ankita ತಿರುಮಲೇಶಹರಿವಿಠಲ
ರಾಗ: ವಸಂತ ತಾಳ: ಆದಿ
ಹಿಡಿಮನ ರಾಘವೇಂದ್ರರ ಚರಣ
ಕಡು ದುಃಖ ನಿವಾರಣವಾಗುವುದೀಕ್ಷಣ ಪ
ದಂಡ ಕಮಂಡಲ ಧರಿಸಿ ಕೊರಳೊಳು ತುಳಸಿ ಕೋ-
ದಂಡ ರಾಮನ ಹೃತ್ಕಮಲದಿ ಸ್ಥಾಪಿಸಿ
ತಂಡ ತಂಡದಿಂದಾಗಮಿಸುವ ಭಜಕರ ಪೋಷಿಸು-
ತ್ಹಿಂಡು ಅಘ ಕಳೆದ್ಹಂಬಲ ಸಲಿಪರ 1
ಫಾಲನೇತ್ರನ ಜಟೆಯಲಿ ಶೋಭಿಸುತಿರುವ
ಜಲಧಾರೆಯ ಜನಕನ ಸಂತತ ಭಜಿಪರ
ಮಲಿನರಿಗೆಟುಕದ ಮಹಿಮೆಯ ತೋರುವ
ಕಲಿಮಲ ಕಳೆಯುವ ಯತಿಕುಲ ತಿಲಕರ 2
ವರಹಜೆ ತೀರದಿ ದುರಿತವ ಕಳೆಯುತ
ವರ ಮಂತ್ರಾಲಯ ಕ್ಷೇತ್ರದಿ ಮೆರೆಯುವ
ತಿರುಮಲೇಶಹರಿವಿಠಲರಾಯನ ಶುಭ
ಪುರವನ್ನು ತೋರುವ ಕರುಣಿಗಳರಸರ 3
***