Audio by Mrs. Nandini Sripad
ಧ್ರುವತಾಳ
ಋಣದಿಂದ ಕಡೆ ಮಾಡು ಘನ ಮಹಿಮ ಕೃಪೆಯಿಂದ
ಎನಗಾರು ಪೊರೆವರಾಧಾರವಿಲ್ಲ
ಘಣಿಯ ಮುಂದಾದರೂ ಭಯ ಬೀಳದಿರಲಾಪೆ
ಅನಳಗಂಜದೆ ನಿಂದಿರಲಿಬಹುದು
ಋಣಭಾರದ ಮುಂದೆ ಎದುರಿಸುವುದು ಶ್ರಮ
ತನುವನುಡುಗಿಸಿಕೊಂಡು ತಿರುಗಬೇಕು
ಋಣದ ಸೂತಕವು ಜನ್ಮ ಜನ್ಮಾಂತರಕ್ಕೆ
ತೊಲಗವು ಆವಾವ ಪರಿ ದುಡಿಯೆ
ಋಣದವನು ಪೆಣಕಿಂತಲಿ ಕನಿಷ್ಠ
ಅನಿಮಿಷರು ಪೇಳುವರು ಶ್ರುತಿಯಿಂದಲಿ
ಋಣ ಭಯಂಕರ ಭೀಮ ವಿಜಯ ವಿಠ್ಠಲರೇಯ
ಋಣ ವಿದ್ದವನು ಹೊಲಿಯನೆನಿಸುವನು ||1||
ಮಟ್ಟ ತಾಳ
ಜನನಿ ಜನಕ ಮತ್ತೆ ತನುಸಮ್ಮಂಧಿಗಳ
ಋಣ ಪೋಗುವದಕ್ಕೆ ತನುಜನಾದವ ಪೋಗಿ
ಘನಮಹಿಮ ಫಲ್ಗುಣಿ ಮಳಲು ಮೆಟ್ಟಿ
ಗುಣದಿಂದಲಿ ವಿಷ್ಣುವಿನ ಚರಣದಲಿ ಪಿಂಡವನಿಡಲವರ
ಋಣ ಮೋಚನವು, ಮನೋಭೀಷ್ಟ ಸಲ್ಲುವುದು
ಕನಕಾಂಗದ ನಾಮ ವಿಜಯ ವಿಠ್ಠಲ ಸ್ವಾಮಿ
ಪುನೀತನ ಮಾಡುವುದೀ ಋಣದಿಂದಲಿ ಎನ್ನ||2||
ತ್ರಿವಿಡಿ ತಾಳ
ಋಷಿಗಳ ಋಣ ಪೂರ್ವಾಶ್ರಮದಲ್ಲಿ ಪರಿಹಾರ ತ್ರಿ
ದಶಾಗಳ ಋಣ ಮೇಧಾದಿಗಳ ಮಾಡಿ
ಅಸು ಸಂಬಂಧಿಗಳ ಋಣ ಗೃಹಸ್ಥಾಶ್ರಮದಲ್ಲಿ
ಪುಶಿಯಲ್ಲ ತಿದ್ದಿ ಪೋಗುವುದೆ ಸಿದ್ಧ
ವಸುಧಿಯೆಲ್ಲ ತಿರುಗಿದರೆ ಪೋಗದಯ್ಯ
ಪಸುಪಾಲಾ ವಿಧೇಯಾತ್ಮ ವಿಜಯ ವಿಠ್ಠಲ ರಂಗ
ಬಸುರೊಳು ಪೋಗಲಿದು, ಬೆರಸದೆ ಬಿಡದಯ್ಯ ||3||
ಅಟ್ಟತಾಳ
ಕೊಂಡ ಋಣವನ್ನು ಕೊಡದಿದ್ದವಗಿನ್ನು
ಮಂಡಲದೊಳಗೆ ಶುಚಿಯಿಲ್ಲವೆಂಬೋರು
ಮಂಡೆ ಬೋಳಾಗಿ ಕಮಂಡಲವನ್ನೆ ಪಿಡಿದು
ಥಂಡ ಥಂಡದ ತಪ ಮಾಡಲೇನು
ಕಂಡ ಕಂಡಲ್ಲಿ ತಿರುಗಿ ಋಣಸ್ಥನ
ತೊಂಡನಾಗಿದ್ದು ದುಡಿಯಲಿಬೇಕು
ಕುಂಡಲಿಶಯನ ಶ್ರೀ ವಿಜಯ ವಿಠ್ಠಲರೇಯ
ದಂಡವಾಯಿತು ನಿನ್ನ ಕೊಂಡಾಡಿದ ಕೀರ್ತಿ ||4||
ಆದಿತಾಳ
ಋಣ ಶುದ್ಧನ ಮಾಡಿದರೆ ನಿನಗೆ ಎನಗೆ, ಮಾ-
ತಿನ ತೊಡರುಗಳುಂಟು ಮನಸಿಜನಯ್ಯ ಕೇಳು
ತನು ಶುಚಿಯಿಲ್ಲ ಸಾಧನಕೆ ಮೊದಲೆ ಸಲ್ಲಾ-
ರ್ಚನೆ ಮಾಡುವುದೆಂತೊ, ಋಣ ಪುತ್ರಗೆ
ನೆನೆದವರ ಭವ ಋಣ ಕಳೆವದರಿದಲ್ಲ
ಗುಣ ಪೂರ್ಣ ಸುವರ್ಣ ವಿಜಯ ವಿಠ್ಠಲ ನಿನಗೆ
ಮಣಿದು ದೈನ್ಯವ ಬಡುವೆ ಋಣ ಮುಕ್ತನ ಮಾಡುವುದು ||5||
ಜತೆ
ಋಣ ಪೋಗದಿರೆ ನಿನ್ನರ್ಚನೆಗೆ, ಧ್ಯಾನಕೆ ಸಲ್ಲೆ
ಅನಿರ್ದೆಶಾ ವಪುಷ ಶ್ರೀ ವಿಜಯ ವಿಠ್ಠಲರೇಯ ||6||
********