Showing posts with label ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ vijaya vittala. Show all posts
Showing posts with label ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ vijaya vittala. Show all posts

Wednesday 16 October 2019

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ ankita vijaya vittala

ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ
ಇಲ್ಲವೋ ಕಾಣೋ ಎಂದಿಗಾದರು ಮರುಳೆ

ಹುಲಿ ಇಲಿಯಾಗುವುದು ತೋಳ ಕೋಳ್ಯಾಗುವುದು |
ಕಲಿ ಬಂದು ಹಿತ್ತಲನ್ನೀಗ ಬಳಿವ
ಖಳ ಮಹಾಚೋರ ಚೊಚ್ಚಿಲಗೌಡಿ ಮಗನಾಹ
ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ||1||

ಕರಡಿ ಕರುವಾಗುವುದು ಉರಿ ಮಂಜು ಆಗುವುದು |
ಕರಿ ನಾಯಿಯಾಗುವುದು ಕಂಡವರಿಗೆ |
ಭರದಿಂದ ಸುರಿವ ಮಳೆ ನಿಲ್ಲೆನಲು ನಿಲ್ಲುವುದು |
ನರಹರಿಯ ನಾಮಗಳ ನಂಬಿ ಭಜಿಪರಿಗೆ ||2||

ಫಣಿ ಸರಿವೆಯಾಗುವುದು ದಣುವಾಗುತಿಹ ಮಾರ್ಗ |
ಕ್ಷಣದೊಳಗೆ ಪೋದಂತೆ ಕಾಣಿಸುವುದು |
ಘನ ಪಾಷಾಣಗಳು ತೃಣಸಮವು ಎನಿಸುವುವು |
ವನಜಾಕ್ಷನ ಕೃಪೆಯ ಪಡೆದ ದಾಸರಿಗೆ ||3||

ಕ್ಷುಧೆ ತೃಷೆಯಾಗುದು ಕ್ಷುದ್ರ ಸಂಗವಾಗದು |
ಪದೆಪದೆಗೆ ರೋಗಗಳು ಬೆನ್ನಟ್ಟವು |
ಉದಯಾಸ್ತಮಾನಗಳೆಂಬ ಭಯ ಸುಳಿಯದು |
ಪದಮನಾಭನ ಕೃಪೆಯ ಪಡೆದ ದಾಸರಿಗೆ ||4||

ಬಾರವು ಭಯಗಳು ಬಂದರೂ ನಿಲ್ಲವು |
ಹಾರಿ ಹೋಗುವುವು ದಶ ದಿಕ್ಕುಗಳಿಗೆ |
ಘೋರ ದುರಿತಾರಿ ಶ್ರೀ ವಿಜಯವಿಠ್ಠಲನಂಘ್ರಿ |
ಸೇರಿದ ಜನರಿಗೆ ಇನಿತು ಭಯವುಂಟೆ||5||
********

ವಿಜಯದಾಸ
ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ |
ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ

ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು |
ಕಲಿ ಬಂದು ಹಿತ್ತಿಲನ್ನೀಗ ಬಳಿವಾ ||
ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ |
ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1

ಕರಡಿ ಕರು ಆಗುವದು ಉರಿ ಮಂಜು ಆಗುವದು |
ಕರಿ ನಾಯಿ ಆಗುವದು ಕಂಡವರಿಗೆ ||
ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು |
ನರಹರಿಯ ನಾಮಗಳ ನಂಬಿ ಪಠಿಪರಿಗೆ 2

ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ
ಕ್ಷಣದೊಳಗೆ ಪೋದಂತೆ ಕಾಣಿಸುವದು ||
ಘನ ಪಾಷಾಣಗಳು ತೃಣ ಸಮವು ಯೆನಿಸುವವು
ವನಜಾಕ್ಷನ ಕೃಪೆಯ ಪಡದ ದಾಸರಿಗೆ 3

ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು |
ಪದೇ ಪದೆಗೆ ರೋಗಗಳು ಬೆನ್ನಟ್ಟವು ||
ಉದಯಾಸ್ತಮಾನವೆಂಬೋ ಭಯವು ಸುಳಿಯದು |
ಪದುಮನಾಭನ ಕೃಪೆಯ ಪಡೆದ ದಾಸರಿಗೆ4

ಬಾರವು ಭಯಗಳು ಬಂದರು ನಿಲ್ಲವು |
ಹಾರಿ ಹೋಗುವವು ದಶದಿಶಗಳಿಗೆ ||
ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ |

ಸೇರಿದಾ ಜನರಿಗೆ ಇನಿತಾಹುದುಂಟೇ 5
********