ಶ್ರೀ ವಿಜಯದಾಸಾರ್ಯ ವಿರಚಿತ
ಪ್ರಮೇಯ ತೀರ್ಥಾಭಿಮಾನಿ ದೇವತೆಗಳ ವಿಚಾರ ಸುಳಾದಿ
ರಾಗ ನಾಟಿ
ಧ್ರುವತಾಳ
ತಿಮ್ಮಯ್ಯಾ ನಿನ್ನ ಪಾದವ ವಮ್ಮೈಸಿದೆನೊ ನಾನು
ಸುಮ್ಮನಿರದಿರು ರಮ್ಮೆಯರಸಾ
ನಮ್ಮದು ಎಂದೆಂದು ಈ ಮನದಲಿ ಬಲು
ಹಮ್ಮಿಲಿ ತಿರಿಗಿದೆ ಹಿಮ್ಮೆಟ್ಟಿದೆ
ಹೆಮ್ಮನೆ ಹಿತ್ತಲಿ ಹೆಮ್ಮಕ್ಕಳ ಹೊನ್ನು
ಹಮ್ಮೆಣಿವುಳ ಸಂಭ್ರಮದಲ್ಲಿ
ಒಮ್ಯಾದರೂ ನಿನ್ನ ನೆಮ್ಮದೆ ಆವಾಗ
ವಿಮ್ಮಡಿ ದುಷ್ಕರ್ಮ ರಮ್ಮಿಸಿದೆ
ಉಮ್ಮಡಿಕೆಯಿಂದ ಹಮ್ಮತಿಯೊಳಗಿದ್ದು
ಗಿಮ್ಮನೆ ಸುತ್ತಿದೆ ಮಮ್ಮಾಡಿಯಲಿ
ನಮ್ಮಯ್ಯಾ ಬ್ರಾಹ್ಮಣಪ್ರಿಯ ವಿಜಯವಿಠಲ
ದಮ್ಮಯಾ ನಮಿಸುವೆ ಎಮ್ಮನುದ್ಧರಿಸೊ ॥ 1 ॥
ಮಟ್ಟತಾಳ
ನಿನ್ನ ಚರಣ ಮೋಹನ್ನ ಚರಣ
ನಿನ್ನ ಚರಣ ಸಂಪನ್ನ ಚರಣ
ನಿನ್ನ ಚರಣ ಬಲವಂತ ಚರಣ
ನಿನ್ನ ಚರಣ ಪ್ರಸನ್ನ ಚರಣ
ನಿನ್ನ ಚರಣ ರತುನ್ನ ಚರಣ
ನಿನ್ನ ಚರಣ ಪಾವನ್ನ ಚರಣ -
ವನ್ನು ಧ್ಯಾನಿಸಲು ಎನ್ನಘಪಾಶ ಕಣ್ಣಿನ ಕುಣಿಕೆ
ತನ್ನಿಂದಲಿ ತಾನೆ ಭಿನ್ನವಾಗುವದು
ಅನಂತರೂಪ ವಿಜಯವಿಠಲ
ಕಣ್ಣಿಗೆ ತೋರೊ ನಿನ್ನ ಚರಣ ॥ 2 ॥
ತ್ರಿವಿಡಿತಾಳ
ಜಗದೊಳಗುಳ್ಳ ನದಿಗಳು ಕ್ಷೇತ್ರಂಗಳು
ಗಗನ ನಾಗಲೋಕದಲ್ಲಿದ್ದವೊ
ಅಗಣಿತ ಮಹಿಮ ನಿನ್ನುಗರಾಶ್ರಯವ ತೊ -
ಲಗದೆ ಮಾಡಿಕೊಂಡಿಪ್ಪದೆಂದು
ನಿಗಮ ತತಿಗಳು ಪೊಗಳುತಲಿವೆ ಹಿಂ -
ದೆಗಿಯದೆ ಮನ ಬಲು ಉಬ್ಬಿನಲ್ಲಿ
ಭಾಗಘ್ನನಾಮ ಸಿರಿ ವಿಜಯವಿಠಲ ನಾನು
ಮಿಗಿಲಾವದು ಕಾಣೆ ನಿನ್ನ ಪಾದವಲ್ಲದೆ ॥ 3 ॥
ಅಟ್ಟತಾಳ
ಮೂರುವರೆ ಕೋಟಿ ತೀರಥದಲ್ಲಿ ಪೋಗೆ
ವಾರವಾರ ಒಂದೆ ಸಾರಿಗೆಯಲಿ ಮುನ್ನಾರು ಕಲ್ಪದಲ್ಲಿ
ಮೀರದೆ ಸ್ನಾನಾದಿ ಪೂರೈಸಿ ಮಾಡಲು
ಧಾರುಣಿ ಸುರನಾಗಿ ನಾರಾಯಣ ಶೃಂ -
ಗಾರದ ಪಾದವ ಧಾರಣೆಯಿಂದಲಿ ಸಾರಿದ ಮಾತುರ
ತೀರಥಗಳಿಗೀಗ ಪಾರ ಫಲವುಂಟು
ಆರಾದರು ಸಾರಲಾಪರೊ ಶ್ರೀ -
ನಾರಾಯಣನ ವಿಸ್ತಾರ ಮಂಗಳವಾರ್ತಿ
ಕೀರುತಿ ಸತ್ಕೀರ್ತಿ ವಿಜಯವಿಠಲ ನಿನ್ನ
ಶೇರಿದೆ ಎನ್ನಯ ಭಾರ ವಿನ್ನಾರದು ॥ 4 ॥
ಆದಿತಾಳ
ಅಚ್ಚುತ ನಿನ್ನ ಚರಣ ನಿಚ್ಚ ಬಿಡದೆ ಸ್ಮರಣೆ ಮಾಡೆ
ಬೆಚ್ಚಿಸಿದ್ದ ಪಾಪಗಳು ಕೊಚ್ಚಿ ಹರಿದು ಪೋಗುವವು
ಅಚ್ಚಗತಿಗೆ ನೆನದಾಗ ನಿಚ್ಚಣಿಕೆ ಎನಿಸುವದು
ಅಚ್ಚುತ ಅಚ್ಚುತ ನಿನ್ನ ನೆಚ್ಚದಾಗದೆ ಬರಿದೆ ಪೋಪೆ
ಅಚ್ಚ ದೈವ ವಿಜಯವಿಠಲ ಬಚ್ಚಲಗಲ್ಲನು ಮಾಡಿ
ಮೆಚ್ಚಿನಿಂದ ನಿನ್ನ ನಿತ್ಯ ಮೆಚ್ಚಿ ಭಜಿಸುವಂತೆ ನೋಡೋ ॥ 5 ॥
ಜತೆ
ತೀರ್ಥಾದಿಗಳು ನಿನ್ನ ಪಾದದಲ್ಲಿ ಉಂಟಯ್ಯಾ
ಆರ್ಥಾ ವಿಜಯವಿಠಲ ನಿನ್ನ ಚರಣ ಬಿಡೆನಯ್ಯಾ ॥
*******