Showing posts with label ಘನ ದಯಾನಿಧಿಯಾದ ಗುರು ರಾಘವೇಂದ್ರ ನಿಮ್ಮ guruvijaya vittala ಸುಳಾದಿ suladi. Show all posts
Showing posts with label ಘನ ದಯಾನಿಧಿಯಾದ ಗುರು ರಾಘವೇಂದ್ರ ನಿಮ್ಮ guruvijaya vittala ಸುಳಾದಿ suladi. Show all posts

Monday 6 September 2021

ಘನ ದಯಾನಿಧಿಯಾದ ಗುರು ರಾಘವೇಂದ್ರ ನಿಮ್ಮ ankita guruvijaya vittala ಸುಳಾದಿ suladi

 kruti by ಗುರುವಿಜಯವಿಠಲ

ಸುಳಾದಿ - ರಾಗ: ಭೈರವಿ 

ಧ್ರುವತಾಳ

ಘನ ದಯಾನಿಧಿಯಾದ ಗುರು ರಾಘವೇಂದ್ರ ನಿಮ್ಮ

ವನಜ ಪಾದಯುಗಕೆ ನಮೊ ನಮೊ

ಜನುಮಾರಭ್ಯವಾಗಿ ಅಭಿನಮಿಸದಲಿಪ್ಪ

ಮನುಜನ ಅಪರಾಧವೆಣಿಸದಲೆ

ವನಧಿ ಪೋಲುವ ಕರುಣಿ ಗೋವತ್ಸ ನ್ಯಾಯದಿಂದ

ನಿನಗೆ ನೀನೆ ಬಂದು ಸ್ವಪ್ನದಲ್ಲಿ

ಸನಕಾದಿ ಮುನಿಗಳ ಮನನಕ್ಕೆ ನಿಲುಕದ

ಇನಕೋಟಿ ಭಾಸ ವೇದೇಶ ಪ್ರಮೋದ ತೀರ್ಥ

ಮುನಿಗಳಿಂದಲಿ ಕೂಡಿ ಸಂದರುಶನವಿತ್ತು

ವಿನಯೋಕ್ತಿಗಳ ನುಡಿದ ಕೃತ್ಯದಿಂದ

ಆನಂದವಾಯಿತು ಅಘದೂರನಾದೆನಿಂದು

ದನುಜಾರಿ ಭಕುತರ ಮಣಿಯೆ ಗುಣಿಯೆ

ಎಣೆಗಾಣೆ ನಿಮ್ಮ ಕರುಣಾ ಕಟಾಕ್ಷ ವೀಕ್ಷಣಕ್ಕೆ

ಅನುಪಮ ಮಹಿಮನೆ ಅನಿಳ ಪ್ರೀಯ

ಗುಣ ಗಣ ಪೂರ್ಣ ಗುರುವಿಜಯವಿಠಲ ನಿಮ್ಮ

ಘನವಾದ ಬಲದಿ ಎನಗೆ ಸುಳಿದನೆಂದು 1

ಮಟ್ಟತಾಳ

ಸುಖತೀರ್ಥರ ಮತವೆಂದೆಂಬ ಧ್ವಜವನ್ನು

ವಿಖನಸಾಂಡದ ಮಧ್ಯ ಪ್ರತಿಯಿಲ್ಲದೆ ಮೆರೆಯೆ

ಪಖರಹಿತವಾದ ಪಕ್ಷಿಯು ತನ್ನಯ

