ankita ಲಕುಮೀಶ
ರಾಗ: [ಶಿವರಂಜಿನಿ] ತಾಳ: [ಆದಿ]
ಸುಧೀಂದ್ರಕಂದ ಛಂದದಿಂದ ಬಂದ ಬೃಂದಾವನದಿಂದ
ಬಂದಾ ಬೃಂದಾವನದಿಂದ ಪ
ಒಂದೇ ಮನದಿಂದ ವಂದಿಪ ಜನರಿಗಾ-
ನಂದವ ನೀಡಲು ನಂದನಂದನ ಪ್ರಿಯಾ 1
ಇಂದಿರೆಯರಸ ಗೋವಿಂದನ ಒಲಿಸುತ
ಗಂಧ ತುಲಸಿ ಮಾಲದಿಂದೊಪ್ಪುತಲಿ ಗುರು 2
ಪರಿಮಳ ರಚಿಸುತ ಧರೆಯೊಳು ಬೀರುತ
ಹರುಷದಿ ಸುಜನರ ಪೊರೆಯುತಲಿ ಯತಿ 3
ಪರಮಪಾವನಚರಿತ ದುರಿತಗಳ ತರಿವಾತ
ವರಮಂತ್ರಗೃಹನಾಥ ಶ್ರೀ ರಾಘವೇಂದ್ರದಾತ 4
ಹಿಂದಕೆ ಪ್ರಹ್ಲಾದ ಎಂದೆನಿಸಿ ಪಿತಗೆ
ಸಿಂಧೂರವರದ ಮುಕುಂದಾನ ತೋರಿದ 5
ವ್ಯಾಸರಾಜನೆನಿಸಿ ಭೂಸುರರ ಪೋಷಿಸಿ
ಶ್ರೀಸುಧಾಮಸಖ ವಾಸುದೇವನ ಭಜಿಸಿ 6
ಸುಕುಮಾರ ಸುಂದರ ಲಕುಮೀಶ ದೇವನೆ
ಲೊಕಗಳಿಗೆಲ್ಲ ಏಕದೈವವೆನುತ 7
***