾಗ್ಯಾದಿಗಳ ನಿಯಾಮಕರು .
ವಾಯುರ್ಹಿ ಸರ್ವಜೀವಾನಾಂ ಅಭಿಮಾನೀ ನಿಯಾಮಕಃ । ಬಲಿಮೇಧಾಧೃತೀಸ್ಥೈರ್ಯಧ್ಯಾನ ವೈರಾಗ್ಯಮಾನವಾನ್ । ಸದ್ಜ್ಞಾನಾನಂದಭಕ್ತ್ಯಾದಿಗುಣಮಾನೀ ಸ ಏಕಲಃ ॥ 
- (ಸ.ರ.ಮಾ) - ಸರ್ವಜೀವರ ಬಲ , ಬುದ್ಧಿ , ಧೈರ್ಯ , ಸ್ಥೈರ್ಯ , ಧ್ಯಾನ , ವೈರಾಗ್ಯ , ಜ್ಞಾನ , ಆನಂದ , ಭಕ್ತಿ ಮೊದಲಾದ ಗುಣಗಳಿಗೆ ಅಭಿಮಾನಿಗಳೆಂದೂ , 

ಮುಖ್ಯಪ್ರಾಣೋ ಮಹಾನೇಷ ಯೇನ ವ್ಯಾಪ್ತಂ ಚರಾಚರಂ
ತಸ್ಮಿನ್ ಓತಮಿದಂ ಸರ್ವಂ ಚೇತನಾಚೇತನಾತ್ಮಕಮ್ ।
ಯಥಾ ಸೂತ್ರೇ ಮಣಿಗಣಾಃ ರಥನಾಭಾವರಾ ಯಥಾ
ಯಥಾ ಕಂಥಾಪಟಾಃಸೂತ್ರೇ ಓತಾಃಪ್ರೋತಾಶ್ಚ ಸಂಸ್ಥಿತಾಃ ॥

- (ಭಾಗ - ತಾತ್ಪರ್ಯ) ಜೀವೋತ್ತಮನಾದ ಈ ಮುಖ್ಯಪ್ರಾಣನು , ಚರಾಚರ ಜಗತ್ತಿನಲ್ಲಿ ವ್ಯಾಪ್ತನಾಗಿ , ಒಳಹೊರಗೆ ಉದ್ದಅಡ್ಡವಾಗಿ ವ್ಯಾಪಿಸಿದ ಕೌದಿಬಟ್ಟೆ ತುಂಡುಗಳನ್ನು ಸೂತ್ರವು ತನ್ನಲ್ಲಿ ಧರಿಸುವಂತೆ , (ಒಂದು ಕೌದಿಯನ್ನಾಗಿ ಧಾರಣೆ ಮಾಡಿರುವಂತೆ) , ಜಗತ್ತನ್ನು ಧಾರಣ ಮಾಡಿರುವನು. ಸರದಲ್ಲಿರುವ ಮುತ್ತುಗಳನ್ನು (ಒಳಗೆ ಪೋಣಿಸುವ) ಸೂತ್ರವು ಧರಿಸಿರುವಂತೆಯೂ , ಚಕ್ರದ ಅರಗಳನ್ನು (ಚಕ್ರದ ಸುತ್ತನ್ನೂ ಕುಂಭವನ್ನು ಸೇರಿಸುವ ಪಟ್ಟಿಗಳು ಕಂಭವು ಧರಿಸಿರುವಂತೆ , ವಾಯುದೇವನು ಜಗತ್ತನ್ನು ಧರಿಸಿ ಆಶ್ರಯನಾಗಿರುವನೆಂದು ವಾಯುದೇವನ ಅಗಾಧಮಹಿಮೆ ವರ್ಣಿತವಾಗಿದೆ.

ಅಂಜಿದವರಿಗೆ ವಜ್ರಪಂಜರನು ನೀನೆ ಪ್ರ -
ಭಂಜನಪ್ರಭುವೆ ಪ್ರತಿದಿನ । ಪ್ರತಿದಿನದಿ ನಮ್ಮ ಭಯ
ಭಂಜಿಸಿ ಕಾಯೋ ಬಹುರೂಪ ॥ 20 ॥

ಅರ್ಥ :- ಬಹುರೂಪ = ಅನಂತ ರೂಪವುಳ್ಳ , ಪ್ರಭಂಜನಪ್ರಭುವೆ = ಹೇ ದುಷ್ಟಮರ್ದನಾಧೀಶ ! (ಸಂಸಾರಕ್ಲೇಶದಿಂದ) ಅಂಜಿದವರಿಗೆ = ಭಯವುಳ್ಳವರಿಗೆ , ನೀನೆ , ವಜ್ರಪಂಜರನು = (ಪಕ್ಷಿಯು ಭದ್ರವಾದ ಪಂಜರದಲ್ಲಿ ತನ್ನ ಶತ್ರುಗಳ ಭಯವಿಲ್ಲದೆ ಸುಖವಾಗಿರುವಂತೆ) ವಜ್ರನಿರ್ಮಿತ ಪಂಜರದಂತೆ ದೃಢರಕ್ಷಕನು ; ಪ್ರತಿದಿನ = ನಿತ್ಯವೂ , ನಮ್ಮ , ಭಯ = (ನಾನಾಪ್ರಕಾರದ) ಭಯಗಳನ್ನು , ಭಂಜಿಸಿ = ನಾಶಗೊಳಿಸಿ , ಕಾಯೋ = ಪರಿಪಾಲಿಸು.

ವಿಶೇಷಾಂಶ : (1) ಸಂಸಾರವು ನಾನಾ ಪ್ರಕಾರದ ಭಯಗಳಿಗೂ ತನ್ನಿಮಿತ್ತ ದುಃಖಗಳಿಗೂ ಆಕರವು. ವಾಯುದೇವರ ಕೃಪಾಕವಚವು ಪ್ರಾಣಿಗಳಿಗೆ ವಜ್ರಪಂಜರದಂತೆ ಸರ್ವಭಯಪರಿಹಾರಕವು.

(2) ದೈತ್ಯರೆಂಬ ಮೇಘಸಮೂಹಗಳನ್ನು ನಾಶಮಾಡುವುದರಲ್ಲಿ ಗಾಳಿಯಂತೆ ನಿಸ್ಸೀಮ ಸಮರ್ಥನಾದ್ದರಿಂದ ' ಪ್ರಭಂಜನಪ್ರಭು ' ವೆಂಬ ನಾಮವು ದೇವತೆಗಳ ಮಧ್ಯದಲ್ಲಿ ಈತನಿಗೆ ಮಾತ್ರ ಸಲ್ಲುವುದು . (ಪ್ರಭಂಜನ = ಗಾಳಿ).

ಕಲಿಮುಖ್ಯದೈತ್ಯರುಪಟಳವ ಪರಿಹರಿಸಿ ಮ -
ತ್ಕುಲಗುರುವೆ ಸಲಹೋ ಕಾರುಣ್ಯ । ಕಾರುಣ್ಯಸಿಂಧು ನಿ -
ನ್ನೊಲುಮೆಯೊಂದಿರಲು ಹರಿ ಕಾಯ್ವ ॥ 21 ॥

ಅರ್ಥ :- ಮತ್ಕುಲಗುರುವೆ = ನನ್ನ ಮತ್ತು (ನನ್ನ)ಸಜಾತಿಜೇವರ (ಮುಕ್ತಿಯೋಗ್ಯರ) ಗುರುವಾದ ಹೇ ಪ್ರಾಣದೇವ! ಕಲಿಮುಖ್ಯದೈತ್ಯರ = ಕಲಿ ಮೊದಲಾದ ದೈತ್ಯರಿಂದ ಒದಗುವ , ಉಪಟಳವ = ಉಪದ್ರವವನ್ನು (ಪೀಡೆಯನ್ನು) , ಪರಿಹರಿಸಿ = ಕಳೆದು , ಸಲಹೋ = ರಕ್ಷಿಸು ; ಕಾರುಣ್ಯಸಿಂಧು = ಕರುಣಾಸಮುದ್ರನಾದ , ನಿನ್ನ ಒಲುಮೆಯೊಂದಿರಲು = ಪ್ರಸನ್ನತೆಯೊಂದಿದ್ದರೆ , ಹರಿ = ಶ್ರೀಹರಿಯು , ಕಾಯ್ವ = ರಕ್ಷಿಸುವನು .

ವಿಶೇಷಾಂಶ :- ಜ್ಞಾನೋಪದೇಶಕರೇ ಗುರುಗಳು . ಸುಜನರಿಗೆಲ್ಲ ವಾಯುದೇವರೇ ಮುಖ್ಯಗುರುಗಳು . ಜಗದ್ಗುರುಗಳೆಂದರೆ ಅವರೇ . ವಾಯುದೇವರು ಪ್ರಸನ್ನರಾದರೆ ಶ್ರೀಹರಿಯು ತಪ್ಪದೆ ಪ್ರಸನ್ನನಾಗುವನು . ಶ್ರೀಹರಿಪ್ರಸನ್ನತೆಯಿಂದ ಅಲಭ್ಯವಾದುದು ಯಾವುದೂ ಇಲ್ಲ . ದೈತ್ಯರು ಯಾರೂ ಯಾವ ಕಾಲಕ್ಕೂ ಸ್ಪರ್ಶ ಮಾಡಲು ಸಹ ಸಾಧ್ಯವಿಲ್ಲದ ಆಖಣಾಶ್ಮರು ಭಾರತೀಶರು. ದೈತ್ಯರಲ್ಲಿ ಶ್ರೇಷ್ಠನು (ಅಧಮಾಧಮನು) ಕಲಿಯು. ಕಲಿ ಮೊದಲಾದವರನ್ನೆಲ್ಲ ನಿಗ್ರಹಿಸುವ ಸಾಮರ್ಥ್ಯವು ಅವರೊಬ್ಬರಲ್ಲಿ ಮಾತ್ರ ಇರುವುದು .

ಭಾರತೀರಮಣ ಮದ್ಭಾರ ನಿನ್ನದು ಎನ್ನ -
ಪಾರ ದೋಷಗಳ ಎಣಿಸದೆ । ಎಣಿಸದೆ ಸಂತೈಸೊ
ಕಾರುಣ್ಯಸಿಂಧು ಎಂದೆಂದು ॥ 22 ॥

ಅರ್ಥ :- ಭಾರತೀರಮಣ = ಹೇ ಭಾರತೀಶ ! ಮದ್ಭಾರ = ನನ್ನ (ನನ್ನನ್ನು ಉದ್ಧರಿಸುವ) ಹೊಣೆಯು , ನಿನ್ನದು = ನಿನಗೆ ಸೇರಿದುದು ; ಎನ್ನ = ನನ್ನ , ಅಪಾರ ದೋಷಗಳ = ಅನಂತ ದೋಷಗಳನ್ನು , ಎಣಿಸದೆ = ಗಮನಿಸದೆ , ಕಾರುಣ್ಯಸಿಂಧು = ಹೇ ದಯಾಸಮುದ್ರ ! ಎಂದೆಂದು = ನಿತ್ಯವೂ , ಸಂತೈಸೊ = ರಕ್ಷಿಸು .

ವಿಶೇಷಾಂಶ : (1) ಶ್ರದ್ಧಾಭಕ್ತಿಗಳಿಗೆ ಭಾರತೀದೇವಿಯು ಅಭಿಮಾನಿಯು . ಆಕೆಯನ್ನಾಳುವ ಪತಿಯು ವಾಯುದೇವನು. ದೇವತೆಗಳ ಹೆಸರುಗಳುಳ್ಳ ದೈತ್ಯರೂ ಇರುವರು . ಆದರೆ ' ಭಾರತೀ ' ಎಂಬ ಹೆಸರಿನ ಪತ್ನಿಯುಳ್ಳ ದೈತ್ಯನಿಲ್ಲ . ನಿರ್ದಿಷ್ಟ ದೇವತಾಸ್ವರೂಪಜ್ಞಾಪಕಾರ್ಥವಾಗಿ ' ಭಾರತೀರಮಣ - ಭಾರತೀಶ ' ಎಂದು ಮುಖ್ಯಪ್ರಾಣನನ್ನು ಸ್ಮರಿಸುವುದು - ಕರೆಯುವುದು.

(2) ಸಾಧನಾವಸ್ಥೆಯಲ್ಲಿರುವ ಸುಜೀವಿಗಳು ಬಹು ದೋಷಗಳುಳ್ಳವರು . ದೋಷಗಳನ್ನು ಕಳೆದುಕೊಂಡ ಮೇಲೆ ಮಾತ್ರ ವಾಯುದೇವರ ಕೃಪಾಪಾತ್ರರಾಗುತ್ತಾರೆಂದಲ್ಲ - ದೋಷಗಳ ಪರಿಹಾರಕ್ಕಾಗಿಯೇ ಅವರ ಕೃಪೆಯು ಅವಶ್ಯಕ . ಆದ್ದರಿಂದಲೇ ಈ ಪ್ರಾರ್ಥನೆಯು . ನಿರ್ದೋಷಿಗಳು ಅವರ ಪರಮಾನುಗ್ರಹಕ್ಕೆ ಪಾತ್ರರೆಂದು , ಕೈಮುತ್ಯನ್ಯಾಯದಿಂದ ಸಿದ್ಧ.

ಶ್ರೀಶಸದ್ಮನೆ ಜೀವರಾಶಿಯೊಳಗೊಂದಧಿಕ -
ವಿಂಶತಿಸಹಸ್ರದಾರ್ನೂರು । ಆರ್ನೂರು ಹಗಲಿರುಳು
ಶ್ವಾಸಜಪಮಾಡಿ ಹರಿಗೀವಿ ॥ 23 ॥

ಅರ್ಥ :- ಶ್ರೀಶಸದ್ಮನೆ = ಲಕ್ಷ್ಮೀಪತಿಯಾದ ನಾರಾಯಣಗೆ ನಿತ್ಯ ಅಧಿಷ್ಠಾನಭೂತನಾದ ಹೇ ಮುಖ್ಯಪ್ರಾಣದೇವ ! ಜೀವರಾಶಿಯೊಳಗೆ = ಜೀವಸಮೂಹದಲ್ಲಿ , ಹಗಲಿರುಳು = (ಪ್ರತಿಯೊಬ್ಬನಲ್ಲಿಯೂ) ಹಗಲುರಾತ್ರಿ , (ದಿನ ಒಂದಕ್ಕೆ) ಒಂದಧಿಕವಿಂಶತಿಸಹಸ್ರದ = ಇಪ್ಪತ್ತೊಂದು ಸಾವಿರದ , ಆರ್ನೂರು = ಆರುನೂರು , ಶ್ವಾಸಜಪಮಾಡಿ = ಶ್ವಾಸರೂಪದಿಂದ (ಹಂಸಮಂತ್ರ) ಜಪಮಾಡಿ , ಹರಿಗೆ = ಶ್ರೀಹರಿಗೆ , ಈವಿ = ಅರ್ಪಿಸುವಿ.

ವಿಶೇಷಾಂಶ : (1) ಶ್ರೀವಾಯುದೇವರ ಸಕಲ ವ್ಯಾಪಾರಗಳೂ , ವಿಷ್ಣುಪ್ರೀತ್ಯರ್ಥವಾಗಿಯೇ ಇದ್ದು ವಿಷ್ಣುವಿನಲ್ಲಿಯೇ ಸರ್ವದಾ ಅರ್ಪಿಸಲ್ಪಡುತ್ತವೆ.

