..
ಶ್ರೀ ರಾಘವೇಂದ್ರರು
ಶ್ರೀಗೋಪತಿವಿಠಲರು ಸ್ತುತಿಸಿದ ಶ್ರೀಮದ್ರಾಘವೇಂದ್ರ ಗುರುಸಾರ್ವಭೌಮರು
ಸಾಹಿತ್ಯ......
ಯೋಗಿಕುಲವರಮಕುಟ ಗುರು ಶ್ರೀ
ರಾಘವೇಂದ್ರರ ಭಜಿಸಿರೋ ॥
ಮೋದತೀರ್ಥಪಯೋಧಿಚಂದಿರ
ಸಾಧುಜನಸತ್ಕುಮುದಕೆ
ಐದುಆನನವಾಗಿಹನು ದು-
ರ್ವಾದಿಗಜಸಮುದಾಯಕೆ ॥
ದೂಷಿಸುವ ಜನರುಗಳ ಗರ್ವ ಅ-
ಶೇಷ ಪರಿಹಾರಗೈಸುವಾ
ದಾಸರಭಿಮಾನವನು ಬಿಡದಿಹ
ದೋಷವರ್ಜಿತನೆನಿಸುವಾ॥
ದಿನಪನಂದದಿಕಾಂತಿ ಬೃಂದಾ-
ವನದೊಳಿದ್ದು ಪ್ರಾಕಾಶವಾ
ಅಣುಗರಿಗೆ ಸಂತೃಪ್ತಸುಖವನು
ಅನವರತ ಪೂರೈಸುವಾ॥
ವ್ಯಾಪ್ತರಾಗಿಹ ಅಖಿಳರಿಗೆ ಫಲ-
ಪ್ರಾಪ್ತಿಗೋಸುಗ ಚರಿಸುವಾ
ಆಪ್ತರಿಲ್ಲವು ಈತನೇ ಎನ-
ಗಾಪ್ತನನುದಿನವಾಗುವಾ॥
ಕೋಲತನಯೆಯ ತೀರದಲಿ ಹೊ-
ನ್ನಾಳಿಯಲಿ ವಿಹರಿಸುವಾ
ಶೀಲಗೋಪತಿವಿಠ್ಠಲನ ಕೃಪೆ
ಗಾಲಯನುಯೆಂದೆನಿಸುವಾ॥
***
explanation:
ಮುದೇನೂರ ಆಚಾರ್ಯರೆಂದೇ ಪ್ರಸಿದ್ಧರಾದ, ಮುದೇನೂರಿನಲ್ಲಿ ಶ್ರೀಮುಖ್ಯಪ್ರಾಣದೇವರ ಪ್ರತಿಷ್ಠೆಯನ್ನು ಮಾಡಿದ ಶ್ರೀ ಗೋಪತಿವಿಠಲಾಂಕಿತಸ್ಥರಾದ ಶ್ರೀ ಸುಬ್ಬಣ್ಣಾಚಾರ್ಯರು ತುಂಗಭದ್ರಾತೀರದಲ್ಲಿನ ಎರಡನೆಯ ಮಂತ್ರಾಲಯವೆಂದೇ ಪ್ರಸಿದ್ಧವಾದ ಹೊನ್ನಾಳಿ ಕ್ಷೇತ್ರಸ್ಥರಾಯರನ್ನು ಸ್ತುತಿಸಿದ ಸುಂದರವಾದ ಪದವಿದು.
ಸರಳವಾದ ಪದ. ಕಠಿಣ ಪದಗಳು ಸಹ ಇಲ್ಲ. ಶ್ರೀರಾಯರ ಮಹಾಮಹಿಮೆಯನ್ನು ಮನಗಾಣುವ, ಅನುಭವಿಸುವ, ಅವರಲ್ಲಿ ಭಕ್ತಿ ಇರುವ ಎಲ್ಲರಿಗೂ ಪ್ರತಿಯೊಂದು ಸಾಲೂ ಅನುಸಂಧಾನಕ್ಕೆ ಬರುವಂತಹ ಪದವಿದು..
