Showing posts with label ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಪುಷ್ಪಧರಿಸುವ ಉತ್ಸವಗೀತೆ venkatakrishna. Show all posts
Showing posts with label ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಪುಷ್ಪಧರಿಸುವ ಉತ್ಸವಗೀತೆ venkatakrishna. Show all posts

Tuesday 1 June 2021

ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಪುಷ್ಪಧರಿಸುವ ಉತ್ಸವಗೀತೆ ankita venkatakrishna

by yadugiriyamma  

 ಪುಷ್ಪಧರಿಸುವ ಉತ್ಸವಗೀತೆ

ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ

ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ.


ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ

ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ 1

ಪೊದಿಸಿ ಪನ್ನೀರವಲ್ಲಿಯ ಪುಷ್ಪದ ಮೌಳಿಯ ಧರಿಸಿ

ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ 2

ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ

ಪಂಕಜಪಾಣಿ ಕೀರವಾಣಿ ಸುಶೋಣೀ 3

ಸುರರು ಅಸುರರು ಕೂಡಿ ಶರಧಿಮಥನವ ಮಾಡೆ

ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು 4

ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ]

ರಾಯ ಜನಕನಾ ಮಗಳು ಜಾನಕೀದೇವಿಗೆ ಇಂದು 5

ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ]

ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು6

ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ]

ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು 7

ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ

ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು 8

ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ

ಪುರುಷನರಾಣಿಗೆ ಸುರರು ತಂದು ಮುಡಿಸುವರು 9

ವಸಂತೋತ್ಸವಕೆಂದು ವಸುಧೀಶನರಸಿ ತಾನು

ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು 10

ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು

ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು 11

ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು

[ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ 12

ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ

ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ 13

***