ಮಧ್ವಾಂತರ್ಯಾಮಿ ಶ್ರೀ ಗುರು ಬಿಂಬ ಕಾಯೊ ಪ.
ಹೃದ್ವನಜದಲಿ ನೆಲಸಿ ಆe್ಞÁನ ಹರಿಸಿ ಅ.ಪ.
ಕೋಟಿ ಜನ್ಮದ ಪುಣ್ಯ ಕೂಡಿಸಲು ದೊರಕುವುದೆ
ಸಾಟಿ ರಹಿತನೆ ನಿನ್ನ ಮುಖ ದರ್ಶನಾ
ಹಾಟಕೋದರ ಮುಖರು ಅರಿಯದಂತವನನ್ನು
ಕೋಟಲೆಯಭವ ಜನರು ಅರಿವದೆಂತಯ್ಯಾ 1
ತ್ರಿವಿಧ ಜೀವರ ತೆಗೆದು ಜನ್ಮದಲಿ ತೊಡಕಿಸೀ
ಅವನಿಯಲ್ಲಿಟ್ಟು ನೀ ಕರ್ಮ ಬಲೆ ಬೀಸಿ
ಪವನನೈಯ್ಯನೆ ನಿನ್ನ ಮಾಯ ಮೋಡವ ಕವಿಸಿ
ಭವಣಪಡಿಸಲು ಇನ್ನು ಬಿಡುಗಡೆಯದೆಂತೋ 2
ನೀನಾಗೆ ವಲಿದು ನಿನ್ನ ಭಕ್ತರನು ಕಾಯುತಿಯೊ
ಮಾನಾಭಿಮಾನದೊಡೆಯನೆ ಆರ್ತಪಾಲ
ಗಾನಲೋಲನೆ ನಿನ್ನ ಧ್ಯಾನ ಮೌನವನಿತ್ತು
ಮಾನಸದಿ ನಿನ್ನ ತೋರೊ ದೀನ ರಕ್ಷಕನೇ3
ಅಂಗುಟದಿ ಗಂಗೆಯನು ಪೆತ್ತ ಪಾವನಪಾದ
ಶೃಂಗಾರ ವಸನ ವಡ್ಯಾಣ್ಯನಡುವೂ
ಅಂಗನೆಯು ವಕ್ಷದಲಿ ಹಾರಪದಕಗಳುಲಿಯೆ
ಉಂಗುರದ ಬೆರಳು ಕಂಕಣ ಕಡಗ ಪಾಣೀ 4
ಕರ್ಣಕುಂಡಲ ಕಾಂತಿ ಮುಗುಳುನಗೆ ಕುಡಿನೋಟ
ರನ್ನ ತಿಲಕದ ಫಣಿಯ ಮುಂಗುರುಳ ಸೊಬಗೊ
ಸ್ವರ್ಣಕಾಂತಿಯ ತೇಜ ಕಡಗೋಲ ಕೈ ಸೊಬಗು
ಚನ್ನಗೊಪಾಲಕೃಷ್ಣವಿಠಲ ಉಡುಪೀಶಾ 5
****