Showing posts with label ಪುಟ್ಟ ದಾಸನು ನಾನಲ್ಲ ದಿಟ್ಟ ದಾಸನು neleyadikeshava MUNDIGE ಮುಂಡಿಗೆ PUTTA DASANU NAANALLA DITTA DASANU. Show all posts
Showing posts with label ಪುಟ್ಟ ದಾಸನು ನಾನಲ್ಲ ದಿಟ್ಟ ದಾಸನು neleyadikeshava MUNDIGE ಮುಂಡಿಗೆ PUTTA DASANU NAANALLA DITTA DASANU. Show all posts

Thursday 23 December 2021

ಪುಟ್ಟ ದಾಸನು ನಾನಲ್ಲ ದಿಟ್ಟ ದಾಸನು ankita neleyadikeshava MUNDIGE ಮುಂಡಿಗೆ PUTTA DASANU NAANALLA DITTA DASANU



ಪುಟ್ಟ ದಾಸನು ನಾನಲ್ಲ | ದಿಟ್ಟ ದಾಸನು ನಾನಲ್ಲ |
ಸಿಟ್ಟು ದಾಸನು ನಾನಲ್ಲ | ಸುಟ್ಟ ದಾಸನು ನಾನಲ್ಲ |

ಸುಡಗಾಡು ದಾಸ ನಾನಲ್ಲ |ಕಷ್ಟದಾಸ ನಾನಲ್ಲ |
ಕೊಟ್ಟ ದಾಸ ನಾನಲ್ಲ |ಹೊಟ್ಟೆ ದಾಸ ನಾನಲ್ಲ |

ಇಟ್ಟಿಗೆ ದಾಸ ನಾನಲ್ಲ |ಶಿಷ್ಟ ದಾಸ ನಾನಲ್ಲ |
ನಿಷ್ಟ ದಾಸ ನಾನಲ್ಲ |ಭ್ರಷ್ಟ ದಾಸ ನಾನಲ್ಲ |

ಶ್ರೇಷ್ಟ ದಾಸ ನಾನಲ್ಲ |ವಿತ್ತ ದಾಸ ನಾನಲ್ಲ |
ಹುತ್ತ ದಾಸ ನಾನಲ್ಲ |

ನಾನು ಈ ಷೊಡಶ ದಾಸರುಗಳ ದಾಸನು ದಾಸರ ದಾಸಿಯರ
ಮನೆಯ ಮಂಕುದಾಸರ ಮನೆಯ ಶಂಕು ದಾಸ ಬಾಡದಾದಿ ಕೇಶವ ||
***


Puttadasanu nanalla | ditta dasanu nanalla |
Sittu dasanu nanalla | sutta dasanu nanalla |

Sudagadudasa nanalla | kashthadasa nanalla |
Kottadasa nanalla |hottedasa nanalla |

Ittige dasa nanalla | sishtadasa nanalla |
Nishthadasa nanalla | brashthadasa nanalla |


Sreshthadasa nanalla | vittadasa nanalla |
Huttadasa nanalla |

nanu I Shodasa dasarugala dasanu dasara dasiyara
Maneya mankudasara maneya sankudasa badadadi kesava ||
***

ಮುಂಡಿಗೆಯ
ಅತ್ಯಂತ ಸಂಕ್ಷಿಪ್ತ ಅರ್ಥಾನುಸಂಧಾನ

ಪುಟ್ಟ ದಾಸನು ನಾನಲ್ಲ
ಧ್ರುವರಾಯನು ನಾನಲ್ಲ
ದಿಟ್ಟ ದಾಸನು ನಾನಲ್ಲ 
ಪ್ರಹ್ಲಾದರಾಜನು ನಾನಲ್ಲ
ಸಿಟ್ಟು ದಾಸನು ನಾನಲ್ಲ
ದುರ್ವಾಸ , ವಿಶ್ವಾಮಿತ್ರ ಮತ್ತು
ಭೃಗು ಋಷಿಗಳಂಥ ಋಷಿಯೂ ನಾನಲ್ಲ
ಸುಟ್ಟ ದಾಸನು ನಾನಲ್ಲ
ಲಂಕೆಯನ್ನು ಸುಟ್ಟಂಥ ಹನುಮಂತನು ನಾನಲ್ಲ

