ರಾಗ: ಮಧ್ಯಮಾವತಿ ತಾಳ: ಏಕ
ಬಂದು ನಿಂದಿಹರಿಲ್ಲಿ ಗುರು ರಾಘವೇಂದ್ರರು ಪ
ವಂದಿಸುವ ಜನಸ್ತೋಮಕನುದಿನ
ಕುಂದು ಎಣಿಸದೆ ಬಂದ ಭಯಗಳ
ಇಂದುಧರನುತ ಗೋವಿಂದನೊಲುಮೆಲಿ
ಮಂದಹಾಸದಿ ನಗುತ ಹರುಷದಿ ಅ.ಪ
ಎಲ್ಲ ಕಾಲಕೆ ಇವರು ಶ್ರೀಲಕುಮಿವಲ್ಲಭ
ಮೂಲರಾಮನ ಭಜಕರು ಹೇಮಾದಿ ಅರಿಗಳ
ಲೀಲೆ ಇಂದಲಿ ಗೆದ್ದರು
ಕಾಲಕಾಲಕೆ ಲೋಲ ನೃಹರಿಯ
ಜಾಲತೋರಿದ ಭಜಿಪಜನರಘ
ಲೀಲೆಯಿಂದಲಿ ದೂರಗೈಸುತ 1
ತಾಪಸೋತ್ತಮರಿವರು ಸುಜ್ಞಾನವೀವರು
ಶಾಪಾನುಗ್ರಹ ಶಕ್ತರು ಬಲ್ಲವರಿಗೆಲ್ಲ
ಅಪಾರವರಗಳೀವರು
ಕೋಪರಹಿತರು ಶ್ರೀಪತೀಶನ ಪಾದದ್ವಯವನು ಧ್ಯಾನ
ಮಾಳ್ಪರು ತಾಪ ಕಳೆಯುತ ಭಕ್ತ ಜನರನು
ಪಾಪ ಕೂಪದಿಂ ಪಾರುಮಾಳ್ಪರು 2
ಕಾಮಾದಿ ವಿರಹಿತರು ಗುರುಶಾಮಸುಂದರನ
ನೇಮದಿ ಭಜಿಸುವರು ಕೋಮಲಕಾಯರು
ಸಾಮಾದಿ ವೇದ ಪ್ರಿಯರು
ಯಾಮಯಾಮಕೆ ಬರುವ ಭಕ್ತರ ಕಾಮಿತಾರ್ಥಗಳಿತ್ತು ಪೊರೆವರ
ಧಾಮ ಶ್ರೀಹರಿ ಮಾರ್ಗ ತೋರುವ ಉ-
ದ್ದಾಮ ಕರುಣೆ ಗುರುಗಳಿಲ್ಲೆ 3
***