ಯಾವುದೇ ಒಂದು ಕೃತಿಯ ಸಾರಾಂಶ ಅದರ ಪಲ್ಲವಿಯಲ್ಲಿ ಅಡಗಿ ಇರುತ್ತದೆ. ಹಾಗೆಯೇ ಈ ಕೃತಿಯ ಸಾರಾಂಶವನ್ನೂ ಕೂಡ ಪಲ್ಲವಿಯಲ್ಲಿ ಹುದುಗಿಸಿದ್ದಾರೆ ನಮ್ಮ ಶ್ರೀ ಗೋಪತಿವಿಠಲರು. ಎಲ್ಲ ನುಡಿಗಳಿಂದ ಶ್ರೀರಾಯರ ಮಹಿಮೆಯನ್ನು ಸ್ತುತಿಸುತ್ತ ಅದಕ್ಕಾಗಿಯೇ ಅವರು ಯತಿಕುಲಮಕುಟರು ಎಂದು ಸಂಕ್ಷಿಪ್ತಪರಿಚಯವನ್ನು ಪಲ್ಲವಿಯಲ್ಲಿ ನೀಡಿಬಿಟ್ಟಿದ್ದಾರೆ.
ಯೋಗಿಕುಲವರಮಕುಟ ಗುರು ಶ್ರೀರಾಘವೇಂದ್ರರ ಭಜಿಸಿರೋ ಎಂದು ಪಲ್ಲವಿಯಲ್ಲೇ ತಿಳಿಸಿದಂತೆ - ಯೋಗಿಗಳ ಪರಂಪರೆಯಲ್ಲಿಯೇ ಮುಕುಟಪ್ರಾಯವಾದ ಯೋಗಿಗಳು ನಮ್ಮ ಶ್ರೀ ರಾಯರು ಎನ್ನುತ್ತಾರೆ ಶ್ರೀ ದಾಸಾರ್ಯರು..(ಇಲ್ಲಿ ಶ್ರೀ ರಾಯರು ಮಾತ್ರ ಯೋಗಿಕುಲವರ್ಯರಾ? ಅವರ ಹಿಂದಿನವರು ಅಲ್ಲವಾ ಹೀಗೆಲ್ಲ ಪ್ರಶ್ನೆಯ ಆಲೋಚನೆ ಮಾಡುವುದೂ ದೋಷ.
ನೋಡಿ ! ರುದ್ರದೇವರನ್ನು ಸ್ತುತಿಸುವಾಗ ಜಗದೀಶ, ದೇವತೆಗಳೊಡೆಯ ಹೀಗೆಲ್ಲ ಸ್ತುತಿಸುವುದು ಕಾಣುತ್ತೇವೆ. ಅಂದರೆ ರುದ್ರದೇವರು ಅವರಿಗಿಂತ ಕೆಳಗಿನ ಕಕ್ಷ್ಯೆಯಲ್ಲಿರುವ ಎಲ್ಲ ದೇವತೆಗಳಿಗಿಂತಲೂ ಶ್ರೇಷ್ಠರು ಎಂದು ಅರ್ಥಮಾಡಿಕೊಳ್ಳಬೇಕೇ ಹೊರತು ಅವರಿಗಿಂತ ಶ್ರೇಷ್ಠ ಕಕ್ಷ್ಯೆದಲ್ಲಿರುವವರಿಗಿಂತ ಹಿರಿಯರು ಅಂತ ಅಲ್ಲ. ಹೇಗೆಯೋ - ಹಾಗೆ ಇಲ್ಲೀ ಸಹ ಶ್ರೀ ರಾಯರು ಅವರಿಗಿಂತ ಕೆಳಗಿರುವ ಎಲ್ಲ ಯತಿಗಳಲ್ಲಿ ಶ್ರೇಷ್ಠವಾದವರು ಎಂದು ಅರ್ಥೈಸಿಕೊಳ್ಳಬೇಕು)
ಅಂತಹ ಯತಿಕುಲಾಗ್ರಣಿಗಳಾದ ಶ್ರೀರಾಯರು ....
