Audio by Mrs. Nandini Sripad
ಪಂಚಭೇದ ತಾರತಮ್ಯ ಸುಳಾದಿ
( ಪಂಚಭೇದ ತಾರತಮ್ಯ , ಹರಿಭಕ್ತರಿಗೆ ಪಾಪಫಲ ಬಾರದು ಇತ್ಯಾದಿ ವಿಷಯ )
ರಾಗ ಹಂಸಧ್ವನಿ
ಧ್ರುವತಾಳ
ಹರಿಯೇ ಸರ್ವೋತ್ತಮ ಸಿರಿಯು ಆತನ ರಾಣಿ
ಸರಸಿಜೋದ್ಭವ ಮರುತ ಪುತ್ರರಯ್ಯಾ
ಸರಸ್ವತಿ ಭಾರತಿ ಗರುಡ ಶೇಷ ರುದ್ರ
ಹರಿಯ ರಾಣಿಯರು ನಾಲ್ಕೆರಡು ಮಂದಿ ಸೌ -
ಪರಣಿ ವಾರುಣಿ ಗಿರಿಜಾ ಸುರಪತಿಕಾಮಾದ್ಯರ
ತರತಮ್ಯ ಜ್ಞಾನದಿಂದ ತಿಳಿಯಬೇಕು
ಸುರನದಿಪಿತ ನಮ್ಮ ಮೋಹನ್ನವಿಟ್ಠಲ
ಶರಣು ನೆನಿಸಿದವಗೆ ಇನ್ನು ಸರಿಯು ಕಾಣೆ ॥ 1 ॥
ಮಟ್ಟತಾಳ
ಜೀವ ಜೀವಕೆ ಭೇದ ಜಡಜಡಕೆ ಭೇದ
ಜೀವ ಜಡಕೆ ಭೇದ ಹರಿಗೆ ಜಡಕೆ ಭೇದ
ಜೀವ ಈಶಗೆ ಭೇದ ದೇವ ನಾರಾಯಣನ
ಭಾವಕ್ರಿಯಗಳಿಗೆ ಅಭೇದವನ್ನು ತಿಳಿದು
ಶ್ರೀವಲ್ಲಭ ನಮ್ಮ ಮೋಹನ್ನವಿಟ್ಠಲನ್ನ
ಪಾವನ ಚರಣನಾಮ ತೀವ್ರದಲಿ ಭಜಿಸು ॥ 2 ॥
ತ್ರಿಪುಟತಾಳ
ಹರಿಯು ತನಗೆ ಬೇಕಾದವನ ಮನಸು
ಎರಗೀಸಲೀಸನು ಅನ್ಯ ಸತಿಯರಲ್ಲಿ
ಎರಗಿಸಿದರೆ ಬೇಗ ತಿರಿಗಿಸುವನಯ್ಯಾ
ತಿರುಗಿಸದಿದ್ದರೆ ಬೆರೆಯಲೀಸಾ
ಬೆರೆದರೆ ಬೆರೆಯಲಿ ರತಿಯ ಪುಟ್ಟಲೀಸಾ
ರತಿ ಪುಟ್ಟಿದರೆ ಏನು ಕಾಕು ಮಾಡಲಿಸನಯ್ಯಾ
ಕರುಣಾಸಾಗರ ನಮ್ಮ ಮೋಹನ್ನವಿಟ್ಠಲನ
ಪಾವನ ಚರಣವನು ತೀವ್ರದಲಿ ಭಜಿಸೊ ॥ 3 ॥
ಅಟ್ಟತಾಳ
ಮರುತ ಮತವ ಪೊಂದಿ ಹರಿಯೆ ಪರನೆಂದು
ಗುರು ಹಿರಿಯರ ಚರಣಕ್ಕೆರಗು ಆವಾಗಲೂ
ಹರಿಕಥಾಮೃತವ ಕರ್ಣದಿಂದಲಿ ಕೇಳು
ಹರಿ ನಿರ್ಮಾಲ್ಯವ ಶಿರದಲ್ಲಿ ಧರಿಸುತಿರು
ಹರಿ ನೈವೇದ್ಯವ ಹರುಷದಲ್ಲಿ ಭುಂಜಿಸು
ಹರಿದಾಸರ ಕೂಡ ತಿರುಗು ಊಳಿಗನಂತೆ
ಹರಿ ಅವತಾರ ಸಿರಿ ಮೋಹನ್ನವಿಟ್ಠಲ
ಹರಿಯೆ ತ್ರಿಭುವನ ಧೊರೆಯೆಂದು ತಿಳಿಯೊ ॥ 4 ॥
ಆದಿತಾಳ
ತನಗೆ ಬೇಕಾದವನು ಉನ್ನತ ಪಾಪವ ಮಾಡೆ
ದಾನವರಿಗೆ ಕೊಡಿಸಿ ಪುಣ್ಯ ಭಕ್ತರಿಗೀವ
ಘನ್ನ ಮಹಿಮ ಲಕುಮಿಯನ್ನು ಬಿಟ್ಟರೇನು ಪ್ರ -
ಪನ್ನರ ಬಿಡೆನೆಂಬ ಚಿನ್ಮಯ ಮೂರುತಿ
ಪನ್ನಗಾದ್ರಿ ನಿಲಯ ಮೋಹನ್ನವಿಟ್ಠಲನ್ನ
ಸನ್ನುತಿಸುವನಿಗೆ ಇನ್ನು ಸರಿಯು ಕಾಣೆ ॥ 5 ॥
ಜತೆ
ತಾರತಮ್ಯ ಪಂಚಭೇದ ತಿಳಿಯದವಗೆ
ಮಾರುತಿಪ್ರೀಯ ಮೋಹನ್ನವಿಟ್ಠಲ ವೊಲಿಯಾ ॥
**********