ಜಿತಮನವ ನೀಡೆನಗೆ ಜಿಷ್ಣುಸಖನೆ
ರತಿಪತಿಪಿತ ನಿನ್ನ ಹಿತದಿ ಭಜಿಸುವೆನೊ ಪ.
ದುಷ್ಟ ಇಂದ್ರಿಯಗಳು ಕೆಟ್ಟ ವಿಷಯಗಳಲ್ಲಿ
ಕಟ್ಟ್ಟೆ ಎನ್ನಯ ಮನವ ಸೆಳೆಯುತಿಹವೊ
ಕೃಷ್ಣಮೂರುತಿ ನೀನೆ ದೃಷ್ಟಿಯಿಂದಲಿ ನೋಡಿ
ಒಟ್ಟುಗೂಡಿಸಿ ನಿನ್ನ ಪಾದದಲ್ಲಿಡಿಸೊ 1
ಎಂಟು ಜನ ದುಷ್ಟರು ಆರು ಜನ ಕಳ್ಳರು
ಕಂಟಕರಾಗಿನ್ನು ಕಾಡುತಿಹರೋ
ಎಂಟುದಳಗಳಿಪ್ಪ ನೆಂಟರೆನಗಾಗರೊ
ಎಂಟೆರಡು ಇಂದ್ರಿಯವ ಬಂಧನದೊಳಿರಿಸೊ 2
ಮೂರು ತಾಪಗಳಿಂದ ಮೂರು ಗುಣದೊಳು ತಿರುಗಿ
ಮೂರು ಮಾರ್ಗವ ಕಾಣೆ ಮುರವೈರಿಯೆ
ಮೂರು ಅವಸ್ಥೆಗಳ ವಿವರವರಿಯದ ಎನಗೆ
ದಾರಿ ತೋರಿ ಸಲಹೊ ಕಾರುಣ್ಯನಿಧಿಯೆ 3
ಡಿಂಬ ಮಧ್ಯದಲಿರುವ ಅಂಬರದಲಿ ನಿನ್ನ
ಬಿಂಬರೂಪವ ತೋರೊ ಶಂಭು ಸಖನೆ
ಅಂಬುಜನಾಭ ಎಪ್ಪತ್ತೆರಡು ಸಾಹಸ್ರ
ತುಂಬಿದ ನಾಡಿಯೊಳು ರೂಪಗಳ ತೋರೊ4
ಮನದಲ್ಲಿ ನೆಲಸಿಹನೆ ಮನುಶಬ್ದವಾಚ್ಯನೆ
ಮನದಿಂದ ಭಿನ್ನನೆ ಮನಪ್ರೇರಕ
ಮನವ ನಿನ್ನಲಿ ನಿಲಿಸಿ ಅನುಗಾಲ ಸಲಹುವುದು
ಚಿನುಮಯನೆ ಗೋಪಾಲಕೃಷ್ಣವಿಠ್ಠಲನೆ 5
****