ankita ಪಂಡರೀನಾಥವಿಠಲ
ರಾಘವೇಂದ್ರರ ಸ್ತುತಿ
ಮಾರಮಣ ಶ್ರೀಹರಿಯ ಕಂಬದಿ
ತೋರಿದಾ ಪ್ರಹ್ಲಾದರಾಜರು
ಧಾರುಣೀಯಲಿ ಮರಳಿ ಬಂದರು ಹರಿಯ ಇಚ್ಚೆಯಲಿ
ಧೀರಗುರು ಶ್ರೀವ್ಯಾಸರಾಜರು
ಭಾರಕರ್ತನ ಕುಣಿಸಿ ಮೆರೆದರು
ಭೂರಿ ಸಂಪದವೀವರು ಶ್ರೀ ರಾಘವೇಂದ್ರ ಗುರು 1
ಇರುತಿಹರು ಮಂಚಾಲೆ ಕ್ಷೇತ್ರದಿ
ನಿರುತ ನರಹರಿಯನ್ನು ಸೇವಿಸಿ
ಗುರುವು ತಾ ಕೊಡುತಿಹರು ವರಗಳ ರಾಮನಾಜ್ಞೆಯಲಿ
ಹರಿಯ ನಾಮವ ಮೆರೆಸಿ ಜಗದೊಳು
ಕರುಣಿ ಸಂಸಾರದಲಿ ಬಳಲುವ
ಧರೆಯ ಪಾಮರರನ್ನು ಪ್ರೀತಿಲಿ ಕಂಡು ಪೋಷಿಪರು 2
ಧರೆಯ ಮುಸುಕಿದ ತಮವ ತೆಗೆಯಲು
ಹರುಷದಲಿ ಕಲಿಯುಗದಿ ರಾಯರು
ವರಬೃಂದಾವನದಲ್ಲಿ ಇರುತಲಿ ಜನರ ತಿದ್ದುವರು
ನಿರುತ ಭಕ್ತಿಯ ಸೇವೆ ಕೊಳುತಲಿ
ವರಸುಜನರನು ಪೊರೆಯುತಿರುವರು
ಚರಣ ಕಮಲವ ನಂಬಿ ಭಜಿಪರ ಕರವ ಪಿಡಿದಿಹರು 3
ತನುವು ಮನೆ ಧನ ಧಾನ್ಯದಾಸೆಲಿ
ಕೊನೆಯ ಕಾಣದೆ ಕಷ್ಟ ಪಡುವರ
ಮನದಿ ಮಿನುಗುತ ರಾಘವೇಂದ್ರರು ತುಂಬು ಕರುಣೆಯಲಿ
ಅನುನಯದಿ ಪೊರೆಯುತ್ತ ಅವರನು
ಘನ ಮಂಚಾಲೆಯ ಯೋಗಿವರ್ಯರು
ಮನವ ಶ್ರೀಹರಿಯಲ್ಲಿ ನಿಲಿಸಲು ಮಾರ್ಗ ತೋರುವರು 4
ವಿಷಯದಾ ವಿಷದಿಂದ ಬಳಲುವ
ಹಸನರಲ್ಲದ ಭಕ್ತಿರಹಿತರ
ಹಸನ ಮಾಡುತ ವಿಷಯದಾಸೆಯ ಬೇಗ ಬಿಡಿಸುವರು
ಹಸನ ಭಕ್ತಿಲಿ ಇವರ ನಂಬಲು
ಅಸುಪತೀ ಹರಿದಾಸ ಶ್ರೇಷ್ಠರು
ಅಶನ ವಸನಕೆ ಮಾರ್ಗ ತೋರಿಸಿ ಹರಿಯ ತೋರುವರು 5
ರೋಗರುಜಿನವ ಕಳೆದು ಬಿಡುವರು
ಬೇಗ ಭಕುತಿಲಿ ಸೇವಿಸುವವರಿಗೆ
ರಾಗರಹಿತರು ಅಘವ ತರಿವರು ನಮ್ಮ ಗುರುವರರು
