Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ ಅವರೋಹಣ ಗುಣ ತಾರತಮ್ಯ ಸುಳಾದಿ
ರಾಗ : ಕಲ್ಯಾಣಿ ಧ್ರುವತಾಳ
ತ್ರಿಜಗ ವಂದಿತ ತ್ರಿಗುಣ ರಹಿತಾ ಲಕುಮಿನಾಥಾ
ಅಜವಾತ ತಾತಾ ಅಂಡಜ ರಾಜಾ ವರೂಥಾ
ಭುಜಗ ತಲಪನೀತಾ ಭುಜಗ ಭೂಷಿತ ದಾತಾ
ಭುಜಗೋತ್ತಮ ಖ್ಯಾತಾ ವಿಜಯವಿಠ್ಠಲ ಪ್ರೀತಾ
ಸುಜನರ ಮನೋರಥಾ ನಿಜ ದೈವತಜ್ಞ ॥೧॥
ಮಟ್ಟತಾಳ
ಅಶೇಷ ದೋಷ ದೂರ ಗುಣ ಪರಿಪೂರ್ಣ
ಅಶೇಷ ಅವತಾರ ಅಗಣಿತ ವರ್ನ
ಅಶೇಷವಾನಂದ ಅದ್ಭುತ ಘನ್ನ
ಸುಷೇಣನಾಮಾ ವಿಜಯವಿಠ್ಠಲನು
ಈಶ ಬೊಮ್ಮಾದ್ಯರಿಗೆ ವಿಶೇಷ ಮಹಿಮಾ ॥೨॥
ರೂಪಕತಾಳ
ಇಂದಿರೇ ತರುವಾಯ ವಿಧಿಯು ಮಾರುತರು
ಒಂದು ಕೋಟಿ ಗುಣದಿಂದ ಕಡಿಮೆ ಅವ-
ರಿಂದಲವರ ಸ್ತ್ರೀಯರು ಒಂದು ನೂರು ಗುಣ-
ದಿಂದಲಿ ಅಧಮರು ಎಂದು ತಿಳಿವದ-
ಲ್ಲಿಂದ ಗರುಡ ಶೇಷ ಇಂದುಧರರಿವರು ಮೂವರು
ಒಂದು ಹತ್ತುಗುಣಯೆಂದು ಕಡಿಮೆ ಯೆಣಿಸು
ದ್ವಂದ್ವರೊಳಗೆ ಮಿತ್ರವಿಂದಾದಿಗಳುಂಟು
ಇಂದಿರಾಪತಿ ವಿಷ್ಣು ವಿಜಯವಿಠ್ಠಲ ನಾರು-
ಮಂದಿ ಸ್ತೀಯರು ಎಂದು ವಂದಿಸುವದು ಬಿಡದೆ ॥೩॥
ಝಂಪೆತಾಳ
ಸುರಪ ಕಾಮರು ಸಮ ಸೌಪರ್ಣ್ಯಾದಿಯರು ನೋಡೆ
ಎರಡೈದು ಗುಣಕೆ ನ್ಯೂನವೆಂದು ತಿಳಿವುದು
ತರುವಾಯ ಅಹಂಕಾರ ಪ್ರಾಣ ನೆಂಬುವನು
ತ್ವರಿತದಿ ಈರೈದು ಗುಣಕಡಿಮೆಯೆನ್ನಿ
ಸ್ಥಿರವಹುದು ಅನಿರುದ್ದರತಿ ಸ್ವಾಯಂಭುವ ಮನು
ಗುರುದಕ್ಷಶಚಿಗಳಿವರಾರು ಮಂದಿ ಸಮಾನ
ಮರುತ ಅಹಂಕಾರಗೆ ಹತ್ತುಗುಣಕೆ ನೀಚಾ-
ರರಿವುದು ಪ್ರವಹ ಮರುತನೆಂಬುವನು
ವರ ಅನಿರುದ್ಧಗಿಂತ ಐದು ಗುಣಕಧಮನೀ-
ಪರಿ ಇದು ಯಮ ಮಾನವೀ ಚಂದ್ರ ಸೂರ್ಯರು ಸಮ-
ಸರಿ ಪ್ರವಹನಿಗಿಂತ ಎರಡು ಗುಣಕೆ ನೀಚಾ