ಸಮರ್ಪ್ಯ ಕೃತ್ಯಾನಿ ಕೃತೀ ಕೃತಾನಿ ವ್ಯಾಸಾಯ ಭೂಮ್ನೇಸುಕೃತಾನಿ ತಾವತ್ ।
ಕರಿಷ್ಯಮಾಣಾನಿ ಚ ತಸ್ಯ ಪೂಜಾಂ ಸಂಕಲ್ಪಯಾಮಾಸ ಸ ಶುದ್ಧ - ಬುದ್ಧಿಃ ॥
- (ಸುಮಧ್ವವಿಜಯ) ಎಂದು ವಾಯುದೇವರ ದ್ವಿತೀಯಾವತಾರರಾದ ಭೀಮಸೇನದೇವರು ತಮ್ಮ ಭೂತ , ವರ್ತಮಾನ , ಭವಿತ್ಕಾಲಕರ್ಮಗಳನ್ನು ಭಗವದವತಾರರಾದ ಶ್ರೀವೇದವ್ಯಾಸರಲ್ಲಿ ಅರ್ಪಿಸುವ ಪ್ರಕಾರವು ವರ್ಣಿತವಾಗಿದೆ . ಶ್ವಾಸಜಪಗಳನ್ನು ಶ್ರೀಹರಿಯಲ್ಲಿ ಅರ್ಪಿಸುವರೆಂಬುದು ಅವರ ಸಹಜವ್ಯಾಪಾರವೇ ಆಗಿದೆ.
(2) ' ಆಭಾಸಕೋऽಸ್ಯ ಪವನಃ ' - (ಭಾ.ತಾ) - ವಾಯುವೇ ನಾರಾಯಣನ ಮುಖ್ಯಪ್ರತಿಬಿಂಬನು ; ' ಆನಂದರೂಪಸ್ಯ ಪರಸ್ಯ ಪಾತ್ರಧೀಃ ' - (ಸುಮಧ್ವವಿಜಯ) - ಪೂರ್ಣಾನಂದಸ್ವರೂಪನಾದ ಶ್ರೀಹರಿಗೆ ಮುಖ್ಯ ಆವಾಸಸ್ಥಾನನೆಂದು ಹೇಳುವ ಈ ಮೊದಲಾದ ಪ್ರಮಾಣಗಳು ' ಶ್ರೀಶಸದ್ಮನೆ ' ಎಂಬ ಶ್ರೀದಾಸಾರ್ಯರ ಅಭಿಪ್ರಾಯವನ್ನು ಸಾಧಿಸುತ್ತವೆ.

ಭವಿಷ್ಯದ್ವಿಧಾತ ತವ ಚರಣ ಸೇವಿಪೆ ನಾ
ಶ್ರವಣಮನನಾದಿ ಭಕುತಿಯ । ಭಕುತಿ ನಿನ್ನಲ್ಲಿ ಮಾ -
ಧವನಲ್ಲಿ ಕೊಟ್ಟು ಸಲಹಯ್ಯ ॥ 24 ॥

ಅರ್ಥ :- ಭವಿಷ್ಯದ್ವಿಧಾತ = ಭಾವೀಬ್ರಹ್ಮನಾದ ಹೇ ವಾಯುದೇವ ! ತವ ಚರಣ = ನಿನ್ನ ಪಾದಗಳನ್ನು , ನಾ = ನಾನು , ಸೇವಿಪೆ = ಸೇವಿಸುವೆನು ; ಶ್ರವಣ ಮನನಾದಿ ಭಕುತಿಯ = ಭಗವನ್ಮಹಿಮೆಗಳ (ಸಚ್ಛಾಸ್ತ್ರಗಳ) ಶ್ರವಣ , ಮನನ , ಧ್ಯಾನಗಳಲ್ಲಿ ಆದರವನ್ನೂ , ನಿನ್ನಲ್ಲಿ (ಮತ್ತು) ಮಾಧವನಲ್ಲಿ = ಶ್ರೀಹರಿಯಲ್ಲಿ , ಭಕುತಿ = ಭಕ್ತಿಯನ್ನೂ , ಕೊಟ್ಟು = ಅನುಗ್ರಹಿಸಿ , ಸಲಹಯ್ಯ = ರಕ್ಷಿಸು ದೇವ ;

ವಿಶೇಷಾಂಶ : ' ನಿಯಮಾದ್ವಾಯುರೇವೈಕೋ ಬ್ರಹ್ಮತ್ವಂ ಯಾತಿ ನಾಪರಃ ' - (ಭಾಗ . ತಾ) - ವಾಯುದೇವನೊಬ್ಬನೇ ಬ್ರಹ್ಮಪದವಿಯನ್ನು ಹೊಂದುವನು , ಅನ್ಯರಲ್ಲ . ಹೀಗೆಂಬ ಶ್ರೀಹರಿನಿಯಮವು ಅನ್ಯಥಾ ಎಂದೂ ಆಗುವುದಿಲ್ಲವೆಂದು ಹೇಳಲಾಗಿದೆ . ಇತ್ಯಾದಿ ಬಹು ಪ್ರಮಾಣಗಳು ವಾಯುದೇವನೇ ಮುಂದಿನ ಬ್ರಹ್ಮನೆಂದು ಹೇಳುತ್ತವೆ.

ತಾಸಿಗೊಂಬೈನೂರು ಶ್ವಾಸಜಪಗಳ ಮಾಡಿ
ಬೇಸರದೆ ನಮ್ಮ ಸಲಹುವಿ । ಸಲಹುವಿ ಶ್ರೀಭಾರ
ತೀಶ ನಿನ್ನಡಿಗೆ ಶರಣೆಂಬೆ ॥ 25 ॥

ಅರ್ಥ :- ತಾಸಿಗೆ = ಪ್ರತಿಯೊಂದು ಘಂಟೆಗೆ (ಪ್ರತಿ ೨ ॥ ಘಳಿಗೆಗೆ) , ಒಂಬೈನೂರು ಶ್ವಾಸಜಪಗಳ = ಶ್ವಾಸರೂಪದಿಂದ ಹಂಸಮಂತ್ರಜಪಗಳನ್ನು , ಬೇಸರದೆ = ಉದಾಸೀನನಾಗದೆ (ನಿತ್ಯಜಾಗೃತನಾಗಿ) , ಮಾಡಿ = ಮಾಡುತ್ತ , ನಮ್ಮ = ನಮ್ಮನ್ನು , ಸಲಹುವಿ = ರಕ್ಷಿಸುವಿ ; ಶ್ರೀಭಾರತೀಶ = ಹೇ ಭಾರತೀರಮಣ ! ನಿನ್ನಡಿಗೆ = ನಿನ್ನ ಪಾದಗಳಿಗೆ , ಶರಣೆಂಬೆ = ನೀನೇ ರಕ್ಷಕನೆಂದು ನಮಸ್ಕರಿಸುವೆನು.

ವಿಶೇಷಾಂಶ : - ಸ್ವರೂಪ , ಲಿಂಗ , ಅನಿರುದ್ಧ ಮತ್ತು ಸ್ಥೂಲಗಳೆಂಬ ನಾಲ್ಕು ದೇಹಗಳಲ್ಲಿಯೂ , ಮುಖ್ಯಪ್ರಾಣರಿದ್ದು ಹಂಸಮಂತ್ರವನ್ನು ಜಪಿಸುತ್ತಿರುವರು. ಹೀಗೆ ಬ್ರಹ್ಮಕಲ್ಪವು ಪೂರೈಸುವವರೆಗೆ ಪ್ರತಿಜೀವರಲ್ಲಿ ಜಪಿಸುತ್ತಿರುವರು. ಈ ಅದ್ಭುತ ಮಹಿಮೆಯು ಬೇರಾವ ದೇವತೆಗೂ ಇಲ್ಲ . ಅನ್ಯದೇವತೆಗಳೆಲ್ಲರಲ್ಲಿ ಸಹ ಮುಖ್ಯಪ್ರಾಣರು ಶ್ವಾಸಜಪಗಳನ್ನು ಮಾಡುತ್ತಿರುವರು . ೫೭ನೆಯ ನುಡಿಯಲ್ಲಿ , ದಿನ ಒಂದಕ್ಕೆ ೨೧,೬೦೦ ಜಪಗಳಾಗುತ್ತವೆಂದು ಹೇಳಿದ್ದರೂ ಹಗಲು - ರಾತ್ರಿಗಳಲ್ಲಿ ಶ್ವಾಸಮಂತ್ರಜಪದ ವ್ಯತ್ಯಾಸವಿಲ್ಲೆಂದು ತಿಳಿಸಲು ಪ್ರತಿ ಘಂಟೆಗೆ ೯೦೦ ಜಪಗಳಾಗುವುವೆಂದು ಇಲ್ಲಿ ಪ್ರತ್ಯೇಕವಾಗಿ ಹೇಳಿರುವರೆಂದು ತಿಳಿಯಬೇಕು.

ಬಲದೇವ ನೀನೆ ಬೆಂಬಲನಾಗಿ ಇರಲು ದು -
ರ್ಬಲಕಾಲಕರ್ಮ ಕೆಡಿಸೋದೆ । ಕೆಡಿಸೋದೆ ನಿನ್ನ ಹಂ -
ಬಲು ಉಳ್ಳ ಜನರ ಜಗದೊಳು ॥ 26 ॥

ಅರ್ಥ :- ಬಲದೇವ = ಹೇ ಮುಖ್ಯಪ್ರಾಣದೇವ ! ನೀನೆ = ನೀನೊಬ್ಬನು , ಬೆಂಬಲನಾಗಿ ಇರಲು = ಸಹಾಯಕನಾಗಿರಲು , ದುರ್ಬಲಕಾಲಕರ್ಮ = (ಸ್ವತಂತ್ರವಾಗಿ ಏನು ಮಾಡಲೂ) ಅಸಮರ್ಥಗಳಾದ ಕಾಲಕರ್ಮಗಳು , ನಿನ್ನ ಹಂಬಲು ಉಳ್ಳ = ನಿನ್ನಲ್ಲಿ ಸದಾ ಆಸಕ್ತರಾದ (ಭಕ್ತಿಯುಳ್ಳ) , ಜನರ = ಜನರನ್ನು , ಜಗದೊಳು = ಜಗತ್ತಿನಲ್ಲಿ (ಯಾರನ್ನಾದರೂ) , ಕೆಡಿಸೋದೆ = ಕೆಡಿಸಬಲ್ಲವೆ? (ಭ್ರಷ್ಟರನ್ನಾಗಿ ಮಾಡಬಲ್ಲವೆ? ಸರ್ವಥಾ ಇಲ್ಲ)

ವಿಶೇಷಾಂಶ : 
ಯತೋ ನಿಸ್ಸೀಮಕಾಸ್ತೇಷಾಂ ದೇವಾನಾಮಷ್ಟಸಿದ್ಧಯಃ ।
ದೇವೇಷ್ಟಿಂದ್ರೇಶವಾಯುಶ್ರೀವಿಷ್ಣೂನಾಮುತ್ತರೋತ್ತರಮ್ ॥
- (ಭಾಗ .ತಾ) ಎಂಬಲ್ಲಿ ಅಣಿಮಾದಿ ಅಷ್ಟಸಿದ್ಧಿಗಳು ದೇವತೆಗಳಲ್ಲಿ ಅಪರಿಮಿತವಾಗಿವೆ ; ಅವರಲ್ಲಿಯೂ ಇಂದ್ರ , ರುದ್ರ , ವಾಯು , ಲಕ್ಷ್ಮೀ , ವಿಷ್ಣುಗಳಲ್ಲಿ ಕ್ರಮವಾಗಿ (ಉತ್ತರೋತ್ತರಂ) ಅತಿಶಯಗೊಳ್ಳುತ್ತ ವಿಷ್ಣುವಿನಲ್ಲಿ ಅನಂತಮಡಿ ಅಧಿಕವಾಗಿ ಅಚಿಂತ್ಯವಾಗಿರುತ್ತವೆಂದು ಹೇಳಲಾಗಿದೆ. ' ಪ್ರಾಣಸ್ಯ ನಿಸ್ಸೀಮಬಲಂ ' (ಭಾ - ತಾ) ಎಂಬಲ್ಲಿ ಮುಖ್ಯಪ್ರಾಣನು ಅಪಾರ ಬಲವುಳ್ಳವನೆಂದೂ , ' ವೃದ್ಧಿಹ್ರಾಸೌ ನ ಯಸ್ಮಾತ್ತದ್ದೇಹಸ್ಯಾನ್ನಾದಿನಾ ಯತಃ ' (ಸ.ರ.ಮಾ) ಎಂಬಲ್ಲಿ , ಅನ್ನಾದಿಗಳ ಭಾವಾಭಾವಗಳಿಂದ ಅವರ ದೇಹಕ್ಕೆ ವೃದ್ಧಿಹ್ರಾಸಗಳಿಲ್ಲವೆಂದೂ ಹೇಳಲಾಗಿದೆ. ಓಜಸ್ಸು , ಸಹನಶಕ್ತಿ , ಬಲಗಳಿಂದ ವಾಯುದೇವರು ಪೂರ್ಣರೆಂದು ನಾನಾ ಪ್ರಮಾಣಗಳಿಂದ ಸಿದ್ಧವಾಗುತ್ತದೆ. ' ವಶ್ಚಾಸೌ + ಆಯುಶ್ಚ = ವಾಯುಃ ' ಎಂಬ ಅವರ ನಾಮವೂ ಬಲಜ್ಞಾನಗಳಿಂದ ಪೂರ್ಣರೆಂಬರ್ಥವನ್ನೇ ಹೇಳುತ್ತದೆ. ' ಪ ' ಬಲವಾಚಕವು ; ' ಅಯ್ ' ಜ್ಞಾನಾರ್ಥಕವು . ಇಂಥ ಮಹಾಮಹಿಮರು ಬೆಂಬಲಿಗರಾಗಿದ್ದರೆ ಕಾಲ - ಕರ್ಮಗಳು (ಇವುಗಳ ಅಭಿಮಾನಿಗಳಾದ ಗರುಡಾದಿ ದೇವತೆಗಳು ) ಅವರ ಅಧೀನಗಳಾದ್ದರಿಂದ ಯಾವ ಕೇಡನ್ನೂ ಬಗೆಯಲಾರವು.

ಹಾಲಾಹಲವನುಂಡು ಪಾಲಿಸಿದೆ ಜಗವ ಕರು -
ಣಾಳು ಪವಮಾನ ವಿಜ್ಞಾನ । ವಿಜ್ಞಾನಭಕುತಿ ಶ್ರೀ -
ಲೋಲನಲಿ ಕೊಟ್ಟು ಸಲಹಯ್ಯ ॥ 27 ॥

ಅರ್ಥ :- ಕರುಣಾಳು = ಕಾರುಣ್ಯಮೂರ್ತಿಯಾದ , ಪವಮಾನ = ಹೇ ವಾಯುದೇವ! ಹಾಲಾಹಲವನುಂಡು = ಹಾಲಾಹಲವೆಂಬ (ಕಾಳಕೂಟ) ವಿಷವನ್ನು ಕುಡಿದು , ಜಗವ = ಜಗತ್ತನ್ನು , ಪಾಲಿಸಿದೆ = ರಕ್ಷಿಸಿದೆ ; ಶ್ರೀಲೋಲನಲಿ = ಲಕ್ಷ್ಮೀರಮಣನಲ್ಲಿ , ವಿಜ್ಞಾನಭಕುತಿ = ವಿಶೇಷ ಜ್ಞಾನಭಕ್ತಿಗಳನ್ನು , ಕೊಟ್ಟು = ದಯಪಾಲಿಸಿ , ಸಲಹಯ್ಯ = ರಕ್ಷಿಸು , ಪ್ರಭೋ !

