ರಾಗ ಭೈರವಿ
Audio by Mrs. Nandini Sripad
ರಾಗ ರೇವತಿ
*ಶ್ರೀವಿಜಯದಾಸಾರ್ಯ ವಿರಚಿತ*
*ಸಾಧನ ಸುಳಾದಿ*
(ಸಕಲ ಸಾಧನದೊಳಗೆ ಹರಿನಾಮವೆ ಮುಖ್ಯ , ಅನ್ಯವಾವುದಿಲ್ಲ)
*ರಾಗ ರೇವತಿ*
*ಧ್ರುವತಾಳ*
ಶರಣಾಗತ ವಜ್ರಪಂಜರ ಜರಾಮರಣ
ವಿರಹಿತ ವಿಶ್ವಕಾಯ ಕುಂಜರಪತಿ ಪ್ರೀಯ
ಸರಸ ಸದ್ಗುಣ ಸಾಂದ್ರ ಶರಣು ಯದುಕುಲೇಂದ್ರ
ನಿರಯ ವಿದೂರ ನಿರ್ಜರಗಣ ಮನೋಹರ
ಪರಮಾತ್ಮ ಮೂಲಪುರುಷ ಅಪರಿಚ್ಛಿನ್ನ ಮೂರುತಿ
ಮುರವೈರಿ ಮುಕುಂದ ಸರಸಿಜನಯನ
ನಿರ್ವಿಕಾರ ನಿರ್ಭಯ ನಿರುಪಮ ನಿರಂಜನ
ಕರುಣಾಶರಧಿಯೆ ಶ್ರೀಧರ ಶ್ರೀನಿವಾಸಾ
ಸುರರ ಮಸ್ತಕ ಮಣಿ ಪರತತ್ವ ಅಣೋರಣಿ
ತುರಗವದನ ದೇವ *ವಿಜಯವಿಠ್ಠಲರೇಯಾ*
ಸರಿಗಾಣೆ ನಿನಗೆ ಎನಗೆ ಕರುಣಾ ಮಾಡು ॥ 1 ॥
*ಮಟ್ಟತಾಳ*
ಸಾಧನವೆಂಬೋದು ಆವದು ಆವದು
ಹಾದಿ ಒಂದಾದರು ಕಾಣೆನೊ ಕಾಣೆನೊ
ಕ್ರೋಧ ಮದಗಳಿಂದ ಕಾಲವ ಪೋಗಾಡಿ
ಈ ದೇಹವೇ ವ್ಯರ್ಥವಾಗಿ ದಿನವ ಕಳೆದೆ
ಸಾಧುಗಳ ಸಂಗ ಕ್ಷಣವಾದರು ಮಾಡಿ
ಪಾಥೆ ಬಿಗಿಯಲಿಲ್ಲ ಹರಿ ನಿನ್ನ ನಗರಿಗೆ
ಬೋಧಮೂರುತಿ ನಮ್ಮ *ವಿಜಯವಿಟ್ಠಲ* ನಿನ್ನ -
ಪಾದವ ನಂಬದಲೆ ಪತಿತನು ನಾನಾದೆ ॥ 2 ॥
*ತ್ರಿವಿಡಿತಾಳ*
ತಿಳಿದು ತಿಳಿದು ಎನ್ನ ಮನಸು ಚಂಚಲವಾಗಿ
ಸುಳಿಯೆಂಬೊ ಭವದೊಳು ಶಿಲ್ಕಿ ಸುತ್ತುತಲಿದೆ
ಹೊಳಿಯ ತುಂಬಿದ ವಾರ್ತಿ ದೂರದಿಂದಲಿ ಕೇಳಿ
ಶಿಲಿಯ ಮೇಲೆ ದಾಟಿ ಪೋಗುವೆನೆಂದು ಯೋಚಿಸಿ
ತಲೆಯಲ್ಲಿ ಧರಿಸಿ ಆ ಹೊಳಿಯ ತೀರಕೆ ಬಂದು
ಜಲದೊಳು ಶಿಲೆ ಇಟ್ಟು ಬೆರಗಾಗಿ ನಿಂತಂತೆ
ಹೊಲೆ ಸಂಸಾರದೊಳು ಶಿಲ್ಕಿ ಇದ್ದು ಈ ಪರಿಯಲ್ಲಿ
ಹಲುಬಿ ಯೋಚನೆ ಮಾಡಿ ಹಕ್ಕಲ ಮನನಾದೆ
ಕಲಿ ವಿನಾಶನ ರಂಗ *ವಿಜಯವಿಟ್ಠಲ* ನೀನೆ
ಸಲಹಬೇಕಯ್ಯಾ ಸಂತತ ಎನ್ನ ಬಿಡದಲೆ ॥ 3 ॥
*ಅಟ್ಟತಾಳ*
ಹಾರುವದು ಮನ ಕಂಡಕಡೆಯಲ್ಲಿ
ಮೀರುವದು ಎನ್ನ ವಶಕೆ ನಿಲ್ಲದಲೇವೆ
ಸೇರುವುದು ಅನ್ಯವಚನವೆ ಸವಿಯೆಂದು
ಕೋರುವುದು ದುರ್ಗತಿ ಪಂಥ ಆವಾಗ
ಜ್ಯಾರುವದು ಸಜ್ಜನರ ಕಾಣುತ ಹಿಂದೆ
ನಾರುವದು ಅಹೋರಾತ್ರಿ ದುರ್ಗಂಧದಲಿ
ತಾರುವದು ಕಿಂಚಿತ ಪುಣ್ಯವಿದ್ದರು
ಸಾರಿದವರ ದಾತಾ *ವಿಜಯವಿಟ್ಠಲ* ಕೃಪಾ -
ವಾರಿಧಿಯೆ ನಿನ್ನ ಆರಾಧಿಸುವೆನೆಂತೊ ॥ 4 ॥
*ಆದಿತಾಳ*
ಅಪರಾಧಾನಂತವಿರಲು ಕೃಪೆಯಿಂದಲಿ ನೋಡುತ
ಅಪಾರ ಮಹಿಮನೆ ನೀ ಪತನ ಗೈಸೋದು
ಉಪಚರಣೆ ಎನ್ನದೇನೋ ಉಪಕಾರ ನಿನ್ನದಯ್ಯಾ
ಜಪತಪದಿಂದಲಿ ಇದು ಉಪಶಮನವಾಗುವದೆ
ಗುಪಿತವಾಗಿದ್ದ ನಾಮಾ ಉಪಗೀತ ಮಾಡಿದರೆ
ತಪಿಸುವ ಕರ್ಮಗಳು ಅಪಹಾಸವಾಗುವವು
ಕಪಟನಾಟಕ ನಮ್ಮ *ವಿಜಯವಿಟ್ಠಲರೇಯಾ*
ಅಪವರ್ಗಕ್ಕೆ ನಿನ್ನ ತಪವು ಒಂದಲ್ಲದೆ ಇಲ್ಲ ॥ 5 ॥
*ಜತೆ*
ಸರ್ವ ಸಾಧನದೊಳಗೆ ನಿನ್ನ ನಾಮಕೆ ಸರಿ
ಊರ್ವಿಯೊಳಗೆ ಇಲ್ಲ *ವಿಜಯವಿಟ್ಠಲ* ಧೊರಿಯೆ ॥
***