ವರುಣ ದೇವರು ಧರ್ಮಾದಿಗಳ ದೆಶೆಯಿಂದಲಿ
ಅರೆವೊಂದು ಗುಣ ಕಡಿಮೆ ಚೆನ್ನಾಗಿ ತಿಳಿವದು
ಸುರ ಮುನಿ ನಾರದನು ಅಪಂತೆ ಎಣಿಸಲು
ತರುವಾಯ ಇದರಂತೆ ಎಣಿಸುವುದು ಜ್ಞಾನಜಗಳು
ಉರಗಾದ್ರಿ ವಿಜಯವಿಠ್ಠಲನ್ನ ದಯದಿಂದ ವಿ-
ಸ್ತರಿಸುವೆನು ಕಾಮ ಇಂದ್ರಗೆ ಸ್ವಲ್ಪು ನೀಚಾ ॥೪॥
ತ್ರಿವಿಡಿತಾಳ
ಋಷಿಪುಂಗವ ಭೃಗು ಅನಲಕುಲೇಂದ್ರನು
ಪ್ರಸೂತಿ ಮೂವರು ವಿಷಮರಲ್ಲ
ರಸಾಧಿಪತಿಯ ನೋಡೆ ಪಾದ ಗುಣಕೆ ನ್ಯೂನರು
ಉಸರುವೆ ಕೌಶಿಕಾ ವಿಧಿಯಸುತರಾ
ಪೆಸರಾದ ಮರೀಚಿ ಅತ್ರಿ ಮುನಿಶಾಂಗಿ-
ರಸ ಪುಲಹ ಕೃತು ವಸಿಷ್ಠಾನು ರಂ-
ಜಿಸಿ ವೈವಸ್ವತ ಮನು ಇಂತೆಂಟೊಂದು ಜನಾ
ಮಿಸುಕದ ಸಮಾನರು ನಿಜ ಭೃಗ್ವಾದಿಗಳ
ದೆಸೆಯಿಂದ ಸ್ವಲ್ಪ ನೀಚರು ಗುಣದಲಿ ಮುಂದೆ
ಬಿಸಜ ಮಾತ್ರ ತಾರೆ ನಿಋಋತಿ ಪ್ರಾವಹಿ
ಶ್ವಸನನ ಮಡದಿ ಸ್ವಾಹಾ ನಾಲ್ವರು ಸಮಾನರು
ಋಷಿ ಮರೀಚ್ಯಾದ್ಯರಿಗೆ ದ್ವೌಗುಣಕಧಮರು
ಶಶಿರ ನಾಮಾ ಸಿರಿ ವಿಜಯವಿಠ್ಠಲನ್ನ
ಬಿಸಿಜಪಾದಕ್ಕೆ ನಮಿಸುವೆ ಕುಶಲರೆನ್ನಿ ॥೫॥
ಅಟ್ಟತಾಳ
ವಿಮಲ ವಿಷ್ವಕ್ಸೇನ ನಾಸತ್ಯ ಗಣಪತಿ
ಅಮಲ ಧನೇಶ್ವರ ಮರುತುಗಳು ಅ-
ರ್ಯಮರು ರುದ್ರಕ ವಸು ವಿಶ್ವೇದೇವತಿಗಳೂ
ಅಮಮ ಗಗನ ಧರೆ ಪಿತರಾದ್ಯರು ಸರಿ-
ಸಮರೆಂದು ಗುಣಿಪುದು ಇದರೊಳು ಉಕ್ತ
ಕ್ರಮ ತಾರತಮ್ಯವು ನಮಿಸುವೆ ಚ್ಯವನಾದಿ ಋಷಿ ಪೃಥೂ-
ತ್ತಮ ಕಾರ್ತವೀರ್ಯ ಶಶಿಬಿಂದ್ವಾದಿ ಸಾರ್ವ-
ಭೌಮರು ಸಮಾನರು ಅಶ್ವಿನ್ಯಾದ್ಯರ
ಕ್ರಮದಲ್ಲಿ ಇವರು ಕಿಂಚಿತು ಗುಣನ್ಯೂನರು
ಅಮರ ತಟನಿ ಪರ್ಜನ್ಯ ಸಂಙ್ಞಳು
ಹಿಮಕರನಂಗನೆ ಶಾಮಲೆ ವಿರಾಟರು
ಸಮರು ಗಣಪತಿಗಿಂತ ದ್ವಿಗುಣ ಹೀನ