ಸುಡುಗಾಡು ದಾಸ ನಾನಲ್ಲ
ರುದ್ರದೇವನು ನಾನಲ್ಲ
ಕಷ್ಟ ದಾಸನು ನಾನಲ್ಲ
‌ಕುಚೇಲನು ನಾನಲ್ಲ
ಕೊಟ್ಟ ದಾಸ ನಾನಲ್ಲ
ಬಲಿ ಚಕ್ರವರ್ತಿ ನಾನಲ್ಲ
ಹೊಟ್ಟೆ ದಾಸ ನಾನಲ್ಲ
ವೃಕೋದರ ( ಭೀಮಸೇನ ) ನು ನಾನಲ್ಲ

ಇಟ್ಟಿಗೆ ದಾಸ ನಾನಲ್ಲ
ಪುಂಡರೀಕನು ನಾನಲ್ಲ
ಶಿಷ್ಟದಾಸ ನಾನಲ್ಲ
ವಿಭೀಷಣನು ನಾನಲ್ಲ
ನಿಷ್ಠದಾಸ ನಾನಲ್ಲ
ರುಕ್ಮಾಂಗದ ಅಂಬರೀಷ ಭೀಷ್ಮರಂಥ ದಾಸನು ನಾನಲ್ಲ
ಭ್ರಷ್ಟದಾಸ ನಾನಲ್ಲ
ಅಜಾಮಿಳ, ಮಾಧವ ನು ನಾನಲ್ಲ

ಶ್ರೇಷ್ಠದಾಸ ನಾನಲ್ಲ
ದಾಸರಲ್ಲೇ ಅತ್ಯಂತ ಶ್ರೇಷ್ಠ ದಾಸರಾದಂಥ ( ಶ್ರೀ ಲಕ್ಷ್ಮೀದೇವಿ) ಯನ್ನು ಬಿಟ್ಟು 
ಶ್ರೀ ಮದಾಚಾರ್ಯರಂಥ ದಾಸನು ನಾನಲ್ಲ
ವಿತ್ತದಾಸ ನಾನಲ್ಲ
ಪುರಂದರದಾಸರಂಥ ( ನವಕೋಟಿ ನಾರಾಯಣ)
ವಿತ್ತ( ಸಂಪತ್ತು) ಉಳ್ಳಂಥ ದಾಸನು ನಾನಲ್ಲ
ಹುತ್ತದಾಸ ನಾನಲ್ಲ
ವಾಲ್ಮೀಕಿ ಋಷಿಯು ನಾನಲ್ಲ
ನಾನು ಇಂಥ ಷೋಡಶ 
ದಾಸರುಗಳ ದಾಸಾನುದಾಸರ ದಾಸರ
ಮನೆಯ ಮಂಕುದಾಸರ ಮನೆಯ ಶಂಕುದಾಸ
ಬಾಡದಾದಿ ಕೇಶವ
****