ವಿಶೇಷಾಂಶ : ದೇವದೈತ್ಯರು ಕೂಡಿ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಥನ ಮಾಡುತ್ತಿರಲು , ಭಯಂಕರವಾದ ಹಾಲಾಹಲವಿಷವು ಉತ್ಪನ್ನವಾಗಿ ಲೋಕವನ್ನು ವ್ಯಾಪಿಸುತ್ತಿರಲು ವಿಷ್ಣುವು ,ಅದನ್ನು ಪರಿಹರಿಸಲು ಸಮರ್ಥನಿದಾಗ್ಯೂ , ರುದ್ರದೇವನಿಗೆ ವಿಷಪಾನಮಾಡಿ ಲೋಕವನ್ನು ರಕ್ಷಿಸಿದನೆಂಬ ಯಶಸ್ಸನ್ನು ಕರುಣಿಸಲು ಸಂಕಲ್ಪಿಸಿ ತಾನೇ ವಿಷವನ್ನು ಉಪಶಾಂತಿಗೊಳಿಸಲಿಲ್ಲ . ಆ ವಿಷಪಾನದಿಂದ ರುದ್ರನಿಗೆ ಆಗುವ ಸಂಕಟವನ್ನು ಪರಿಹರಿಸೆಂದು ವಾಯುದೇವನಿಗೆ ಆಜ್ಞೆಯಿತ್ತನು . ಆಗ ವಾಯುದೇವನು ತಾನೇ ವಿಷವನ್ನು ಪಾನಮಾಡಿ (ತನ್ನಿಮಿತ್ತ ವಿಕಾರರಹಿತನಾಗಿದ್ದು) , ಆ ವಿಷದ ಒಂದಂಶವನ್ನು ಅಂಗೈಯಲ್ಲಿ ಮರ್ದನಮಾಡಿ ಅದರ ಉಲ್ಬಣತೆಯನ್ನು ಪರಿಹರಿಸಿ ರುದ್ರದೇವನಿಗಿತ್ತನು . ರುದ್ರನು ಅದನ್ನು ಪಾನ ಮಾಡಿ , ಅದು ಕಂಠದಲ್ಲಿ ನಿಂತ ಪ್ರಯುಕ್ತ ನೀಲಕಂಠನೆಂಬ ಪ್ರಸಿದ್ಧಿಯನ್ನು ಪಡೆದನು ; ಜಗತ್ತನ್ನು ವಿಷಪಾನದಿಂದ ರಕ್ಷಿಸಿದನೆಂಬ ಕೀರ್ತಿಯನ್ನೂ ಹೊಂದಿದನು . ಈ ಪ್ರಮೇಯವು ' ರುದ್ರಸ್ಯ ಯಶಶೋऽರ್ಥಾಯ ಸ್ವಯಂ ವಿಷ್ಣುರ್ವಿಷಂ ವಿಭುಃ । ನ ಸಂಜಹ್ರೇ ಸಮರ್ಥೋಪಿ ವಾಯುಂ ಚೋಚೇ ಪ್ರಶಾಂತಯೇ ' ಇತ್ಯಾದಿ ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ ಉಕ್ತವಾಗಿದೆ .
ವಾಯುರಸ್ಮಾ ಉಪಾಮಂಥತ್ಪಿನಷ್ಟಿಸ್ಮಾ ಕುನನ್ನಮಾ ।
ಕೇಶೀ ವಿಷಸ್ಯ ಪಾತ್ರೇಣ ಯದ್ರುದ್ರೇಣಾಪಿಬತ್ಸಹ ॥
- ಎಂಬ ಶ್ರುತಿಯೂ ಈ ವಿಷಯವನ್ನೇ ನಿರೂಪಿಸುತ್ತದೆ . ಕೇಶೀ - ಸುಖಸ್ವರೂಪನಾದ ನಾರಾಯಣನೇ ಈಶನಾಗಿವುಳ್ಳ (ಅನ್ಯ ನಿಯಾಮಕರಿಲ್ಲದ) ವಾಯುದೇವರು , ಕುನನ್ನಮಾ - ಕುತ್ಸಿತರಾದ ಕಲ್ಯಾದಿಗಳನ್ನು ಅಂಧಂತಮಸ್ಸಿನಲ್ಲಿ ಮುಳುಗಿಸುವುದರಿಂದ ' ಕುನನ್ನಮಾ ' ಎಂಬ ನಾಮವುಳ್ಳ ವಾಯುದೇವರು , ರುದ್ರನು ಪಾನ ಮಾಡಿದ ವಿಷವನ್ನು ಮೊದಲು , ಪಾತ್ರೇಣ - ಅಂಗೈಯಿಂದ , ಪಿನಷ್ಟಿ - ಮರ್ದನ ಮಾಡಿ , ಉಪಾಮಂಥಾತ್ - ಪಾನಾರ್ಹವನ್ನಾಗಿ ಮಾಡಿ ಕೊಟ್ಟರು . ಈ ಶ್ರುತ್ಯರ್ಥವನ್ನೇ ಶ್ರೀಮದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯದ ೧೦ನೆಯ ಅಧ್ಯಾಯದ ೧೩ರಿಂದ ೧೭ ರವರೆಗಿನ ಶ್ಲೋಕಗಳಲ್ಲಿ ನಿರೂಪಿಸಿರುವರು.

ವಾತಾತ್ಮಜನೆ ನಿನ್ನ ಪ್ರೀತಿಯನೆ ಪಡೆದ ಖ -
ದ್ಯೋತನಂದನನ ಪೊರೆದಂತೆ । ಪೊರೆದಂತೆ ಪೊರೆಯೆನ್ನ ನೀ -
ನಿಂತು ಕ್ಷಣದಿ ಕೃಪೆಯಿಂದ ॥ 28 ॥

ಅರ್ಥ :- ವಾತಾತ್ಮಜನೆ = ವಾಯುಪುತ್ರನೆನಿಸಿದ ಹೇ ಆಂಜನೇಯ ! ನಿನ್ನ ಪ್ರೀತಿಯನೆ = ಪ್ರೀತಿಯನ್ನು , ಪಡೆದ = ದೊರಕಿಸಿಕೊಂಡ , ಖದ್ಯೋತನಂದನನ = ಸೂರ್ಯಪುತ್ರನಾದ ಸುಗ್ರೀವನನ್ನು , ಪೊರೆದಂತೆ = ರಕ್ಷಿಸಿದಂತೆ , ಕೃಪೆಯಿಂದ = ದಯೆತೋರಿ , ಎನ್ನ = ನನ್ನನ್ನು , ನೀ ನಿಂತು = ನೀನು (ನನ್ನ ರಕ್ಷಕನಾಗಿ) ನಿಂತು , ಕ್ಷಣದಿ = ಕ್ಷಣಮಾತ್ರದಲ್ಲಿ , ಪೊರೆ = ರಕ್ಷಿಸು.

ವಿಶೇಷಾಂಶ : (1) ಮೂಲರೂಪದ ಒಂದಂಶವು ಅವತಾರ ಮಾಡಿದಾಗ , ಅವತಾರರೂಪವು ಪುತ್ರನೆಂದೂ , ಮೂಲರೂಪವು ಜನಕ (ತಂದೆ) ಎಂದೂ ವ್ಯವಹರಿಸಲ್ಪಡುತ್ತದೆ . ವಾಯುಪುತ್ರ ಆಂಜನೇಯನೆಂಬುದನ್ನು ಈ ಅರ್ಥದಲ್ಲಿ ಗ್ರಹಿಸಬೇಕು . ಸುಗ್ರೀವನು ಸೂರ್ಯಪುತ್ರನು , ವಾಲಿಯು ಇಂದ್ರಪುತ್ರನು . ಆದರೆ ಈ ದೇವತೆಗಳ ಅವತಾರಕ್ಕೂ , ವಾಯುದೇವರ ಅವತಾರಕ್ಕೂ ವ್ಯತ್ಯಾಸವಿದೆ . 'ಬಳಿತ್ಥಾ ತದ್ವಪುಷೇ.....' ಎಂಬ ಮೊದಲಾದ ಶ್ರುತಿಗಳಿಂದ ವಾಯುದೇವರ ಮೂಲರೂಪಕ್ಕೂ ಅವತಾರರೂಪಗಳಿಗೂ ಬಲಜ್ಞಾನಾದಿಗಳಲ್ಲಿ ಯಾವ ವಿಶೇಷವೂ ಇಲ್ಲವೆಂದು ತಿಳಿದುಬರುತ್ತದೆ . ಇತರ ದೇವತೆಗಳ ಅವತಾರಗಳಿಗೆ ಈ ನಿಯಮವು ಅನ್ವಯಿಸುವುದಿಲ್ಲ.

(2) ಸುಗ್ರೀವನು ಆಂಜನೇಯನ ಪ್ರಸನ್ನತೆಯನ್ನು ದೊರಕಿಸಿಕೊಂಡಿದ್ದರಿಂದ ಶ್ರೀರಾಮಚಂದ್ರನ ಅನುಗ್ರಹಕ್ಕೆ ಪಾತ್ರನಾಗಿ ರಕ್ಷಿತನಾದನು . ಇಂದ್ರಪುತ್ರನಾದ ವಾಲಿಯು ಮಡಿದನು. ಮುಂದೆ ವಾಲಿಯೇ ಅರ್ಜುನನಾಗಿ ಭೀಮಸೇನನ ಆಶ್ರಯವನ್ನು ಹೊಂದಿದ ಪ್ರಯುಕ್ತ , ಶ್ರೀಕೃಷ್ಣನಿಂದ ರಕ್ಷಿತನಾದನು. ಸುಗ್ರೀವನು ಕರ್ಣನಾಗಿ ಹುಟ್ಟಿ ನಷ್ಟನಾದನು . (ಸುಗ್ರೀವನಾಗಿ ಮಾಡಿದ ಶ್ರೀರಾಮಸೇವೆಯಿಂದ ಪ್ರಾಪ್ತವಾಗಿದ್ದ - ಯೋಗ್ಯತೆ ಮೀರಿದ ಅಧಿಕ ಪುಣ್ಯವನ್ನು ಕಳೆದುಕೊಂಡನು). 

(3) ' ನೀನಿಂತು ' ಎಂಬಲ್ಲಿ ' ನೀನು - ಇಂತು ' ಎಂದು ಪದವಿಭಾಗ ಮಾಡಿ , ಇಂತು - ಸುಗ್ರೀವನನ್ನು ರಕ್ಷಿಸಿದಂತೆ ಎಂಬ ಅರ್ಥವನ್ನೂ ತಿಳಿಯಬಹುದು. ' ಕ್ಷಣದಿ ' ಎಂಬುದರಿಂದ ವಾಯುದೇವರ ಕೃಪಾಕಟಾಕ್ಷಕ್ಕೆ ಪಾತ್ರನಾದ ತಕ್ಷಣವೇ ಜೀವನ ಉದ್ಧೃತನಾಗುತ್ತಾನೆಂಬರ್ಥವು ಸೂಚಿತವಾಗಿದೆ.
ನೀರು ಚಳಮಳ ಕಾಸಿ ಆರಲಿಟ್ಟದರಲ್ಲಿ
ನೀರಿನಿಂದ್ಹಪ್ಪಿಡಲು ಹೆಪ್ಪುದೇನೋ
ಮಾರುತಿಯೆ ನಿನ್ನ ಕೃಪೆ ಪಡೆಯದಲೆ ಉಳಿದವರ
ಕಾರುಣ್ಯವಾಗಲೂ ಮೋಕ್ಷಸಾಧನವಲ್ಲ
- ಎಂಬ ತಮ್ಮ ಪರಮಗುರುಗಳಾದ ಶ್ರೀವಿಜಯದಾಸರು ಅಪ್ಪಣೆ ಕೊಡಿಸಿದ್ದನ್ನು ಇಲ್ಲಿ ಉದಾಹರಣೆಯೊಂದಿಗೆ ನಿರೂಪಿಸಿದ್ದಾರೆ ಜಗನ್ನಾಥದಾಸರು.

ಅಪರಾಜಿತನೆ ಮನದೊಳಪರೋಕ್ಷವಿತ್ತೆನಗೆ
ಅಪವರ್ಗದಲ್ಲಿ ಸುಖವೀಯೋ । ಸುಖವೀಯೋ ನೀ ಭಾವಿ ಲೋ -
ಕಪಿತಮಹನೆ ದಯವಾಗೋ ॥ 29 ॥

ಅರ್ಥ :- ಅಪರಾಜಿತನೆ = ನಿತ್ಯಜಯಶೀಲನಾದ ಹೇ ವಾಯುದೇವ ! ಎನಗೆ = ನನಗೆ , ಮನದೊಳು = ಮನಸ್ಸಿನಲ್ಲಿ , ಅಪರೋಕ್ಷವಿತ್ತು = ದರ್ಶನಕೊಟ್ಟು , ಅಪವರ್ಗದಲ್ಲಿ = ಮೋಕ್ಷದಲ್ಲಿ (ಅಥವಾ ಜೀವನ್ಮುಕ್ತಾವಸ್ಥೆಯಲ್ಲಿಯಲ್ಲಿಟ್ಟು) , ಸುಖವೀಯೋ = ಆನಂದವನ್ನು ಕೊಡು ; ಭಾವಿಲೋಕಪಿತಮಹನೆ = ಹೇ ಮುಂದಿನ ಬ್ರಹ್ಮದೇವ ! ನೀ = ನೀನು , ಎನಗೆ = ನನಗೆ , ದಯವಾಗೋ = ಕೃಪೆಮಾಡು .