ಮೋದತೀರ್ಥಪಯೋಧಿಚಂದಿರ
ಸಾಧುಜನಸತ್ಕುಮುದಕೆ
ಐದುಆನನವಾಗಿಹನು ದು-
ರ್ವಾದಿಗಜಸಮುದಾಯಕೆ ॥ 1 ॥
ಸಾಧುಸಜ್ಜನರೆಂಬ ಕುಮುದ - ಕಮಲಕ್ಕೆ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರ ಶಾಸ್ತ್ರವೆಂಬ ಕ್ಷೀರಸಾಗರದಲ್ಲಿ ಉದಯಿಸಿದ ಚಂದ್ರಮನಂತಿರುವರು. ಸಜ್ಜನರಿಗೆ ಸಾಧುಸ್ವಭಾವದ ಗುರುಗಳು. ದುರ್ವಾದಿಗಳೆಂಬ ಗಜಗಳಿಗೆ ಐದುಆನನವಾಗಿಹನು - ಐದು ಆನನ ಎಂದರೆ - ಪಂಚ - ಆನನ - ಪಂಚ ಎಂದರೆ ಇಲ್ಲಿ ಐದು ಎಂದಲ್ಲ ವಿಸ್ತಾರವಾದ ಎಂದರ್ಥ. ವಿಶಾಲವಾದ ತಲೆಯನ್ನು ಹೊಂದಿದ ಸಿಂಹದಂತಿರುವರು ಎಂದರ್ಥ ಅರ್ಥಾತ್ ಹೇಗೆ ಸಿಂಹ ದೊಡ್ಡ ಗಜವನ್ನೂ ಕುಂಬಸ್ಥಲವನ್ನು ಸೀಳಿಹಾಕುವದೋ ಹಾಗೆಯೇ ಶ್ರೀಮದಾಚಾರ್ಯರ ತತ್ವಗಳಿಗೆ ವಿರುದ್ಧವಾಗಿ ವಾದಮಾಡುವ ಎಲ್ಲವಾದಿಗಳನ್ನೂ ಸಿಂಹದಂತೆ ತುಳಿದುಹಾಕುವರು, ಸೋಲಿಸುವರು ನಮ್ಮ ಶ್ರೀರಾಯರು.
ಪಂಚಾನನ ( ಐದು ತಲೆಗಳುಳ್ಳ ರುದ್ರದೇವರು, ಸಿಂಹರೂಪಿಯಾದ ನರಸಿಂಹದೇವರು, ವಾಯುದೇವರು, ಸಿಂಹ ಹೀಗೆ ಅರ್ಥಗಳಿವೆ)
ಶ್ರೀಪೂರ್ಣಬೋಧ ಗುರುತೀರ್ಥ ಪಯೋಽಬ್ಧಿ ಪಾರಾ
ಕಾಮಾರಿ ಮಾಽಕ್ಷ ವಿಷಮಾಕ್ಷ ಶಿರಃ ಸ್ಪೃಶಂತೀ॥
ಎಂಬ ಶ್ರೀಮದಪ್ಪಣಾರ್ಯರ ಉಕ್ತಿಯನ್ನೇ ಇಲ್ಲಿ ಶ್ರೀ ಗೋಪತಿವಿಠಲರು ಸಹ ತಿಳಿಸಿದ್ದಾರೆ.
ದೂಷಿಸುವ ಜನರುಗಳ ಗರ್ವ ಅ-
ಶೇಷ ಪರಿಹಾರಗೈಸುವಾ
ದಾಸರಭಿಮಾನವನು ಬಿಡದಿಹ
ದೋಷವರ್ಜಿತನೆನಿಸುವಾ॥
ಅಶಾಸ್ತ್ರೀಯವಾಗಿ ನಡೆದುಕೊಳ್ಳುವವರಿಗೆ , ಅಧರ್ಮದ ಹಾದಿಯನ್ನು ಅನುಸರಿಸುವವರಿಗೆ
(ವೃಂದಾವನದಲ್ಲಿ ರಾಯರು ಜೀವಂತವಾಗಿ ಇಲ್ಲ. ಅವರ ಎಲುಬು ಮಾತ್ರ ಇದೆ. ಮತ್ತೆ ಶ್ರೀ ರಾಯರ ಪಾದೋದಕ, ಹಸ್ತೋದಕ ಸ್ವೀಕಾರವೂ ಮಾಡಬಾರದು ) ಹೀಗೆಲ್ಲ ಗರ್ವದಿಂದ ಶ್ರೀರಾಯರನ್ನು ಧಿಕ್ಕಾರಮಾಡುವ ಮತ್ತಜನರ ಗರ್ವವನ್ನು ಅಡಗಿಸುತ್ತಾರೆ. ಮತ್ತೆ ಯಾರು ತಮ್ಮನ್ನು ಭಕ್ತಿಯಿಂದ ಬೇಡಿ, ದಾಸರಾಗಿ ಬಂದು ಬೇಡುತ್ತಾರೋ, ಆರಾಧಿಸುತ್ತಾರೋ ಅವರ ದೋಷಗಳನ್ನು ದೂರಮಾಡುವವವಾಗಿದ್ದಾರೆ.