ಭಗವಂತನ  ಕರುಣೆಗೆ ಪಾತ್ರರಾದ ದಾಸರು, ಭಾಗವತದ  ಸ್ಮರಣೆಯನ್ನು ಮಾಡುವಂಥ  ಉತ್ತರವನ್ನು ಮುಂಡಿಗೆ ರೂಪದಲ್ಲಿ ಕೊಡುತ್ತಾರೆ.
" ಪುಟ್ಟ ದಾಸ ನಾನಲ್ಲ, ದಿಟ್ಟ ದಾಸ ನಾನಲ್ಲ, ಸಿಟ್ಟು ದಾಸ ನಾನಲ್ಲ, ಸುಟ್ಟ ದಾಸ ನಾನಲ್ಲ, ಸುಡಗಾಡು ದಾಸ ನಾನಲ್ಲ, ಕಷ್ಟದಾಸ ನಾನಲ್ಲ, ಕೊಟ್ಟ ದಾಸ ನಾನಲ್ಲ, ಹೊಟ್ಟೆ ದಾಸನಲ್ಲ, ಇಟ್ಟಿಗೆ ದಾಸ ನಾನಲ್ಲ, ಶಿಷ್ಟ ದಾಸ ನಾನಲ್ಲ,ನಿಷ್ಠ ದಾಸ ನಾನಲ್ಲ, ಭ್ರಷ್ಟ ದಾಸ ನಾನಲ್ಲ, ಶ್ರೇಷ್ಠ ದಾಸ ನಾನಲ್ಲ, ವಿತ್ತ ದಾಸ ನಾನಲ್ಲ, ಹುತ್ತ ದಾಸ ನಾನಲ್ಲ.  ನಾನು ಈ ಶೋಡಶ ದಾಸರುಗಳ ದಾಸಾನುದಾಸರ  ದಾಸಿಯರ ಮನೆಯ ಮಂಕು ದಾಸರ ಮನೆಯ  ಶಂಕುದಾಸ ಬಾಡದಾದಿ ಕೇಶವನ ದಾಸಕಾಣೆ" ಎಂದು ಇಡೀ ಭಾಗವತೋತ್ತಮರ ಹೆಸರುಗಳನ್ನು  ಸ್ಮರಣೆ ಮಾಡುವಂಥ 'ಮುಂಡಿಗೆ'
ಪ್ರಾಕಾರದಲ್ಲಿ ಹೇಳುವ ಮೂಲಕ ಅವರಿಗೆ ಉತ್ತರವನ್ನು ಕೊಡುತ್ತಾರೆ. 

೧.ಪುಟ್ಟ ದಾಸ :- ಐದು ವರ್ಷದ ಬಾಲಕ ಧೃವ ತಂದೆಯ ತೊಡೆ ಮೇಲೆ ಕುಳಿತುಕೊಳ್ಳಬೇಕೆಂದು ಆಸೆ ಪಟ್ಟು ಮಲತಾಯಿಂದ ತಿರಸ್ಕೃತನಾಗಿ,
ನಾರದರಿಂದ ಉಪದೇಶ ಪಡೆದು, ಭಗವಂತನ ಅನುಗ್ರಹಕ್ಕೆ ಪಾತ್ರನಾದ 'ಧ್ರುವ' ಪುಟ್ಟ ದಾಸ.  

೨.ದಿಟ್ಟ ದಾಸ:- ಮನೆಯಲ್ಲಿ ತಂದೆ ಹರಿಸರ್ವೋತ್ತಮ ಎನಬೇಡ  ಎನ್ನುತ್ತಾರೆ ಖಂಡಮೃಕರು ಸರ್ವೋತ್ತಮ ಅನ್ನಬೇಡ ಎಂದು ಶಿಕ್ಷೆ ಕೊಡುತ್ತಾರೆ. ಇಂತಹ ದೈತ್ಯರ ನಡುವೆ ಇದ್ದು ದೈತ್ಯರ ಮಕ್ಕಳಿಗೆ ಹರಿಸರ್ವೋತ್ತಮ ಎಂದು ಹೇಳುವಂತೆ ಮಾಡಿ ಯಾರಿಗೂ ಹೆದರದೆ ಇದನ್ನೇ ಸಾರುತ್ತ ಶ್ರೀಹರಿಯು ತತ್ವವನ್ನು ಸಾರಿದ . ಕಂಬದಲ್ಲಿ  ನಿನ್ನ ಹರಿ ಇರುವನೆ , ತಂದೆ ಕೇಳಿದಾಗ,
"ಎಳ್ಳು ಕೊನೆಯು, ಮುಳ್ಳುಮೊನೆಯು, ಎಲ್ಲೂ ಬಿಡದೆ ಒಳಗೆ-ಹೊರಗೆ ಎಲ್ಲಾ ಠಾವಿನಲ್ಲಿ ಗೌರಿವವಲ್ಲಭನಿದ್ದಾನೆ"  ಎಂದು ಹೇಳಿದಾಗ ಕಂಬವನ್ನು ಸೀಳಿಕೊಂಡು ನರಸಿಂಹ ಬಂದು ಪ್ರಹ್ಲಾದನ ತಂದೆ ಹಿರಣ್ಯಕಶಿಪುವನ್ನು ಸಂಹಾರ ಮಾಡುತ್ತಾನೆ. ತಂದೆಯನ್ನೇ ಎದುರುಹಾಕಿಕೊಂಡ 'ಪ್ರಹ್ಲಾದ'
ದಿಟ್ಟ ದಾಸ. 

