Audio by Mrs. Nandini Sripad
( ಜಯಾ ಸಂಕರ್ಷಣನ ಪುತ್ರನಾದ ಸೂತ್ರನಾಮಕ ವಾಯುದೇವರು ತ್ರಿಲೋಕದ ಗುರುವು. ಹನುಮನೆಂಬುದು ಜ್ಞಾನಕ್ಕೆ ಹೆಸರು. ಹನುಮನನ್ನು ನೆನೆದರೆ ಸರ್ವಕಾರ್ಯವೂ ಶುದ್ಧ , ಸಿದ್ಧ. ಭೀಮ ಮಧ್ವಾವತಾರಗಳನ್ನು ಸಂಗ್ರಹವಾಗಿ ನಿರೂಪಿಸುತ್ತ , ದಾಸರಾಯರು ಈತನನ್ನು ಪರಮಾತ್ಮನ ಪ್ರೇಮದ ದಾಸ ಎಂದಿದ್ದಾರೆ .)
ರಾಗ ಭೈರವಿ
ಧ್ರುವತಾಳ
ಧಾತ್ರಿತ್ರಯಕೆ ಗುರು ಸೂತ್ರ ನಾಮಕ ವಾಯು -
ಪುತ್ರನು ಜಯ ಸಂಕರುಷಣ ದೇವಗೆ
ನೇತ್ರ ತ್ರಯಾದಿಗಳು ಪರಮ ಶಿಷ್ಯರು ಈತಗೆ
ಸುತ್ರಾಮ ವಿಭುದರು ದನುಜ ಬಲ ಒಂದಾಗಿ
ಮಿತ್ರ ಭಾವದಲಿ ಮಂದರ ತಂದು ಮರ್ದಿಸಲು
ಘಾತ್ರವಾದ ಮಹ ಹಾಲಾ ಹಾಲ ಉದುಭವಿಸೆ
ಗಾತ್ರವನು ಬಚ್ಚಿಟ್ಟು ದಾನವಮರರೋಡೆ
ಚಿತ್ರವೇಗದಲಿ ಶ್ರೀಹರಿ ಚರಣಾನುಗ್ರಹ
ಪಾತ್ರವೆಂದೆನಿಸಿ ಮಂಗಳವಾದ ತಪನೆಯ
ಪಾತ್ರಿಯೊಳಗೆ ಕಾಳಕೂಟವೆ ಭುಂಜಿಸಿ
ಮಾತ್ರದಲ್ಲಿ ತೇಗಿದನು ಜೀರ್ಣ ಮಾಡಿಕೊಂಡು
ಚಿತ್ರ ಚಾರಿತ್ರ ಅಚ್ಯುತ ವಿಜಯವಿಠ್ಠಲನ್ನ
ಸ್ತೋತ್ರನು ಭಾರತಿ ಕಳತ್ರ ಶುಚಿಮಿತ್ರ ॥ 1 ॥
ಮಟ್ಟತಾಳ
ಪಶುಪತಿ ಮೂರೂರ ಅಸುರರ ಗೆಲಪೋಗೆ
ಅಸಮ ಸೂತನು ಸರಸಿಜಸಂಭವನು ರಾ -
ಜಿಸುವ ಸುವಾಸು ಮೇರು ಧನಸು ನಾರಾಯಣ
ಅಸಿ ಮಾರ್ಗಣನು ತ್ರಿದಶ ಬಲರು ವೇದ
ಎಸೆವ ವಾಜಿಗಳು ಸಾಹಸಿಗನು ತಾನಾಗಿ
ವಶದಲ್ಲಿರುತಿರೆ ಅಸುರಾರಿ ಗೆಲಿಸೆ
ಅಸಹಾಯ ಶೂರ ಹನುಮಾ ಬಿಸಿನಿಧಿಗೆ ಹಾರಿ
ದಶಶಿರನ ಭಂಜಿಸಿ ನಗರವ ಉರುಪಿ
ಅಸುರುಹ ಕೋಟಿಲಿಂಗ ಅಸಮ ವಿಜಯವಿಠ್ಠಲ
ಸದನನ್ನ ನಾಮ ರಸವಾಗುಂಬೊ ಪರಶುಪಗಿಂದಧಿಕ ॥ 2 ॥
ರೂಪಕತಾಳ
ಮುಂದೆ ಈತನು ಬ್ರಹ್ಮಾ "ವಾಯುರ್ವೈ ಬ್ರಹ್ಮಾ"
ಎಂದೆಂಬೊ ನಿಗಮಾರ್ಥವ ಪೇಳುತಲಿವಕೊ
ಸಂದೇಹ ಸಲ್ಲದು ತದ್ವೇಷವ ಮರೆದು
ಪೊಂದಿ ವೈಷ್ಣವರಾಗಿ ವಾತನ್ನ ಪಾದ -
ವಂದಿಸಿ ಪಾಪ ವಿಮುಕ್ತರಾಗುವದು
