by yadugiriyamma
ಉಡುಪಿ
ದೃಷ್ಟಿ ಇದ್ಯಾತಕೆ ಉಡುಪಿ ಕೃಷ್ಣನ್ನ ನೋಡದ ಪ
ಗೋಪಿಯರ ಪೂಜೆ ಗ್ರಹಿಸಿ ಗೋಪಿಚಂದನ ಸಹಿತವಾಗಿ
ವ್ಯಾಪಾರದ ಹಡಗೀಲಿ ಬಂದ ಶ್ರೀಪತಿಯ ನೋಡದ 1
ಮಧ್ವರಾಯರಿಗೊಲಿದು ಬಂದು ಸಮುದ್ರತೀರದಲ್ಲಿ ನಿಂದು
ಪದ್ಮನಾಭನಪುರದಿ ನೆಲಸಿದ ಮುದ್ದು ಶ್ರೀಕೃಷ್ಣನ್ನ ನೋಡದ 2
ಅಷ್ಟಮಠಧ ಯತಿಗಳಲ್ಲಿ ಶ್ರೇಷ್ಠವಾದ ಪೂಜೆಗ್ರಹಿಸಿ ಶಾಪ
ದುಷ್ಟವಾದ ದೇಶವನೆಲ್ಲಾ ಶ್ರೇಷ್ಠ ಮಾಡಿದ ಕೃಷ್ಣನ್ನ ನೊಡದ 3
ಶುದ್ದವಾದ ಗೋವುಘೃತವು ಕ್ಷೀರ ಸಕ್ಕರೆ ಮಧುವು ದಧೀ
ನಾರಿಕೇಳ ಫಲಗಳಿಂದ ಮಿಂದ ಶ್ರೀಕೃಷ್ಣನ್ನ ನೋಡದ 4
ಉದ್ದಂಡವಾದ ಉರನಲ್ಲಿ ಭೂಮಂಡಲನಾಳ್ವ ಶಿರವನಿಟ್ಟು
ಕೊಂಡೆ ಮಕರಿತು ಚೆಂಡು ಧರಿಸಿದ ಪುಂಡರೀಕಾಕ್ಷನ್ನ ನೋಡದ 5
ಪಾನಪಟ್ಟಿ ಮುತ್ತಿನಬಟ್ಟು ಮೂಗುತಿಯನಳವಟ್ಟು ವಜ್ರದ
ಕರ್ಣಕುಂಡಲವನಿಟ್ಟು ಅರ್ಜುನಸಾರಥಿಯ ನೋಡದ 6
ಪವಳದಂತೆ ಅಧರಕಾಂತೀ ಕೊರಳಿನಲ್ಲಿ ವೈಜಯಂತಿ
[ನವ] ಹಾರಪದಕ ಸರಗಳಿಟ್ಟ ವಾರಿಜನಾಭನ ನೋಡದ 7
ಕಡೆಗೋಲ ಬಲದ ಕೈಲಿ ಎಡದ ಕೈಯ ತೊಡೆಯೊಳಿಟ್ಟು
ಉಡುದಾರ ಗೆಜ್ಜೆಯನಿಟ್ಟ ಪೊಡವಿಗೀಶ್ವರನ್ನ ನೋಡದ 8
ಅಂದುಗೆ ಗೆಜ್ಜೆನಿಟ್ಟು ಕುಂದಣದಾವುಗೆಯ ಮೆಟ್ಟಿ ಆ
ನಂದದಿಂದ ಗಂಗೆ ಪಡೆದ ಇಂದಿರೇಶನ ಪಾದವ ನೋಡದ 9
ಸಂಸಾರದಗ್ನಿಯಲ್ಲಿ ಬೆಂದು ನೊಂದುಬಂದ ಭಕ್ತರ ಚರಣವೆಂ
ಬೊ ಶರಧಿಯಲ್ಲಿ ಭರದಲಿರುವ ಹರಿಯ ನೋಡದ 10
ಕಲ್ಲ ಸತಿಯಮಾಡಿ ಕಾಳಿಶಿರದಮೇಲೆ ನಾಟ್ಯವನಾಡಿ
ದುರುಳ ಶಕಟನನ್ನು ತುಳಿದ ವರದ ವೆಂಕಟಕೃಷ್ಣನ್ನ ನೋಡದ 11
****