ಪಖ ಚಿನ್ಹಿಹ್ಯ(ಯ) ಜನಿತ ಮಾರುತನಿಂದಲಿ ಧ್ವಜವ

ಪ್ರಕಟದಿ ಚರಿಸುವ ಯತ್ನದಿಂದ ದುರುಳ

ಸಕುಟಿಲರಾದ ಆ ವಿದ್ಯಾರಣ್ಯ

ಮುಖರೆಲ್ಲ ಬರಲು ಅಮವಸ್ಥಿತ ನಿಶ್ಚಯದಿ

ಮಖಶತಜನೆನೆಪ ಜಯರಾಯಾಚಾರ್ಯ

ಪ್ರಕಟ ಗ್ರಂಥಗಳೆಂಬ ಪಾಶಗಳಿಂದಲ್ಲಿ

ಯುಕುತಿಯಿಂದಲಿ ಬಿಗಿದು ವೀರಧ್ವನಿಯಗೈಯೆ

ಉಕುತಿಗೆ ನಿಲ್ಲದಲೆ ಮೊಲದಂತೆ ಜರಿದು

ದಿಕ್ಕು ದಿಕ್ಕಿನಲ್ಲಿ ಪಲಾಯನರಾಗೆ

ತ್ಯಕುತ ಲಜ್ಜೆಯಿಂದ ಹತವಾಶೇಷ್ಯ

ಸಾಕುಂಠಿತವಾದ ಬಲವೀರ್ಯನು ಮೇರು

ಶಿಖರವೆತ್ತುವನೆಂಬೊ ಸಾಹಸದಿಂದಲಿ

ವಿಕಟ ಮತಿಯುಕ್ತ ದುರುಳರು ರೋಷದಲಿ ಕು-

ಯುಕುತಿಗಳಿಂದಲಿ ಸಂಚರಿಸುತ ಬರಲು

ಲಕುಮಿಪತಿಯ ನೇಮ ತಿಳಿದ ಪ್ರೌಢ ನೀನು

ಈ ಖಂಡದಿ ಬಂದು ದ್ವಿಜಜನ್ಮವ ಧರಿಸಿ

ಪ್ರಖ್ಯಾತವಾದ ನ್ಯಾಯಾಮೃತವನ್ನು

ತರ್ಕ ತಾಂಡವ ಚಂದ್ರಿಕ ಪರಿಮಳ ಮೊದಲಾದ

ಮಿಕ್ಕಾದ ಗ್ರಂಥವೆಂತೆಂಬ ವಜ್ರದಲಿ ದು-

ರುಕುತಿಗಳೆಂಬಂಥ ಗಿರಿಗಳ ಛೇದಿಸಿ

ಈ ಕುಂಭಿಣಿ ಮಧ್ಯ ಪ್ರತಿಯಿಲ್ಲದೆ ಮೆರೆದೆ

ಭಕುತಾರಾಗ್ರೇಸರನೆ ಭೂಮಿ ವಿಬುಧರ ಪ್ರೀಯಾ

ನಖಶಿಖ ಪರಿಪೂರ್ಣ ಗುರುವಿಜಯವಿಠಲ ನಿಮ್ಮ

ಭಕುತಿಗೆ ವಶನಾಗಿ ಇತ್ತಿಹ ಕೀರ್ತಿಯನು 2

ತ್ರಿವಿಡಿತಾಳ

ಕಲಿಯುಗದಿ ಜನರು ಕಲಿ ಕಲ್ಮಷದಿಂದ

ಬಲವಂತವಾದ ತ್ರಿವಿಧ ತಾಪಗಳನು

ವಿಲಯಗೈಸುವ ಉಪಾಯವನರಿಯದೆ

ಮಲಯುಕ್ತವಾದ ಭವಶರಧಿಯಲ್ಲಿ

ನೆಲೆಯಾಗಿ ಮಗ್ನರಾಗಿ ನಿವೃತ್ತಿ ವತ್ರ್ಮಾವನ್ನು

ತಿಳಿಯದಲೆ ದುಃಖ ಬಡುವ ಸುಜನಾ-

ವಳಿಗೆ ತಾರಕನಾಗಿ ಈ ನದಿಯ ತೀರದಲ್ಲಿ