ವಿಶೇಷಾಂಶ : (1) ವಾಯುದೇವರ ಪ್ರತ್ಯಕ್ಷದರ್ಶನವೂ ನಂತರ ಶ್ರೀಹರಿಯ ಸಾಕ್ಷಾತ್ಕಾರವೂ , ಸಾಧನಪೂರ್ತಿಯಾದ ಸುಜೀವಿಗೆ ಧ್ಯಾನಾವಸ್ಥೆಯಲ್ಲಿ ಮನಸ್ಸಿನಲ್ಲಿಯೇ ಆಗುತ್ತವೆ. ವಾಯುದೇವರ ಅನುಗ್ರಹವಿಲ್ಲದೆ ಭಗವದಪರೋಕ್ಷವಿಲ್ಲ. ಪ್ರಾಕೃತ ಮನಸ್ಸಿಗೆ ಅಪ್ರಾಕೃತನಾದ ಶ್ರೀಹರಿಯನ್ನು ವಿಷಯೀಕರಿಸುವ ಸಾಮರ್ಥ್ಯವು , ಮುಖ್ಯಪ್ರಾಣರು ವಿಶೇಷ ಸನ್ನಿಧಾನವನ್ನಿಟ್ಟು ದಿವ್ಯದರ್ಶನಶಕ್ತಿಯನ್ನು ಅನುಗ್ರಹಿಸುವುದರಿಂದಲೇ ಉಂಟಾಗುತ್ತದೆ. ಈ ಪ್ರಮೇಯವು ಅಥರ್ವಣೋಪನಿಷತ್ತಿನಲ್ಲಿ ಉಕ್ತವಾಗಿದೆ .
'ಏಷೋऽಣುರಾತ್ಮಾ ಚೇತಸಾ ವೇದಿತವ್ಯೋ ಯಸ್ಮಿನ್ ಪ್ರಾಣಃ ಪಂಚಧಾ ಸಂವಿವೇಶ ' 
(ಅಥ-ಉ) ಎಂಬಲ್ಲಿ ಅತ್ಯಂತಸೂಕ್ಷ್ಮನಾದ ಶ್ರೀಹರಿಯು , ಮುಖ್ಯಪ್ರಾಣನು ತನ್ನ ಪ್ರಾಣ , ಅಪಾನ , ವ್ಯಾನ , ಉದಾನ ಮತ್ತು ಸಮಾನವೆಂಬ ನಾಮಗಳುಳ್ಳ ಐದು ರೂಪದಿಂದ ವಿಶೇಷ ಸನ್ನಿಹಿತನಾಗಿ ಅನುಗ್ರಹಿಸಿದಾಗ , ಅಂತಹ ಮನಸ್ಸಿನಿಂದ ಕಾಣಲ್ಪಡುವನೆಂದು ಹೇಳಲಾಗಿದೆ .
' ನಾನ್ಯೈರ್ದೇವೈರ್ಹರಿಂ ಪಶ್ಯೇತ್ ಜ್ಞಾನರೂಪೇಣ ವಾಯುನಾ । ಬ್ರಹ್ಮಣಾ ಪರಮಜ್ಞಾನರೂಪೇಣ ಹರಿಣಾ ತಥಾ । ಪ್ರಸನ್ನೇನೈವ ತಂ ಪಶ್ಯೇತ್ ಅನ್ಯೇऽನುಜ್ಞಾಪ್ರದಾಯಿನಃ । ' 
(ಅಥ-ಭಾ) ಶ್ರೀಹರಿ ದರ್ಶನವು ಜ್ಞಾನರೂಪನಾದ ಮುಖ್ಯಪ್ರಾಣನ ಮತ್ತು ಪರಮಜ್ಞಾನರೂಪನಾದ ಪರಬ್ರಹ್ಮನ ಪ್ರಸಾದದಿಂದಲೇ ಆಗುತ್ತದೆ . ಬೇರಾವ ಇತರ ದೇವತೆಗಳ ಅನುಗ್ರಹದಿಂದಲ್ಲ . ಇತರ ದೇವತೆಗಳು ಅನುಜ್ಞಾಪ್ರದರು ಎಂದರೆ ಶ್ರೀಹರಿವಾಯುಗಳ ಪ್ರಸಾದಲಾಭಕ್ಕೆ ಸಾಧನವಾದ ಜ್ಞಾನದಾನ ಮಾಡತಕ್ಕವರು ಮಾತ್ರವೆಂದೂ , ಭಾಷ್ಯವೂ ಸಹ ಈ ದೇಹದಲ್ಲಿ ಇದೇ ಪ್ರಾಕೃತ ಮನಸ್ಸಿನಲ್ಲಿ ಅಪರೋಕ್ಷವಾಗುವುದೆಂದೂ ಅದಕ್ಕೆ ಮುಖ್ಯಪ್ರಾಣರ ಪ್ರಸಾದವು ಸಾಕ್ಷಾತ್ಸಾಧನವೆಂದೂ ಹೇಳುತ್ತದೆ. 

(2) ಅಪವರ್ಗ ಶಬ್ದವು ಅಪರೋಕ್ಷ ಮತ್ತು ಮೋಕ್ಷಗಳೆಂಬ ಉಭಯಾರ್ಥವುಳ್ಳದ್ದು . ಅಪರೋಕ್ಷವಾದ ನಂತರ ಪ್ರಾರಬ್ಧ ಭೋಗಕ್ಕಾಗಿ ಪ್ರಾಕೃತದೇಹದಲ್ಲಿರುವ ಜೀವರು 'ಜೀವನ್ಮುಕ್ತ'ರೆಂದು ಕರೆಯಲ್ಪಡುವರು.

ಬುದ್ಧಿಬಲಕೀರ್ತಿ ಪರಿಶುದ್ಧಭಕ್ತಿಜ್ಞಾನ
ಸದ್ಧೈರ್ಯಜಾಡ್ಯ ಆಯುಷ್ಯ । ಆಯುಷ್ಯವಿತ್ತಭಿ -
ವೃದ್ಧಿಯೈದಿಸುವಿ ಪವಮಾನ ॥ 30 ॥

ಅರ್ಥ :- ಬುದ್ಧಿ = ಕಾರ್ಯಾಕಾರ್ಯ ವಿವೇಚನೆ , ಬಲ = ಒಳಗಿನ ಕಾಮಾದಿ ಶತ್ರುಗಳನ್ನು ಗೆಲ್ಲುವ ಶಕ್ತಿ , ಕೀರ್ತಿ = (ಸಜ್ಜನರಲ್ಲಿ) ಯಶಸ್ಸು , ಪರಿಶುದ್ಧ ಭಕ್ತಿಜ್ಞಾನ = ಶುದ್ಧವಾದ ಭಕ್ತಿಜ್ಞಾನಗಳು , ಸದ್ಧೈರ್ಯ = ಸತ್ಕಾರ್ಯ ಸಾಧನೆಗೆ ಬರುವ ವಿರೋಧಗಳಿಂದ ಭಯಗೊಂಡು ಎದೆಗುಂದದಿರುವುದು , ಅಜಾಡ್ಯ = ರೋಗಾಲಸ್ಯಗಳಿಲ್ಲದಿರುವಿಕೆ , ಆಯುಷ್ಯ = ಪೂರ್ಣಜೀವಿತಕಾಲವುಳ್ಳವನಾಗುವುದು (ಜೀವಿತವನ್ನು ಸಾರ್ಥಕಮಾಡಿಕೊಳ್ಳುವಿಕೆ) , ವಿತ್ತಧರ್ಮ = ಪುಣ್ಯವನ್ನು ದೊರಕಿಸುವ ದ್ರವ್ಯ , ಅಭಿವೃದ್ಧಿಯ = ಈ ಎಲ್ಲವುಗಳ ಅತಿಶಯ , ಇವುಗಳನ್ನು , ಪವಮಾನ = ಹೇ ವಾಯುದೇವ! ಐದಿಸುವಿ = (ನಿನ್ನ ಆಶ್ರಿತರಿಗೆ) ದೊರಕಿಸುವಿ.

ವಿಶೇಷಾಂಶ : (1)
ಬುದ್ಧಿರ್ಬಲಂ ಯಶೋ ಧೈರ್ಯಂ ನಿರ್ಭಯತ್ವಮರೋಗತಾ ।
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ಸ್ಮರಣಾದ್ಭವೇತ್ ॥
- ಎಂಬುದು ಈ ಪದ್ಯದ ಅಭಿಪ್ರಾಯವನ್ನು ಪೂರ್ಣವಾಗಿ ಸಮರ್ಥಿಸುತ್ತದೆ. ' ಅಜಾಡ್ಯ ' ಎಂಬುದರಲ್ಲಿ ' ಅರೋಗತಾ ' ಸಹ ಅಂತರ್ಭಾವಗೊಂಡಿರುವುದೆಂದು ತಿಳಿಯಬೇಕು. ಜಾಡ್ಯದಲ್ಲಿ ದೇಹಕ್ಕೊದಗುವ ರೋಗವೆಂಬರ್ಥವು ಸೇರಿದ್ದರೂ , ಅದರೊಂದಿಗೆ ಆಲಸ್ಯ - ಅಜ್ಞಾನಾದಿಗಳಿಂದ ಯತ್ನವಿಲ್ಲದೆ ಕೂಡುವುದೆಂಬರ್ಥವೂ ಸೇರಿದೆ.

(2) ಸಂಶಯ , ವಿಪರ್ಯಯಗಳಿಂದ ರಹಿತವಾದ ಯಥಾರ್ಥಜ್ಞಾನವೇ ' ಶುದ್ಧಜ್ಞಾನವು ' .

(3) ಶುದ್ಧಭಕ್ತಿ ಎಂದರೆ ನವ(೯) ವಿಧ ದ್ವೇಷಗಳಿಂದ ರಹಿತವಾದ ಮಹಾತ್ಮ್ಯಜ್ಞಾನಜನ್ಯವಾದ ಪ್ರೇಮವು . ಭಕ್ತಿಯೂ ನವವಿಧವಾದುದು.
ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಮ್
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮನಿವೇದನಮ್ ॥
- (ಭಾಗ) ಹರಿಕಥಾಶ್ರವಣ , ಹರಿಮಹಿಮೆಗಳ ಕೀರ್ತನ , ಹರಿಸ್ಮರಣೆ , ಹರಿಪಾದಸೇವೆ , ಹರಿಮೂರ್ತಿಗಳ ಪೂಜೆ , ನಮಸ್ಕರಿಸುವುದು , ಹರಿದಾಸ ನಾನೆಂಬ ನಿತ್ಯಭಾವನೆ , ಹರಿಯು ನಿತ್ಯಸಖನೆಂಬ ಅನುಸಂಧಾನ (ಅನಾದ್ಯನಂತಕಾಲದಲ್ಲಿ ನಮ್ಮೊಡನೆಯೇ ಇರುವ ಅನಿಮಿತ್ತೋಪಕಾರಿಯೆಂದು ತಿಳಿಯುವುದು) ; ಆತ್ಮನಿವೇದನ ( ಸ್ವಸ್ವರೂಪವೂ ಶ್ರೀಹರಿಯ ನಿತ್ಯಾಧೀನವೆಂದು ತಿಳಿದು ತನ್ನನ್ನೇ ಶ್ರೀಹರಿಪಾದದಲ್ಲಿ ಅರ್ಪಿಸಿಕೊಳ್ಳುವುದು - ಸ್ವತಂತ್ರಕರ್ತೃತ್ವಾಭಿಮಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ); ಇವು ಒಂಬತ್ತು ಪ್ರಕಾರದ ಭಕ್ತಿಭಾವಗಳು .
ಜೀವಾಭೇದೋ ನಿರ್ಗುಣತ್ವಂ ಅಪೂರ್ಣಗುಣತಾ ತಥಾ ।
ಸಾಮ್ಯಾಧಿಕ್ಯೇ ತದನ್ಯೇಷಾಂ ಭೇದಸ್ತದ್ಗತ ಏವ ಚ ।
ಪ್ರಾದುರ್ಭಾವವಿಪರ್ಯಾಸಃ ತದ್ಭಕ್ತದ್ವೇಷ ಏವ ಚ ।
ತತ್ಪ್ರಮಾಣಸ್ಯ ನಿಂದಾ ಚ ದ್ವೇಷಾ ಏತೇऽಖಿಲಾಮತಾಃ ॥
- (ಭಾ . ತಾ ) ಜೀವನು ಶ್ರೀಹರಿಯಿಂದ ಅಭಿನ್ನನೆಂದು ತಿಳಿಯುವುದು ; ಶ್ರೀಹರಿಯು ಆನಂದಾದಿ ಗುಣಶೂನ್ಯನೆಂದು ತಿಳಿಯುವುದು ; ಗುಣವುಳ್ಳವನಾದರೂ ಅಪೂರ್ಣಗುಣನೆಂದು ತಿಳಿಯುವುದು (ಒಂದೊಂದು ಗುಣವೂ ಅನಂತವಾಗಿರುವ ಅನಂತಗುಣಸ್ವರೂಪನೆಂದು ತಿಳಿಯದಿರುವುದು) ; ಶ್ರೀಹರಿಯಿಂದ ಭಿನ್ನರಾದ ರಮಾ ಬ್ರಹ್ಮರುದ್ರಾದಿಗಳಿಗೆ ಶ್ರೀಹರಿಯು ಸಮನೆಂದು ತಿಳಿಯುವುದು ಮತ್ತು ಅಂಥ ಅನ್ಯರನ್ನು ಶ್ರೀಹರಿಗೆ ಅಧಿಕರೆಂದು ತಿಳಿಯುವುದು ; ಶ್ರೀಹರಿಯ ರೂಪಗಳಲ್ಲಿ ಆಗಲಿ , ಪ್ರತಿಯೊಂದು ರೂಪಕ್ಕೂ ಅದರ ಕರಚರಣಾದಿ ಅವಯವಗಳಲ್ಲಿ ಆಗಲಿ , ಪರಸ್ಪರ ಭೇದವನ್ನು ತಿಳಿಯುವುದು ; ಶ್ರೀಹರಿಯ ಅವತಾರಗಳನ್ನು ವಿರುದ್ಧವಾಗಿ , ಎಂದರೆ ಸಾಮಾನ್ಯ ಮನುಷ್ಯ ಅಥವಾ ಪ್ರಾಕೃತದೇಹವುಳ್ಳವನು ಇತ್ಯಾದಿಯಾಗಿ ತಿಳಿಯುವುದು ; ಹರಿಭಕ್ತರನ್ನು ದ್ವೇಷಿಸುವುದು ; ಶ್ರೀಹರಿಯನ್ನು ಪ್ರತಿಪಾದಿಸುವ ವೇದಾದಿ ಪ್ರಮಾಣಗಳನ್ನು ನಿಂದಿಸುವುದು , ಎಂದರೆ ಅಪ್ರಮಾಣವೆಂದು ತಿರಸ್ಕರಿಸುವುದು ಮತ್ತು ವಾದಿಸುವುದು 'ನವವಿಧದ್ವೇಷ'ಗಳು.

ದ್ರೌಪದೀರಮಣ ವಿಜ್ಞಾಪಿಸುವೆ ನಿನ್ನಡಿಗೆ
ತಾಪತ್ರಯಗಳ ಭಯಶೋಕ । ಭಯಶೋಕ ಪರಿಹರಿಸಿ
ಶ್ರೀಪತಿಯ ಧ್ಯಾನಸುಖವೀಯೋ ॥ 31 ॥

ಅರ್ಥ :- ದ್ರೌಪದೀರಮಣ = ಹೇ ಭೀಮಸೇನದೇವ! ನಿನ್ನಡಿಗೆ = ನಿನ್ನ ಚರಣಗಳಲ್ಲಿ , ವಿಜ್ಞಾಪಿಸುವೆ = ಬೇಡಿಕೊಳ್ಳುತ್ತೇನೆ ; ತಾಪತ್ರಯಗಳ = (ಅಧ್ಯಾತ್ಮ , ಅಧಿದೈವ , ಅಧಿಭೂತಗಳೆಂಬ) ಮೂರು ವಿಧ ತಾಪಗಳನ್ನು , ಭಯಶೋಕ = ಅವುಗಳಿಂದಾಗುವ ಭಯ ಮತ್ತು ದುಃಖಗಳನ್ನು , ಪರಿಹರಿಸಿ = ತಪ್ಪಿಸಿ , ಶ್ರೀಪತಿಯ ಧ್ಯಾನಸುಖವ = ಶ್ರೀಹರಿಧ್ಯಾನರೂಪಸುಖವನ್ನು , ಈಯೋ = ದಯಪಾಲಿಸು (ಕೊಡು).

