ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ
ಗುರು ರಾಘವೇಂದ್ರಾರ್ಯನೇ ಪ.
ಶ್ರೀ ರಮಾಪತಿ ಗುಣವ ನೀ ಮನದೊಳು ತಿಳಿಸಿ
ಶ್ರೀ ರಾಮ ನಾಮ ನುಡಿ ಸೋ | ಭವ ಬಂಧ ಬಿಡಿಸೋ ಅ.ಪ.
ಮಿಂಚಿನಂತಿಹ ಎನ್ನ ಚಂಚಲ ಮನದಲ್ಲಿ
ಸಂಚಿತನೆ ಎನೆ ನೆಲಸೋ
ಸಂಚಿತಾಗಮಿಗಳು ಕೊಂಚ ಉಳಿಯದ ತೆರದಿ
ಪಂಚ ಭೇದಾರ್ಥ ತಿಳಿಸೊ
ಪಂಚವಕ್ತ್ರನ ತಾತ ಮಿಂಚಿನಂದದಿ ಪೊಳೆವೊ
ಹಂಚಿಕೆಯ ಎನಗೆ ತೋರೋ | ಮನಕ್ಹರುಷ ಬೀರೋ 1
ಶ್ರೀ ನರಹರಿ ಕೃಷ್ಣ ರಾಮ ವ್ಯಾಸರ ಪದವ
ನೀ ನಿರ್ಮಲದಲಿ ನೆನೆವೆ
ಮಾನನಿಧಿ ಮುರಹರಿಯ ಧಾಮತ್ರಯಗಳ ಮಾರ್ಗ
ಕಾಮಿಸಿದ ಭಕ್ತಗೀವೆ
ನಾನಧಮೆ ನಿನ್ನಡಿಗೆ ಬಾಗಿ ಭಜಿಸುವೆ ಗುರುವೆ
ನೀನಿತ್ತ ನೋಡಿ ಪೊರೆಯೊ | ನೀ ದಯವ ಗರೆಯೊ 2
ತರಳತನದಲಿ ಶ್ರೀ ನರಹರಿಯ ಭಜಿಸುತ್ತ
ಉರುತರದಿ ಭಾದೆ ಸಹಿಸಿ
ಹರಿಯು ಸರ್ವತ್ರ ವ್ಯಾಪಕನೆಂಬೊ ಮಹಿಮೆಯ
ಉರ್ವಿಯೊಳಗೆಲ್ಲ ನೆಲಸಿ
ವರಯತಿ ರೂಪದಲಿ ಸಿರಿ ಕೃಷ್ಣನಾ ಭಜಿಸಿ
ಮರುತ ಮತವನೆ ಸ್ಥಾಪಿಸಿ | ಗುರುರಾಯನೆನಸಿ 3
ತುಂಗ ತೀರದಿ ನಿಂದು ಮಂಗಳರೂಪದಲಿ
ಪಂಗು ಬಧಿರರ ಸಲಹುತ
ಸಂಗೀತ ಪ್ರಿಯನೆನಿಸಿ ಶೃಂಗಾರರಾಮನ
ಮಂಗಳರೂಪ ಭಜಿಸಿ
ಹಿಂಗದೇ ಸುಜನರಿಗೆ ವರವ ಕೊಡುವೊ ಬಿರುದು
ರಂಗನಾ ಪದದೊಲುಮೆಯೋ | ನಿನ್ನಯ ಮಹಿಮೆಯೋ 4
ಗೋಪಾಲಕೃಷ್ಣವಿಠ್ಠಲನ ಪರಿಪರಿಯಿಂದ
ಆ ಪಾದ ಮೌಳಿ ನೋಳ್ಪೆ
ಶ್ರೀ ಪತಿಯ ತೋರೆನಗೆ ಪಾಪ ಕಲುಷವ ಕಳದು
ತಾಪಪಡಲಾರೆ ಭವದಿ
ಕಾಪಾಡುವವರಿಲ್ಲ ನೀ ಕೃಪಾನಿಧಿಯೆಂದು
ಈ ಪರಿ ಕೇಳ್ದೆ ಗುರುವೆ | ಭಕ್ತರ ಕಲ್ಪ ತರುವೆ5
****