ನಿಲಯವಲ್ಲದೆ ನಿನಗೆ ಅನ್ಯ ಕೃತ್ಯಗಳಿಲ್ಲ

ನಳಿನಸಂಭವ ಜನಕ ಗುರುವಿಜಯವಿಠಲ ನಿನಗೆ

ಒಲಿದಿಪ್ಪಾಧಿಕಧಿಕವಾಗಿ ಬಿಡದೆ 3

ಅಟ್ಟತಾಳ

ಸೂಚನೆ ಮಾಡಿದ ಸೊಬಗಿನ ತೆರದಂತೆ

ಯೋಚನೆ ಯಾತಕ್ಕೆನ್ನನು ಉದ್ಧರಿಪುದಕ್ಕೆ

ಉಚ್ಚ ಜ್ಞಾನಾನಂದ ಬಲವೀರ್ಯನು ನೀನು

ನೀಚವಾದ ದೇಹ ಧಾರಣೆಯನು ಮಾಡಿ ಅ-

ನೂಚಿತವಾಗಿದ್ದ ಕಾಮ ಕ್ರೋಧಂಗಳು

ಆಚರಣೆಯ ಮಾಳ್ಪ ಅಧಮನಾದವ ನಾನು

ಸೂಚರಿತ್ರವಾದ ಶುಚಿಯಾದ ಮನುಜಂಗೆ

ನೀಚ ಅಶುಚಿಯಾದ ನರನು ಅಧಿಕನೆಂದು

ಭೂ ಚಕ್ರದಲಿ ಅವರ ದೇಹ ತೆತ್ತವನಾಗಿ

ಆಚರಿಸಿದೆ ಬಲು ಹೀನ ಕೃತ್ಯಂಗಳು

ಸೂಚನೆ ಮಾಡಿದ್ದು ಸೊಬಗು ನೋಡದಲೆ

ಯೋಚನೆ ಮಾಡಿದ್ದು ಸಾರ್ಥಕ ಮಾಳ್ಪದು

ಮೋಚನೆ ಮಾಡುವುದು ಭವ ಬಂಧದಲಿಂದ

ಶ್ರೀ ಚಕ್ರಪಾಣಿ ಗುರುವಿಜಯವಿಠಲರೇಯನ

ಯೋಚನೆ ಮಾಡುವ ಯೋಗವೆ ಬೋಧಿಸು 4

ಆದಿತಾಳ

ಪರಿಶುದ್ಧವಾದ ನಿನ್ನ ಭಕುತಿಗೆ ವಶನಾಗಿ

ಹರಿ ತನ್ನ ಪರಿವಾರ ಸಮೇತನಾಗಿ ನಿಂದು

ಮೊರೆ ಹೊಕ್ಕ ಜನರಿಗೆ ಪರಿಪೂರ್ಣ ಸುಖವಿತ್ತು

ಪರಿ ಪರಿ ಕೀರ್ತಿಗಳು ತಂದೀವ ನಿಮಗೆಂದು

ಪರಮಾಪ್ತನಾಗಿ ತವಪಾದ ಸಾರಿದೆನು

ದೂರ ನೋಡದಲೆ ಕರುಣ ಮಾಡಿ ವೇಗ

ಸುರರಿತ್ತ ಶಾಪದಿಂದ ಕಡಿಗೆ ಮಾಡಿ ಎನ್ನ ಹೃ-

ತ್ಸರಸಿಜದಲ್ಲಿ ಹರಿ ಪೊಳೆವಂತೆ ಮಾಡುವದು

ಪರಿಪೂರ್ಣ ಕೃಪಾನಿಧೆ ಗುರುವಿಜಯವಿಠಲನ್ನ

ಶರಣರ ಅಭಿಮಾನಿ ಔದಾರ್ಯ ಗುಣಮಣಿ 5

ಜತೆ

ಗುರುಕುಲ ತಿಲಕನೆ ಗುರು ರಾಘವೇಂದ್ರಾಖ್ಯ

ಸುರ ಕಲ್ಪತರು ಗುರುವಿಜಯವಿಠಲ ಪ್ರೀಯಾ

***