ವಿಶೇಷಾಂಶ : (1) ದ್ರೌಪದೀರಮಣನೆಂದರೆ ಭಾರತೀರಮಣನೇ . ಭೀಮಸೇನನು ವಾಯುದೇವನೇ , ದ್ರೌಪದಿಯು ಭಾರತಿಯ ಅವತಾರಳು . ಭಾರತಿಯು ವಾಯುದೇವನ ನಿಜಪತ್ನಿ. ಪತಿದೇವನ ಅನುಜ್ಞೆಯಿಂದ ಪಾರ್ವತೀ , ಶಚೀ , ಶ್ಯಾಮಲಾ , ಉಷಾ (ಕ್ರಮದಿಂದ ಮಹದೇವ , ಇಂದ್ರ, ಯಮ , ಅಶ್ವಿನೀದೇವತೆಗಳ ಭಾರ್ಯೆಯರು) ಇವರನ್ನು ತನ್ನ ದೇಹದಲ್ಲಿ ಇಟ್ಟುಕೊಂಡು ಅವತರಿಸಿದಳು - ದ್ರೌಪದಿಯಾಗಿ. ಭಾರತಿಗೆ ಮಾತ್ರ ಭೀಮಸೇನನೊಂದಿಗೆ ರಮಣ ; ಅನ್ಯರಿಗಿಲ್ಲ. ಧರ್ಮ , ಅರ್ಜುನ , ನಕುಲಸಹದೇವರಿಗೆ (ಕ್ರಮವಾಗಿ ಯಮ , ಇಂದ್ರ , ಯಮಳರಾದ ಅಶ್ವಿನೀದೇವತೆಗಳ ಅವತಾರರಾದ ಉಳಿದವರಿಗೆ) ಭಾರತಿಯೊಂದಿಗೆ ರಮಣವಿಲ್ಲ - ತಮ್ಮ ಪತ್ನಿಯಲ್ಲಿ ಮಾತ್ರ. ಪಾರ್ವತಿಗೆ ಪತಿದೇವನ ಸಂಗವಿಲ್ಲ - ಈ ಜನ್ಮದಲ್ಲಿ. 

(2) ಭಗವಂತನ ಸಾಕ್ಷಾತ್ಕಾರಕ್ಕೆ ಪ್ರಧಾನಸಾಧನಗಳಾದ ಶ್ರವಣ , ಮನನ , ಧ್ಯಾನಗಳೂ ಸುಖರೂಪಗಳೇ .

ಪಾಲ್ಗಡಲ ಮಗಳಾಳ್ದನಾಳ್ಗಳೊಳಗಪ್ರತಿಮ
ಓಲೈಪ ಜನರ ಸಲಹೆಂದು । ಸಲಹೆಂದು ಬಿನ್ನೈಪೆ
ಫಲ್ಗುಣಾಗ್ರಜನೆ ಪ್ರತಿದಿನ ॥ 32 ॥

ಅರ್ಥ :- ಪಾಲ್ಗಡಲ = ಕ್ಷೀರಸಮುದ್ರದ (ವರುಣದೇವನ) , ಮಗಳ = ಲಕ್ಷ್ಮೀದೇವಿಯನ್ನು (ಕ್ಷೀರಸಮುದ್ರವನ್ನು ಅಮೃತಕ್ಕಾಗಿ , ದೇವಾಸುರರು ಮಂದರಪರ್ವತವನ್ನೇ ಕಡಗೋಲಿನಂತೆ ಉಪಯೋಗಿಸಿ ಕಡೆಯುತ್ತಿರುವ ಕಾಲದಲ್ಲಿ ಆ ಸಮುದ್ರದಿಂದ ಆವಿರ್ಭವಿಸಿದ ಲಕ್ಷ್ಮೀದೇವಿಯನ್ನು) , ಆಳ್ದನ = ಆಳಿದ (ಕಲ್ಯಾಣಮಾಡಿಕೊಂಡ) , ಮಹಾಸ್ವಾಮಿಯಾದ ಶ್ರೀನಾರಾಯಣನು , ಆಳ್ಗಳೊಳಗೆ = ಸೇವಕರಲ್ಲಿ , ಅಪ್ರತಿಮ = ಅಸದೃಶನಾದ , ಫಲ್ಗುಣಾಗ್ರಜನೆ = ಅರ್ಜುನನ ಅಣ್ಣನಾದ ಶ್ರೀಭೀಮಸೇನ ! ಓಲೈಪ ಜನರ = ಶರಣಜನರನ್ನು , ಪ್ರತಿದಿನ = ಸದಾ , ಸಲಹು ಎಂದು = ರಕ್ಷಿಸು ಎಂದು , ಬಿನ್ನೈಪೆ = ವಿಜ್ಞಾಪನೆ ಮಾಡುವೆನು.

ವಿಶೇಷಾಂಶ : ಪ್ರಭುವಿನ ಆಜ್ಞೆಯನ್ನು ಸ್ವಲ್ಪವೂ ಅತಿಕ್ರಮಿಸದೇ ಆತನ ಚಿತ್ತಾನುಸಾರ ಭಕ್ತಿಪೂರ್ವಕ ನಿರಂತರ ಸೇವಿಸುವುದು , " ಓಲೈಸುವುದು " ಎನಿಸುತ್ತದೆ . ಲಕ್ಷ್ಮೀಪತಿಯ (ಆಳ್ಗಳೊಳಗೆ) ಭೃತ್ಯರಲ್ಲಿ (ಅಪ್ರತಿಮ) ಶ್ರೇಷ್ಠನು, ಜೀವೋತ್ತಮನೆಂಬರ್ಥವನ್ನೂ ತಿಳಿಯಬಹುದು . ನಿನ್ನನ್ನು ಓಲೈಪರನ್ನು ಸಲಹೆಂದು ಪ್ರಾರ್ಥನೆ.

ಅದ್ವೈತಮತವಿಪಿನಪ್ರಧ್ವಂಸಕಾನಲನೆ
ಮಧ್ಯಗೇಹಾಖ್ಯದ್ವಿಜಪತ್ನಿ । ದ್ವಿಜಪತ್ನಿಜಠರದೊಳು
ಉದ್ಭವಿಸಿ ಮೆರೆದೆ ಜಗದೊಳು ॥ 33 ॥

ಅರ್ಥ :- ಅದ್ವೈತಮತವಿಪಿನಪ್ರಧ್ವಂಸಕಾನಲನೆ = ಜೀವ ಮತ್ತು ಪರಬ್ರಹ್ಮನಲ್ಲಿ ಪರಸ್ಪರ ಬೇಧವಿಲ್ಲವೆನ್ನುವ ಮಾಯಾವಾದ ಮತವೆಂಬ ಕಾಡನ್ನು ನಿಶ್ಶೇಷ ನಾಶಮಾಡುವುದರಲ್ಲಿ ಅಗ್ನಿಸದೃಶರಾದ ಹೇ ಮಧ್ವಾಚಾರ್ಯ ! ಮಧ್ಯಗೇಹಾಖ್ಯ = ಮಧ್ಯಗೇಹಭಟ್ಟರೆಂಬ , ದ್ವಿಜಪತ್ನಿ = ಬ್ರಾಹ್ಮಣಪತ್ನಿಯ , ಜಠರದೊಳು = ಗರ್ಭದಲ್ಲಿ , ಉದ್ಭವಿಸಿ = ಅವತಾರಮಾಡಿ , ಜಗದೊಳು = ಜಗತ್ತಿನಲ್ಲಿ , ಮೆರೆದೆ = ಪ್ರಕಾಶಿಸಿದಿರಿ .

ವಿಶೇಷಾಂಶ : (1) ಜೀವಬ್ರಹ್ಮರ ಐಕ್ಯವನ್ನೂ ಜಗತ್ತಿಗೆ ಮಿಥ್ಯತ್ವವನ್ನೂ ಹೇಳುವ ಅದ್ವೈತಮತವು ' ಮಾಯಾವಾದ 'ವೆಂದು ಪ್ರಸಿದ್ಧವಾದುದು . ಬ್ರಹ್ಮನೇ ಸುಳ್ಳಾದ ಮಾಯೆಗೊಳಗಾಗಿ ಜೀವಭಾವವನ್ನು ಹೊಂದಿರುವನೆಂದೂ , ಜಗತ್ತು ಅವಿದ್ಯೆಯಿಂದ , ಶುಕ್ತಿಯಲ್ಲಿ ರಜತದಂತೆ , ಬ್ರಹ್ಮನಲ್ಲಿ ಆರೋಪಿತವಾದ ಮಿಥ್ಯಾವಸ್ತುವೆಂದೂ , ಮಾಯಾ - ಅವಿದ್ಯಾ - ಅಜ್ಞಾನಗಳೂ ಸಹ ಬ್ರಹ್ಮಭಿನ್ನವಾದ ಸತ್ಯವಸ್ತುಗಳಲ್ಲವೆಂದೂ ಮುಂತಾಗಿ ಹೇಳುವ ಮಾಯಾವಾದ ಮತವು ಅತ್ಯಂತ ಹೇಯವೆಂದು ಶ್ರೀಮಧ್ವಾಚಾರ್ಯರು ಸ್ಥಾಪಿಸಿ , ಸಜ್ಜನರನ್ನು ಅನುಗ್ರಹಿಸಿದರು . ಅವರ ಅವತಾರಕಾಲಕ್ಕೆ ಹಿಂದೆ ಬ್ರಹ್ಮಸೂತ್ರಗಳಿಗೆ ನಾನಾ ಅಸಮಂಜಸವಾದ ಅರ್ಥಗಳನ್ನು ನಿರೂಪಿಸುವ ಇಪ್ಪತ್ತೊಂದು ಭಾಷ್ಯಗಳು ಆಗಿದ್ದವು . ಅವೆಲ್ಲವನ್ನೂ ನಿರಾಕರಣೆ ಮಾಡಿ ಇಪ್ಪತ್ತೆರಡನೇ ತಮ್ಮ ಭಾಷ್ಯವನ್ನು ರಚಿಸಿದರು.

(2) ಅಜ್ಞಾನಿಗಳು ಕರ್ಮವಶರಾಗಿ ಗರ್ಭವಾಸದುಃಖವನ್ನು ಅನುಭವಿಸಿ ಹುಟ್ಟುವಂತೆ , ' ದ್ವಿಜಪತ್ನಿಜಠರದೊಳು ಉದ್ಭವಿಸಿ ' ಎಂಬುದಕ್ಕೆ ಅರ್ಥವನ್ನು ತಿಳಿಯಬಾರದು . ವಾಯುದೇವರಿಗೆ ಸರ್ವಥಾ ಗರ್ಭವಾಸ ದುಃಖವಿಲ್ಲ . ಶ್ರೀಸುಮಧ್ವವಿಜಯದಲ್ಲಿ ಈ ಪ್ರಮೇಯವನ್ನು ಸಜ್ಜನರಿಗೆ ತಿಳಿಸುವುದಕ್ಕಾಗಿಯೇ ಪ್ರಸವಕಾಲದಲ್ಲಿ ಗರ್ಭಗತಶಿಶುದೇಹದಲ್ಲಿದ್ದ ಅನ್ಯಜೀವನನ್ನು ಹೊರಗೆ ಹಾಕಿ , ವಾಯುದೇವರು ಆ ದೇಹವನ್ನು ಪ್ರವೇಶಿಸಿದ ವೃತ್ತಾಂತವು ವರ್ಣಿತವಾಗಿದೆ . ಇದನ್ನು ಹೇಳುವುದಕ್ಕಾಗಿಯೇ ' ಉದ್ಭವಿಸಿ ' ಎಂದರೆ ಆವಿರ್ಭವಿಸಿ ಎಂದು ದಾಸಾರ್ಯರು ಹೇಳಿದ್ದಾರೆ.

ಮಧ್ವಾಖ್ಯವೆಂಬ ಪ್ರಸಿದ್ಧಶ್ರುತಿಪ್ರತಿಪಾದ್ಯ
ಮಧ್ವಮುನಿರಾಯ ತವ ಕೀರ್ತಿ । ತವ ಕೀರ್ತಿ ವಾಣಿ -
ರುದ್ರಾದಿಗಳಿಗರಿದು ತುತಿಸಲ್ಕೆ ॥ 34 ॥

ಅರ್ಥ :- ಮಧ್ವಾಖ್ಯವೆಂಬ = ' ಮಧ್ವ ' ಎಂಬ ನಾಮವುಳ್ಳ , ಪ್ರಸಿದ್ಧ ಶ್ರುತಿಪ್ರತಿಪಾದ್ಯ = ಪ್ರಸಿದ್ಧವಾದ ವೇದಗಳಲ್ಲಿ (ಅರ್ಥಪೂರ್ವಕ) ಉಕ್ತವಾದ , ಮಧ್ವಮುನಿರಾಯ = (ಸಕಲಸಂಪತ್ಪ್ರದನಾದ - ಭಕ್ತಿಜ್ಞಾನಾದಿ ಸಂಪತ್ತುಗಳಿಂದ ಪೂರ್ಣನಾದ) ಹೇ ಮಧ್ವಮುನಿರಾಯ ! ತವ ಕೀರ್ತಿ = ನಿನ್ನ ಯಶಸ್ಸನ್ನು , ತುತಿಸಲ್ಕೆ = ಸ್ತುತಿಸಲು (ಪೂರ್ಣವಾಗಿ ವರ್ಣಿಸಲು) , ವಾಣಿರುದ್ರಾದಿಗಳಿಗೆ = ಸರಸ್ವತಿ ಮತ್ತು ರುದ್ರನೇ ಮೊದಲಾದ ದೇವತೆಗಳಿಗೆ , ಅರಿದು = ಸಾಧ್ಯವಾಗದು ( ಅತಿಮಹತ್ತ್ವವಿಶಿಷ್ಟವಾದುದರಿಂದ ಅವರ ಸಾಮರ್ಥ್ಯವನ್ನೂ ಮೀರಿದುದಾಗಿದೆ).

ವಿಶೇಷಾಂಶ : ಬಳಿತ್ಥಾಸೂಕ್ತದಲ್ಲಿ ಹೀಗೆ ಹೇಳಿದೆ : ' ಯದೀಮನುಪ್ರದಿವೋ ಮಧ್ವ ಆಧವೇ ಗುಹಾಸಂತಂ ಮಾತರಿಶ್ವಾ ಮಥಾಯತಿ ' , ಯತ್ ಈಂ - ಯಾವ ಈ , ಪ್ರದಿವಃ - ಪ್ರಕಾಶಾದಿರೂಪದಿಂದ , ಮಧ್ವಃ - ಮಧ್ವನಾಮಕನಾದ , ಮಾತರಿಶ್ವಾ - ವಾಯುದೇವನೇ , (ಮಾತರಿ - ಋಗಾದಿ ಪ್ರಮಾಣಗಳಲ್ಲಿ , ಶ್ವಯತಿ - ಸದಾ ಗಮನವುಳ್ಳವನು) , ಗುಹಾಸಂತಂ - (ಕಲಿಯುಗದಲ್ಲಿ ದುರ್ವಾದಿಗಳಿಂದ) , ಗೂಹನ - ಮಾಡಲ್ಪಟ್ಟ ಶ್ರೀಹರಿಯನ್ನು , ಅನು - ಶಾಸ್ತ್ರಗಳನ್ನು ಅನುಸರಿಸಿಯೇ , ಆಧವೇ - (ಆಸಮಂತಾತ್ , ಧವೇ ಪತಿತ್ವೇ) ಸರ್ವಾಧಿಪತಿಯೆಂದು , ಮಥಾಯತಿ - ಶಾಸ್ತ್ರಮಥಪದಿಂದ ನಿಶ್ಚಯಿಸುತ್ತಾನೆ.

