ಇದೇ ಹಾದಿ ನೀ ಹಿಡಿ ಹಿಡಿ ನಿ-
ನ್ನೆದುರಿಗೆ ವೈಕುಂಠ ನಡಿ ನಡಿ ||ಪ||
ಎದುರಿಗೆ ಕಾಂಬುವುದೇ ಮಾರುತಿ ಗುಡಿ
ಬಲಕ್ಕ ಮಾರಿ ಮಾಡಿ ಕುದುರೆ ಹೊಡಿ ||ಅಪ||
ಹಗರಿಹಳ್ಳದ ಮ್ಯಾಲ ಕಳ್ಳರೈದಾರು ಮಂದಿ
ಸುಳ್ಳು ಹೇಳಿ ತಪ್ಪಿಸ್ಯಾರೋ ಹಾದಿ
ಬಲ್ಲವರ ಸಂಗಡ ಸಂಗವ ಮಾಡುತ
ಹಳ್ಳ ದಾಟಿದರೆ ನೀ ಪಾರಾದಿ ||೧||
ಆನೆ ಆಡುತಾವೆ ಏಳೆಂಟು
ನಿನಗ್ ಅಡ್ಡ ಬರುತಾವೆ ಮುಗ್ಗಟ್ಟು
ಏನು ಹೇಳಲಿ ನಾ ತಿಳಿದಷ್ಟು
ನಿನ್ನ ಮನದಾಗ ಇರಲಿ ಈ ಗುಟ್ಟು ||೨||
ಎಂಟು ದಳದ ಕಮಲದ ಒಳಗ ಹದಿ-
ನೆಂಟು ಆಡುತಾವ ತಿಳಿಬ್ಯಾಗ
ಗಂಟೆ ಹೊಡಿ ನಿನ್ನ ಪುರದಾಗ ವೆಂ-
ಕಟೇಶ ವಿಠ್ಠಲ ಕಾಂಬುವ ನಿನಗ ||೩|
***