(ರಾಯರ ಹಸ್ತೋದಕ, ಪಾದೋದಕಗಳಿಂದ ಸಕಲರೋಗಗಳು ಪರಿಹಾರವಾಗುವುದೆಂದು ತಿಳಿದು, ಭಕ್ತಿಯಿಂದ ಸ್ವೀಕರಿಸಬೇಕು)
ಇಲ್ಲಿ ಒಂದು ಪ್ರಶ್ನೆ ಬರಬಹುದು - ಕರ್ಮದಿಂದ ನಮಗೆ ಬಂದ ಕಷ್ಟಗಳನ್ನು ನಾವು ಅನುಭವಿಸಲೇಬೇಕು. ಇದರಲ್ಲಿ ಗುರುಹಿರಿಯರನ್ನು , ರಾಯರನ್ನು ಬೇಡಿದರೆ ಮಾತ್ರ ಕರ್ಮ ಕಳೆದೀತೆ ಅಂದರೆ. ಹೌದು ಖಂಡಿತ ಪೂರ್ಣವಾಗಿ ಕಳೆಯುವುದಿಲ್ಲ ಆದರೆ ಶ್ರೀ ರಾಯರನ್ನು, ಗುರುಕುಲೋತ್ತಮರನ್ನು ಭಕ್ತಿಯಿಂದ ಬೇಡುವುದರಿಂದ ದುಃಖ,ಕಷ್ಟ ಕರ್ಮಗಳ ಫಲದ ಪರಿಣಾಮ ಖಂಡಿತವಾಗಿ ಕಡಿಮೆ ಅಂತೂ ಆಗುತ್ತದೆ.
ದಿನಪನಂದದಿಕಾಂತಿ ಬೃಂದಾ-
ವನದೊಳಿದ್ದು ಪ್ರಾಕಾಶವಾ
ಅಣುಗರಿಗೆ ಸಂತೃಪ್ತಸುಖವನು
ಅನವರತ ಪೂರೈಸುವಾ॥
ವೃಂದಾವನದಲ್ಲಿಂದ ಕಾಂತಿ ದಿನಪನಂತೆ - ದಿನಪ - ಸೂರ್ಯನಂತೆ ಪ್ರಕಾಶಮಾನವಾಗಿದ್ದು ಅಣುಗರನು - ಅಣುಗ(ಮಗ, ಭಕ್ತ, ಪ್ರೀತಿಪಾತ್ರರು) ಮಕ್ಕಳನ್ನು (ರಾಯರನ್ನು ಬೇಡಿ ಬಂದವರೆಲ್ಲ ರಾಯರಿಗೆ ಅಣುಗರೇ ಸರಿ.) ಸಂತೃಪ್ತಿಸುಖವನ್ನು ನೀಡಿ ಪೊರೆಯುವ ಮಹಾನುಭಾವರು ನಮ್ಮ ರಾಯರು.
ಸಂತೃಪ್ತಿ ಸುಖ ಅಂದರೆ ಬರೀ ಐಚ್ಛಿಕವಾದ ಲೌಕಿಕ ಸುಖಗಳಷ್ಟೇ ಅಲ್ಲ, ಉತ್ತಮವಾದ ಜ್ಞಾನವನ್ನೂ, ಸತ್ಸಾಧನೆ ನಡೆಸಲು ಆರೋಗ್ಯವನ್ನೂ ಕೊಡುವ ದಿನಪರು ಅಂದರೆ ಸೂರ್ಯ ಅನ್ನುವುದು ದಾಸರ ಅಭಿಪ್ರಾಯ. ( ಸೂರ್ಯದೇವ ಆರೋಗ್ಯ ಮತ್ತು ಜ್ಞಾನಪ್ರದರು ಅನ್ನುವುದು ಶಾಸ್ತ್ರವಿಹಿತ)
ವ್ಯಾಪ್ತರಾಗಿಹ ಅಖಿಳರಿಗೆ ಫಲ-
ಪ್ರಾಪ್ತಿಗೋಸುಗ ಚರಿಸುವಾ
ಆಪ್ತರಿಲ್ಲವು ಈತನೇ ಎನ-
ಗಾಪ್ತನನುದಿನವಾಗುವಾ॥
ಭಾರತದೇಶಾದ್ಯಂತ ಶ್ರೀರಾಯರಿಗೆ ಭಕ್ತಿರಿದ್ದಾರೆ. ಶ್ರೀ ರಾಯರಿಗೆ ಮಾತ್ರ ಅಪಾರ ಭಕ್ತ ಜನಸಂದೋಹವಿರಲಿಕ್ಕೆ ಸಾಧ್ಯವೂ ಹೌದು. ( ಯಾಕೆ ಅಂದರೆ ಅವರಿಗೆ ಶ್ರೀನರಸಿಂಹದೇವರ ವರವಿದೆ.)