೩.ಸಿಟ್ಟು ದಾಸ:- ಕೋಪಿಷ್ಟರೆಂದೇ ಹೆಸರಾದ ದೂರ್ವಾಸರು, ಭೃಗು ಮಹರ್ಷಿಗಳು, ವಿಶ್ವಾಮಿತ್ರರು ಸಿಟ್ಟು ದಾಸ. 

೪.ಸುಟ್ಟ ದಾಸ :- ಬಾಲಕ್ಕೆ ಬೆಂಕಿ ಹಚ್ಚಿದಾಗ ಇಡೀ ಲಂಕಾ ನಗರವನ್ನು ಸುಟ್ಟ ಹನುಮಂತ ಸುಟ್ಟ ದಾಸ. 

೫.ಸುಡಗಾಡು ದಾಸ:- ಸುಡಗಾಡನ್ನು ಕಾದ ಹರಿಶ್ಚಂದ್ರ ನಾಗಲಿ, ರುದ್ರ ದೇವರಾಗಲಿ, (ರುದ್ರಭೂಮಿ) ಸುಡುಗಾಡು ದಾಸ. 

೬.ಕಷ್ಟ ದಾಸ:- ಭೂಮಿನೆ  ಹಾಸಿಗೆ ಆಕಾಶವೇ ಹೊದಿಕೆ ಅನ್ನುವಂತೆ , ಹಾಸಿ ಹೊದೆಯುವಷ್ಟು ಬಡತನವಿದ್ದರೂ, ಸಂತಾನಕ್ಕೆ ಕೊರತೆ ಇಲ್ಲದೆ ಮನೆತುಂಬಾ ಮಕ್ಕಳು, ಬಡತನ ತಾಳಲಾರದೆ, ನಿಮಗೆ ಸಹಾಯ ಮಾಡುವ  ಸ್ನೇಹಿತರಿಲ್ಲವೇ ?ಎಂದು ಪತ್ನಿ ಕೇಳಿದಾಗ, ಇದ್ದಾನೆ ಅವನೇ ನನ್ನ ಬಾಲ್ಯದ ಗೆಳೆಯ 'ಕೃಷ್ಣ'ಎಂದು ಸಂತೋಷದಿಂದ ಹೇಳಿ ಹೆಂಡತಿ ಕೊಟ್ಟ ಹಿಡಿ ಅವಲಕ್ಕಿಯನ್ನು ಗಂಟುಕಟ್ಟಿಕೊಂಡು ತಂದು ಕೃಷ್ಣನಿಗೆ ಕೊಟ್ಟು ಸಕಲ ಸೌಭಾಗ್ಯವನ್ನು ಪಡೆದ 'ಕುಚೇಲ'. ಅವಲಕ್ಕಿ ಗಂಟನ್ನು ಬಿಚ್ಚಿದ, ಅವ+ಲಕ್ಕಿ ಗಂಟನ್ನು ಬಿಚ್ಚಿ ಸುಧಾಮನ  ದಾರಿದ್ರ್ಯದ ಗಂಟನ್ನೇ ಬಿಚ್ಚಿದ್ದಾನೆ 'ಶ್ರೀಹರಿ' 'ಒಪ್ಪಿದ ಅವಲಕ್ಕಿಗೆ ಕೊಟ್ಟನು ಅಖಿಳಾರ್ಥ' ಪಡೆದ ಕುಚೇಲ ಕಷ್ಟ ದಾಸ. 

೭.ಕೊಟ್ಟ ದಾಸ:- ಮೂರು ಪಾದ ಭೂಮಿ ಬೇಡಲು ಬಂದ ವಾಮನನಿಗೆ, ಕೊಡುತ್ತೇನೆ ಎಂದಾಗ, ಎರಡು ಪಾದಗಳಿಂದ ಹದಿನಾಲ್ಕು ಲೋಕಗಳನ್ನೂ ಅಳೆದಮೇಲೆ, ಮೂರನೇ ಪಾದ  ಎಲ್ಲಿಡಲಿ ಎಂದು  ಕೇಳಿದಾಗ,ನನ್ನ ತಲೆಯ ಮೇಲೆ ಇಡು ಅಂತ ಅಂದು , ತನ್ನನ್ನೇ ತಾನು ಸಮರ್ಪಣೆ ಮಾಡಿದಂಥ 'ಬಲಿಚಕ್ರವರ್ತಿ' ಕೊಟ್ಟ ದಾಸ. 