ಸುಮನಸರ ಮುಖನಂಗನೆ ಸ್ವಹಾದೇವಿ
ಶಾಮಲಾದ್ಯರ ನೋಡೆ ಕಿಂಚಿತು ಗುಣ ಹೀನ
ಹಿಮಕರ ನಂದನ ಅಗ್ನಿ ರಾಣಿಗೆ ಹೀನ
ಶಮದಮೆ ಉಷಾದೇವಿ ಬುಧಗಿಂತಲಿ ಕ-
ಡಿಮೆ ಎರಡು ಗುಣಾಶನಿ ಪುಷ್ಕರನೆಂಬೊ ಕ-
ರ್ದಮ ದೇವತಿ ಗಳಿಗಿಂತ ಆಜಾನಜರು
ಪ್ರಮೇಯದಿ ತಿಳಿವುದು ಶತಗುಣಕಧಮರು
ಪ್ರಮೋದನಾಮ ಶ್ರೀ ವಿಜಯವಿಠ್ಠಲನ್ನ
ನಮಿಸಿ ಇವರ ಅನುಕ್ರಮ ಗುಣ ಅರಿವುದು ॥೬॥
ಆದಿತಾಳ
ದೇವ ಗಂಧರ್ವರು ಕೆಲರು ಅಪ್ರತಿ ಋಷಿ ನೂರು
ಆ ಪೂರ್ವಶ್ಯಾದ್ಯಪ್ಸರ ಸ್ತ್ರೀಯರೆಣಿಸು ಕರ್ಮಪ
ದೇವತಿಗಳಿಗೆ ಊನರೆಂದು ಇತ್ತ ಗಂ-
ಧರ್ವಮಿಕ್ಕ ಮುನಿಗಳು ಆಜಾನಜರಿಗೆ
ಸಮವೆಂದು ತಿಳಿದೀಗ ಚಿರ ಪಿತೃಗಳ ಗು-
ಣಾವಳಿ ಅಜಾನಜರಿಗೆ ನೂರು ಮಡಿ ಕಡಿಮೆಂದು
ಭಾವಿಸೋದು ಪಿತರ ನೋಡೆ ಉಳಿದ ದೇವತಿಗಳು
ಯಾವತ್ತು ನೂರು ಮಡಿ ಹೀನರೆನ್ನಿ ಮನುಷ್ಯ ಗಂ-
ಧರ್ವರು ಅವರು ನೋಡಾ ನೀಚರು ನೂರು ಗುಣಕೆ
ಇವರ ನೋಡೆ ಕ್ಷಿತಿಪರು ಅವರಂತೆ ತಿಳಿವದು
ಭೂವಲ್ಲಭರ ನೋಡಾ ಮನಷ್ಯೋತ್ತಮರಿದೆ ಸಂಖ್ಯೆ
ಇವರಿಂದ ತಾರತಮ್ಯ ಉಂಟು ಪಶ್ವಾದಿಯ
ಜೀವರವರವರೊಳಗವಾಂತರ ತಾರತಮ್ಯ
ಕೋವಿದರು ನೋಡಿ ಪಶ್ವಾದಿ ಜೀವಿಗಳ ನೋಡೆ ವೃಕ್ಷ
ಸ್ಥಾವರ ಜಂಗಮ ನ್ಯೂನರು ಎಂದು ತಿಳಿದು ತೃಣ
ಜೀವರು ಕಡಿಮೆ ಇವರು ಸತ್ಯಾಸತ್ಯವೆಂದು ಅರಿದು
ಈ ವಿಚಾರದಲ್ಲಿ ನಡೆದು ಮುಕ್ತಿ ತರತಮ್ಯವೆಂದು
ಪಾವಮಾನೀ ಮತದಲ್ಲಿ ಪರಿಪೂರ್ಣ ಚಿತ್ತವಿಟ್ಟು
ಭಾವನಾಮ ವಿಜಯವಿಠ್ಠಲ ಜೀವಾಖಿಲ ಭಿನ್ನವೆಂದು
ಆವಾವ ವಾಕ್ಯದಲಿ ಸಿದ್ಧವೆಂದು ಭಜಿಸು ॥೭॥
ಜತೆ
ತಾರತಮ್ಯವೆ ತಿಳಿದು ನಡೆದಾ ವಿಶಿಷ್ಠರಿಗೆ
ಪಾರು ಮಾಡುವ ವತ್ಸಾ ವಿಜಯವಿಠ್ಠಲ ರೇಯಾ ॥೮॥
*****