ಜಾಗು ಮಾಡದೆ ರಾಘವೇಂದ್ರರು
ಸಾಗಿ ಬರುವರು ಒಲಿದು ಪ್ರೀತಿಲಿ
ಭೋಗಿಶಯನನ ನಿರುತ ಸೇವಿಸಿ ಧನ್ಯರಾಗಿಹರು 6
ಕುಷ್ಠರೋಗವ ನಷ್ಟ ಮಾಡ್ವರು
ಶ್ರೇಷ್ಠ ಶ್ರೀಹರಿ ಪಾದಕ್ರಾಂತರು
ಇಷ್ಟವೆಲ್ಲವ ಸಲಿಸಿ ಬಿಡುವರು ಕಷ್ಟ ಕಳೆಯುವರು
ಎಷ್ಟು ಪೇಳಲಿ ಇವರ ಮಹಿಮೆಯ
ತುಷ್ಠಿಯಿಂದಲಿ ನಾಮ ಸೇವಿಪೆ
ಅಷ್ಟಮಹಿಷಿಯರರಸನನು ಮನಮುಟ್ಟಿ ಭಜಿಸುವರು 7
ಭೂತ ಪ್ರೇತ ಪಿಶಾಚ ಗ್ರಹಗಳು
ಸೋತು ಹೋಗಿವೆ ಇವರ ಮಹಿಮೆಗೆ
ಪೂರ್ತಿಯಿಂದಲಿ ಹೆದರಿ ರಾಯರ ಪಾದ ಉದಕಕ್ಕೆ
ಮಾತು ಬರುವುದು ಮೂಕ ಜೀವಿಗೆ
ಹೂತು ಹೋಗ್ವುದು ದುರಿತಗಳು ಶ್ರೀ-
ನಾಥ ದಾಸರು ತಮ್ಮ ಪುಣ್ಯವ ಇತರಿಗ್ಹಂಚುವರು 8
ಅಂಧರೆಲ್ಲರು ದೃಷ್ಟಿ ಪಡೆವರು
ಮಂದನಾದರು ಬಂದು ಸೇವಿಸೆ
ಗಂಧವಾಹನನಾದ ಹನುಮನಾವೇಶ ಪೊಂದಿಹರ
ವಂದ್ಯೆ ಸ್ತ್ರೀ ಆನಂದದಲಿ ತಾ
ಸುಂದರದ ಮಗುವನ್ನು ಪಡೆವಳು
ನಂದ ನಂದರ ದಾಸರಾಯರ ಮಹಿಮೆ ಅಸದಳವು 9
ರಾಮನರಹರಿ ಕೃಷ್ಣ ಹಯಮುಖ
ಭೂಮಿಪತಿ ವಾಸಿಷ್ಠ ಕೃಷ್ಣನು
ಸೋಮಶೇಖರ ಸಖನು ಬೃಂದಾವನದಿ ಇರುತಿಹನು
ಕಾಮಿತಾರ್ಥಗಳೆಲ್ಲ ದೇವನೆ
ಈ ಮಹಾತ್ಮರ ಪೆಸರಿನಲ್ಲಿಯೆ
ಶ್ರೀಮನೋಹರ ಕೊಡುತ ಇವರಿಗೆ ಪೆಸರು ಕೊಡುತಿಹನು 10
ಪಿಡಿದು ದಂಡ ಕಮಂಡಲವ ಗುರು
ಕಡು ದಯಾನಿಧಿ ನಿಂತು ಕ್ಷೇತ್ರದಿ
ಬಡವ ಬಲ್ಲಿದರೆನದೆ ಪ್ರಜೆಗಳ ಪೋಷಿಸುತ್ತಿಹರು
ದೃಢದಿ ಚರಣವ ಭಜಿಸುವವರಿಗೆ
ಕೊಡುತ ಸಂಪದ ರಾಘವೇಂದ್ರರು
ಒಡೆಯ ಪಂಢರೀನಾಥವಿಠಲನ ಬಿಡದೆ ತೋರುವರು 11
***