೮. ಹೊಟ್ಟೆ ದಾಸ:- ಯುಧಿಷ್ಠಿರನ ತಮ್ಮ ಭೀಮನ ಹೆಸರು ವೃಕೋದರ. 'ವೃಕ' ಎನ್ನುವ ಅಗ್ನಿ ಅಂದರೆ ಜಠರಾಗ್ನಿ. ಹೆಬ್ಬೆಟ್ಟು ಗಾತ್ರವಿದ್ದು ಇದು ಆಹಾರ ಜೀರ್ಣ ಮಾಡುತ್ತದೆ. "ಜ್ಞಾನಿ, ವಿರಾಗಿ, ಹರಿಭಕ್ತ ಬಭಾವೆ, ಅತಿ ಬಲವಂತ, ಧೃತಿ, ಸ್ಮೃತಿ ,ಪ್ರಾಣ, ಹೀಗೆ ಹಲವಾರು ವಿಶೇಷತೆಗಳಿಂದ ಕೂಡಿರುವ 'ಭೀಮಸೇನ' ಹೊಟ್ಟೆ ದಾಸ. 

೯ಇಟ್ಟಿಗೆ ದಾಸ:- ತಂದೆತಾಯಿಯನ್ನು ತೊಡೆಯ ಮೇಲೆ ಮಲಗಿಸಿಕೊಂಡಂಥ  ಪುಂಡರೀಕ, ಪಾಂಡುರಂಗ ಬಂದು ನಿಂತಾಗ ತಂದೆ-ತಾಯಿಗೆ ನಿದ್ದೆ ತಪ್ಪಿತೆಂದು ಇಲ್ಲೇ ನಿಂತಿರುವ ಎಂದು ಇಟ್ಟಿಗೆಯನ್ನು ತಳ್ಳಿದರು. ಪಾಂಡುರಂಗ ಅದರ ಮೇಲೆ ನಿಂತು ನಿಂತು ಸಾಕಾಯಿತು ಸೊಂಟದ ಮೇಲೆ ಕೈಯಿಟ್ಟುಕೊಂಡಾಗ, ಎದ್ದು ಬಂದ ಪುಂಡರೀಕ, ಕಲಿಯುಗ ಮುಗಿಯುವ  ತನಕ ಹೀಗೆ  ನಿಂತುಬಿಡು ಸ್ವಾಮಿ ಎಂದ.  ಭಕ್ತ ಪುಂಡರೀಕನ ಮಾತಿಗೆ ಕಟ್ಟುಬಿದ್ದು,"ಪುಂಡರೀಕ' ನಾಗಿ ಬಂದ ಕೃಷ್ಣ 'ಪಾಂಡುರಂಗ ವಿಠಲ' ಎನಿಸಿಕೊಂಡು ಅಲ್ಲೆ ನಿಂತನು. ಹೀಗೆ ಭಕ್ತರ ಪುಂಡರೀಕ 'ಪಾಂಡುರಂಗ' ಇಟ್ಟಿಗೆ ದಾಸ. 

೧೦. ಶಿಷ್ಟ ದಾಸ:- ರಾವಣ ಕುಂಭಕರ್ಣರ ತಮ್ಮನಾಗಿ ಜನಿಸಿ, ದೈತ್ಯರ ನಡುವೆಯಿದ್ದ, 'ವಿಭೀಷಣ' ರಾಮನಿಗೆ ,ಹನುಮನಿಗೆ ಶರಣಾಗತನಾದ. ವಿಭೀಷಣನನ್ನು ಸ್ವೀಕಾರ ಮಾಡಲೆ, ಅಂತ ರಾಮ ಕೇಳಿದಾಗ, ಹನುಮಂತನು ಸ್ವೀಕರಿಸು ಎಂದ 'ಶಿಷ್ಟ ದಾಸ ವಿಭೀಷಣ' . 