ತಂದೆ ತಾಯಿ ಮತ್ತೆ ಬಂಧು ಬಳಗ ಗುರು -
ವೆಂದರೆ ಇವರೇ ನಮಗೆ ಸರ್ವರಿಗೇ
ಮಂದಮಾರ್ಗವ ಬಿಡು ಮನವೀತನಲ್ಲಿಡು
ಸ್ಕಂದನಾಮ ಸಿರಿ ವಿಜಯವಿಠ್ಠಲನ್ನ
ದ್ವಂದ್ವಪಾದ ತೋರಿ ಸಾಂದ್ರ ಸುಖವೀವ ॥ 3 ॥
ಝಂಪಿತಾಳ
ಹನುಮನ ನಂಬಿದರೆ ಸುಗ್ರೀವನು ಗೆದ್ದ
ಹನುಮನ ನಂಬಿದರೆ ವಿಭೀಷಣ ಪ್ರಸಿದ್ಧ
ಹನುಮನ ನಂಬಿದರೆ ಸರ್ವ ಕಾರ್ಯವೆ ಬದ್ಧ
ಹನುಮನ ನಂಬದವ ಪಾಪದಲಿ ಬಿದ್ದ
ಹನುಮ ಹನುಮನೆಂಬೋದು ಜ್ಞಾನಕ್ಕೆ ಶಬ್ದ
ಹನುಮನೆ ಮಹತ್ತತ್ವಕ್ಕಭಿಮಾನಿಯೆಸಿದ
ಹನುಮಗೆ ವನಜಸಂಭವಗೆ ಅಭೇದ
ಮನೋಜೀವ ವಿಜಯವಿಠ್ಠಲನಲ್ಲಿ ಇದ್ದ ॥ 4 ॥
ತ್ರಿವಿಡಿತಾಳ
ಖಗನು ಕಲಶವ ತಂದು ಜಗದೊಳು ಪೆಸರಾದ
ಗಗನಾಂಗಣದಲಿ ಸಂಜೀವ ನಗವ -
ಬಗದು ತೃಣವ ಮಾಡಿ ಎಗರಿಸಿಕೊಂಡು ಎಳೆ -
ನಗಿಯಿಂದದಾಣೆಕಲ್ಲಂತೆ ಹಾರಿಸುತ್ತ
ಹಗೆಯಿಂದ ಮಡಿದ ಕಪಿಗಳನೆಬ್ಬಿಸಿ ಮೂರು
ಜಗದಪತಿಗೆ ಸೇವೆ ಅರ್ಪಿಸಿದನು
ಜಗಸೇತುವೆ ನಾಮ ವಿಜಯವಿಠ್ಠಲ ಬಲ್ಲ
ಮಿಗಿಲಾರು ಹನುಮಗೆ ಯುಗಯುಗದೊಳಗೆ ॥ 5 ॥
ಅಟ್ಟತಾಳ
ರಣದೊಳು ಫಣಿಪನ್ನ ಅವತಾರವಾದ ಲ -
ಕ್ಷ್ಮಣನು ಬಿದ್ದಾಗ ಮೂಲರೂಪ ಸ್ಮರಿಸಿರೆ
ಗಣನೆಯಿಲ್ಲದೆ ಒಂದು ಕರದಲ್ಲಿ ಎತ್ತಿ ರಾ -
ವಣನು ಸೋಜಿಗ ಪೊಂದಿ ಹನುಮನ ಪೊಗಳಿದಾ
ಎಣೆಯಾರು ಈ ಹನುಮಗೆ ಸುರಾಸುರ
ಗಣದೊಳು ವಿಕ್ರಮಂಗೆ ನಿಜನಾಮ
ರಣಪ್ರಿಯ ವಿಜಯವಿಠ್ಠಲ ದಾಸರ ಪ್ರೇಮಗೆ
ರಣದೊಳು ಫಣಿಪನಾದಾ ॥ 6 ॥
ಆದಿತಾಳ
ಭೀಮನಾದ ಹಿಡಿಂಬಾದಿ ಆ ಮಾಗಧನ ಸೀಳಿದ
ಭೂಮಿಯನೀಯೆನೆಂಬೊ ನೃಪನ ಯಮಪುರಿಗೆ ಕಳುಹಿದ
ಕಾಮನಯ್ಯನ ಪ್ರೀತಿ ಬಡಿಸಿ ತಾಮಸರ ಪರಿಹರಿಸಿದ
ಶ್ರೀಮದಾಚಾರ್ಯರಾಗಿ ಕುಮತಗಳ ದಹಿಸಿದ
ಆ ಮಹಾತ್ತತ್ವದ ಉರಳಿ ಹರಹಿ ವೈಷ್ಣವರ ಉದ್ಧರಿಸಿದ
ಕಾಮನಾಮ ವಿಜಯವಿಠ್ಠಲನ ಈ ಮಹಿಯೊಳಗೆ ಮೆರೆಸಿದ ॥ 7 ॥
ಜತೆ
ವನಜಜಾಂಡಗಳೆಲ್ಲ ದಿನದಿನ ಪಾಲಿಪ
ಧನುರ್ಧರ ವಿಜಯವಿಠ್ಠಲನ ಪ್ರೇಮದ ದಾಸಾ ॥
**********