ಹುಣಿಸೆಬೀಜದಿ ಪಿತನ ಋಣವ ತಿದ್ದಿದ ಪೂರ್ಣ -
ಗುಣವಂತ ಗುರುವೆ ದಯವಾಗೊ । ದಯವಾಗಿ ನೀನೆನ್ನ
ಋಣಮೂರರಿಂದ ಗೆಲಿಸಯ್ಯ ॥ 35 ॥

ಅರ್ಥ : ಹುಣಿಸೆಬೀಜದಿ = ಹುಣಿಸೆಬೀಜಗಳನ್ನು (ಧನಿಕನಿಗೆ) ಕೊಡುವುದರ ಮೂಲಕ , ಪಿತನ = ತಂದೆಯ , ಋಣವ ತಿದ್ದಿದ = ಸಾಲವನ್ನು ತೀರಿಸಿದ , ಪೂರ್ಣಗುಣವಂತ = ಗುಣಪೂರ್ಣನಾದ , ಗುರುವೆ = ಹೇ ಮಧ್ವಗುರೋ ! ದಯವಾಗೊ = ಕೃಪೆಮಾಡು ; ದಯವಾಗಿ ಎನ್ನಲ್ಲಿ ಕರುಣೆಯಿಟ್ಟು , ನೀನು , ಎನ್ನ = ನನ್ನ , ಋಣಮೂರರಿಂದ = ಋಣತ್ರಯದಿಂದ , ಗೆಲಿಸಯ್ಯ = ಪಾರುಮಾಡು. 

ವಿಶೇಷಾಂಶ :(1) ಹುಣಿಸೆಬೀಜಗಳನ್ನು ಸಾಲಗಾರನಿಗೆ ಕೊಟ್ಟು ತಂದೆಯ ಸಾಲವನ್ನು ತೀರಿಸಿದ , ಬಾಲಲೀಲೆಯ ಅದ್ಭುತ ಮಹಿಮೆಯು ಶ್ರೀಸುಮಧ್ವವಿಜಯದಲ್ಲಿ ವರ್ಣಿತವಾಗಿದೆ.

(2) ದೇವಋಣ , ಋಷಿಋಣ , ಪಿತೃಋಣಗಳೆಂಬ ಮೂರು ಋಣಗಳಿಂದ (ಸಾಲರೂಪದ ಹೊರೆಯಿಂದ) ಪ್ರತಿ ಮನುಷ್ಯನೂ ಬಿಡುಗಡೆ ಹೊಂದಲು ಆ ಪ್ರಯುಕ್ತ ವಿಹಿತವಾದ ಕರ್ಮಗಳನ್ನಾಚರಿಸಬೇಕು. ಯಜ್ಞದಿಂದ (ವೈಶ್ವದೇವ , ಬ್ರಹ್ಮಯಜ್ಞ , ಇತರ ಯಾಗಾದಿಗಳಿಂದ ) ದೇವಋಣವೂ ; ವೇದಾಧ್ಯಯನಾದಿ ನಿಯಮಗಳನ್ನು ಪಾಲಿಸುವ ಬ್ರಹ್ಮಚರ್ಯದಿಂದ ಋಷಿಋಣವೂ ; ಪುತ್ರಸಂತತಿಯಿಂದ (ಪಿತೃಶ್ರಾದ್ಧಾದಿಗಳನ್ನು ತಪ್ಪದೆ ನಡೆಸಿ , ಮುಂದೆಯೂ ನಡೆಯುವಂತೆ ಸಂತತಿಯನ್ನು ಬೆಳೆಸಿ , ಪಿತೃಸೇವೆ , ಪಿತೃವಾಕ್ಯಪರಿಪಾಲನೆಗಳಿಂದ ) ಪಿತೃಋಣವೂ ಪರಿಹಾರವಾಗುವುದೆಂದು ವೇದಾದಿಶಾಸ್ತ್ರಗಳು ಸಾರುತ್ತವೆ . ಇವುಗಳಲ್ಲಿ ಯಾವ ಋಣಾನುಬಂಧದಿಂದಲೂ ಜನಿಸಿದವರಲ್ಲ - ಶ್ರೀಮಧ್ವರು.

ಯತ್ಯಾಶ್ರಮ ವಹಿಸಿ ಶ್ರುತ್ಯರ್ಥಗ್ರಂಥ ಮೂ -
ವತ್ತೇಳು ರಚಿಸಿ ದಯದಿಂದ । ದಯದಿಂದ ನಿನ್ನವರಿ -
ಗಿತ್ತು ಪಾಲಿಸಿದಿ ಕರುಣಾಳು ॥ 36 ॥

ಅರ್ಥ :- ಯತ್ಯಾಶ್ರಮವ = ಸನ್ಯಾಸಾಶ್ರಮವನ್ನು , ವಹಿಸಿ = ಸ್ವೀಕರಿಸಿ , ಶ್ರುತ್ಯರ್ಥಗ್ರಂಥ ಮೂವತ್ತೇಳು = ವೇದಾರ್ಥ ನಿರ್ಣಯಗಳನ್ನು ನಿರೂಪಿಸುವ ೩೭ ಗ್ರಂಥಗಳನ್ನು , ರಚಿಸಿ = ನಿರ್ಮಿಸಿ , ದಯದಿಂದ = (ಸಜ್ಜನರ ಮೇಲಿನ) ಕೃಪೆಯಿಂದ , ನಿನ್ನವರಿಗೆ = ನಿನ್ನ ಭಕ್ತರಿಗೆ , ಇತ್ತು = ಕೊಟ್ಟು (ಉಪದೇಶಿಸಿ) , ಪಾಲಿಸಿದಿ = ರಕ್ಷಿಸಿದಿ , ಕರುಣಾಳು = ನೀನೇ ಕರುಣಾಮೂರ್ತಿಯು .

ವಿಶೇಷಾಂಶ : ಶ್ರೀಮಧ್ವಾಚಾರ್ಯರು ರಚಿಸಿದ ೩೭ ಗ್ರಂಥಗಳು ಯಾವುವೆಂದರೆ : ಗೀತಾಭಾಷ್ಯ , ಗೀತಾತಾತ್ಪರ್ಯ , ಸೂತ್ರಭಾಷ್ಯ , ಅಣುಭಾಷ್ಯ , ಅನುವ್ಯಾಖ್ಯಾನ , ಪ್ರಮಾಣ ಲಕ್ಷಣ , ಕಥಾಲಕ್ಷಣ , ಉಪಾಧಿಖಂಡನ , ಮಾಯಾವಾದ ಖಂಡನ , ಪ್ರಪಂಚಮಿಥ್ಯಾತ್ವಾನುಮಾನಖಂಡನ , ತತ್ತ್ವಸಂಖ್ಯಾನ , ತತ್ತ್ವವಿವೇಕ , ತತ್ತ್ವೋದ್ಯೋತ , ಕರ್ಮನಿರ್ಣಯ , ವಿಷ್ಣುತತ್ತ್ವನಿರ್ಣಯ , ಋಗ್ಭಾಷ್ಯ , ಉಪನಿಷದ್ಭಾಷ್ಯಗಳು : ಐತರೇಯ , ಈಶಾವಾಸ್ಯ , ಬೃಹದಾರಣ್ಯ , ಕಾಠಕ , ತೈತ್ತಿರೀಯ , ಛಾಂದೋಗ್ಯ , ತಲವಕಾರ , ಷಟ್ಪ್ರಶ್ನ , ಮಾಂಡೂಕ , ಅಥರ್ವಣ , ನ್ಯಾಯವಿವರಣ , ಮಹಾಭಾರತತಾತ್ಪರ್ಯನಿರ್ಣಯ , ಭಾಗವತತಾತ್ಪರ್ಯನಿರ್ಣಯ , ಯಮಕಭಾರತ , ದ್ವಾದಶಸ್ತೋತ್ರ , ಕೃಷ್ಣಾಮೃತಮಹಾರ್ಣವ , ತಂತ್ರಸಾರ , ನರಸಿಂಹನಖಸ್ತುತಿ , ಸದಾಚಾರಸ್ಮೃತಿ , ಯತಿಪ್ರಣವಕಲ್ಪ ಮತ್ತು ಜಯಂತೀನಿರ್ಣಯ.

ನಾಮತ್ರಯಾಂಕಿತ ಸುಧೀಮಂತಕುಲಗುರುವೆ
ಶ್ರೀಮದಾಚಾರ್ಯ ಗುರುವರ್ಯ । ಗುರುವರ್ಯ
ಧರ್ಮಾರ್ಥಕಾಮಮೋಕ್ಷದನೆ ದಯವಾಗೋ ॥ 37 ॥

ಅರ್ಥ :- ನಾಮತ್ರಯಾಂಕಿತ = ಹನುಮ , ಭೀಮ , ಮಧ್ವ ಎಂಬ (ಶ್ರುತಿಪ್ರಸಿದ್ಧ) ಮೂರುನಾಮಗಳುಳ್ಳ , ಸುಧೀಮಂತಕುಲಗುರುವೆ = ಶುದ್ಧ ಜ್ಞಾನಿಗಳ ಸಮೂಹಕ್ಕೆ ಗುರುಗಳಾದ , ಗುರುವರ್ಯ = ಗುರುಗಳೆಂಬ (ಜ್ಞಾನೋಪದೇಶಕರೆಂಬ) ಸರ್ವರಿಗೂ ಶ್ರೇಷ್ಠಗುರುಗಳಾದ , ಶ್ರೀಮದಾಚಾರ್ಯ = ಶ್ರೀ ಮಧ್ವಾಚಾರ್ಯರೇ ! ಧರ್ಮಾರ್ಥಕಾಮಮೋಕ್ಷದನೆ = ಧರ್ಮ , ಅರ್ಥ , ಕಾಮ , ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನೂ ಕೊಡುವವರಾದ ನೀವು , ದಯವಾಗೋ = ಕೃಪೆಮಾಡಿರಿ.

ವಿಶೇಷಾಂಶ : ಧರ್ಮವೆಂದರೆ ಪುಣ್ಯ - ಸತ್ಕರ್ಮಗಳನ್ನು ಆಚರಿಸುವುದರಿಂದ ಉದಯಿಸುವ , ಕಾಲಾಂತರದಲ್ಲಿ ಅಥವಾ ಜನ್ಮಾಂತರದಲ್ಲಿ ಸುಖ ಪ್ರಾಪಕವಾದ ಅದೃಷ್ಟವಿಶೇಷ ; ಅರ್ಥ - ದ್ರವ್ಯ ಅಥವಾ ತಲ್ಲಭ್ಯಭೋಗ್ಯ ವಸ್ತುಗಳು ; ಕಾಮ - ಭೋಗ್ಯವಸ್ತುಗಳ ಭೋಗ ಮತ್ತು ಭೋಗೇಚ್ಛೆ ; ಮೋಕ್ಷ - ಪ್ರಕೃತಿಬಂಧದಿಂದ (ಸಂಸಾರದಿಂದ) ಬಿಡುಗಡೆಯನ್ನು ಹೊಂದಿ , ಸ್ವಸ್ವರೂಪದಿಂದ ಇರುವ ನಿತ್ಯಸ್ಥಿತಿ . ಅನ್ಯದೇವತೆಗಳ ಉಪಾಸನೆಯಿಂದಲೂ (ಸೇವೆಯಿಂದ) ಧರ್ಮ , ಅರ್ಥ , ಕಾಮಗಳು ಲಭಿಸುತ್ತವೆ . ಅವುಗಳನ್ನು ಸಹ ಅವರ ಅಂತರ್ಯಾಮಿಯಾದ ಶ್ರೀಹರಿಯೇ ಅವರ ದ್ವಾರಾ ಕೊಡುವನು. ಫಲದಾನದಲ್ಲಿ ಯಾರೂ ಸ್ವತಂತ್ರರಲ್ಲ . ಆದರೆ , ಉತ್ತಮ ಪುರುಷಾರ್ಥವಾದ ಮೋಕ್ಷವನ್ನು ಅವರಲ್ಲಿ ನಿಂತು ಶ್ರೀಹರಿಯು ಕೊಡುವುದಿಲ್ಲ . ವಾಸುದೇವನೊಬ್ಬನೇ ಮೋಕ್ಷದಾತನು - ಅನ್ಯರಾರೂ ಅಲ್ಲ . ಹೀಗಿದ್ದರೂ ಮೋಕ್ಷಕ್ಕೆ ಸಾಕ್ಷಾತ್ಸಾಧಕವಾದ ವಿಷ್ಣುಪ್ರಸಾದಕ್ಕೆ ಇತರ ದೇವತೆಗಳ (ತತ್ತ್ವಾಭಿಮಾನಿಗಳ ಹಾಗೂ ಸ್ವೋತ್ತಮರ) ಅನುಗ್ರಹವು ಅವಶ್ಯಕವೇ . ' ವಿಷ್ಣುರ್ಹಿದಾತಾ ಮೋಕ್ಷಸ್ಯ ವಾಯುಶ್ಚ ತದನುಜ್ಞಯಾ' ' ವಿಷ್ಣುವಿನ ಅನುಜ್ಞೆಯಿಂದ ವಾಯುದೇವರು ಮೋಕ್ಷದಾತರೂ ಆಗಿರುವರು' ಎಂದು ಪ್ರಮಾಣಗಳು ಹೇಳುತ್ತವೆ . ಶ್ರೀಹರಿಯು ತನ್ನ ಅಚ್ಛಿನ್ನಭಕ್ತರಾದ ವಾಯುದೇವರಿಗೆ ಕೊಟ್ಟಿರುವ ವಿಶೇಷಾಧಿಕಾರವಿದು.

ಮೂರೇಳುಕುಮತಘೋರಾರಣ್ಯಪಾವಕ ಸ -
ಮೀರಾವತಾರ ಗಂಭೀರ । ಗಂಭೀರ ತ್ವತ್ಪದಾಂ -
ಭೋರುಹಧ್ಯಾನ ಕರುಣಿಸೋ ॥ 38 ॥

ಅರ್ಥ :- ಮೂರೇಳುಕುಮತ = ೨೧ ದುರ್ಮತಗಳೆಂಬ , ಘೋರಾರಣ್ಯ = ಭಯಂಕರವಾದ ಅರಣ್ಯಗಳಿಗೆ , ಪಾವಕ = ಅಗ್ನಿಯಾದ (ಅಗ್ನಿಯಂತೆ ದಹಿಸಿದ - ದುರ್ಮತಗಳನ್ನು ಖಂಡಿಸಿದ) , ಸಮೀರಾವತಾರ = ಶ್ರೀವಾಯುದೇವರ ಮೂರನೇ ಅವತಾರರಾದ , ಗಂಭೀರ = ಅಗಮ್ಯಮಹಿಮರಾದ , ( ಹೇ ಮಧ್ವಾಚಾರ್ಯ ) , ತ್ವತ್ಪದಾಂಬೋರುಹಧ್ಯಾನ = ನಿಮ್ಮ ಪಾದಕಮಲಗಳ ಸಂತತ ಸ್ಮರಣೆಯನ್ನು , ಕರುಣಿಸೋ = ದಯಪಾಲಿಸಿರಿ. 

ವಿಶೇಷಾಂಶ : ಶ್ರೀಮಧ್ವಾಚಾರ್ಯರ ಕಾಲಕ್ಕೆ ಹಿಂದೆ , ಶ್ರೀಬಾದರಾಯಣರಿಂದ (ನಾರಾಯಣಾವತಾರರಾದ ವೇದವ್ಯಾಸರಿಂದ) ರಚಿತವಾದ , ವೇದಾರ್ಥ ನಿರ್ಣಾಯಕ ಬ್ರಹ್ಮಸೂತ್ರಗಳಿಗೆ , ೨೧ ಭಾಷ್ಯಗಳು ಪ್ರಚಾರದಲ್ಲಿದ್ದವು. ಭಾಷ್ಯಕರ್ತೃಗಳು ಸ್ವಸ್ವಭಾಷ್ಯಗಳಲ್ಲಿ ಸ್ವಾಭಿಪ್ರಾಯಗಳನ್ನು ನಿರೂಪಿಸಿದ್ದರಲ್ಲದೇ , ಶ್ರೀಬಾದರಾಯಣರಿಗೆ ಸಮ್ಮತವಾದವುಗಳನ್ನಲ್ಲ . ಇಪ್ಪತ್ತೆರಡನೇ ಭಾಷ್ಯಕಾರರಾದ ಶ್ರೀಮಧ್ವಾಚಾರ್ಯರು ಸೂತ್ರಕಾರರ ಅಭಿಪ್ರಾಯಗಳಿಗೆ ಸ್ವಲ್ಪವೂ ವ್ಯತ್ಯಾಸವಿಲ್ಲದಂತೆ ತಮ್ಮ ಭಾಷ್ಯವನ್ನು ರಚಿಸಿ , ಸಜ್ಜನರನ್ನು ಆ ಮೂಲಕ ಉದ್ಧರಿಸಬೇಕೆಂಬ ಭಗವಂತನ ಆಜ್ಞೆಯನ್ನು ಪಾಲಿಸಿರುವರು. 