೧೧. ನಿಷ್ಠ ದಾಸ :- ಏಕಾದಶಿ ವ್ರತ ಮಾಡುವ , ರುಕ್ಮಾಂಗದ, 'ಅಂಬರೀಶನು' ನಿಷ್ಠ ದಾಸ. 

೧೨. ಭ್ರಷ್ಟ ದಾಸ:- ಬ್ರಾಹ್ಮಣನಾಗಿದ್ದು,  ಮಾಡಬೇಕಾದ್ದನ್ನು ಮಾಡದೆ, ವೇಷ್ಯಾ ಸ್ತ್ರೀ ಹಿಂದೆ ಹೋಗಿ, ತಿನ್ನಬಾರದ್ದನ್ನು ತಿಂದು, ಕುಡಿಯಬಾರದು ಕುಡಿದು,ಮಾಡಬಾರದ್ದನ್ನು ಮಾಡಿ, ಅಂತ್ಯಕಾಲದಲ್ಲಿ ಜ್ಞಾನೋದಯವಾಗಿ, ದೀರ್ಘಕಾಲದವರೆಗೂ  ಹರಿಸ್ಮರಣೆ ಮಾಡಿ, ವಿಷ್ಣುದೂತರು ಬಂದು ಕರೆದುಕೊಂಡು ಹೋದ 'ಅಜಾಮಿಳ' ಭ್ರಷ್ಟ ದಾಸ. 

೧೩. ವಿತ್ತ ದಾಸ:-'ನವಕೋಟಿ ನಾರಾಯಣ' ಎಂದೆನಿಸಿ ಬಿಡಿಗಾಸನ್ನು ಬಿಚ್ಚಿದೆ ಬೇಡಿ ಬಂದ ಹರಿಗೆ ಆರು ತಿಂಗಳು ಸತಾಯಿಸಿ  ಕಾಸು ಕೊಡದೆ, ಪತ್ನಿಯ ಮೂಲಕ ಜ್ಞಾನದ ಅರಿವಾಗಿ, ಬಿಡಿಗಾಸನ್ನು ಇಟ್ಟುಕೊಳ್ಳದೆ ಇಡೀ ಮನೆ ಸಮೇತ ತುಳಸಿದಳ ಹಾಕಿ, ಶ್ರೀಕೃಷ್ಣಾರ್ಪಣ ಎಂದು ಹೇಳಿ ಹೆಂಡತಿ-ಮಕ್ಕಳೊಂದಿಗೆ ಹೋಗಿ ವ್ಯಾಸರಿಗೆ ಶರಣಾದ 'ಪುರಂದರದಾಸ' ವಿತ್ತ ದಾಸ . 

೧೪. ಹುತ್ತ ದಾಸ :- ನಾರದರಿಂದ ರಾಮ ಮಂತ್ರ ಉಪದೇಶ ಪಡೆದು, ತಪಸ್ಸಿಗೆ ಕುಳಿತು ಮೈಮೇಲೆ ಹುತ್ತಾ ಬೆಳೆದರೂ ತಿಳಿಯದೆ, ರಾಮ ನಾಮ ಜಪವನ್ನು  ಬಿಡದೆ ಜಪಿಸುತ್ತಲೇ ಇದ್ದಾಗ ಬ್ರಹ್ಮನು ಬಂದು ಕಮಂಡಲದಲ್ಲಿ ನೀರನ್ನು ಪ್ರೋಕ್ಷಿಸಿ  ಹುತ್ತವನ್ನು ಕರಗಿಸಿ, ನಾರದರ ಆಣತಿಯಂತೆ ರಾಮಾಯಣ ಬರೆದಿರುವ 'ವಾಲ್ಮೀಕಿ' ಹುತ್ತ ದಾಸ. 