ಜಾತಿ, ಮತ ಭೇದವಿಲ್ಲದೆ ರಾಯರನ್ನು ದರ್ಶನಮಾಡಲು, ತಮ್ಮ ಕಷ್ಟಗಳನ್ನು ಕಳೆದುಕೊಳ್ಳಲು ದೇಶಾದ್ಯಂತದಿಂದ, ಪ್ರಪಂಚದ ಎಲ್ಲ ಮೂಲೆಗಳಿಂದ ಬರುವವರಿಗೆ ದರ್ಶನ ನೀಡಿ, ಅವರ ಕಷ್ಟಗಳನ್ನು ನಿರ್ಮೂಲನ ಮಾಡುತ್ತಿರುವ ನಮ್ಮ ರಾಯರು ಎಲ್ಲೆಡೆ ವ್ಯಾಪ್ತವಾಗಿದ್ದು ತಮ್ಮನ್ನು ಬೇಡುತ್ತಿರುವ ತಮ್ಮ ಭಕ್ತರು ಎಲ್ಲಿ ಕರೆಯುತ್ತಾರೋ ಅಲ್ಲಿಗೆ ಬಂದು ಕಾಪಾಡುವವರು ನಮ್ಮ ಶ್ರೀರಾಯರು ಅನ್ನುವುದು ಪ್ರತಿಯೊಬ್ಬರ ಅನುಭವಸಿದ್ಧವಾದಮಾತು.
ಈ ಮಾತನ್ನೇ ನಮ್ಮ ಶ್ರೀ ಗೋಪಾಲದಾಸಾರ್ಯರು ತಮ್ಮ ರಥವಾನೇರಿದ ರಾಘವೇಂದ್ರ ಈ ಕೃತಿಯಲ್ಲಿ
ಚತುರದಿಕ್ಕು ವಿದಿಕ್ಕುಗಳಲ್ಲಿ
ಸ್ಮರಿಸುವ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ
ವರವಾ ಬೇಡುತಲಿ
ತುತಿಸುತ ಪರಿಪರಿ ನತರಾಗಿಹರಿಗೆ
ಗತಿನೀಡದೆ ಸರ್ವಥ ನಾ ಬಿಡನೆಂದು ಎಂದು ತಿಳಿಸುತ್ತಾರೆ
ಮತ್ತೆ..
ಕುಂದದೆವರಮಂತ್ರಾಲಯದಲ್ಲಿರುವ - ಕರೆದಲ್ಲಿಗೆ ಬರುವ
ಸಂದರುಶನದಲಿ ಮಹತ್ತಾಪ ಕಳೆವ ಮನದೊಳು ತಾಪೊಳೆವ
ವೃಂದಾವನಗತಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ
ಮಂಧಭಾಗ್ಯರಿಗೆ ದೊರೆಯದಿವರ ಸೇವಾ ಶರಣರಸಂಜೀವ॥
- ಎಂದು ಶ್ರೀ ಶ್ರೀದವಿಠಲದಾಸಾರ್ಯರು ಸಹ ಇದೇ ವಿಷಯವನ್ನು ವಿಸ್ತಾರವಾಗಿ ತಿಳಿಸಿದ್ದಾರೆ.
ಕೋಲತನಯೆಯ ತೀರದಲಿ ಹೊ-
ನ್ನಾಳಿಯಲಿ ವಿಹರಿಸುವಾ
ಶೀಲಗೋಪತಿವಿಠ್ಠಲನ ಕೃಪೆ
ಗಾಲಯನುಯೆಂದೆನಿಸುವಾ॥
ಆಪ್ತರಿಲ್ಲವು ಈತನೇ ಎನಗಾಪ್ತ -
ರಾಯಬಾರೋ ತಂದೆತಾಯಿ ಬಾರೋ ನಮ್ಮನ್-
ಕಾಯಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯಬಾರೋ - ಎಂದು ರಾಯರೇ ತಂದೆತಾಯಿ ಎಂದು ಭಕ್ತಿಯಿಂದ ಬೇಡಿದವರಿಷ್ಟಾರ್ಥಗಳನ್ನು ಪೂರೈಸುವವರು ಶ್ರೀರಾಯರು ಎಂದು - ಶ್ರೀ ಮಾನ್ವಿ ಪ್ರಭುಗಳು ತಿಳಿದ್ದನ್ನು, ಇಲ್ಲಿ ದಾಸಾರ್ಯರೂ ಸಹ ಹೇಳುತ್ತಿದ್ದಾರೆ.