ಈ ಚರಾಚರದೊಳು ಅನಾಚಾರದಲಿ ನಡೆವ
ನೀಚಮಾಯಿಗಳ ಗೆಲಿದಿರ್ಪ । ಗೆಲಿದಿರ್ಪ ಶ್ರೀಮ -
ದಾಚಾರ್ಯರಡಿಗಳಿಗೆ ಶರಣೆಂಬೆ ॥ 39 ॥

ಅರ್ಥ :- ಈ ಚರಾಚರದೊಳು = ಈ ಚರಾಚರ ಜಗತ್ತಿನಲ್ಲಿ , ಅನಾಚಾರದಲಿ = (ವಿಹಿತಾಚಾರಗಳನ್ನು ಬಿಟ್ಟು) ದುರಾಚಾರಿಗಳಾಗಿ , ನಡೆವ = ವರ್ತಿಸುವ , ನೀಚಮಾಯಿಗಳ = ಅಧಮರಾದ ಮಾಯಾವಾದಿಗಳನ್ನು , ಗೆಲಿದಿರ್ಪ = ಗೆದ್ದಿರುವ , ಶ್ರೀಮದಾಚಾರ್ಯರ = ಶ್ರೀಮಧ್ವಾಚಾರ್ಯರ , ಅಡಿಗಳಿಗೆ = ಪಾದಗಳಿಗೆ , ಶರಣೆಂಬೆ = ನಮಸ್ಕರಿಸುವೆನು (ಅವರ ಪಾದವೇ ಗತಿಯೆಂದು ಆಶ್ರಯಿಸಿ ಸದಾ ನಮಸ್ಕರಿಸುತ್ತೇನೆ).

ವಿಶೇಷಾಂಶ :- ಹಿಂದೆ ಹೇಳಿದ ೨೧ ಭಾಷ್ಯಗಳಲ್ಲಿ ಜೀವೇಶ್ವರೈಕ್ಯವನ್ನು ಸಾಧಿಸುವ ೨೧ ನೆಯದಾದ ಸಂಕರಭಾಷ್ಯವು ತಮಸ್ಸಿಗೆ ಪ್ರಧಾನ ಸಾಧನವಾದುದು. 'ನೀಚಮಾಯಿಗಳ ಗೆಲಿದಿರ್ಪ' ಎಂಬುದರಿಂದ ಶ್ರೀದಾಸಾರ್ಯರು ಈ ಅಭಿಪ್ರಾಯವನ್ನು ಸೂಚಿಸಿರುವರು. ಕಲಿಸ್ಪರ್ಶರಹಿತರಾದವರು ಮಾತ್ರ ಈ ಮತವನ್ನು ನಿರಾಕರಿಸಲು ಶಕ್ತರು. ಆಖಣಾಶ್ಮಸಮರಾದ ವಾಯುದೇವರೇ ಅವತರಿಸಿ , ಈ ಕಾರ್ಯವನ್ನು ಸಾಧಿಸಿದರು - ಇದು ಮಹಾವಿಜಯ. ಈ ವಿಜಯಮಹೋತ್ಸವವನ್ನು ದೇವತೆಗಳೂ ಆಚರಿಸಿ , ಆಕಾಶದಿಂದ ಶ್ರೀಮದಾಚಾರ್ಯರ ಮೇಲೆ ದೇವಲೋಕದ ಪುಷ್ಪಗಳನ್ನು ವೃಷ್ಟಿಗೈದರು. ಅವತಾರಕಾರ್ಯ ಸಮಾಪ್ತಿ ಹೊಂದಿದ್ದ ಕಾರಣ , ಆ ಪುಷ್ಪರಾಶಿಯಲ್ಲಿ ಶ್ರೀಮದಾಚಾರ್ಯರು ಅದೃಶ್ಯರಾಗಿ , ಬದರಿಗೆ ಪ್ರಯಾಣ ಮಾಡಿದರು. 'ದೃಶ್ಯಸ್ತು ಬದರೀತಟೇ' - ಬದರಿಯಲ್ಲಿ (ವೇದವ್ಯಾಸರ ಆಶ್ರಮದಲ್ಲಿ) ಅದ್ಯಾಪಿ (ಅಧಿಕಾರಿಗಳಿಂದ) ಕಾಣಲ್ಪಡುವರೆಂದು ಶ್ರೀವಾದಿರಾಜ ಶ್ರೀಗಳವರು ಹೇಳಿರುವರು.

ನಿನಗಿಂದಧಿಕರಾದ ಅನಿಮಿತ್ತ ಬಾಂಧವರು
ಎನಗಿಲ್ಲ ಶ್ರೀಮಧ್ವಮುನಿರಾಯ ।ಮುನಿರಾಯನಿರಲು ಯೋ -
ಚನೆ ಯಾಕೆ ಜಗದಿ ನಮಗಿನ್ನು ॥ 40 ॥

ಅರ್ಥ :- ಶ್ರೀಮಧ್ವಮುನಿರಾಯ = ಹೇ ಮಧ್ವಮುನಿಗಳೇ ! ನಿನಗಿಂದಧಿಕರಾದ = ನಿಮಗಿಂತ ಉತ್ತಮರಾದ , ಅನಿಮಿತ್ತ ಬಾಂಧವರು = ನಿರ್ವ್ಯಾಜಬಂಧುಗಳು (ಅನಿಮಿತ್ತೋಪಕಾರಿಗಳು) , ಎನಗಿಲ್ಲ = ನನಗೆ ಯಾರೂ ಇಲ್ಲ ; ಇರಲು = ನೀವಿರಲು (ನಿಮ್ಮ ಅನುಗ್ರಹವಿರಲು) , ನಮಗಿನ್ನು = ನಮಗೆ ಬೇರೆ (ಪುನಃ) , ಜಗದಿ = ಜಗತ್ತಿನಲ್ಲಿ , ಯೋಚನೆ ಯಾಕೆ = ಚಿಂತೆಯೇಕೆ ? (ಚಿಂತಿಸುವ ಕಾರಣವೇ ಇಲ್ಲ).

ವಿಶೇಷಾಂಶ :- ವಾಯುದೇವರು ಅನಿಮಿತ್ತಬಂಧುಗಳು. ನಿನಗಿನ್ನು ಸಮರಾದ ಅನಿಮಿತ್ತಬಾಂಧವರು ಎನಗಿಲ್ಲ ಆವಾವ ಜನುಮದಲ್ಲೂ (ಜಗನ್ನಾಥದಾಸರು). ಪೂರ್ಣಕಾಮರಾದ್ದರಿಂದ ಭಕ್ತರಿಂದ ಯಾವ ಪ್ರಯೋಜನವನ್ನೂ ಅಪೇಕ್ಷಿಸದೆ ಪ್ರೀತಿಯಿಂದ ಅನುಗ್ರಹಿಸುವರು. ಪೂರ್ಣಕಾಮರೇ , ಪ್ರತಿಯಾಗಿ ಏನನ್ನೂ ಅಪೇಕ್ಷಿಸದೆ ಉಪಕಾರ ಮಾಡಲು ಸಮರ್ಥರು. ವಾಯುದೇವರು , ಪೂರ್ಣಕಾಮರಾದ ಕಾರಣ 'ಅರ್ಧ್ಯರ್ಧಃ' ಎಂದು ಕರೆಯಲ್ಪಡುವರು.
ನಿತ್ಯಪೂರ್ಣಗುಣತ್ವಾಚ್ಚ ಹರೇಃ ಪ್ರಿಯತಮತ್ವತಃ ।
ಅಶಕ್ಯಾಪ್ರಾಪ್ಯರಾಹಿತ್ಯಾದರ್ಧ್ಯರ್ಧ ಸಮುದಾಹೃತಃ ॥
- ನಿತ್ಯಪೂರ್ಣರಾದ್ದರಿಂದಲೂ ಶ್ರೀಹರಿಗೆ ಪ್ರಿಯತಮರಾದ್ದರಿಂದಲೂ ವಾಯುದೇವರಿಗೆ , ಅಶಕ್ಯವೂ ಅಪ್ರಾಪ್ಯವೂ ಆದುದು ಯಾವುದೂ ಇಲ್ಲ. ಈ ಕಾರಣದಿಂದ ಇವರು "ಅರ್ಧ್ಯರ್ಧ'ರೆಂದು ಕರೆಯಲ್ಪಡುವರೆಂದು ಇವರ ಮಹಿಮೆಯು ಹೇಳಲಾಗಿದೆ.

ಶ್ರೀಮತ್ಸಮಸ್ತಗುಣಧಾಮ ವಿಷ್ಣೋರಂಘ್ರಿ -
ತಾಮರಸಮಧುಪ ಭವತಾಪ । ಭವತಾಪ ಗುರುಸಾರ್ವ -
ಭೌಮ ಪರಿಹರಿಸಿ ಸಲಹಯ್ಯ ॥ 41 ॥

ಅರ್ಥ :- ಶ್ರೀಮತ್ಸಮಸ್ತಗುಣಧಾಮ = ಸಮಸ್ತ ಕಲ್ಯಾಣಗುಣಾಕರರಾದ , ವಿಷ್ಣೋರಂಘ್ರಿತಾಮರಸಮಧುಪ = ಶ್ರೀವಿಷ್ಣುಪಾದಪದ್ಮಗಳಲ್ಲಿ ಭ್ರಮರದಂತೆ ವಿಹರಿಸುವ ಹೇ ಶ್ರೀಮದಾಚಾರ್ಯರೇ ! ಗುರುಸಾರ್ವಭೌಮ = ಗುರು ಚಕ್ರವರ್ತಿಗಳಾದ ನೀವು , ಭವತಾಪ = ಸಂಸಾರದುಃಖವನ್ನು , ಪರಿಹರಿಸಿ = ಕಳೆದು , ಸಲಹಯ್ಯ = ರಕ್ಷಿಸಿರಿ .

ವಿಶೇಷಾಂಶ : (1) ' ಗುರುಸಾರ್ವಭೌಮ 'ರೆಂದು ಶ್ರೀಮದಾಚಾರ್ಯರನ್ನು ನಿರೂಪಿಸುವುದರಲ್ಲಿ ಶ್ರೀದಾಸವರ್ಯರ ಗಂಭೀರಭಾವವು ಹೀಗಿದೆ :
ಅಸಂಶಯಃ ಸಂಶಯಚ್ಛಿದ್ಗುರುರುಕ್ತೋ ಮನೀಷಿಭಿಃ ।
ತಸ್ಮಾದ್ಬ್ರಹ್ಮಾ ಗುರುರ್ಮುಖ್ಯಃ ಸರ್ವೇಷಾಮೇವ ಸರ್ವದಾ ॥

ಷಣ್ಣವತ್ಯಂಗುಲೋ ಯಸ್ತು ನ್ಯಗ್ರೋಧಪರಿಮಂಡಲಃ ।
ಸಪ್ತಪಾದಃ ಚತುರ್ಹಸ್ತೋ ದ್ವಾತ್ರಿಂಶಲ್ಲಕ್ಷಣೈರ್ಯುತಃ ॥
- (ಭಾ . ತಾ)
ನಿಸ್ಸಂಶಯಜ್ಞಾನವುಳ್ಳವನಾಗಿ , ಶಿಷ್ಯರ ಸರ್ವಸಂಶಯಗಳನ್ನು ಪರಿಹರಿಸಬಲ್ಲವನೇ ಗುರುವೆಂದು ಜ್ಞಾನಿಗಳು ಹೇಳುವರು . ಮುಖ್ಯಗುರುಗಳು ೩೨ ಸಲ್ಲಕ್ಷಣಗಳಿಂದ ಯುಕ್ತವಾದ ದೇಹವುಳ್ಳವರಾಗಿರಬೇಕು. ಪಾದದಿಂದ ಕೇಶದವರೆಗೆ ೯೬ ಅಂಗುಲ ಎತ್ತರವಾದ ಮತ್ತು ೪೮ ಅಂಗುಲ (ನ್ಯಗ್ರೋಧ - ೪೮ ಅಂಗುಲ) ಸುತ್ತಳತೆಯುಳ್ಳ ದೇಹವಿರಬೇಕು. ೭ ಪಾದಗಳ ಅಳತೆಯೂ , ೪ ಹಸ್ತಗಳ ಅಳತೆಯೂ ಸಮವಾಗಿರಬೇಕು. ಈ ದೇಹಲಕ್ಷಣಗಳುಳ್ಳವರೇ ಮುಖ್ಯಗುರುಗಳು. 'ವಾಯುರ್ಹಿ ಬ್ರಹ್ಮ ತಾಮೇತಿ ತಸ್ಮಾದ್ಬ್ರಹ್ಮೈವ ಸ ಸ್ಮೃತಃ ' ಎಂಬ ( ಸ.ರ.ಮಾ ) ವಾಕ್ಯವು ವಾಯುವೇ ಬ್ರಹ್ಮಪದವಿಯನ್ನು ಹೊಂದುವುದರಿಂದ ವಾಯುವು ಬ್ರಹ್ಮನೆಂದು ಕರೆಯಲ್ಪಡುವನೆಂದೂ ಹೇಳುತ್ತದೆ. ಆದ್ದರಿಂದ ಸರ್ವಜ್ಞರೂ , ವಾಯುದೇವರ ತೃತೀಯಾವತಾರರೂ ಆದ ಶ್ರೀಮಧ್ವಾಚಾರ್ಯರೇ ಮುಖ್ಯಗುರುಗಳು - ಸರ್ವರ ಗುರುಗಳಾದ್ದರಿಂದ ಜಗದ್ಗುರುಗಳು. ಅವರೇ 'ಗುರುಸಾರ್ವಭೌಮರು'.