೧೫. ಶ್ರೇಷ್ಠ ದಾಸ:- ತಂದೆ ಶಂತನು ಮಹಾರಾಜನಿಗೆ ಕೊಟ್ಟಮಾತಿನಂತೆ, ಆ ಜನ್ಮ ಬ್ರಹ್ಮಚಾರಿಯಾಗಿ, ಇಚ್ಛಾಮರಣಿ ಯಾಗಿ, ದೃತರಾಷ್ಟನಿಗೆ, ನಿಷ್ಠನಾಗಿ ಅನ್ನ ತಿಂದ  ಋಣದಿಂದಾಗಿ, ದುರ್ಯೋಧನನ ಕಟು ಮಾತು, ಅಧರ್ಮದ,
ಕೆಲಸಗಳನ್ನು ನೋಡಿಯೂ, ಅಸಹಾಯಕತೆಯಿಂದ  ಕೌರವರ ಜೊತೆಯಲ್ಲಿಯೇ ಇದ್ದು, ವಯೋವೃದ್ಧಮಹಾಜ್ಞಾನಿ ಯಾಗಿ,ಜೀವನದ ಅಂತ್ಯದವರೆಗೂ ಬದುಕನ್ನು ಹೋರಾಟದಲ್ಲೇ  ಕಳೆದು 'ಕೃಷ್ಣನ 'ಅನುಗ್ರಹ ಪಡೆದು, ಇಚ್ಛಾಮರಣಿಯಾದ, 'ದೇವ ವ್ರತ  ಭೀಷ್ಮ' ಶ್ರೇಷ್ಠ ದಾಸ.

'ಶಂಕುಕರ್ಣ' ಎಂಬವರು ಬ್ರಹ್ಮದೇವನ ಶಾಪದಿಂದ ಭೂಲೋಕದಲ್ಲಿ ಶ್ರೀ ಪ್ರಹ್ಲಾದರಾಜರ ಅವತಾರಿಗಳಾದ ಶ್ರೀ ವ್ಯಾಸರಾಜರ ಶಿಷ್ಯ, ಈ ಶೋಡಶ ದಾಸರುಗಳ ದಾಸಾನು ದಾಸಿಯರ  ಮಂಕು ದಾಸರ ಮನೆಯ ಶಂಕು ದಾಸ,  ಬಾಡದಾದಿ  ಕೇಶವ, ಕಾಗಿನೆಲೆಯಾದಿ ಕೇಶವನ. ದಾಸಾನು ದಾಸ ನಾನು 'ಕನಕದಾಸ' ಎಂದು, ತಿಳಿಸಲು ದಾಸರುಗಳು, ಮತ್ತು ಅವರ ಶ್ರೇಷ್ಠತೆ ತಿಳಿಸುವ ಮೂಲಕ ಒಂದು 'ಮುಂಡಿಗೆಯನ್ನೆ' ಮಾಡಿದರು. ಜನಪದ ಶೈಲಿಯಲ್ಲಿ  ಒಗಟುಗಳು  ಎನ್ನಬಹುದು. ಮುಂಡಿಗೆಗಳು  ಹರಿದಾಸ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆಯಾಗಿದೆ. ಇದು ಭೂರಿಬೋಜನದಂತೆ  ಸವಿಯಾಗಿದೆ. 

"ಧ್ಯಾನೌ ಕೃತಯುಗದಿ, ಯಜ್ಞ ಯಜಾನೌ ತ್ರೇತಾಯುಗದಿ, ದಾನವಾಂತಕನ  ದೇವತಾರ್ಚನೆಯು  ಕಲಿಯುಗದಿ,ಗಾನದಿ ಕೇಶವನೆಂದರೆ ಕೈ ಗೂಡುವನು  ಕಲಿಯುಗದಿ ರಂಗವಿಠಲ". 

"ಸತ್ಯವಾದ ನಾಮಗಳನು ನಿತ್ಯದಲ್ಲಿ ಪಠಿಸುವರಿಗೆ
ಅರ್ತಿಯಿಂದ ಸಲಹುತಿರುವ ಕರ್ತೃ ಕೇಶವ 
ಮರೆಯದಲೆ  ಹರಿಯನಾಮ ಬರೆದು
ಓದಿ  ಪೇಳ್ದವರಿಗೆ ಕರೆದು ಮುಕ್ತಿ ಕೊಡುವ
ನಮ್ಮ ನೆಲೆಯಾದ ಕೇಶವ".
                           ಶ್ರೀಕೃಷ್ಣಾರ್ಪಣಮಸ್ತು.
****