ಇದನ್ನೇ ತಂದೆ ನೀನೆ ತಾಯಿ ನೀನೆ ಎಂದು ನಿನ್ನ ನಂಬಿದೆನೊ ಎಂದು ಶ್ರೀ ವಿಠಲೇಶದಾಸರೂ ಸಹ ಹೇಳಿದ್ದಾರೆ.
ಕೋಲತನಯೆಯ ತೀರದಲಿ - ಕೋಲ - ವರಾಹ - ವರಾಹದೇವರ ಕೋರೆದಾಡಿಯಿಂದ ಜನಿಸಿದವಳಾದ ತುಂಗಭದ್ರೆಯ ತೀರಸ್ಥ ಹೊನ್ನಾಳಿ ಕ್ಷೇತ್ರದಲಿ ವಿಹರಿಸುತ್ತ ಶೀಲಗೋಪತಿವಿಠ್ಠಲ ಅಭಿನ್ನ ಶ್ರೀಮನ್ನಾರಾಯಣನ ಕೃಪೆಗೆ ಆಲಯವೆಂದೆನಿಸುವರು ನಮ್ಮ ಶ್ರೀರಾಘವೇಂದ್ರತೀರ್ಥ ಗುರುರಾಜರು.
ಬೃಹಸ್ಪತಿವಾರ ಅಂದರೇ ಸ್ಮರಣೆಗೆ ಬರುವವರು ನಮ್ಮ ರಾಯರು. ಗುರುವಾರ ಗುರುರಾಯರನ್ನು ಇನ್ನೂ ಭಕ್ತಿಯಿದ ಪ್ರಾರ್ಥನೆಮಾಡುತ್ತ...
ಶ್ರೀ ರಾಯರ ಹಾಗೂ ಅವರ ಅಂತರ್ಗತ ಪರಮಾತ್ಮನ ಪರಮಕಾರುಣ್ಯ ನಮ್ಮಮೇಲೆ ಸದಾಕಾಲವಿರಲೀ ಎಂದು ಅವರಲ್ಲಿ ಅವರ ಅಂತರ್ಗತನಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀನಾರಸಿಂಹ ಅಭಿನ್ನ ಶ್ರೀ ಭೈಷ್ಮೀಸತ್ಯಾಸಮೇತ ಶ್ರೀಕೃಷ್ಣಪರಮಾತ್ಮನಲ್ಲಿ ಭಕ್ತಿಯಿಂದ ಬೇಡುತ್ತಾ...
-padma sirish
ಜೈವಿಜಯರಾಯ
ನಾದನೀರಾಜನದಿಂ ದಾಸಸುರಭಿ 🙏🏽
***
ಯೋಗಿ ಕುಲವರ ಮಕುಟ ಗುರು ಶ್ರೀರಾಘವೇಂದ್ರನ ಭಜಿಸಿರೋ ಪ
ಮೋದತೀರ್ಥ ಪಯೋಧಿ ಚಂದಿರಸಾಧುಜನ ಸತ್ಕುಮುದಕೇಐದು ಆನನವಾಗಿಹನು ದು ರ್ವಾದಿ ಗಜಸಮುದಾಯರೇ 1
ದೂಷಿಸುವ ಜನರುಗಳ ಗರ್ವ ಅಶೇಷ ಪರಿಹಾರಗೈಸುವಾ 2
ದಿನಪನಂದದಿ ಕಾಂತಿಬೃಂದಾ ಬನದೊಳಿದ್ದು ಪ್ರಕಾಶವಾಅಣುಗರಿಗೆ ಸಂತೃಪ್ತಿ ಸುಖವನುಅನವರತ ಪೂರೈಸುವಾ 3
ವ್ಯಾಕ್ತರಾಗಿಹ ಅಖಿಳರಿಗೆ ಫಲಪ್ರಾಪ್ತಿಗೋಸುಗ ಚರಿಸುವಾ 4
ಆಪ್ತರಿಲ್ಲದೆ ಈತನೇಯೆನಗಾಪ್ತನನುದಿನವಾಗುವಾ 5
ಕೋಲ ತನಯೆಯ ತೀರದಲಿ ಹೊ-ನ್ನಾಳಿಯಲಿ ವಿಹರಿಸುವಾಶೀಲ ಗೋಪತಿವಿಠಲನ ಕೃಪೆಗಾಲಯನು ಯೆಂದೆನಿಸುವಾ6
****