(2) ಜಗದ್ಗುರುವಿನ ದೇಹಪ್ರಮಾಣವು ಮೇಲೆ ಹೇಳಿದಂತೆ ಇರಲು , ದೇಹಗತ ೩೨ ಸಲ್ಲಕ್ಷಣಗಳು ಯಾವುವೆಂದರೆ : ' ಪಂಚದೀರ್ಘಃ ಪಂಚಸೂಕ್ಷ್ಮಃ ಸಪ್ತರಕ್ತಃ ಷಡುನ್ನತಃ । ತ್ರಿಪೃಥು ತ್ರಿಷು ಗಂಭೀರೋ ದ್ವಾತ್ರಿಂಶಲ್ಲಕ್ಷಣಸ್ತ್ವಿತಿ ' (ಲಕ್ಷಣಶಾಸ್ತ್ರ) . 
ಇದರ ಅರ್ಥ : ಭುಜ , ನೇತ್ರ , ಹನು , ಜಾನು , ನಖಗಳು ಇವು ೫ ದೀರ್ಘವಾಗಿರಬೇಕು . ತ್ವಕ್(ಚರ್ಮ) , ಕೇಶ , ಅಂಗುಲಿ (ಬೆರಳು) , ದಂತ , ಅಂಗುಲಿಪರ್ವಗಳು(ಗೆಣ್ಣುಗಳ ಮಧ್ಯಭಾಗ) ಇವು ೫ ಸೂಕ್ಷ್ಮವಾಗಿರಬೇಕು . ಅಂಗೈ , ಅಂಗಾಲು , ನೇತ್ರಾಂತ (ಕಣ್ಣಿನ ಕುಡಿ - ತುದಿ) , ತಾಲು (ಅಂಗಳು - ಬಾಯೊಳಗಿನ ಮೇಲ್ಬಾಗ) , ಜಿಹ್ವಾ(ನಾಲಿಗೆ) , ಅಧರೋಷ್ಠ(ಕೆಳದುಟಿ) , ನಖ (ಕೈಯುಗುರು) ಇವು ೭ ಕೆಂಪಾಗಿರಬೇಕು. ವಕ್ಷ(ಎದೆ) , ಕುಕ್ಷಿ(ಹೊಟ್ಟೆ), ಅಲಿಕ(ಹಣೆ) , ಸ್ಕಂಧ(ಹೆಗಲು) , ಕರ(ಮುಂಗೈಯ ಮೇಲ್ಭಾಗ) , ವಕ್ತ್ರ(ಮುಖ) ಇವು ೬ ಉನ್ನತವಾಗಿರಬೇಕು. ಲಲಾಟ(ಹಣೆ), ಕಟಿ(ಸೊಂಟ) , ವಕ್ಷ(ಎದೆ) ಇವು ೩ ಪೃಥು (ವಿಸ್ತಾರ - ಅಗಲ)ವಾಗಿರಬೇಕು. ಜಂಘಾ(ಮೊಳಕಾಲು ಚಿಪ್ಪು) , ಗ್ರೀವ (ಕುತ್ತಿಗೆ) , ಮೇಹನ(ಶಿಶ್ನ-ಗುಹ್ಯೇಂದ್ರಿಯ) ಇವು ೩ ಹ್ರಸ್ವ(ಚಿಕ್ಕವು)ಗಳಾಗಿರಬೇಕು. ಸ್ವರ(ಕಂಠಧ್ವನಿ) , ಸತ್ತ್ವ(ಸ್ವಭಾವ) , ನಾಭಿ(ಹೊಕ್ಕಳು) ಇವು ೩ ಗಂಭೀರವಾಗಿರಬೇಕು.

(3) ೩೨ ಸಲ್ಲಕ್ಷಣಯುಕ್ತ ದೇಹವುಳ್ಳ ಋಜುಗಣದ ಜೀವರನ್ನು ಬಿಟ್ಟು , ತಾರತಮ್ಯದಲ್ಲಿ ಕೆಳಗಿನವರಾದ ಇತರ ದೇವತೆಗಳಲ್ಲಿ ಎಷ್ಟೆಷ್ಟು ಲಕ್ಷಣಗಳಿರುವುವೆಂಬುದನ್ನೂ , ಯಾವ ಅಂಗಗಳು ಲಕ್ಷಣಹೀನವಾಗಿರುತ್ತವೆಂಬುದನ್ನೂ , ದುರ್ಲಕ್ಷಣಗಳ ಸ್ವರೂಪವನ್ನೂ , ಅಧಮಾಧಮನಾದ ಕಲಿಯಲ್ಲಿರುವ ೩೨ ದುರ್ಲಕ್ಷಣಗಳ ವಿವರಗಳನ್ನೂ ಗರುಡಪುರಾಣದ ಬ್ರಹ್ಮಕಾಂಡವು ವಿಸ್ತಾರವಾಗಿ ನಿರೂಪಿಸುತ್ತದೆ . 

ಉದ್ಧರಿಪುದೆಮ್ಮ ಹನುಮದ್ಭೀಮಸೇನಗುರು -
ಮಧ್ವಮುನಿರಾಯ ಕವಿಗೇಯ । ಕವಿಗೇಯ ಎನ್ನ ದು -
ರ್ಬುದ್ಧಿಗಳ ಬಿಡಿಸೋ ದಯದಿಂದ ॥ 42 ॥

ಅರ್ಥ :- ಹನುಮದ್ಭೀಮಸೇನಗುರುಮಧ್ವಮುನಿರಾಯ = ಹನುಮ , ಭೀಮರೂಪಗಳಿಂದ ಅಭಿನ್ನಮಹಿಮರಾದ ಹೇ ಮಧ್ವಗುರುಗಳೇ ! ಎಮ್ಮ = (ನಿಮ್ಮ ಭಕ್ತರಾದ) ನಮ್ಮನ್ನು , ಉದ್ಧರಿಪುದು = ಉದ್ಧಾರ ಮಾಡಬೇಕು ; ಕವಿಗೇಯ = ಜ್ಞಾನಿಗಳಿಂದ ಸ್ತುತ್ಯರಾದ ಹೇ ಗುರುಸಾರ್ವಭೌಮರೇ ! ಎನ್ನ = ನನ್ನ , ದುರ್ಬುದ್ಧಿಗಳ = ದುಷ್ಟಮನೋವೃತ್ತಿಗಳನ್ನು , ದಯದಿಂದ = ಕೃಪೆಮಾಡಿ , ಬಿಡಿಸೋ = ಪರಿಹರಿಸಿರಿ. 

ನಮೋ ನಮೋ ಭಾರತೀರಮಣ ಹನುಮದ್ಭೀಮ -
ಯಮಿಕುಲೋತ್ತಂಸಗುರುಮಧ್ವ । ಗುರುಮಧ್ವ ದುರ್ವಾದಿ -
ತಿಮಿರಮಾರ್ತಾಂಡ ಸುರಶೌಂಡ ॥ 43 ॥

ಅರ್ಥ :- ಹನುಮದ್ಭೀಮಯಮಿಕುಲೋತ್ತಂಸಗುರುಮಧ್ವ = ಹೇ ಹನುಮ , ಭೀಮ , ಯತಿಕುಲತಿಲಕರಾದ ಗುರುಮಧ್ವರಾಯರೇ ! ಭಾರತೀರಮಣ = ಹೇ ಭಾರತೀಶ! ದುರ್ವಾದಿತಿಮಿರಮಾರ್ತಾಂಡ = ದುರ್ವಾದಿಗಳೆಂಬ ಕತ್ತಲೆಗೆ ಸೂರ್ಯನಂತಿರುವ , ಸುರಶೌಂಡ = ಹೇ ದೇವೋತ್ತಮ ! ನಮೋ ನಮಃ = (ನಿಮಗೆ) ಪುನಃಪುನಃ ನಮಸ್ಕಾರವು .

ವಿಶೇಷಾಂಶ : ಶೌಂಡ = ವಿಖ್ಯಾತನಾದವನು . 'ಶೌಂಡೇ ಮತ್ತೇ ಚ ವಿಖ್ಯಾತೇ ' (ವಿಶ್ವನಿಘಂಟು) . ಸುರಶೌಂಡ = ದೇವತೆಗಳ ಗುಂಪಿನಲ್ಲಿ ಪ್ರಖ್ಯಾತರಾದವರು - ಶ್ರೀವಾಯುದೇವರು ಅಂತ ತಾತ್ಪರ್ಯ.

ನಮ್ಮ ಗುರುಗಳ ಪಾದ ಒಮ್ಮೆ ನೆನೆಯಲು ಜನ್ಮ -
ಜನ್ಮಕೃತಪಾಪ ಪರಿಹಾರ । ಪರಿಹಾರವಾಗಿ ಸ - 
ದ್ಬ್ರಹ್ಮಪದದಲ್ಲಿ ಸುಖಿಸೋರು ॥ 44 ॥

ಅರ್ಥ :- ನಮ್ಮ ಗುರುಗಳ ಪಾದ = ನಮ್ಮ ಗುರುಗಳಾದ ಶ್ರೀಮಧ್ವಾಚಾರ್ಯರ ಪಾದಗಳನ್ನು , ಒಮ್ಮೆ = ಒಂದಾವರ್ತಿ (ಸಕೃತ್) , ನೆನೆಯಲು = (ಭಕ್ತಿಪೂರ್ವಕವಾಗಿ) ಸ್ಮರಿಸುವ ಮಾತ್ರದಿಂದ , ಪರಿಹಾರವಾಗಿ = ನಷ್ಟಹೊಂದಿ , ಸದ್ಬ್ರಹ್ಮಪದದಲ್ಲಿ = ವಿಷ್ಣುಲೋಕದಲ್ಲಿ , ಸುಖಿಸೋರು = ಆನಂದಿಸುವರು.

ವಿಶೇಷಾಂಶ : ' ಏಕೋऽಪಿ ಕೃಷ್ಣಸ್ಯ ಸಕೃತ್ ಪ್ರಣಾಮೋ ದಶಾಶ್ವಮೇಧಾವಭೃತೇನ ತುಲ್ಯಃ । ದಶಾಶ್ವಮೇಧೀ ಪುನರೇತಿ ಜನ್ಮ ಕೃಷ್ಣಪ್ರಣಾಮೋ ನ ಪುನರ್ಭವಾಯ । '
ಎಂಬುದಾಗಿ ಶ್ರೀಕೃಷ್ಣನಿಗೆ ಮಾಡುವ ಒಂದು ನಮಸ್ಕಾರದ ಮಹಾಫಲವು ಮೋಕ್ಷವೆಂದು ಹೇಳಲ್ಪಟ್ಟಿದೆ . ಅದರಂತೆಯೇ ಶ್ರೀವಾಯುದೇವರನ್ನು ಭಕ್ತಿಪೂರ್ವಕ ನಮಸ್ಕರಿಸುವುದೂ ಸಹ ಮಹಾಫಲವುಳ್ಳದ್ದೆಂದು ಹೇಳುತ್ತಾರೆ.

ವಾಯುಹನುಮದ್ಭೀಮರಾಯಮಧ್ವರ ಸ್ತೋತ್ರ
ಬಾಯೊಳುಳ್ಳವಗೆ ಜನ್ಮಾದಿ । ಜನ್ಮಾದಿರೋಗಭಯ -
ವೀಯನೆಂದೆಂದೂ ಭಗವಂತ ॥ 45 ॥

ಅರ್ಥ : - ವಾಯುಹನುಮದ್ಭೀಮರಾಯಮಧ್ವರ ಸ್ತೋತ್ರ = ಶ್ರೀವಾಯುದೇವರ ಮತ್ತು ಅವರ ಅವತಾರಗಳಾದ (ಮೂಲರೂಪದಂತೆ ಬಲಜ್ಞಾನಾದಿಗಳುಳ್ಳ) ಹನುಮ , ಭೀಮ ಮತ್ತು ಮಧ್ವರಾಯರ ಸ್ತೋತ್ರವನ್ನು , ಬಾಯೊಳುಳ್ಳವಗೆ = (ನಿರಂತರ ಭಕ್ತಿಯಿಂದ) ಉಚ್ಚರಿಸುವಾತಗೆ , ಜನ್ಮಾದಿರೋಗಭಯವ = ಜನನ, ಮರಣದ ಚಿಂತೆ , ಶಾರೀರಿಕ ರೋಗಗಳು ಈ ಮೊದಲಾದ ಭಯಗಳನ್ನು , ಭಗವಂತ = ಶ್ರೀಹರಿಯು , ಎಂದೆಂದಿಗೂ = ಎಂದಿಗೂ , ಈಯನು = ಕೊಡುವುದಿಲ್ಲ.

ವಿಶೇಷಾಂಶ : ಹರಿವಾಯುಸ್ತುತಿಯಲ್ಲಿ ' ಜನ್ಮಾದಿವ್ಯಾಧ್ಯುಪಾಧಿಪ್ರತಿಹತಿ ವಿರಹಪ್ರಾಪಕಾಣಾಂ ಗುಣಾನಾಂ.....' ಹುಟ್ಟು , ಮನೋವ್ಯಥೆ , ಸಾಂಸಾರಿಕ ಕ್ಲೇಶರೂಪದ ಹೊಡೆತ ಇವೇ ಮೊದಲಾದುವುಗಳನ್ನು ನಾಶಮಾಡುವ ಗುಣಗಳು ಶ್ರೀವಾಯುದೇವನದು ಎಂದಿರುವುದರ ಅಭಿಪ್ರಾಯವನ್ನೇ ಇಲ್ಲಿ ಶ್ರೀದಾಸರಾಯರು ಅಪ್ಪಣೆ ಕೊಡಿಸಿದ್ದಾರೆ . ಅಲ್ಲದೆ , ವಾಯುಭಕ್ತರಿಗೆ ಹರಿಪ್ರಸನ್ನತೆಯು ಎಂದಿಗೂ ತಪ್ಪದೆಂದೂ ಅಭಯದಾನ ಮಾಡುತ್ತಾರೆ ಶ್ರೀದಾಸವರ್ಯರು.

ಮಾತರಿಶ್ವನೆ ಎನ್ನ ಮಾತ ಲಾಲಿಸಿ ಜಗ -
ನ್ನಾಥವಿಟ್ಠಲನ ಮನದಲ್ಲಿ । ಮನದಲ್ಲಿ ತೋರಿ ಭವ -
ಭೀತಿ ಬಿಡಿಸಯ್ಯ ಭವ್ಯಾತ್ಮ ॥ 46 ॥

ಅರ್ಥ :- ಮಾತರಿಶ್ವನೆ = ಹೇ ವಾಯುದೇವ ! ಎನ್ನ = ನನ್ನ , ಮಾತ ಲಾಲಿಸಿ = ಪ್ರಾರ್ಥನೆಯನ್ನು (ದಯಮಾಡಿ) ಚಿತ್ತಕ್ಕೆ ತಂದುಕೊಂಡು , ಜಗನ್ನಾಥವಿಟ್ಠಲನ = ಜಗದೊಡೆಯನಾದ ಶ್ರೀವಿಟ್ಠಲನನ್ನು , ಮನದಲ್ಲಿ = ನನ್ನ ಹೃದಯದಲ್ಲಿ , ತೋರಿ = ದರ್ಶನ ಮಾಡಿಸಿ , ಭವಭೀತಿ = ಸಂಸಾರಭಯವನ್ನು , ಭವ್ಯಾತ್ಮ = ಹೇ ಮಹಾಮಹಿಮನೇ ! ಬಿಡಿಸಯ್ಯ = ಪರಿಹರಿಸು , ಪ್ರಭೋ.


ವಿಶೇಷಾಂಶ : ಶ್ರೀವಾಯುದೇವರನ್ನು ಪುನಃ ಸ್ತುತಿಸಿ , ಪ್ರಾರ್ಥಿಸಿ , ಶ್ರೀಜಗನ್ನಾಥವಿಟ್ಠಲನಲ್ಲಿ ಅರ್ಪಿಸಿ , ವಾಯುದೇವನ ಸ್ತುತಿಯನ್ನು ಉಪಸಂಹರಿಸುತ್ತಾರೆ. ಭವ್ಯಾತ್ಮನೆಂಬುದಕ್ಕೆ ಉದಾರಚಿತ್ತನೂ (ಔದಾರ್ಯಗುಣನಿಧಿಯೂ) , ವ್ಯಾಪ್ತಸ್ವರೂಪನೂ ಎಂಬರ್ಥಗಳನ್ನು ಸಹ ತಿಳಿಯಬಹುದು.
*********